ಮಾತು ಮೌನಗಳು

ಮಾತು ಮೌನಗಳು

ಕವನ

ವಿಶ್ವಕೋಶವನೋದದಿದ್ದರು
ಅಶ್ವಹೃದಯವನರಿಯದಿದ್ದರು
ವಿಶ್ವದಲ್ಲಿಹ ಉಭಯ ಶಕ್ತಿಗಳನ್ನು ಬಣ್ಣಿಸಲು
ನಶ್ವರದ ಜೀವನದ ನದಿಯಲಿ
ವಿಶ್ವತೋಮುಖರಾಗಿ ಈಸುವ
ವಿಶ್ವಮಾನವರೆನಿಪ ಅನುಭವಿ ಜನರು ಬಲ್ಲಿದರು

ಮಾತುಮೌನಗಳೆರಡು ಆತತ
ಧಾತುಗಳು ಜಗದೊಳಗೆ ಧಾತನ
ನೀತಿಯೆ೦ಬುದ ತಿಳಿಯೆ ಜೀತದಿ ಬರದು ಯಾತನೆಯು
ಏತವಹುದೀ ನೀತಿಯರಿತರೆ
ಗೋತ ನಿಶ್ಚಯ ಅರಿಯದಿರಲು ವಿ
ನೀತರಾಗಿಯೆ ಕಲಿಯೆ ಸೇತುವು ಜಯದ ಪಾತಳಿಗೆ

ಮನದಿ ಯೋಚಿಸಿ ಸತತ ಯೋಜಿಸಿ
ಅನುದಿನವು ಅನುಪಮದ ತೆರದಲಿ
ವಿನಯದಿ೦ದಲಿ ಉಲಿಯಬೇಕೈ ಘನದ ವಚನಗಳ
ಅನತ ಭಾವವ ತೋರಿದರೆ ಜಗ
ವನವರತ ಅನುಮೋದಿಸದು ದಿಟ
ಅನುನಯದ ಮಾರ್ಗಣವ ಪಿಡಿದರೆ ಬರದು ಕೂರ್ಗಣೆಯು

ಅಡಿಯನಿಡುತಿರೆ ನೋಡದಿರೆ ತಿರೆ
ಎಡಪುವುದು ನಿಶ್ಚಿತವು ನಡೆಯಲಿ
ಉಡಿಯವಸ್ತ್ರದಿ ಗ೦ಟನಿಕ್ಕುವೆ ಮರೆಯಬಾರದಿದ
ಹಿಡಿತವಿಲ್ಲದೆ ಸೆಡವಿನಿ೦ದಲಿ
ಬಡಬಡಿಸೆ ತವಕದಲಿ ನುಡಿಗಳ
ಅಡವಿಪಾಲಾದೀತು ಮಾನವು ಒಡೆದ ಹಾಲ ತೆರ

ಕುಟಿಲವಿರದಿಹ ದಿಟದ ನುಡಿಗಳು
ಕುಟಜದ೦ತಹ ಕಹಿಯನೆಸೆಯುತ
ತುಟಿಗಳೆರಡರ ದಾಟಿ ಕರ್ಣಕೆ ಕುದಿವ ಸೀಸದೊಲು
ಪಟಲವನು ಛೇದಿಸುವ ಕಟಕಿಯ
ಕಟುಕತನವಹುದೆ೦ಬ ಭಯದಲಿ
ಸಟೆಯನಾಡುವ ಬದಲು ದಿವ್ಯದ ಮೌನವೇ ಲೇಸು

ಕಷ್ಟವೆನಿಸಬಹುದಾದ ಪದಗಳ ಅರ್ಥ:

ಆತತ = ವಿಶಾಲವಾದ : ಜೀತ = ಜೀವನ : ಪಾತಳಿ = ಮಟ್ಟ: ಆನತ = ವಿನಯವಿಲ್ಲದ
ಸೆಡವು = ಗರ್ವ: ಕಟಕಿ = ಚುಚ್ಚುಮಾತು: ಸಟೆ = ಸುಳ್ಳು

Comments