ಪ್ರೊಡಕ್ಷನ್ ನಂ -೧ ಭಾಗ-೨

ಪ್ರೊಡಕ್ಷನ್ ನಂ -೧ ಭಾಗ-೨

--೨--

ಡೋರ್ ಬೆಲ್ ಶಬ್ದ ಕೇಳಿ ಬಾಗಿಲ ಬಳಿ ಸುಮತಿ ಹೋಗುವ ಹೊತ್ತಿಗೆ pause ಮಾಡಿದ ಕೌಶಿಕ್ ರಶ್ಮಿಯೆಡೆಗೆ ತಿರುಗಿ...  

’ಹೆಂಗಸರು ಸಿನಿಮಾ ಮಾಡೊದಿಕ್ಕೆ ಹೋದ್ರೆ ಇದೇ ರೀತಿ ಆಗೋದು. ಇವರಿಗೆ ಸಿನಿಮಾ ಮಾಡಬೇಕೆನ್ನುವಾಗ ಇರ್ಬೇಕಾದ ಕಾಮನ್ ಸೆನ್ಸೆ ಇರೊದಿಲ್ಲ, ಸಿನಿಮಾನ ಸಿನಿಮಾ ಎಂದಷ್ಟೇ ಯೋಚಿಸಿದೆ ಭಾವನಾತ್ಮಕವಾಗಿ ಯೋಚಿಸೋದಿಕ್ಕೆ ಶುರು ಮಾಡಿಬಿಡ್ತಾರೆ. ಎಲ್ಲದಕ್ಕೂ ಅನುಮಾನ ಪಡೋದೆ. ಜೊತೆಗೆ ಭಾರಿ ಆದರ್ಶವಾದಿಗಳು ಅಂತ ತೋರಿಸ್ಕೊಳ್ಳೋ ಫೋಸು ಬೇರೆ’.
ರಶ್ಮಿ ’ ಅದರಲ್ಲಿ ಫೋಸು ಕೊಡೋದು ಏನು ಬಂತು ಒಬ್ಬ ಮಹಿಳೆಯಾಗಿ ಅಂತ ರಿಸ್ಕ್ ತಗೊಂಡು ಅಂತಹ ಒಳ್ಳೆ ಸಿನಿಮಾ ಮಾಡ್ತಿರೋವಾಗ ಅದಕ್ಕೆ ಸಹಾಯ ಮಾಡೋದು ಬಿಟ್ಟು ಅದರಲ್ಲಿ ಕ್ಯಾತೆ ತೆಗೆಯೋದು ಯಾಕೆ.. ನೀವು ಗಂಡಸರೆಲ್ಲ ಒಂದೇ.’
’ಹೆಲ್ಲೋ.. ಅದರಲ್ಲಿ ಗಂಡಸರಷ್ಟೇ ಅಲ್ಲ.. ಹುಡುಗೀರು ಇದ್ದಾರೆ.’ ಕೌಶಿಕ್.
’ಇದ್ರೂನು ಅಲ್ಲಿ ಅವರಿಗೆ ಮರಳು ಮಾಡ್ತಿರೋದು ಗಂಡಸರೇ ತಾನೇ’
’ಇದರಲ್ಲಿ ಗಂಡಸರ ತಪ್ಪೇನು ಬಂತು, ಸಿನಿಮಾ ನಿರ್ದೇಶಕಿಗೆ ತಾನು ಮಾಡಿರುವ ಕಥೆಯ ಬಗ್ಗೆ confident ಆಗಿ ಇರ್ಬೇಕು. ತಾನು ನಿರ್ದೇಶಿಸುತ್ತಿರುವ ಪಾತ್ರಗಳು ತನ್ನ ಕೈತಪ್ಪಿ ಹೋಗದಂತೆ ಹಿಡಿದಿಡುವ ಸಾಮರ್ಥ್ಯ ಇರಬೇಕು. ಇಲ್ದಿದ್ರೆ ಈ ಸಿನಿಮಾ, ಆದರ್ಶ ಅನ್ನೋದನ್ನೆಲ್ಲ ಕಟ್ಟಿಟ್ಟು ಮನೇಲಿ ಅಡುಗೆ ಮಾಡ್ಕೊಂಡು ಮೆಗಾ ಸೀರಿಯಲ್ಗಳನ್ನು ನೋಡ್ಕೊಂಡು ಇರ್ಬೇಕು’
’ಆದರ್ಶ ಅನ್ನೋದು ಬರಿ ಗಂಡಸಿರಿಗೆ ಮೀಸಲಾದ ಸ್ವತ್ತಾ?’
’ನಾನೇನು ಹಾಗೆ ಹೇಳಿಲ್ವಲ್ಲ, ನಾನೇಳ್ತಿರೋದು ಏನಂದ್ರೆ.. ಸಿನಿಮಾ ಇನ್ನೂ ಮುಗಿದಿಲ್ಲ. ಅಷ್ಟರಲ್ಲೆ ತಾನು ಮಾಡುತ್ತಿರುವ ಪ್ರಯತ್ನಗಳನ್ನೆಲ್ಲ ತನ್ನ ಪಾತ್ರಗಳು ಬದಲಾಯಿಸೋದಿಕ್ಕೆ ಹೊರಟಿವೆ ಅನ್ನೋ ಡೌಟ್ ಯಾಕೆ ಬರ್ಬೇಕು? ಜೊತೆಗೆmetaphor ಆಗಿ ಗ್ಲಾಸನ್ನು ಯ್ಯೂಸ್ ಮಾಡ್ಕೊಂಡು ತಾನು ಮಾಡ್ತಿರೋದು ಮಹಾನ್ ಕಥೆ ಎಂದು ಬಿಂಬಿಸಲು ಹೊರಟಿರುವುದು ಏಕೆ? ಈ ಕಥೆಯಲ್ಲಿ ಮೇಟಾಫರ್ ಆಗಿ ದೃಶ್ಯೀಕರಿಸಬಹುದಾದ ಒಂದಂಶಾನಾದ್ರು ತೋರಿಸು ನೋಡೋಣ. ಬರೀ ಫೇಕ್ ಬುದ್ಧಿಜೀವಿಗಳ ಆಟಿಟ್ಯೂಡ್.’
’ಮೆಟಾಫರ್ ಅಂಶಗಳನ್ನು ಹೊಂದಿಲ್ಲದ ಪಾತ್ರ ಅನ್ನೋದು ಸಿನಿಮಾದಲ್ಲಿ ಇದೆಯಾ? ಒಬ್ಬ ಜೀವಂತ ವ್ಯಕ್ತಿ ಸಿನಿಮಾದಲ್ಲಿ ಪಾತ್ರ ಮಾಡ್ತಿದ್ದಾನೆ ಅನ್ನೋದೆ ಒಂದು ಮೆಟಾಫರ್. ಆ ಪಾತ್ರ ಅನ್ನೋದನ್ನ ಪೋಷಿಸುವ ಪ್ರತಿಮೆ ಆ ನಟ ಹೊರತು ಆ ನಟನೆ ಮೂಲವ್ಯಕ್ತಿಯಾಗಿ ನಟಿಸುತ್ತಿರುವುದಿಲ್ಲವಲ್ಲ. ಆ ರೀತಿ ಆದಲ್ಲಿ ಆತ ನಟನಾಗುವುದಿಲ್ಲ. ಮತ್ತದು ಸಿನಿಮಾ ಆಗುವುದಿಲ್ಲ. ಡಾಕ್ಯುಮೆಂಟರಿ ಆಗುತ್ತದಷ್ಟೇ.’
’ಹಾಗಾದರೆ ಈ ಸಿನಿಮಾದ ಪಾತ್ರದಾರಿಗಳಾದ ನಾವು, ಇಲ್ಲಿ ನೋಡುತ್ತಿರುವ ಸಿನಿಮಾದ ಕುರಿತಂತೆ ಚರ್ಚೆ ಮಾಡ್ತಿರೋದು ನಿಜಜೀವನದ ವ್ಯಕ್ತಿಗಳಾಗ? ಅಥವ ನಿರ್ದೇಶಕ ನಮಗೆ ಕೊಟ್ಟಿರುವ ಡೈಲಾಗ್ ಹೇಳುವ ಪ್ರತಿಮೆಗಳು ಮಾತ್ರನ?’
ಅಷ್ಟರಲ್ಲಿ ಅಲ್ಲಿಗೆ ಬರುವ ಸುಮತಿ ’ನಿಮ್ಮಿಬ್ಬರದೂ ಇದೇ ಆಯ್ತು.. ನಿಮ್ಮಿಬ್ಬರದು living together ರಿಲೇಷನ್ಷಿಪ್ ಅಂತ ಗೊತ್ತಿದ್ದು ನಿಮ್ಮನ್ನು ಈ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿರಲು ಒಪ್ಪಿ ಈ ಮನೆಯಲ್ಲಿ ಬಿಟ್ಟಿದ್ದೇ ತಪ್ಪಾಯ್ತೇನೊ ಅಂತ ಅನಿಸ್ತಿದೆ... ಯಾವಾಗ ನೋಡಿದ್ರು ಜಗಳ ಆಡ್ತಾನೆ ಇರ್ತೀರ.’
ಹಾಗಲ್ಲ ಆಂಟಿ ಹುಡುಗೀರು ಅಂತಂದ್ರೆ ಇವನಿಗೆ ಏನಾ ಮಾಡಕ್ಕಾಗದ waste bodies ಅನ್ನೋ ರೀತಿಯಲ್ಲಿ ಮಾತಾಡ್ತಾನ್ನೆ. ಹುಡುಗಿ ಇವನಿಗೆ ರೊಮಾನ್ಸ್ ಮಾಡೋದಿಕ್ಕಷ್ಟೇ ಬೇಕು. ಅದೇ ಏನಾದ್ರು ನಾನು ವಾದ ಮಾಡಿದ್ರೆ ಅದು ಹಾಗಲ್ಲ ಹೀಗೆ ಅಂತ ಆಪೋಸಿಟ್ ಆಗೇ ಮಾತಾಡ್ತಾನೆ.’
ಕೌಶಿಕ್ ಕಡೆಗೆ ಮುಗುಳ್ನಗೆ ಬೀರಿ ಸುಮತಿ ರಿಮೋಟ್ ತಗೊಂಡು pause ಆಗಿದ್ದ ಸೀನ್ play  ಮಾಡುತ್ತಾ ಈ ಸಿನಿಮಾ end ಏನ್ ಆಗುತ್ತೋ ನೋಡೋಣ ಇರಿ ಆಮೇಲೆ ನಿಮ್ಮ ವಾದ ವಿವಾದ ಇತ್ಯರ್ಥ ಮಾಡೋಣ ಅಂತ play ಬಟನ್ ಒತ್ತುತ್ತಾಳೆ.
 
                                      --೩--
ಸುಮತಿ ಡೋರ್ ಓಪನ್ ಮಾಡಿದ್ರೆ ರಘು ಬಂದಿರ್ತಾನೆ.. ’ಮೇಡಮ್ಮ್  ಸರ್ ನಿಮ್ಗೆ ಇಲ್ಲಿಯವರೆಗೂ ಎಡಿಟ್ ಆಗಿರೊ first cut copy ಕೊಡೋದಿಕ್ಕೆ ಹೇಳಿದ್ರು.. ರೆಂಡ್ರಿಂಗ್ ಮಾಡಿ ತರೋದಿಕ್ಕೆ ಲೇಟ್ ಆಯ್ತು.. ಸರ್ ಗೆ ಫೋನ್ ಮಾಡಿ ಹೇಳ್ಬಿಡಿ.
’ಸರಿ ರಘು. ಬಾ ಒಳಗೆ ಕಾಫಿ ಕುಡ್ಕೊಂಡು ಹೋಗುವಂತೆ’

’ಇಲ್ಲ ಮೇಡಂ ನಾನಿನ್ನೂ ಫ್ರೆಂಡ್ನ ಪಿಕ್ ಮಾಡೋದಿಕ್ಕೆ ಪದ್ಮನಾಭನಗರಕ್ಕೆ ಹೋಗ್ಬೇಕು.. ಬರ್ತೀನಿ. ನಾಳೆ ಸ್ಟುಡಿಯೋದಲ್ಲಿ ಸಿಗ್ತೀನಿ. ಬೈ’
ರಘು ಮೆಟ್ಟಿಲು ಇಳಿಯೋದನ್ನೆ ನೋಡುತ್ತಾ.. ಡೋರ್ ಲಾಕ್ ಮಾಡಿ ಬಂದು ಡಿವಿಡಿನ ಲ್ಯಾಪ್ ಟಾಪಲ್ಲಿ ಹಾಕ್ಕೊಂಡು ಪ್ಲೇ ಮಾಡ್ತಾಳೆ.. ಅದು ಪ್ಲೇ ಆದಾಗ ಡ್ರ್ಯಾಗ್ ಮಾಡಿ ಬಿಡ್ತಾಳೆ... ರಶ್ಮಿ ಕೌಶಿಕ್ conversation scene ಪ್ಲೇ ಆಗುತ್ತೆ.

ಗಾಜಿನ ಬಳಿ ರಶ್ಮಿ, ಕೌಶಿಕ್ ನಿಂತಿರ್ತಾರೆ...

 

(ಮುಂದುವರೆಯುವುದು)