ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 3

ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 3

ಕುವೆಂಪು ಅವರ ಅರವತ್ತನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ, ಉದಯರವಿ ಮನೆಯ ಎಲ್ಲ ಕಿಟಕಿ ಬಾಗಿಲುಗಳಲ್ಲಿದ್ದ ಹಳೆಯ ಪರದೆಗಳನ್ನು ಬದಲಾಯಿಸಲು ಶ್ರೀಮತಿ ಹೇಮಾವತಿಯವರು ನಿರ್ಧರಿಸಿರುತ್ತಾರೆ. ಅವುಗಳಿಗೆ ತಾರಿಣಿಯವರೇ ಕೈಯ್ಯಾರೆ ಕಸೂತಿ ಹಾಕಲು ತೀರ್ಮಾನಿಸುತ್ತಾರೆ. ಅದರಂತೆ, ಅವರ ಚಿಕ್ಕಮ್ಮ ಜಯಲಕ್ಷ್ಮಿ ಎಂಬುವವರು ಬರೆದುಕೊಟ್ಟ ಹುಲಿ, ಜಿಂಕೆ, ಬೆಟ್ಟ-ಗುಡ್ಡ, ಗಿಡ-ಮರಗಳನ್ನೊಳಗೊಂಡ ಚಿತ್ರವನ್ನು ತದ್ವತ್, ಬಾಗಿಲ ಪರದೆಯೊಂದರ ಮೇಲೆ ತಾರಿಣಿಯವರು ಕಸೂತಿಯಲ್ಲಿ ಮೂಡಿಸಿರುತ್ತಾರೆ. ಅಕ್ಕ ಕಲಾ ಬರೆದುಕೊಟ್ಟಿದ್ದ ಜಪಾನ್ ಕಸೂತಿ ಚಿತ್ರವೊಂದನ್ನು ಇನ್ನೊಂದು ಬಾಗಿಲ ಪರದೆಗೂ ಹಾಕಿರುತ್ತಾರೆ. ಇವುಗಳನ್ನು ನೋಡಿ, ಸಂತೋಷಪಟ್ಟ ತೇಜಸ್ವಿಯವರು ಹಕ್ಕಿಗಳಿರುವ ಒಂದು ಕ್ಯಾಲೆಂಡರನ್ನು ತಂದು ಕೊಡುತ್ತಾರೆ. ಅದರಲ್ಲಿದ್ದ ಬೇರೆ ಬೇರೆ ಜಾತಿಯ ಕೆಲವು ಹಕ್ಕಿಗಳನ್ನು ಕಸೂತಿ ಮಾಡುತ್ತಾರೆ. ತಾರಿಣಿಯವರು ಇವೆಲ್ಲದರ ತಯಾರಿಯಲ್ಲಿ ತೊಡಗಿದ್ದನ್ನು ಗಮನಿಸುತ್ತಿದ್ದ ಕುವೆಂಪು, ’ಕಸೂತಿ ಕೆಲಸ ಎಲ್ಲಿಗೆ ಬಂತು?’, ’ಯಾವಾಗ ಹಾಕುವೆ?’ ಎಂದು ಕೇಳುತ್ತಿದ್ದರಂತೆ. ಹುಲಿಯ ಕಸೂತಿಯನ್ನು ನೋಡಿ, ’ಶಾಬಾಷ್. ಹುಲಿ, ಜಿಂಕೆ ಎರಡೂ ಚೆನ್ನಾಗಿ ಮೂಡಿ ಬಂದಿದೆ’ ಎಂದಿದ್ದರಂತೆ. 
ಕುವೆಂಪು ಅವರ ಅರವತ್ತನೆಯ ಹುಟ್ಟುಹಬ್ಬ ಎರಡು ದಿನವಿದೆ ಎನ್ನುವಾಗ ಈ ಎಲ್ಲಾ ಪರದೆಗಳನ್ನು ಹಾಕಲಾಯಿತು. ಅಂದು ವಾಕಿಂಗ್ ಮುಗಿಸಿ  ಬಂದ ಕುವಂಪು ಅದೆಲ್ಲವನ್ನು ನೋಡಿ ತುಂಬಾ ಸಂತೋಷ ಪಟ್ಟರು. ಹಕ್ಕಿಗಳ ಪರದೆಯ ಮುಂದೆ ನಿಂತು ನೋಡಿದರೂ ತಣಿಯದೆ, ಕುರ್ಚಿಯನ್ನೇ ಅಲ್ಲಿಗೆ ಎಳೆದು, ಕುಳಿತು ಸುಮಾರು ಒಂದ ಗಂಟೆಯ ಕಾಲ ಭಾವಪರವಶರಾಗಿದ್ದರಂತೆ. ಆಗ ಮನೆಗೆ ಬಂದ ಎಸ್.ವಿ.ಪರಮೇಶ್ವರಭಟ್ಟರು ’ಇದೇನು ಸಾರ್ ಹಕ್ಕಿ, ಹೂ, ಹುಲಿ, ಜಿಂಕೆ, ಮರ, ಗಿಡ, ಮಲೆನಾಡೆ ಬಂದಂತಿದೆ’ ಎಂದು ಸಂಭ್ರಮದಿಂದ ನುಡಿದಿದ್ದರಂತೆ. ಬಂದವರಿಗೆಲ್ಲಾ ’ತಾರಿಣಿಯೇ ಹಾಕಿದ್ದು, ಹಕ್ಕಿ ಕಸೂತಿ ಮಾಡಲು ಮೂರು ತಿಂಗಳು ಹಿಡಿಯಿತು’ ಎಂದು ಸಂತೋಷದಿಂದ, ಪ್ರತಿಯೊಂದು ಹಕ್ಕಿಯ ಹೆಸರನ್ನು ಹೇಳಿ ವಿವರಿಸುತ್ತಿದ್ದರಂತೆ.
ಅರವತ್ತು ವರ್ಷದ ಸಂದರ್ಭದಲ್ಲಿ ಅವರ ’ಷಷ್ಟಿನಮನ’ ಎಂಬ ಕವನ ಸಂಕಲನ ಅಚ್ಚಾಗಿತ್ತು. ಅಂದು (೨೯.೧೨.೧೯೬೪) ಮನೆಗೆ ಬಂದ ಸ್ನೇಹಿತರಿಗೆ, ಶಿಷ್ಯರಿಗೆ ಅದರ ಒಂದೊಂದು ಪ್ರತಿಯನ್ನು ಕೊಟ್ಟು ಕಳುಹಿಸುತ್ತಿದ್ದರಂತೆ. ಮುದ್ರಣವಾಗಿ ಬಂದ ದಿನವೇ ಒಂದು ಪ್ರತಿಯನ್ನು ತಾರಿಣಿಯವರಿಗೆ ’ಚಿ|| ಕೆ.ಪಿ. ತಾರಿಣಿಗೆ, ತಂದೆಯ ಷಷ್ಟಿಪೂರ‍್ತಿಯ ಆಶೀರ್ವಾದಸಹಿತ - ಕುವೆಂಪು ೨೯-೧೨-೧೯೬೪’ ಎಂದು ಬರೆದು ಕೊಟ್ಟಿದ್ದರಂತೆ. ಕಸೂತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ತಾರಿಣಿಯವರು ಒಮ್ಮೆ ಕಣ್ಣಾಡಿಸಿ, ಅಮೇಲೆ ಓದಿದರಾಯಿತು ಎಂದು ಅವರ ಪುಸ್ತಕಗಳಿದ್ದ ಪೆಟ್ಟಿಗೆಗೆ ಹಾಕಿಟ್ಟರಂತೆ.
ಹುಟ್ಟಿದ ಹಬ್ಬದ ಸಂಭ್ರಮ ಮುಗಿದ ಮೇಲೆ ಆ ಪುಸ್ತಕವನ್ನು ಓದಲೆಂದು ತಾರಿಣಿಯವರು ತೆಗೆದರೆ, ಅದರಲ್ಲಿ ’ತಾರಿಣಿಯ ಕಸೂತಿ’ ಎಂಬ ಶೀರ್ಷಿಕೆಯ ಪುಟ್ಟ ಕವಿತೆಯಿದೆ! ಕವಿತೆಯ ಕೊನೆಯಲ್ಲಿ ’ಕುವೆಂಪು ೨-೧-೬೫’ ಎಂದೂ ಬರೆದಿದ್ದರಂತೆ. ಅಂದರೆ ನಾಲ್ಕು ದಿನಗಳ ನಂತರ ಕುವೆಂಪು ಮತ್ತೆ ಆ ಪುಸ್ತಕವನ್ನು ಹುಡುಕಿ ಈ ಕವಿತೆಯನ್ನು ಬರೆದಿಟ್ಟಿದ್ದಾರೆ. ಈಗ ಇದು ಕು.ಸ.ಕಾ./೨ ಪುಟ ೩೦೫ರಲ್ಲಿ ಪ್ರಕಟವಾಗಿದೆ. ಕವನ ಹೀಗಿದೆ.
ತಾರಿಣಿಯ ಕಸೂತಿ
ಸಾಗರ ಸಾಗರ ರಸದ ನಯಾಗರ
ಧುಮ್ಮಿಕ್ಕಿದವೋಲಾಗುತಿದೆ!
ತಾರಿಣಿ ಕುಶಲ ಕಲಾ ಕಸೂತಿಗೆ
ಸೌಂದರ‍್ಯ ವಿಭೂತಿಗೆ
ಸ್ವರ್ಗಶ್ರೀ
ಮುಡಿ ಬಾಗುತಿದೆ!
ಆಗಿದೆ ಜಗಲಿಯೆ ಹಕ್ಕಿಯ ಕಾಶಿ!
ಆಗಿದೆ ಬಾಗಿಲೆ ಹೂವಿನ ರಾಶಿ!
ಹೊಂಗನಸಿಳಿದಿದೆ ನಿಜವನೆ ಮಾಸಿ,
’ಉದಯರವಿ’ಗೆ ನಂದನವನೆ ಬೀಸಿ!
ಮಗಳು ತನ್ನ ಹುಟ್ಟುಹಬ್ಬಕ್ಕೆಂದೇ ಸಿದ್ಧಪಡಿಸಿದ ಕಸೂತಿಯ ಮುಂದೆ ಕುಳಿತ ಕವಿಯ ಮನಸ್ಸಿಗೆ, ಆ ಕಸೂತಿಯ ಸೌಂದರ್ಯವಿಭೂತಿಗೆ ಸ್ವರ್ಗವೇ ಮುಡಿ ಬಾಗುತ್ತಿರುವಂತೆ ಭಾಸವಾಗಿದೆ! ಜಗಲಿ ಹಕ್ಕಿಯ ಕಾಶಿಯಾಗಿದ್ದರೆ ಬಾಗಿಲು ಹೂವಿನ ರಾಶಿಯಾಗಿದೆ. ಉದಯರವಿ ನಂದನವನವಾಗಿದೆ!
೧೮-೫-೧೯೭೦ರಲ್ಲಿ ಬರೆದ ಒಂದು ಅಪ್ರಕಟಿತ ಹನಿಗವನವನ್ನು ತಾರಿಣಿ ಉಲ್ಲೇಖಿಸಿದ್ದಾರೆ. ಅಂದಿಗೆ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡುವುದು ಹೆಮ್ಮಯ ವಿಚಾರವಾಗಿತ್ತಂತೆ. ಕಲಾವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರೆ ಮೂಗುಮುರಿಯುವುದು ಸಾಮಾನ್ಯ ಸಂಗತಿ. (ಅದು ಈಗಲೂ ಬದಲಾಗಿಲ್ಲ, ಕೆಲವರಲ್ಲಿ.) ಇಂದುಕಲಾ ಮತ್ತು ತಾರಿಣಿಯವರಿಬ್ಬರೂ ಕಲಾವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡಿದವರು. ಈ ವಿಷಯದ ಬಗ್ಗೆ ಯಾರೋ ಟೀಕೆ ಮಾಡಿದ್ದರಂತೆ. ಅದನ್ನು ಶ್ರೀಮತಿ ಹೇಮಾವತಿಯವರು ಕುವೆಂಪು ಅವರ ಗಮನಕ್ಕೆ ತಂದಾಗ, ಕುವೆಂಪು ಅಸಮಧಾನದಿಂದ, ’ಕಲಾತಾರಿಣಿಯರ ಸಂಸ್ಕಾರದ ನೂರರಲ್ಲಿ ಒಂದು ಪಾಲು ಹಾಗೆ ಟೀಕೆ ಮಾಡುವವರಿಗಿಲ್ಲ’ ಎಂದು ನುಡಿದಿದ್ದರಂತೆ. ನಂತರ ’ನೀನು ಮಹಾಕವಿಯೊಬ್ಬನಿಗೆ ಮಗಳು ಎಂದು ತಲೆ ಎತ್ತಿ ನಡೆ, ಅಭಿಮಾನದಿಂದ’ ಎಂದು ತಾರಿಣಿಯವರಿಗೆ ಹೇಳಿದ್ದರಂತೆ.
ಮುಂದೆ ಕುವೆಂಪು ಅವರ ಮರಣಾನಂತರ, ಅವರ ಪುಸ್ತಕಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಇಡುವಾಗ ಒಂದು ಚೀಟಿ ತಾರಿಣಿಯವರಿಗೆ ಸಿಗುತ್ತದೆ. ಅದರಲ್ಲಿ ೧೮-೫-೧೯೭೦ ಎಂಬ ದಿನಾಂಕವಿರುವ ಆರು ಸಾಲಿನ ಪದ್ಯವೊಂದಿತ್ತು.
ನೀ ಜಗತ್ತಿನ ಮಹಾಕವಿಯೊಬ್ಬನಿಗೆ ಪುತ್ರಿ
ಎಂಬ ಅಭಿಮಾನದಿಂ ನಡೆ, ಮಗಳೆ ತಲೆ ಎತ್ತಿ!
ಬೇಡ ಷೋಕಿ, ಇರಲಿ ಸೌಂದರ್ಯ;
ಬೇಡ ಗರ್ವ, ಇರಲಿ ಗಾಂಭೀರ‍್ಯ
ನಿನಗಿಹುದು ಇಡಲು ಮುಡಿ!
ಶ್ರೀಮಾತೆಯಲರ ಅಡಿ!
ಈ ಮೇಲಿನ ಎರಡು ಪುಟ್ಟ ಕವಿತೆಗಳನ್ನು ಅವುಗಳ ಸಂದರ್ಭದ ಹಿನ್ನೆಲೆಯನ್ನು ಅರಿತು ಓದಿದಾಗ ನನಗನ್ನಿಸಿದ್ದು: ಕುವೆಂಪು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಒಬ್ಬ ಸಜ್ಜನ ಮನುಷ್ಯನಾಗಿಯೂ, ಕವಿಯಾಗಿಯೂ ಸ್ಪಂದಿಸುತ್ತಿದ್ದರು! 
ಮುಂದಿನ ವಾರ ಇನ್ನೊಂದು ಕವಿತೆ . . .

Comments