ಅಂಬಾನಿ ಸಂಪತ್ತಿಗೆ ಟಾಟಾ ಸವಾಲ್

ಅಂಬಾನಿ ಸಂಪತ್ತಿಗೆ ಟಾಟಾ ಸವಾಲ್

ಉಪ್ಪಿನಿಂದ ಹಿಡಿದು ಬೆಲೆಬಾಳುವ ಜಾಗ್ವಾರ್ ಕಾರುಗಳ ತನಕ ಉತ್ಪಾದಿಸುವ ಬೃಹತ್ ಕೈಗಾರಿಕೋದ್ಯಮಿ ರತನ್ ಲಾಲ್ ಟಾ ಟಾ (ಕೆಲವರು ತಾ ತಾ ಎಂತಲೂ ಬರೆಯುತ್ತಾರೆ) ಇಂಗ್ಲೆಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ್ ಕೈಗಾರಿಕಾ ಸಮುಚ್ಚಯಗಳ ಮಾಲೀಕ ಮುಕೇಶ್ ಅಂಬಾನಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ವಿಶ್ವ ನಿಬ್ಬೆರಗಾದ, ಶ್ರೀಮಂತಿಕೆಯ ನಗ್ನ ಪ್ರದರ್ಶನ ನೀಡಿದ ಅಂಬಾನಿ ವಾಸದ ಮನೆ ಭಾರತದಂಥ ಬಡ ದೇಶದಲ್ಲಿ ಭಾರತೀಯನೊಬ್ಬನಿಂದ ಬೇಕಿತ್ತೆ ಎಂದು ಸಾಮಾನ್ಯ ಜನ ಕೇಳಿದರೆ ವಕ್ರ ನೋಟ ಎದುರಿಸಬೇಕಾಗುತ್ತದೆ ಆದರೆ ಅದೇ ಮತೊಬ್ಬ ಆಗರ್ಭ ಶ್ರೀಮಂತ ಟಾ ಟಾ ಹೇಳಿದಾಗ  ಆ ಮಾತಿಗೆ ತೂಕ ಸೇರಿ ದೊಡ್ಡ ಸುದ್ದಿಯಾಯಿತು.

ಅಂಬಾನಿ ಕಟ್ಟಿದ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ, ೩೯೮,೦೦೦ ಸಾವಿರ ಚದರಡಿಯ, ಏಳು ವರ್ಷಗಳ ಕಾಲ ಸಮಯ ತೆಗೆದು ಕೊಂಡ, ೧೬೦ ಕಾರುಗಳನ್ನು, ಮೂರು ಹೆಲಿಕಾಪ್ಟರ್ ಗಳನ್ನು ಪಾರ್ಕ್ ಮಾಡಬಹುದಾದ ೨೭ ಮಹಡಿಯ ಕಟ್ಟಡ ದ ಉದ್ಘಾಟನೆ ಗೇ ವಿಶ್ವದ ವಿವಿಧ ಕಡೆಗಳಿಂದ ಬರುವ ಅತಿಥಿಗಳು ಮೈಲುಗಟ್ಟಲೆ ಉದ್ದ ಚಾಚಿ ಕೊಂಡ ಕೊಳೆಗೇರಿಗಳನ್ನು ದಾಟಿ ಕೊಂಡು ಬರಬೇಕಂತೆ. ಭಾರತದ ಸುಮಾರು ಎಂಭತ್ತು ಕೋಟಿ ಗೂ ಅಧಿಕ ಜನ ದಿನಕ್ಕೆ ನೂರು ರೂಪಾಯಿಗಿಂತ ಕಡಿಮೆ ಸಂಪಾದನೆ ಮಾಡುವಾಗ ಈ ಆಗರ್ಭ ಶ್ರೀಮಂತ ಇಂಥ ದುಂದು ವೆಚ್ಚ ಮಾಡೋ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸುವವರೂ ಇದ್ದಾರೆ.

ಶ್ರೀಮಂತಿಕೆಯ ಮೇಲಿನ ಉದಾಹರಣೆ ದೇಶೀಯ ದಾದರೆ ಕೆಳಗಿದೆ ನೋಡಿ ವಿದೇಶೀ ಶ್ರೀಮಂತನ ಕಥೆ.

ಅಮೆರಿಕೆಯ ಆಗರ್ಭ ಶ್ರೀಮಂತ ನಿಕೊಲಸ್ ಬರ್ಗ್ರೆವಿನ್ ಎಲ್ಲ ಧನವಂತರ ಹಾಗೆ ಧನಪಿಶಾಚಿ ಅಲ್ಲ. ಈತ ಒಬ್ಬ ಮಹಾ ಸಾತ್ವಿಕ.  ತನ್ನ ಧನದ ಮದದಿಂದ ಓಲಾಡದೇ ಬಡವರಿಗೆ ದಾನ ಮಾಡುವ, ಕಾಳಜಿ ಇರುವ ಶ್ರೀಮಂತ.

ಕಾಂಬೋಡಿಯದಲ್ಲಿ ಕೃಷಿಕರಿಗೆ ಸಹಾಯ ಮತ್ತು ಬಡ ರಾಷ್ಟ್ರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ದಾರಿದ್ರ್ಯ ನಿವಾರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಕೊಲಸ್ ಇತರ ಧನವಂತರಿಗೆ ಮಾದರಿಯಾಗಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಅಗಾಧವಾಗಿ ಸಂಪಾದಿಸಿದ ನಿಕೊಲಸ್ ಹಣದೊಂದಿಗೆ ಬರುವ ಎಲ್ಲಾ ಸೌಕರ್ಯಗಳನ್ನೂ ಪಡೆದರು. ಫ್ಲೋರಿಡಾದ ಖಾಸಗಿ ದ್ವೀಪವೊಂದರಲ್ಲಿ ಬಂಗಲೆ, ನ್ಯೂಯಾರ್ಕಿನಲ್ಲಿ ಅತಿ ದುಬಾರಿ ಮನೆ, ಇವೆಲ್ಲವನ್ನೂ ಮಾರಿ ಹೋಟೆಲ್ನಲ್ಲಿ ಬಾಡಿಗೆಗಿದ್ದು ತಮ್ಮ ಸಂಪತ್ತನ್ನು ಬಡವರ ಏಳಿಗೆಗಾಗಿ ಇಟ್ಟಿದ್ದಾರೆ ನಿಕೊಲಸ್.

“ಥಳಕು ಬೆಳಕಿನ ಜೀವನ ಮತ್ತು ಜನರಿಗೆ ಪ್ರದರ್ಶಿಸುವ ತೋರಿಕೆಯ ಬದುಕು ಶೂನ್ಯ, ನನ್ನ ಹತ್ತಿರ ಇರುವುದೆಲ್ಲವೂ ಕ್ಷಣಿಕ, ನಾವೀ ಜಗತ್ತಿನಲ್ಲಿರುವುದು ಅಲ್ಪ ಸಮಯ ಮಾತ್ರ. ಶಾಶ್ವತವಾಗಿ ನಿಲ್ಲುವ ನಮ್ಮ ನಡವಳಿಕೆಗಳೇ ನಿಜವಾದ ಮೌಲ್ಯ” ಇವು ನಿಕೊಲಸ್ ಅವರ ನುಡಿಮುತ್ತುಗಳು.

ಪ್ರಚಾರಗಳಿಂದ ಯಾವಾಗಲೂ ದೂರವಿರುವ ಈ ಯುವ ಶ್ರೀಮಂತ ಅನೇಕರಿಗೆ ದೊಡ್ಡ ಒಗಟು. ಕೆಲ ವರ್ಷಗಳ ಹಿಂದೆ ಡಚ್ ಪತ್ರಿಕೆಯೊಂದು ಅವರ ಬಗ್ಗೆ  ಬರೆದಾಗ ಪತ್ರಿಕೆಯ ಎಲ್ಲ ಪ್ರತಿಗಳನು ಖರೀದಿಸಿ ಬಿಸಾಕಿದರು.

ನಮ್ಮಲ್ಲಿನ ಶ್ರೀಮಂತರಾದ ಅಂಬಾನಿಯಂಥವರು, ಮೈಮಾಟ ಪ್ರದರ್ಶಿಸಿ ಹಣಗಳಿಸುವ ಬಾಲಿವುಡ್ನ ನರ್ತಕ ನರ್ತಕಿಯರು ಮತ್ತು ಇತರೆ ಹತ್ತು ಹಲವು ಕೃತ್ರಿಮ ಗಳ ಮೂಲಕ ಸಂಪಾದಿಸಿದ ಹಣವಂತರು ನಿಕೊಲಸ್ ಬರ್ಗ್ರೆವಿನ್ ಅವರಿಂದ ಕಲಿಯಲು ಬಹಳಷ್ಟಿದೆ.

ಈಗಿನ ಕಾಲದ ಹಣವಂತರ ಅಹಂಕಾರ, ಧಿಮಾಕನ್ನು ಕಂಡ ನಮಗೆ ನಿಕೊಲಸ್ ಒಂದು ಕಾರಂಜಿ ಇದ್ದಂತೆ. ಒಂದು ಆಹ್ಲಾದಕರ ತಂಗಾಳಿ.

Comments