ನಮ್ಮ ನಮ್ಮಲ್ಲೇ ಹೋರಾಟ?

ನಮ್ಮ ನಮ್ಮಲ್ಲೇ ಹೋರಾಟ?

 

ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸದ ಪ್ರತೀಕನಾದ ಅವನು, ಆಯುಧವನ್ನು ಹೊತ್ತು ಕಣ್ಮುಚ್ಚಿ ಧ್ಯಾನಿಸಿ ಕಣ್ ತೆರೆದ ... ತನ್ನನ್ನು ಅಡ್ಡಗಟ್ಟಲು

ನಿಂತಿರುವ ವ್ಯೂಹವನ್ನು ನೋಡಿ ಹೆಮ್ಮೆಯೆನಿಸಿದ್ದು ಒಂದು ಘಳಿಗೆ ಮಾತ್ರ ... ಸುತ್ತುವರೆದವರಾದರೂ ಯಾರು?

 

ತನ್ನವರು !!!

 

ಒಮ್ಮೆ ಹಾಗೇ ಮೈ ನಡುಗಿದಂತಾಯ್ತು ... ತಾನು ಹೋರಾಡಲಿರುವುದು ತಮ್ಮವರ ಮೇಲೆಯೇ? ಏನೂ ಅರಿವಾಗದೆ ಮನದಲ್ಲಿ ಶೂನ್ಯ ತುಂಬಿತು ...

 

ಇದುವರೆಗೂ ಎಷ್ಟು ಬಾರಿ ವೈರಿಗಳೊಂದಿಗೆ ಸೆಣೆಸಲಿಲ್ಲ? ಎಂದೂ ಮೂಡದ ಭಾವನೆ ಇಂದೇಕೆ ಮೂಡುತ್ತಿದೆ?

 

ಕಾರಣವಿಷ್ಟೇ ! ಅಂದೆಲ್ಲ ತನ್ನೊಂದಿಗೆ ಇದ್ದವರು ತನ್ನವರು ಎದುರಿಗೆ ಇದ್ದವರು ವೈರಿಗಳು ... ಆದರೆ ಇಂದು?

 

ವೈರಿ ಪಾಳ್ಯದಲ್ಲಿರುವವರು ನನ್ನ ಜನರೇ !! ಇಂದು ಎದುರು-ಬದುರು ನಿಂತು ಸೆಣಸುತ್ತಿದ್ದೇಯೇ? 

 

ಇಂತಹ ಯುದ್ದದಿಂದ ಬರುವ ಲಾಭವಾದರೂ ಏನು? 

 

ನಮ್ಮವರೊಂದಿಗೇ ಸೆಣಿಸಿ ತಾನೇ ದೊಡ್ಡವನು ಎಂದು ಅವರ ಮುಂದೆ ಕೊಚ್ಚಿಕೊಳ್ಳುವುದರಲ್ಲಿ ಏನು ಸುಖವಿದೆ? 

 

ತನ್ನವರನ್ನು ಸೋಲಿಸಿ ಗಳಿಸುವ ಪಟ್ಟದಿಂದ ಯಾವ ಸಂತೋಷವಿದೆ? ತನಗಿದು ಬೇಕೇ?

 

ಇಲ್ಲ ... ಖಂಡಿತ ಇದು ತನಗೆ ಬೇಕಿಲ್ಲ ...

 

ಖಿನ್ನ ಮನಸಿಗನಾಗಿ ಕೈಯಲ್ಲಿರುವ ಆಯುಧವನ್ನು ನೆಲದ ಮೇಲಿರಿಸಿದ .... ಕಿರೀಟವನ್ನು ಕೈಯಲ್ಲಿ ತೆಗೆದುಕೊಂಡು ನೆಲ ಮೇಲೆಟ್ಟವ, ಹಾಗೇ ಕುಸಿದು ಕುಳಿತ ....

 

ವೀರಾವೇಶದಿಂದ ಬಂದವನಿಂದ ಏನೆಲ್ಲ ಆಕ್ರಮಣ ನಿರೀಕ್ಷಿಸಿದ್ದ ಜನ, ಅವನಿಂದ ಯಾವ ಪ್ರತಿರೋಧವೂ ಬರದೆ ಇದ್ದುದೇ ಅಲ್ಲದೆ  ನೆಲದ ಮೇಲೆ ಕುಳಿತಿದ್ದನ್ನು ನೋಡಿ, ಸ್ಥಂಬೀಭೂತರಾಗಿ ನಿಂತರು ..

 

ರಣರಂಗದ ಮಧ್ಯದಲ್ಲಿ ಏನು ನೆಡೆಯುತ್ತಿದೆ ಎಂಬ ಅರಿವಾಗಲಿಲ್ಲ ಯಾರಿಗೂ ... ಅರಮನೆಯಲ್ಲೇ ಕೂತು ದೂರದೃಷ್ಟಿ ಉಳ್ಳವನ ಸಹಾಯದಿಂದ ರಣರಂಗದಲ್ಲಿ ಏನು ನೆಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದವನಿಗೂ ಏನಾಗುತ್ತಿದೆ ಎಂದೇ ತಿಳಿಯದೆ ಕಳವಳ ಹೆಚ್ಚುತ್ತಿತ್ತು !!!

 

ತನ್ನ ಮಹಿಮೆ ಸಾರಲು, ಜಗತ್ತಿಗೆ ಅರಿವು ಮೂಡಿಸಲು ಕಾಲ ಕೂಡಿಬಂದಿದೆ ಎಂದರಿತ ಆ ಸೂತ್ರಧಾರಿ ಅವನ ಬಳಿ ನಸುನಗುತ್ತ ಸಾಗಿ ಬಂದ ....

 

"ನೀನು ಇಲ್ಲಿ ನಿಮಿತ್ತ ಮಾತ್ರ ... ಇಲ್ಲಿ ನಿನ್ನದು ಎಂಬುದೇ ಯಾವುದೂ ಇಲ್ಲವೆಂದ ಮೇಲೆ ಕಳೆದುಕೊಳ್ಳುವುದೇನನ್ನು? ನೀನು ಹತಾಶನಾಗಿ ನಿಂತರೆ ನಿನ್ನ ಕೆಲಸ ಇನ್ನೊಬ್ಬ ಮಾಡುವನು ಅಷ್ಟೇ! ನೀನು ಯಾರನ್ನು ನಿನ್ನವರು ಎಂದು ಅಂದುಕೊಂಡಿದ್ದೀಯೋ ಅವರು ನಿನ್ನವರಲ್ಲ. ಎಲ್ಲರೂ ನಾನಾಡಿಸಿದಂತೆ ಆಡುವವರು ಅಷ್ಟೇ! ಅವರುಗಳು ನಿನ್ನವರೇ ಎಂದು ನೀನು ಅಂದುಕೊಂಡೀದ್ದಲ್ಲಿ ಈ ರಣರಂಗದಲ್ಲಿ ಅವರು ನಿನ್ನ ಶತ್ರುಗಳು ... ನಿನ್ನ ಪಾಲಿನ ಕಾರ್ಯ ನೀ ಮಾಡು, ಕರ್ಮವನ್ನು ನನಗೆ ಬಿಡು" ....

 

ತನ್ನದು, ತನ್ನವರು ಎಂಬ ಪೊರೆ ಕಳಚಿದ ಮೇಲೆ, ನಿಶ್ಚಿಂತನಾಗಿ, ನಿಶ್ಚಲ ಮನಸ್ಸಿನವನಾಗಿ, ಕಿರೀಟವನ್ನು ಧರಿಸಿ, ಕೈಯಲ್ಲಿ ಆಯುಧವನ್ನು ಪಿಡಿದು ತನ್ನ ಮೇಲೆ ವಿಶ್ವಾಸವಿರಿಸಿದವರಿಗೆ ದ್ರೋಹ ಮಾಡೆನು ಎಂದು ನಿರ್ಧರಿಸಿ ..... ಮುಂದೇನು ಮಾಡಿದ ಗೊತ್ತೇ?

 

ತನ್ನ ನೆಲದವನೇ ಎಸೆದ ಆಯುಧವನ್ನು ನೇರವಾಗಿ ಬೌಂಡರಿಯಾಚೆ ಸಿಕ್ಸ್ ಹೊಡೆವುದರ ಮೂಲಕ ತನ್ನ ದಾಳಿ ಆರಂಭಿಸಿದ ..

 

{ತಮ್ಮವರು ಮತ್ತೊಬ್ಬರೊಡನೆ ಸೇರಿಕೊಂಡು ತಮ್ಮವರ ಮೇಲೇ ಹೊಡೆದಾಡುವುದನ್ನು I P L ಎಂದೂ ಕರೆಯುತ್ತಾರೆ ... }

 

 

Comments