ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು

ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು

ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು

ತ್ರೀಜಿ ಮೊಬೈಲ್ ಸೇವೆ ಆರಂಭವಾದ ಬಳಿಕ ಆ ಸೇವೆ ಬಳಸಿ,ಬ್ರಾಡ್‌ಬ್ಯಾಂಡ್ ಸೇವೆ ಪಡೆಯುತ್ತಿರುವವರ ಸಂಖ್ಯೆ ಒಂಭತ್ತು ದಶಲಕ್ಷ ದಾಟಿದೆ.ನಾಲ್ಕು ತಿಂಗಳ ಅವಧಿಯಲ್ಲಿ ಈ ದಾಖಲೆಯ ನಿರ್ಮಾಣವಾಗಿದೆ.ದೇಶದಲ್ಲಿ ಒಟ್ಟು ಇರುವ ಕೇಬಲ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಇದುವರೆಗೆ ಹನ್ನೊಂದು ದಶಲಕ್ಷ ಗ್ರಾಹಕರಷ್ಟೇ ಇದ್ದಾರೆ ಎನ್ನುವುದನ್ನು ಗಮನಿಸಿದರೆ,ತ್ರೀಜಿ ಬಳಕೆ ಅಚ್ಚರಿ ಹುಟ್ಟಿಸುವಷ್ಟಿದೆ.ಇನ್ನೊಂದು ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಯು ಹತ್ತು ಕೋಟಿ ಮುಟ್ಟಬೇಕೆಂಬ ಗುರಿಯನ್ನು ಮೊಬೈಲ್ ಸೇವೆದಾತೃಗಳು ಹೊಂದಿದ್ದಾರೆ.
-------------------------------------------
ಲಿಂಕಡ್ ಇನ್ ಡಬಲ್
ಮೇಲ್ಮನೆಯವರ ಕನಸಿನ ರಾಜ ಗುರುಗುಂಟಿರಾಯರ ನಿದ್ದೆ ಕದಿಯಬಹುದಾದ ಸಮಾಚಾರ ಯು ಎಸ್‌ನಿಂದ ಬಂದಿದೆ.ಅಲ್ಲಿನ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ತಾಣ ಲಿಂಕ್‌ಡಿನ್ ತಾಣದ ಐಪಿಓವು ಮುಗಿದು,ವಿನಿಮಯ ಕೇಂದ್ರದಲ್ಲಿ ಶೇರು ವಿಕ್ರಯ ಆರಂಭವಾದ ಮೊದಲ ದಿನವೇ ಅದರ ಬೆಲೆ ಡಬಲ್ ಆಗಿ,ಶೇರು ಗಿಟ್ಟಿಸಿಕೊಂಡವರು ಲಾಭದ ಗುಂಗಿನಲ್ಲಿ ಮೈಮರೆಯುವಂತಾಯ್ತು.ನಲುವತ್ತೈದು ಡಾಲರಿಗೆ ಶೇರುದಾರರಿಗೆ ನೀಡಲ್ಪಟ್ಟ ಶೇರು,ಈ ಬರಹ ಬರೆಯುತ್ತಿರುವಾಗ ನೂರೊಂದು ಡಾಲರಿಗೆ ಬಿಕರಿಯಾಗುತ್ತಿತ್ತು.ಫೇಸ್‌ಬುಕ್,ಅರ್ಕುಟ್ ಅಂತಹ ನೆಟ್ವರ್ಕಿಂಗ್ ಕಂಪೆನಿಗಳು ಖಾಸಗಿ ಹೂಡಿಕೆಯಿಂದ ನಡೆಯುತ್ತಿದ್ದು,ಇದೇ ಮೊದಲ ಬಾರಿಗೆ ನೆಟ್ವರ್ಕಿಂಗ್ ತಾಣವೊಂದರ ಶೇರು ಅಮೆರಿಕಾದ ಹೂಡಿಕೆದಾರರ ಕೈಗೆ ಸಿಗುತ್ತಿದೆ.ಲಿಂಕ್‌ಡಿನ್ ತಾಣವು ವೃತ್ತಿಪರರು ಕಲೆಯಲು ಅನುವು ಮಾಡುವ ತಾಣ.ಇಲ್ಲಿ ಜನರ ವೃತ್ತಿ ಸಂಬಂಧಿತ ವಿವರಗಳೇ ಹೆಚ್ಚು.ಸಹೋದ್ಯೋಗಿಗಳ ಜತೆಗಿನ ಸಾಮಾಜಿಕ ಸಂಬಂಧವೇರ್ಪಡಲು ತಾಣ ಅವಕಾಶ ಕಲ್ಪಿಸುತ್ತದೆ.ಈಗ ಇಂತಹ ತಾಣಗಳು ಹೂಡಿಕೆದಾರರಿಂದ ಹಣ ಕಲೆಹಾಕಲು ಶುರು ಮಾಡುವ ಸೂಚನೆಗಳೀಗಲೇ ಸಿಕ್ಕಿವೆ.ನೌಕರಿ ಹುಡುಕಾಟ,ಪ್ರೀಮಿಯಂ ಚಂದಾದಾರರು ಮತ್ತು ಜಾಹೀರಾತು ಹೀಗೆ ವಿವಿಧ ಮೂಲಗಳಿಂದ ಆದಾಯಗಳಿಸುತ್ತಿರುವುದು ಲಿಂಕಡ್‌ಇನ್ ತಾಣದ ವಿಶೇಷ.ವಾರಾಂತ್ಯಕ್ಕೆ ಶೇರು ಬೆಲೆ ತೊಂಭತ್ತ ಮೂರು ಡಾಲರುಗಳಲ್ಲಿ ನಿಂತಿತ್ತು.
-------------------------------------------
ಆಂಡ್ರಾಯಿಡ್ ಪೋನ್:ಭದ್ರತಾ ಕೋರೆ
 
ಆಂಡ್ರಾಯಿಡ್ ಫೋನುಗಳಿಂದ ಮಾಹಿತಿ ಸೋರಿಕೆಗೆ ಆಸ್ಪದ ನೀಡುವ ಭದ್ರತಾ ವೈಫಲ್ಯವನ್ನು ಬ್ರಿಟನಿನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.ಮೊಬೈಲ್ ಜಾಲಗಳಲ್ಲಿ ನಿಸ್ತಂತು ಜಾಲದಲ್ಲಿ ಪೋನಿನಿಂದ ಹೊರಟ ಮಾಹಿತಿಯನ್ನು ಕದ್ದವರು,ಅದನ್ನು ಬಳಸಿ,ವ್ಯಕ್ತಿಯ ಗೂಗಲ್ ಕ್ಯಾಲೆಂಡರಿನಲ್ಲಿ ಶೇಖರಿಸಿದ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುವ ಭದ್ರತಾ ವೈಫಲ್ಯ ಆಂಡ್ರಾಯಿಡ್ ಫೋನುಗಳಲ್ಲಿವೆ.ಈಗ ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಇದಕ್ಕೆ ಸಂಬಂಧಿಸಿದ ಪ್ಯಾಚ್ ಒಂದನ್ನು ಬಿಡುಗಡೆ ಮಾಡಬೇಕಾಗುತ್ತದೆ.ಅದನ್ನು ಪ್ರತಿಯೋರ್ವ ಆಂಡ್ರಾಯಿಡ್ ಫೋನು ಬಳಕೆದಾರ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.
---------------------------------
ಎಟಿಎಂಗಳಲ್ಲಿ ನವೀನ ಸೇವೆಗಳು
ಬ್ಯಾಂಕ್ ಎಟಿಎಂಗಳಲ್ಲಿ ನವೀನ ಮೌಲ್ಯವರ್ಧಿತ ಸೇವೆಗಳು ಆರಂಭವಾಗುತ್ತಿವೆ.ಏರ್‌ಲೈನ್ಸ್ ಬುಕಿಂಗ್,ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ,ಡಿಟಿಎಚ್-ಮೊಬೈಲ್ ಪ್ರಿಪೆಯ್ಡ್ ಶುಲ್ಕ ಪಾವತಿ,ಇನ್ಶೂರೆನ್ಸ್ ಪ್ರೀಮಿಯಂ ಪಾವತಿ... ಹೀಗೆ ನಾನಾ ಸೇವೆಗಳನ್ನು ಬ್ಯಾಂಕುಗಳು ನೀಡಲಾರಂಭಿಸಿವೆ.ಗ್ರಾಹಕನನ್ನು ಬ್ಯಾಂಕ್‌ನಿಂದ ದೂರವಿಟ್ಟು ಈ ರೀತಿಯ ಸೇವೆ ಒದಗಿಸಿದರೆ,ಬ್ಯಾಂಕುಗಳಲ್ಲಿ ನೌಕರರ ಸಂಖ್ಯೆ ಕಡಿತಗೊಳಿಸಲು ಸಾಧ್ಯವಾಗುವುದರಿಂದ,ಈ ತೆರನ ಸೇವೆಗಳನ್ನು ಒದಗಿಸಲು ಬ್ಯಾಂಕುಗಳು ಉತ್ಸಾಹ ಹೊಂದಿವೆ.ಎಟಿಎಂ ನಿರ್ವಹಣಾ ಖರ್ಚನ್ನೂ ಇಂತಹ ಮೌಲ್ಯವರ್ಧಿತ ಸೇವೆಗಳಿಗೆ ಪಡೆಯುವ ಕಮಿಷನ್ ಮೂಲಕ ಹಿಂಪಡೆಯಲು ಸಾಧ್ಯ.ಆದರೆ ಎಟಿಎಂ ಪ್ರವೇಶಿಸಿದ ಗ್ರಾಹಕ,ಒಂದರ ನಂತರ ಒಂದು ಸೇವೆಯನ್ನು ಬಳಸುತ್ತಾ ಕುಳಿತರೆ,ಹೊರಗೆ ಕಾಯುವವರ ಕ್ಯೂ ಉದ್ದವಾಗಿ,ಗ್ರಾಹಕರ ಆಕ್ರೋಶ ಹೆಚ್ಚುವ ಭೀತಿಯೂ ಇಲ್ಲದಿಲ್ಲ.
----------------------------------------------------
ಇ-ಬುಕ್‍ಗಳ ಮಾರಾಟ ಭರಾಟೆ
 
ಕಿಂಡಲ್ ಎನ್ನುವ ಇ-ಬುಕ್ ರೀಡರ್‌ಗಳನ್ನು ಅಮೆಜಾನ್ ಅಂತರ್ಜಾಲ ತಾಣ ಮಾರುತ್ತಿದೆ.ಕಳೆದ ನಾಲ್ಕು ವರ್ಷಗಳಿಂದ ಕಿಂಡಲ್ ಇ-ಬುಕ್ ರೀಡರ್‌ಗಳನ್ನು ಮಾರುತ್ತಿರುವ ಕಂಪೆನಿ,ಕಳೆದ ವರ್ಷದಲ್ಲಿ ಈ ಸಾಧನಗಳ ಮಾರಾಟದಲ್ಲಿ ಶೇಕಡಾ145ರ ಪ್ರಗತಿ ಕಂಡಿದೆ.ಇದೇ ವೇಳೆ ಇಂತಹ ಇ-ಪುಸ್ತಕಗಳಲ್ಲಿ ಓದಬಹುದಾದ ಇ-ಬುಕ್‌ಗಳ ಮಾರಾಟ ಇದೀಗ ಹೆಚ್ಚಿದೆ.ಅಮೆಜಾನ್ ಅಂತರ್ಜಾಲ ತಾಣದ ಮೂಲಕ ಮಾರಾಟವಾಗುವ ಮುದ್ರಿತ ಪುಸ್ತಕಗಳಿಗೆ ಹೋಲಿಸಿದರೆ, ಇ-ಬುಕ್‌ಗಳ ಮಾರಾಟವೇ ಹೆಚ್ಚು.ಪ್ರತಿ ನೂರು ಮುದ್ರಿತ ಪುಸ್ತಕಗಳಿಗೆ ನೂರೈದು ಇ-ಬುಕ್‌ಗಳು ಮಾರಾಟವಾಗುತ್ತಿವೆ.ಸದ್ಯವೇ ಅಮೆಜಾನ್ ಕಂಪೆನಿಯು ಗೂಗಲ್ ಆಂಡ್ರಾಯಿಡ್ ಆಧಾರಿತ ಟ್ಯಾಬ್ಲೆಟುಗಳನ್ನು ಮಾರುಕಟ್ಟೆಗೆ ತರುವ ಉದ್ದೇಶ ಹೊಂದಿದೆ ಎನ್ನುವ ವದಂತಿಗಳಿವೆ.ಆಂಡ್ರಾಯಿಡ್ ಸಾಧನಗಳಿಗೆ ಉತ್ತಮ ಮಾರುಕಟ್ಟೆಯಿರುವ ಕಾರಣ,ಇ-ಬುಕ್ ಮಾರಾಟದಲ್ಲಿ ಇನ್ನೂ ಪ್ರಗತಿಯಾಗಬಹುದು.ಹಾಗೆಂದು ಒಟ್ಟಾರೆ ಎಲ್ಲೆಡೆ ಮಾರಾಟವಾಗುವ ಮುದ್ರಿತ ಪುಸ್ತಕಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ,ಇ-ಬುಕ್‌ಗಳ ಮಾರಾಟ ಶೇಕಡಾ ಇಪ್ಪತ್ತರಷ್ಟು ಮಾತ್ರಾ ಆಗಿದೆ.
----------------------------------------------------------------------
ಗೂಗಲ್ ಮ್ಯಾಪ್:ಜನರಿಂದ ಜನರಿಗಾಗಿ
ಗೂಗಲ್ ಮ್ಯಾಪ್‌ನ ನಕಾಶೆಯಲ್ಲಿ ವಿವಿಧ ಪ್ರದೇಶಗಳ ಹೆಸರು,ರಸ್ತೆಗಳ ವಿವರ,ಮನೆಗಳ ವಿವರಗಳನ್ನು ಒದಗಿಸಲು ಗೂಗಲ್ ಮ್ಯಾಪ್ ಪ್ರಯತ್ನಿಸುತ್ತಿದೆ.ಭಾರತದ ವಿವಿಧ ಪ್ರದೇಶಗಳ ನಕಾಶೆಯಲ್ಲಿ ಇಂತಹ ವಿವರಗಳನ್ನು ಸೇರಿಸಲು ಜನರ ಸಹಭಾಗಿತ್ವವನ್ನು ಗೂಗಲ್ ಸ್ವಾಗತಿಸುತ್ತದೆ.ಗುಜರಾತ್,ರಾಜಾಸ್ತಾನ್‌ನಂತಹ ರಾಜ್ಯಗಳ ನಕಾಶೆಗಳು ಜನರ ಸಹಭಾಗಿತ್ವದ ಮೂಲಕವೇ ಬಹಳಷ್ಟು ಸಿದ್ಧಗೊಂಡಿವೆ.ಆದರೆ ಇನ್ನುಳಿದೆಡೆ ಜನರ ಸಹಕಾರ ಹೆಚ್ಚು ವ್ಯವಸ್ಥಿತವಾಗಿ ಸಿಗುತ್ತಿಲ್ಲ.ಅವರುಗಳು ಸೇರಿಸುವ ವಿವರಗಳು ಸರಿಯಾಗಿವೆಯೇ,ಮತ್ತು ಉಪಯುಕ್ತವಾಗಿದೆಯೇ ಎನ್ನುವುದನ್ನು ಪರೀಕ್ಷಿಸಲು ಹೆಚ್ಚು ಕ್ರಿಯಾಶೀಲವಾಗಿರುವ ಜನರ ಪಡೆಯನ್ನೇ ಗೂಗಲ್ ಗುರುತಿಸಿ,ಅವರುಗಳಿಗೆ ಸಂಪಾದಕರುಗಳ ಸ್ಥಾನಮಾನವನ್ನು ನೀಡುತ್ತದೆ.ತಿರುವನಂತಪುರದಂತಹ ಪ್ರದೇಶಗಳಲ್ಲಿ ಐನೂರು ಜನರ ಪಡೆ ಇದೆ.ಮನೆಗಳ ವಿವರಗಳನ್ನು ಸೇರಿಸಲು ಗೂಗಲ್ ಜನರಿಗೆ ಅನುವು ಮಾಡಿದೆ.ಆದರೆ ಇದರಲ್ಲಿ ಮನೆ ಸಂಖ್ಯೆಯಂತಹ ವಿವರ ಸೇರಿಸಲು ಮಾತ್ರಾ ಅನುಮತಿಯಿದೆ.ಹೆಸರು ಇನ್ನಿತರ ವಿವರಗಳನ್ನಲ್ಲ.
-----------------------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಯು. ಎಸ್.ನ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ.
*ಬ್ಯಾಂಕ್ ವೆಬ್‌ಸೈಟಿನಲ್ಲಿ ಲಾಗಿನ್ ಪುಟದಲ್ಲಿ ಪಾಸ್‌ವರ್ಡ್ ಕದಿಯುವ ತಂತ್ರಾಂಶಗಳಿಂದ ರಕ್ಷಣೆ ಪಡೆಯಲು ನೀಡುವ ಸವಲತ್ತು ಏನು?
*ಮೊಬೈಲ್ ಬಳಸಿ,ಬ್ಯಾಂಕ್‌ನ ಅಂತರ್ಜಾಲ ತಾಣದಲ್ಲಿ ಬಳಕೆದಾರನ ಸಾಚಾತನದ ಪರೀಕ್ಷೆ ಹೇಗೆ ಸಾಧ್ಯ?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS32 ನಮೂದಿಸಿ.)
ಕಳೆದ ವಾರದ ಸರಿಯುತ್ತರ:
*ಕನ್ನಡ ವಿಕಿಪೀಡಿಯಾದಲ್ಲಿ 10762 ಬರಹಗಳಿವೆ. ಬಹುಮಾನ ಗೆದ್ದವರು ಸಂಧ್ಯಾ ವಿದ್ಯಾಸಾಗರ್.ಅಭಿನಂದನೆಗಳು.
*ಅಶೋಕ್‌ಕುಮಾರ್ ಎ