ಪಂಜರದ ಹಕ್ಕಿ ಮತ್ತು ನೀನು

ಪಂಜರದ ಹಕ್ಕಿ ಮತ್ತು ನೀನು

ಒಂದು ರೀತಿ ನಿನಗೂ ಹಕ್ಕಿಗೂ ಸಂಬಂಧವಿಲ್ಲ. ಎಲ್ಲೋ ಸ್ವತಂತ್ರವಾಗಿ ಬದುಕುತ್ತಿರುವ ನೀನೆಲ್ಲಿ ಈ ಪಂಜರದೊಳಗೆ ನಾನುಣಿಸುವ ಕಾಳುಗಳು, ಇಡುವ ನೀರಿಗೆ ಕಾಯುತ್ತಿರುವ ಈ ಹಕ್ಕಿಯೆಲ್ಲಿ? ಆದರೂ ಈ ಹಕ್ಕಿಯನ್ನು ನೋಡಿದಾಗಲೆಲ್ಲಾ ನಿನ್ನ ನೆನಪಾಗುವುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ. ಎಷ್ಟೋ ಹಕ್ಕಿಗಳನ್ನು ನೋಡಿದರೂ ನೆನಪಾಗದ ನೀನು ಈ ಹಕ್ಕಿಯನ್ನು ನೋಡಿದರೆ ಯಾಕೆ ನೆನಪಾಗುತ್ತಿ ಎಂದು ನನಗೂ ಗೊತ್ತಿಲ್ಲ. ನಾವು ಅನುಭವಿಸುವ ಎಷ್ಟೋ ಭಾವನೆಗಳಿಗೆ ಅರ್ಥ ಕಂಡುಕೊಳ್ಳಲು ನಮ್ಮಿಂದ ಎಂದಿಗೂ ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತೇನೆ.

ಹಕ್ಕಿಗಳ ಬಗೆಗಿನ ನನ್ನ ಜ್ಞಾನ ಎಷ್ಟು ಇತ್ತು ಎಂದು ನಿನಗೂ ಗೊತ್ತಿತ್ತು. ನಿನಗೆ ಒಂದು ಹಕ್ಕಿಯನ್ನು ತೋರಿಸಿ ಅದು ಬುಲ್ ಬುಲ್ ಅಲ್ವಾ ಎಂದು ಕೇಳಿದರೆ ಸಾಕು ನೀನು ಅದರ ಸಂಪೂರ್ಣ ವಿವರಣೆ ನೀಡಲು ತಯಾರಿರುತ್ತಿದ್ದೆ. ಅವತ್ತು ನಾನು ಕೇಳಿದ ಪ್ರಶ್ನೆಗೆ ಅದು ’ರೆಡ್ ವ್ಹಿಸ್ಕರ್ಡ್ ಬುಲ್ ಬುಲ್’ ಎಂದು ಅದರ ಜೀವನ ಶೈಲಿಯ ಬಗ್ಗೆ ವಿವರಣೆ ಕೊಡಲು ಆರಂಭಿಸಿದೆ. ನೀನು ಬಳಸುವ ಶಬ್ದಗಳಲ್ಲಿ ಹೆಚ್ಚಿನದ್ದು ನನ್ನ ತಲೆಯ ಮೇಲಿಂದಲೇ ಹೋಗುವಂತೆ ಭಾಸವಾಗುತ್ತಿತ್ತು. ಇದಕ್ಕೂ ಮುನ್ನ ಒಮ್ಮೆ ನಾನು ಕೇಳಿದ ಒಂದು ಪ್ರಶ್ನೆಗೆ ’ಇನ್ವೇಸಿವ್ ಸ್ಪೀಶೀಸ್’ ಬಗ್ಗೆ ಕೊಟ್ಟ ಲೆಕ್ಚರಿನಿಂದ ತಲೆ ಕೆಟ್ಟು ಇನ್ನು ನಿನ್ನ ಬಳಿ ಯಾವತ್ತೂ ಪ್ರಶ್ನೆ ಕೇಳಲಾರೆ ಅಂದುಕೊಂಡಿದ್ದೆ. ಆದರೂ ಪಕ್ಷಿಗಳ ಹೆಸರಿನ ಕುರಿತು ಕುತೂಹಲವೊಂದಿತ್ತು. ಅದಕ್ಕೇ ಅದರ ನಂತರ ಕೇವಲ ಆ ಪಕ್ಷಿ ಯಾವುದು ಈ ಪಕ್ಷಿ ಯಾವುದು ಎನ್ನುವ ಗುರುತಿನ ಸಂಬಂಧದ ಪ್ರಶ್ನೆಗಳನ್ನೇ ಇಡುತ್ತಿದ್ದೆ. ನನಗೆ ಅವುಗಳನ್ನು ನೋಡುವುದರಲ್ಲಿ ಆಸಕ್ತಿ ಇರುತ್ತಿತ್ತೇ ಹೊರತು ಅದರ ಬಗ್ಗೆ ತಿಳಿದುಕೊಳ್ಳುವುದಲ್ಲ. ಅದಕ್ಕೂ ಮಿಗಿಲಾಗಿ ಇನ್ನೊಬ್ಬರ ಜೀವನದೊಳಗೆ ನುಸುಳಿ ಅದನ್ನು ಪರಿಶೀಲಿಸುವ ವಿಜ್ಞಾನಿಗಳನ್ನು ಕಂಡರೆ ನನಗೆ ಆಗುತ್ತಿರಲಿಲ್ಲ. ಪ್ರಕೃತಿ ಅದರಷ್ಟಕ್ಕೆ ಚಂದ, ಅದು ಅದರಷ್ಟಕ್ಕೆ ಪರಿಪೂರ್ಣ. ಅದರ ವ್ಯವಸ್ಥಿತ ಕಾರ್ಯಾಚರಣೆಗಳನ್ನು ಅರಿತುಕೊಂಡು ಥೀಸಿಸ್ ಬರೆದು ಡಾಕ್ಟರೇಟ್ ಪಡೆದುಕೊಳ್ಳುವ ನಿನ್ನ ಸ್ವಭಾವಕ್ಕೂ ನನ್ನ ಸ್ವಭಾವಕ್ಕೂ ಅದೆಷ್ಟು ಅಂತರವಿತ್ತು! ಆದರೆ ಅವುಗಳ ಬಗ್ಗೆ ತಿಳಿದುಕೊಂಡು ಅವುಗಳ, ಆದರೆ ನಮಗರಿವಿಲ್ಲದ, ಇನ್ನೊಂದು ಜಗತ್ತಿನ ಬಗ್ಗೆ ನಿನಗೆ ಇರುವ ಆಸಕ್ತಿ ನನಗೆ ವಿಶೇಷವೆಂದೆನಿಸುತ್ತಿತ್ತು. ನಿನ್ನ ಬದುಕಿನ ಬಗ್ಗೆ ನನಗೆ ಒಂದು ರೀತಿಯ ಆಕರ್ಷಣೆ ಇತ್ತು, ಅದರಲ್ಲಿ ಒಂದು ಸೆಳೆತವಿತ್ತು. ಗೊತ್ತಿರದ ವಿಷಯಗಳ ಬಗ್ಗೆ ಕುತೂಹಲವಿತ್ತು. ಅದಕ್ಕೋಸ್ಕರ ನೀನು ಕ್ಯಾಮರಾ ಹಿಡಿದುಕೊಂಡು ಊರೂರು ಅಲೆಯುತ್ತಿದ್ದಾಗ ನಾನೂ ನಿನ್ನೊಂದಿಗೆ ಕೆಲಸಕ್ಕೆ ರಜೆ ಹಾಕಿ ಜೊತೆಯಿರುತ್ತಿದ್ದೆ.  ಪ್ರತಿ ಹಕ್ಕಿಯ ಫೋಟೋ ತೆಗೆಯುತ್ತಾ ಮತ್ತೆ ಲೈಬ್ರರಿಗೆ ಹೋಗಿ ಅದರ ಬಗ್ಗೆ ಹುಡುಕಾಡುತ್ತಾ ಸಮಯ ಕಳೆಯುತ್ತಿದ್ದ ನಿನ್ನ ಬಗ್ಗೆ ಕೆಲವೊಮ್ಮೆ ಅಸಮಾಧಾನವೂ ಆಗುತ್ತಿತ್ತು. ಆದರೆ ನಿನಗೆ ನೀನು ಕಂಡುಹಿಡಿದ ವಿಸ್ಮಯಗಳನ್ನೆಲ್ಲಾ ನನಗೆ ಮೊದಲು ಹೇಳಿಯೇ ಸಮಾಧಾನ. ಅತೀವ ಖುಶಿಯಿಂದ ಹೊಳೆಯುವ ಕಣ್ಣುಗಳಿಂದ ನೀನು ಎಲ್ಲವನ್ನೂ ವಿವರಿಸುತ್ತಿದ್ದರೆ ನಿನ್ನ ವಿವರಣೆಗಿಂತಲೂ ನಾನು ನಿನ್ನ ಮುಖದಲ್ಲಿ ಮೂಡುತ್ತಿದ್ದ ವಿಲಕ್ಷಣ ಭಾವನೆಗಳಿಗೆ ಮರುಳಾಗುತ್ತಿದ್ದೆ.  

ನನ್ನೆದುರಿಗೆ ಈಗ ಇರುವ ಈ ಹಕ್ಕಿ ಯಾವ ಜಾತಿಯದ್ದು ಎಂದು ಗೊತ್ತಿಲ್ಲ. ನೀನಿದ್ದರೆ ಬಹುಶಃ ಹೇಳುತ್ತಿದ್ದೆಯೇನೋ. ಇವು ಲವ್ ಬರ್ಡ್ಸ್ ಎಂದು ಹೇಳಿ ಯಾರೋ ಕೊಟ್ಟ ಉಡುಗೊರೆ. ಮನೆಯಲ್ಲೂ ಚಿಲಿಪಿಲಿ ಸದ್ದು ಇರುತ್ತದೆ ಎನ್ನುವ ಆಲೋಚನೆಯಿಂದ ಮನೆಯ ಎದುರಿನ ಪಕ್ಕಾಸಿಗೆ ನೇತು ಹಾಕಿದ್ದೆ. ಹೌದು, ’ಬರ್ಡ್ಸ್’! ಎರಡು ಹಕ್ಕಿಗಳಲ್ಲಿ ಒಂದು ಆಗಲೇ ಸತ್ತು ಹೋಗಿಯಾಗಿದೆ. ನೀನಿದ್ದರೆ ನನ್ನನ್ನು ಬಿಚ್ಚಿ ಹಾಕಿ ಬಿಡುತ್ತಿದ್ದೆ. ಆದರೆ ಈಗ ಉಳಿದಿರುವ ಹಕ್ಕಿಗೆ ಬೂದಿ ಬಣ್ಣದ ಗರಿಗಳಿವೆ ಹಾಗೂ ಗರಿಗಳ ಬೇಸ್ ಬಿಳಿ ಬಣ್ಣದ್ದಾಗಿದೆ. ಯಾವುದೋ ಬುಲ್ ಬುಲ್ ಜಾತಿಯದ್ದೇ ಹಕ್ಕಿ ಇರಬೇಕು ಎಂದು ನನ್ನ ಅನುಮಾನ. ಇದರ ಮೇಲೆ ಹೆಚ್ಚೇನೂ ಪ್ರೀತಿಯಿಲ್ಲ, ಆಹಾರದ ಖರ್ಚು ಬೇರೆ. ಏನೂ ಮಹತ್ತರ  ಸಾಧಿಸದೇ ಉಳಿದ ನನ್ನ ಬದುಕಿಗೆ ಇದೊಂದು ಹೊರೆ ಎನಿಸಿದರೂ ನಿನ್ನ ನೆನಪು ಮಾಡಿಸುತ್ತಿದ್ದುದರಿಂದ ಅದನ್ನು ನೋಡಿಕೊಳ್ಳುತ್ತಿದ್ದೆ, ಈಗಲೂ ನೋಡಿಕೊಳ್ಳುತ್ತಿದ್ದೇನೆ.

ನಿನಗೆ ನೆನಪಿದೆಯೋ ಇಲ್ಲವೋ ಆದರೆ ಅವತ್ತು ಮನೆಯ ಬಳಿಯ ಕಾಡಿನೊಳಗೆ ಕುಳಿತುಕೊಂದು ಎಂದಿನಂತೆ ಸುತ್ತುವರಿದ ಮರಗಳ ಮೇಲಿಂದ ಕೇಳುವ ಧ್ವನಿಗಳನ್ನು ಆಲಿಸುತ್ತಾ ನಿನ್ನ ಕ್ಯಾಮರಾವನ್ನು ಹೊಂದಿಸುತ್ತಿರುವಾಗ ನಿನ್ನ ಮುದ್ದು ಮುಖವನ್ನು ಕಂಡಾಗ ನನಗೆ ನಿನ್ನ ಮೇಲೆ ಆಸೆ ಉಕ್ಕಿತ್ತು. ಅಳುಕುತ್ತಾ ನಿನ್ನ ಬಳಿಗೆ ಬಂದು ನಿನ್ನನ್ನು ಹಿಡಿದೆಳೆದು ಚುಂಬಿಸಿದ್ದೆ ಹಾಗೆಯೇ ಕೆನ್ನೆಗೆ ಒಂದು ಪೆಟ್ಟು ತಿನ್ನಲೂ ತಯಾರಾಗಿದ್ದೆ. ಆದರೆ ನಿನ್ನ ಪ್ರತಿಕ್ರಿಯೆ ಮಾತ್ರ ನನ್ನನ್ನು ಗೊಂದಲಗೊಳಿಸಿತ್ತು. ’ಏನು ಚೂರೂ ಟೈಮ್ ಸೆನ್ಸ್ ಇಲ್ವಾ?’ ಎಂದು ನಗುತ್ತಾ ಬೈದಿದ್ದೆ ನೀನು. ಆವಾಗ ಮಾತ್ರ ನನ್ನ ಮನಸ್ಸು ಗರಿಗೆದರಿ ನರ್ತಿಸಿತ್ತು. ಆದರೆ ಅವತ್ತು ಸಾಯಂಕಾಲ ಅಥವಾ ಅದರ ನಂತರವೂ ಒಮ್ಮೆಯೂ ನೀನು ನನ್ನ ಮೇಲೆ ಆಸಕ್ತಿಯಾಗಲೀ ಅಥವಾ ಪ್ರೀತಿಯಾಗಲೀ ತೋರಿಸಿದ ಹಾಗೆ ಕಾಣಲಿಲ್ಲ. ಅದಕ್ಕೆ ನೀನು ನನಗೆ ನಿಗೂಢವಾಗುತ್ತಾ ಹೊದೆ. ನಾನು ನಿನ್ನ ಚುಂಬನದ ಗುಂಗಿನಲ್ಲಿ ಮೂಢನಾಗುತ್ತಿದ್ದರೆ ನೀನು ಮಾತ್ರ ಏನೂ ಆಗದವಳಂತೆ ಇರುತ್ತಿದ್ದೆ. ನಿನಗೆ ಈಗಲೂ ನನ್ನ ಸಹಾಯ ಬೇಕಾಗಿತ್ತು. ಮೊದಲಿನ ಆತ್ಮೀಯತೆ ಇನ್ನೂ ಹಾಗೆಯೇ ಇತ್ತು. ಕೆಲವೊಮ್ಮೆ ನಿನಗೆ ಈ ವಿಷಯಗಳಲೆಲ್ಲಾ ಆಸಕ್ತಿಯೇ ಇಲ್ಲವೆಂದೆನಿಸುತ್ತಿತ್ತು. ನಿನ್ನ ಮಟ್ಟಿಗೆ ಪ್ರೀತಿ ಎಂದರೇನು ಎನ್ನುವುದು ನಿನ್ನ ಸ್ವಭಾವದಲ್ಲಿ ನನಗೆ ಅರ್ಥವಾಗುತ್ತಿರಲಿಲ್ಲ. ಮತ್ತೆ ಮತ್ತೆ ಯಾಕೋ ನಿನಗೆ ಇದೆಲ್ಲಾ ಹೊಸತಲ್ಲ ಎಂದೆನಿಸತೊಡಗಿತು. ಆಗ ನಿನ್ನ ಬಗ್ಗೆ ಉಂಟಾದ ರೇಜಿಗೆ ಈಗಲೂ ನೆನಪಿದೆ. ನಾನು ಬದಲಾಗತೊಡಗಿದೆ, ಪ್ರಕೃತಿ ವಿಸ್ಮಯದಲ್ಲಿ ನೀನು ಬೆರಗಾಗುತ್ತಿದ್ದರೆ ನನಗೆ ನೀನೇ ಪ್ರಕೃತಿಯಾಗಿ ನಾನೇ ನಿನ್ನ ರಹಸ್ಯ ಭೇದಕನಾಗಿ ರೂಪಾಂತರಗೊಳ್ಳತೊಡಗಿದೆ. ಅನ್ವೇಷಣೆಯ ಈ ಹಾದಿಯಲ್ಲಿ ನಿನ್ನ ಬಗ್ಗೆ ತಿಳಿದುಕೊಂಡದ್ದೆಲ್ಲಾ ಸತ್ಯವೋ ಸುಳ್ಳೋ ಎಂಬುದರ ಬಗ್ಗೆ ಈಗಲೂ ಅರಿವಿಲ್ಲ.  ಈಗ ಅದನ್ನೆಲ್ಲಾ ಯೋಚಿಸಿದರೆ ನಗು ಬಂದು ಬಿಡತ್ತೆ. ಕೆಲವೊಮ್ಮೆ ಜೋರಾಗಿ ನಕ್ಕು ಬಿಡುತ್ತೇನೆ ಕೂಡ.

ಈ ಹಕ್ಕಿ ನೋಡು. ಅದರ ಸಂಗಾತಿ ಬಿಟ್ಟು ಹೋಗಿದ್ದರೂ ಅದರ ವರ್ತನೆಯಲ್ಲಿ ಒಂಚೂರೂ ವ್ಯತ್ಯಾಸವಿಲ್ಲ. ಅದರ ಪ್ರಪಂಚದಲ್ಲಿ ಏನೂ ಬದಲಾದ ಹಾಗೆ ಕಾಣುತ್ತಿಲ್ಲ ಅಥವಾ ನನಗನಿಸುತ್ತಿಲ್ಲ. ಈ ಹಕ್ಕಿಯಲ್ಲಿ ಇನ್ನೊಂದು ರೀತಿಯ ಚಡಪಡಿಕೆ ಇದೆ. ಅದರ ಬಳಿಗೆ ಹೋದಾಗಲೆಲ್ಲಾ ಅದು ದೂರ ಹೋಗುತ್ತದೆ. ಅದು ಖಂಡಿತಾ ಭಯವೇ! ಇದೇ ಚಡಪಡಿಕೆಯನ್ನು ನಿನ್ನ ಕಣ್ಣುಗಳಲ್ಲಿ ಆವತ್ತು ಒಮ್ಮೆ ಕಂಡಿದ್ದೆ. ಅದು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯವಾಗಿತ್ತು. ಆದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ನೆಗೆಯುತ್ತಾ ಇರುತ್ತದೆ. ಇದರ ಅರ್ಥಗಳನ್ನೆಲ್ಲಾ ಹುಡುಕಿ ತೆಗೆಯುವಷ್ಟು ವ್ಯವಧಾನ ನನಗಂತೂ ಖಂಡಿತಾ ಇಲ್ಲ. ಕೇವಲ ಹಿಕ್ಕೆಗಳನ್ನು ಸ್ವಚ್ಚಗೊಳಿಸುತ್ತೇನಷ್ಟೆ.

ನಿನಗೆ ಸ್ವಾತಂತ್ರ್ಯದ ಬಯಕೆಯಿತ್ತು. ಅದಕ್ಕೆ ನಿನಗೆ ಹಾರಾಡುವ ಪಕ್ಷಿಗಳು ಇಷ್ಟವಾಗುತ್ತವೆ. ಅವುಗಳ ಬಗ್ಗೆ ತಿಳಿಯುತ್ತಾ ನೀನು ಪಕ್ಷಿಯಾಗಿ ಪರಿವರ್ತಿತವಾಗುತ್ತಿದ್ದೆ. ವೈದ್ಯಕೀಯ ಪದ್ಧತಿಗಳಿಂದ ಅದು ಸಾಧ್ಯವಿದ್ದರೆ ಅದನ್ನು ನೀನು ಮಾಡಿಸಿಕೊಳ್ಳುತ್ತಿದ್ದೆ ಎಂದು ಒಮ್ಮೆ ನಿನಗೆ ತಮಾಷೆ ಮಾಡಿದ್ದೆ. ಆದರೆ ನಿನಗೆ ಸ್ವಾತಂತ್ರ್ಯದ ಕನಸು ಯಾಕೆ ಬಂತು ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ಇದೆಲ್ಲಾ ನನಗೆ ಆವತ್ತೇ ಅರಿವಾಗಿದ್ದು, ಅದನ್ನು ಕಳೆದುಕೊಳ್ಳುವ ಭಯ ನಿನ್ನ ಕಣ್ಣುಗಳಲ್ಲಿ ಕಂಡಾಗ. ನಾಲ್ಕು ಗಂಟೆಯಾಗಿದ್ದರೂ ನೀನು ಇನ್ನೂ ಕದಲುವ ಹಾಗೆ ಕಾಣಲಿಲ್ಲ. ’ವೈಟ್ ಫಾರ್ ಸಮ್ ಟೈಮ್ ತಾಯಿ ಹಕ್ಕಿ ಇನ್ನೇನು ಗೂಡಿಗೆ ಬರಬಹುದು’ ಎನ್ನುತ್ತಾ ನೀನು ನನ್ನನ್ನು ನಿಲ್ಲಿಸಿಡುವ ಯತ್ನ ಮಾಡಿದ್ದೆ. ’ಟಾರ್ಚ್ ಬೇರೆ ಇಲ್ಲ ನಡಿ ಹೋಗೋಣ, ಮನೆ ಮುಟ್ಟುತ್ತಾ ಕತ್ತಲಾಗತ್ತೆ’ ಎಂದರೂ ನೀನು ಕದಲಲಿಲ್ಲ. ನನ್ನತ್ತ ತಿರುಗಿ ’ನೀನಿದ್ದಿಯಲ್ಲ, ನನ್ನ ಬಾಡಿ ಗಾರ್ಡ್’ ಎಂದು ಕಣ್ಣು ಮಿಟುಕಿಸಿದೆ. ಆದರೆ ಅದು ನನ್ನನ್ನು ಸಿಟ್ಟಿಗೇರಿಸಿತ್ತು. ’ನಾನೇನು ನಿನ್ನ ಕೆಲಸದವನಲ್ಲ, ನಡಿ ಮನೆಗೆ’ ಎಂದು ನಿನ್ನ ಕ್ಯಾಮರಾ, ನೋಟ್ ಪುಸ್ತಕ ಮತ್ತು ಟ್ರೈಪಾಡನ್ನು ಎತ್ತಿಕೊಂಡು ನಡೆದಾಗ ನೀನು ’ಹೇ, ಪ್ಲೀಸ್ ಪ್ಲೀಸ್’ ಎನ್ನುತ್ತಾ ಬೆನ್ನು ಬಿದ್ದಿದ್ದೆ. ಆಗ ನಿನ್ನ ಕಣ್ಣುಗಳಲ್ಲಿ ಆ ಭಯವನ್ನು ಕಂಡೆ. ಬಹುಶಃ ಅದರ ನಂತರ ನೀನು ಮನೆಯಲ್ಲಿದ್ದ ಪ್ರತಿ ದಿನವೂ! ಅದರಲ್ಲಿ ಮೊದಲಿನಂತೆ ಸ್ವಚ್ಚಂದತೆಯಿರಲಿಲ್ಲ. ಆಗ ನಿನ್ನನ್ನು ಕಳೆದುಕೊಂಡೆ ಎಂದು ಹತಾಶನಾಗಿ ಸುಮ್ಮನಿದ್ದೆ. ಆದರೂ ನೀನು ಮರಳಿ ಹೋಗುವ ದಿನ ನನ್ನನ್ನು ತಬ್ಬಿಕೊಂಡು ಅತ್ತೆಯಲ್ಲಾ, ಆಗಂತೂ ಪುನಃ ನೀನು ವಿಸ್ಮಯಗೊಳಿಸಿದೆ. ’ಮರಳಿ ಬಂದರೂ ಬಂದೆ’ ಎಂದು ನನ್ನ ಚುಂಬಿಸಿದ ಕ್ಷಣ ಇನ್ನೂ ಎದುರಿಗೆ ಕಟ್ಟಿಟ್ಟ ರೀತಿ ಇದೆ. ಆದರೆ ನೀನು ಮರಳಿ ಬರಲಾರೆ ಎಂದು ನನಗೆ ಗೊತ್ತಿತ್ತು. ಒಂದೆರಡು ಬಾರಿ ನೀನು ನನಗೆ ಪತ್ರ ಬರೆದಿದ್ದೆ. ನನಗೂ ನೀನು ನನ್ನೊಡನೆ ಇದ್ದ ರೀತಿ ಇಷ್ಟವಾಗುತ್ತಿತ್ತು, ನಿನಗೂ ಕೂಡ ಆಗುತ್ತಿತ್ತು ಎಂದು ನೀನೇ ಪತ್ರದಲ್ಲಿ ಹೇಳಿದ್ದೆ. ಹಾಗೆಯೇ ನನ್ನೊಡನೆ ಇದ್ದರೆ ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರುತ್ತದೆ ಎಂದೂ ಹೇಳಿದ್ದೆ. ನಿನಗೆ ಸಾಂಸಾರಿಕ ಜೀವನದಲ್ಲಿ ಆಸಕ್ತಿಯಿರಲಿಲ್ಲ. ಬದುಕಿನ ಬಗ್ಗೆ ಕುತೂಹಲವೊಂದಿತ್ತು ಅಷ್ಟೇ.. ಮತ್ತು ಹಾರುವ ಕನಸಿತ್ತು. 

ಇದ್ದಕ್ಕಿದ್ದಂತೆ ನನ್ನ ಯೋಚನೆಗಳಲ್ಲಿ ಒಂದು ವಿಚಿತ್ರವಾದ ಅಡ್ಡಿಯುಂಟಾಯಿತು. ಅದೇ ಸ್ವಾತಂತ್ರ್ಯ ನನ್ನ ಮತ್ತು ಈ ಹಕ್ಕಿಯ ನಡುವೆ ಏಕಿಲ್ಲ? ಬಂಧನಕ್ಕೊಳಗಾದ ಈ ಹಕ್ಕಿಗೂ ಹಾರಾಡುವ ಅಧಿಕಾರ ಇದೆಯಲ್ಲವೇ.. ಆ ಯೋಚನೆ ಬಂದಾಕ್ಷಣವೇ ಯಾಕೋ ಆ ಹಕ್ಕಿಯೇ ನೀನಾಗಿ ಸುತ್ತುವರಿದ ಸಮಾಜವೇ ಪಂಜರವಾಗಿ ಕಾಣತೊಡಗಿತು. ನಿನ್ನ ಕಥೆಗಳೇನಿರಬಹುದು.. ಎಲ್ಲಿಂದ ಬಂದೆ ನೀನು ಎಂದು ನಾನು ಯಾವತ್ತೂ ಕೇಳಲಿಲ್ಲ, ಬಹುಶಃ ಅದಕ್ಕೇ ನೀನು ನನ್ನ ಜೊತೆ ಇರಲು ಇಷ್ಟ ಪಟ್ಟಿರಬೇಕು ಮತ್ತು ಯಾವ್ಯಾವುದೋ ವಿಷಯಗಳನ್ನು ಕೆದಕಿ ನನ್ನ ನಿನ್ನ ಸಂಬಂಧ ಹಾಳಾಗುವುದು ಬೇಡವೆಂದೆನಿಸಿ ದೂರವಾದೆ ಎಂದೆನಿಸಿದ ಕೂಡಲೇ ನಿನ್ನನ್ನು ಹೋಗಲೇ ಬಿಡಬಾರದಿತ್ತು ಎಂದೆನಿಸಿತು. ಆದರೆ ಸದ್ಯಕ್ಕೆ ಈ ಹಕ್ಕಿಯನ್ನು ಬಿಡಲು ಮನಸ್ಸಾಗುತ್ತಿದೆ. ಪಂಜರದ ಬಾಗಿಲು ತೆರೆದೆ. ತುಸು ಸಮಯದ ನಂತರ ಹೊರಗೆ ಬಂದು ಹಾರಿತು. ತನ್ನ ಗರಿಗಳನ್ನು ಬಿಚ್ಚುತ್ತಾ ನೆಗೆದಾಗ ಇನ್ನು ಅದು ಎಂದಿಗೂ ಮರಳಿ ಬರಲಾರದು ಎಂದು ನನಗೆ ಅರಿವಾಯಿತು. ಆದರೆ ನನ್ನ ಜೊತೆ ಇರಲು ಬಯಸಿದ ಹಕ್ಕಿಯೊಂದರ ಸ್ಪರ್ಶ ಮತ್ತೆ ಬೇಕೆನಿಸುತ್ತಿದೆ ಎಂದು ಅರಿವಾಗುತ್ತಿದ್ದಂತೆ ನಿನ್ನ ಮುಖ ನೆನಪಾಯಿತು. ಈ ವಿಷಯ ನಿನ್ನಲ್ಲಿ ಹೇಳಲೇ ಬೇಕು, ಬಹುಶಃ ನೀನು ಮರಳಿ ಬಂದರೂ ಬರಬಹುದು.

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಫೆಲೋಶಿಪ್ಪಿಗೆ ಆಯ್ಕೆಯಾಗಿದ್ದಿ ಎಂದು ನಿನ್ನ ಇತ್ತೀಚಿನ ಪತ್ರದಲ್ಲಿ ತಿಳಿಯಿತು. ಆ ಪತ್ರದಲ್ಲಿ ನಿನ್ನ ಭಾವನೆಗಳು ತುಂಬಾ ತೀಕ್ಷ್ಣವಾಗಿದ್ದವು. ಆದರೂ ಈಗ ದೇಶಗಳ ಪರಿಧಿಯನ್ನೂ ಮೀರಿ ಬೆಳೆಯುತ್ತಿರುವ ನೀನು, ಇಲ್ಲಿ ಕಾಡು ತೋಟ ಮತ್ತು ಕೃಷಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ನಾನು ಎಷ್ಟು ಅಜಗಜಾಂತರ ವ್ಯತ್ಯಾಸವಲ್ವೇ. ನಿನ್ನೆದುರು ನಾನೀಗ ಕುಬ್ಜನಾದಂತೆ ಭಾಸವಾಗುತ್ತಿದೆ. ಅಲ್ಲಿನ ವಿಳಾಸವನ್ನೂ ಟೆಲೆಫೋನ್ ನಂಬರನ್ನೂ ನೀನು ಕೊಟ್ಟಿದ್ದೆ. ಆದರೆ ಪತ್ರ ಬರೆಯಲು ಯಾಕೋ ಇಷ್ಟವಿಲ್ಲ. ಮೊಬೈಲಿಗೂ ನನಗೂ ಸಂಬಂಧವೇ ಇರಲಿಲ್ಲ, ಅದು ನಿನಗೂ ಗೊತ್ತಿದೆ.

ರಾತ್ರಿಯ ಹೊತ್ತು. ಏನೋ ’ಪಟ್ಟ್’ ಎನ್ನುವ ಶಬ್ದ ಕೇಳಿತು. ಹೊರಗಿನ ಲೈಟು ಹಾಕಿ ಹೊರ ಬಂದು ನೋಡಿದರೆ ಪಂಜರದ ಎದುರಿನಲ್ಲಿ ಒಂದೆರಡು ಗರಿಗಳು ಬಿದ್ದಿದ್ದವು. ಅದು ನಾನು ಸಾಯಂಕಾಲವಷ್ಟೇ ಹಾರಲು ಬಿಟ್ಟಿದ್ದ ಪಕ್ಷಿಯದ್ದಾಗಿತ್ತು. ಅದು ಮರಳಿ ಯಾಕೆ ಬಂತು ಎಂದು ಅರ್ಥವಾಗದಿದ್ದರೂ ಅದಕ್ಕೆ ಆಗಿರಬಹುದಾದ ಪರಿಸ್ಥಿತಿ ನೆನೆಸಿ ಭಯವಾಯಿತು. ಅದನ್ನು ಹುಡುಕುವ ಧೈರ್ಯವೂ ಬರಲಿಲ್ಲ. ಮನಸ್ಸು ಮತ್ತೆ ಗೊಂದಲಮಯವಾಯಿತು. ನೀನು ನಿಜವಾಗಿಯೂ ತಪ್ಪಾಗಿದ್ದೆಯೋ ಅಥವಾ ನಿನ್ನನ್ನು ಅರ್ಥೈಸಿಕೊಂಡ ನನ್ನ ರೀತಿ ತಪ್ಪೋ ಎಂದೆನಿಸಿತು. ನಿನಗೆ ಅರ್ಧ ಬರೆದಿದ್ದ ಕಾಗದವನ್ನು ಮುಂದುವರಿಸಲು ಮನಸ್ಸು ಬರಲಿಲ್ಲ. ಮನಸ್ಸು ಮತ್ತೆ ಮೌನಿಯಾಗತೊಡಗಿತು. ’ಸ್ವಾತಂತ್ರ್ಯ ಕೇವಲ ಅದರ ಕನಸು ಕಾಣುವವರಿಗೆ ಮಾತ್ರ’ ಎಂದು ನನ್ನ ಕಿವಿಯಲ್ಲಿ ನೀನು ಉಸುರಿದಂತೆ ಭಾಸವಾಯಿತು. ಸದ್ಯಕ್ಕಂತೂ ಮನಸ್ಸು ಯಾವುದನ್ನೂ ಯೋಚಿಸುವ ಪರಿಸ್ಥಿತಿಯಲ್ಲಿರಲಿಲ್ಲ.  

ಮೂರು ದಿನಗಳ ನಂತರ ನನ್ನ ಆಶ್ಚರ್ಯಕ್ಕೆ ಕಾರಣವಾಗುವಂತೆ ಆ ಹಕ್ಕಿ ಮನೆಯ ಬಾವಿ ಕಟ್ಟೆಯ ಬಳಿ ಪ್ರತ್ಯಕ್ಷವಾಯಿತು. ಅದೇನು ಮರು ಜೀವ ಪಡೆದು ಉದ್ಭವಿಸಿತೋ ಅಥವಾ ಯಾವತ್ತೂ ಸತ್ತೇ ಇರಲಿಲ್ಲವೋ. ಏನಾಗಿತ್ತು ಎನ್ನುವುದು ನನ್ನ ಊಹೆಗೆ ಮೀರಿದ ವಿಷಯವಾಗಿತ್ತು. ಅದನ್ನು ಹಿಡಿದು ಪಂಜರದಲ್ಲಿ ಬಂಧಿಸಬೇಕೆನಿಸಿದರೂ ಅವನ್ನು ಹಿಡಿಯಲು ನನಗೆ ಬರುತ್ತಿರಲಿಲ್ಲ. ಅದರ ನಂತರ ಅದು ಮನೆಯ ಬಳಿ ಹಾರಾಡುತ್ತಾ ಇರುತ್ತದೆ. ಅದಕ್ಕೆ ಮನೆಯ ಮೇಲೆ ಏನಾದರೂ ಭಾವನಾತ್ಮಕವಾದ ಸಂಬಂಧ ಇರಬಹುದು ಎಂದು ಊಹಿಸಿದ್ದೆ. ಖುಷಿಯಾಯಿತು. ಯಾವುದೇ ಬಂಧಗಳಿಲ್ಲ ಎಂದುಕೊಳ್ಳುವ ಹಕ್ಕಿಗೂ ಒಂದು ಬಂಧ ಬೆಳೆಯಲು ನಾನು ಕಾರಣನಾದೆ ಎಂದು ಮನಸ್ಸು ಹೆಮ್ಮೆ ಪಟ್ಟಿತು. ಹಾಗೆಯೇ ಮತ್ತೊಮ್ಮೆ ನಿನ್ನ ನೆನಪೂ ಆಯಿತು.

ಸುಮಾರು ಒಂದು ತಿಂಗಳು ಕಳೆದಿದೆ. ಕೊಟ್ಟಿಗೆಯ ಪಕ್ಕಾಸಿನ ಕೋನದಲ್ಲಿ ಆ ಹಕ್ಕಿ ಗೂಡು ಕಟ್ಟಿದೆ. ಈ ಹಕ್ಕಿಯನ್ನು ಪಂಜರದಲ್ಲೇ ನೋಡಿದ್ದ ನನಗೆ ಇದು ಗೂಡೂ ಕಟ್ಟುವುದೇ ಎಂದು ಆಶ್ಚರ್ಯವಾಯಿತು. ಹಕ್ಕಿಗಳು ಗೂಡು ಕಟ್ಟುವುದು ಮೊಟ್ಟೆಯಿಡಲು ಎಂದು ಯಾವುದೋ ಪುಸ್ತಕದಲ್ಲಿ ಹುಡುಕಿ ತಿಳಿದ ನಂತರ ಮನಸ್ಸಿನಲ್ಲಿ ಒಂದು ಸಂಚಲನ ಮೂಡಿತು. ಹಾಗೆಯೇ ಮನಸ್ಸಿನಲ್ಲಿ ಯೋಚನೆಗಳು ಮೂಡತೊಡಗಿದವು. ಇದನ್ನು ಹಾರಲು ಬಿಟ್ಟ ನಂತರ ಇದೂ ತನ್ನದೊಂದು ಸಂಸಾರ ಮಾಡುವುದರಲ್ಲಿದೆ. ನಾನೇಕೆ ಇನ್ನೂ ಏಕಾಂಗಿಯಾಗಿದ್ದೇನೆ. ನಿನ್ನ ನೆನಪು ಪುನಃ ಕಾಡತೊಡಗಿತು. ನೀನು ಬಂಧನಕ್ಕೆ ಸಿಲುಕುವವಳಲ್ಲ. ನಮ್ಮ ನಡುವೆ ಒಂದು ಸಂಬಂಧ ಬೆಳೆಯಲು ಎಂದಿಗೂ ಸಾಧ್ಯವಿಲ್ಲ ಎಂದೆನಿಸಿತು. ಆದರೆ ಮನಸ್ಸು ’ಯಾಕಾಗಬಾರದು’ ಎಂದು ಪ್ರಶ್ನೆ ಕೇಳಿತು. ನೀನು ನನ್ನ ಇಷ್ಟ ಪಟ್ಟಿದ್ದು ನನಗೂ ಗೊತ್ತು ಆದರೆ ನಾನು ಯಾವತ್ತೂ ವಿಷಯವನ್ನು ಮುಂದುವರಿಸಲೇ ಇಲ್ಲವಲ್ಲ ಎಂದು ಅನಿಸಿದಾಗ ನಿನ್ನ ಬಳಿ ನಮ್ಮ ಭವಿಷ್ಯದ ಬಗ್ಗೆ ಮಾತಾಡುವುದು ಅಗತ್ಯವೆಂಬಂತೆ ಕಂಡಿತು. ನಿನಗೆ ಪತ್ರ ಬರೆದು ಹಾಕಿಯಾಗಿದೆ. ಮನದ ವಿಷಯಗಳನ್ನು ಹೇಳಿದ್ದೇನೆ. ನಿನ್ನ ಉತ್ತರ ಏನಿರಬಹುದೋ ಗೊತ್ತಿಲ್ಲ.  ಸ್ವತಂತ್ರವಾಗಿ ಬೆಳೆಯುವ ನಿನ್ನ ಕನಸುಗಳಿಗೆ ಕಡಿವಾಣ ಇದಲ್ಲ. ಇದು ನಿನ್ನ ಬದುಕಿನ ಭಾಗವಾಗಿರಬೇಕೆಂಬ ಕನಸು ಮಾತ್ರ. ಗೂಡಿನಲ್ಲಿ ಹಕ್ಕಿ ಮೊಟ್ಟೆಗಳನ್ನಿಟ್ಟಿದೆ. ನನ್ನ ಮನಸ್ಸಿನಲ್ಲೂ ನಿರೀಕ್ಷೆಯ ಮೊಟ್ಟೆಗಳು ಕಾವು ಪಡೆದುಕೊಳ್ಳುತ್ತಿರುವಂತೆ ಈಗ ಅನಿಸುತ್ತಿದೆ.
 

Comments