ನಾವು ಜಿ.ಪಿ.ಎಸ್. ಆಗಿದ್ದು ಹೀಗೆ !

ನಾವು ಜಿ.ಪಿ.ಎಸ್. ಆಗಿದ್ದು ಹೀಗೆ !

ಸುಮಾರು ೩೫ ವರುಷಗಳ ಹಿಂದೆ.......... ಜಿ.ಪಿ.ಎಸ್, ಮೋಬೈಲ್ ಫೋನ್, ಈ-ಮೈಲ್ ಇಲ್ಲದ ಕಾಲ. ಬೇಸಿಗೆಯ ರಜಾದಿನಗಳಲ್ಲೊಂದು ದಿನ. ಬಿಸಿಲಿನ ಝಳ ಸ್ವಲ್ಪ ಸ್ವಲ್ಪವಾಗೇ ಕಡಿಮೆಯಾಗುತ್ತಿತ್ತು. ಸಂಜೆಯು ನಿಧಾನವಾಗಿ ಆವರಿಸುತ್ತಿತ್ತು. ಶಾಲೆಗೆ ಬೇಸಿಗೆ ರಜವಾದ್ದರಿಂದ ಓದುವ ಕೆಲಸಕ್ಕೆ ಬಿಡುವು ದೊರೆತು ಆಟವಾಡುವ ಹುಮ್ಮಸ್ಸಿನಿಂದ ಸಂಜೆಯಾಗುತ್ತಲೇ ಹೊರಗೆ ಹೊರಟೆವು ಒಂದು ದೊಡ್ಡ ಹಿಂಡು. ಗೆಳೆಯರು, ಗೆಳೆತಿಯರು, ಅಕ್ಕ ತಂಗಿಯರು ಎಲ್ಲರೂ ಒಡಗೂಡಿ. ಊರಿನಲ್ಲಿ ಇದ್ದ ಒಂದೇ ಉದ್ಯಾನವನ ಮತ್ತು ಅದರ ಸಮೀಪದಲ್ಲೇ ಇದ್ದ ಪ್ರವಾಸಿ ಬಂಗಲೆ ಎರಡೂ ಆಕರ್ಷಕವಾಗಿದ್ದು, ಅಲ್ಲಿಗೆ ಹೋಗಿ ಆಟವಾಡಿ ಬರುವುದು ಎಂದು ನಿಶ್ಚಯಿಸಿ, ಸವಾರಿ ಶುರುಮಾಡಿದೆವು. ನಮ್ಮ ಮೆದುಳಿನ ಜಿ. ಪಿ. ಎಸ್. ಸಿಸ್ಟಮ್ ನಲ್ಲಿ ಡೆಸ್ಟಿನೇಶನ್ - ಎನ್ಟರ್ ಮಾಡಿ, ಮಾರ್ಗ - ಬಸ್ ನಿಲ್ದಾಣ ಮುಖಾಂತರದ ದಾರಿಯನ್ನು ಆಯ್ದೆವು.

 

ಊರಿನ ಪ್ರಮುಖ ಬಸ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ..........

ಇದೊಂದು ರಸಿಕರ ರಾಜ್ಯವೇ ಸರಿ!.......... ಕುರ್ರೋ-ಬರ್ರೋ ಬಸ್ಸಿನ ಶಬ್ಧಗಳು, ಚರ್-ಚರ್ ಬಸ್ಸಿನ ಬಾಗಿಲುಗಳು ತೆರೆದು ಹಾಕಿ ಮಾಡುತ್ತಿದ್ದ ಗದ್ದಲ, ಯಾರ್ರೀ, ಯಾರ್ರೀ, "ಅರಸಿಕೆರೆ, ತಿಪ್ಟೂರ್, ತುಮ್ಕೂರ್, ಬೆಂಗಳೂರ್ - ನಾನ್ ಸ್ಟಾಪ್ ಅಂತ ಕೂಗುವ ಕಂಡಕ್ಟರ್ ಗಳು, "ಬಾಣಾವರ ಸ್ಟಾಪ್ ಇಲ್ಲರೀ" ಅನ್ನುತ್ತಿದ್ದ ಚಾಲಕರ ಕೂಗಾಟ, "ಕಡ್ಲೆ ಕಾಯ್, ಖಾರಾಪುರಿ, ಕಿತ್ತಳೆ ಹಣ್ಣು, ಕಡ್ಲೇ ಗಿಡ - ಒಂದೇ ಒಂದು ತಗಳ್ಳವ್ವ, ಭೋಣಿಗೆ ಕಣವ್ವಾ" ಅಂತ ಬೇಡುತ್ತಿರುವ ನಮ್ಮ ವಯಸ್ಸಿನ ಹುಡುಗ, ಹುಡುಗಿಯರು, ಅವರದೇ ಬಸ್ ನಿಲ್ದಾಣ ಅನ್ನೋತರಹ ಎಲೆ, ಅಡಿಕೆ ಜಗಿದು, ಅಲ್ಲಲ್ಲಿ ಉಗಿಯುತ್ತಿರುವವರು ಕೆಲವರಾದರೆ, ಬಾಳೆಹಣ್ಣು ತಿಂದು, ಸಿಪ್ಪೆಯನ್ನು ಅಲ್ಲೇ ಎಸೆದು ಜಾರಿ ಬೀಳುವವರಿಗೆ ಅಣಿಮಾಡಿಕೊಟ್ಟವರು ಮತ್ತಿತರರು. ಕಾಲೇಜ್ ಕಿಶೋರಿಯರು "ತಾವು ಈ ಗ್ರಹಕ್ಕೆ ಸೇರಿದವರಲ್ಲ" ಎಂದು ಹೇಳುತ್ತಾ, ಕೈಯಲ್ಲೊಂದು ಇಂಗ್ಲೀಷ್ ಪುಸ್ತಕ ಅಥವಾ ಫಿಲ್ಮ್- ಫೇರ್ ಮಾಸಿಕವನ್ನು ಓದುತ್ತಿರುವಂತೆ ನಟಿಸುತಿದ್ದರೆ, ಇವರಿಗೆ ಲೈನ್ ಹೊಡೆಯುವುದಕ್ಕೇ ಬಂದ ಯುವಕರು ಅಲ್ಲಿ-ಇಲ್ಲಿ ನೋಡುತ್ತಾ ಅವರ ಹಿಂದೆ - ಮುಂದೆ ನಿಂತು ಬಸ್ಸಿಗೆ ಕಾಯುವಂತೆ ವರ್ತಿಸುತ್ತಿದ್ದವರು ಕೆಲವರು. ಗಂಡು - ಹೆಣ್ಣು ಹುಡುಕಿಕೊಂಡು ಸುಸ್ತಾದ ಮಧ್ಯವಯಸ್ಕ ಗಂಡಸರು, ವಯಸ್ಸಾದ ಗಂಡಸರು ಸಂಭಾಷಣೆ ನಡೆಸುತ್ತಾ "ಏನಂದ್ರೀ, ಜಾತಕ ಆಗುಲ್ವೇ? ನಮ್ ಹುಡುಗೀದು? ನಕ್ಷತ್ರ ಆಗುತ್ತಲ್ಲ...ಮಖಾ ನಕ್ಷತ್ರ" ಎಲ್ಲ ನಕ್ಷತ್ರಕ್ಕೂ ಹೊಂದುತ್ತೆ ಅಲ್ವೇ?". ತಾತಂದಿರು ನಸ್ಯ ನ ಎರಡೂ ಮೂಗಿಗೆ ತೂರಿಸಿಕೊಂಡು ಒಂದು ದೊಡ್ದ ಸೀನು ಸೀನಿ, ಒಂಟಿ ಸೀನಿನ ಘಳಿಗೆ ಸರಿ ಇಲ್ಲ ಎಂದು ತೋರಿಸುತ್ತಾ "ನೋಡೊಣ ಬಿಡೀ, ಇನ್ನೂ ಹುಡುಗರಿದ್ದಾರೆ ನಮ್ಮ ಕಡೆ, ...ಬರೊ ಭಾನುವಾರ ಮೇಟಿಕುರ್ಕೆ ಗೆ ಹೋಗ್ತಾ ಇದೀನಿ, ಆಶಾಡ ಮುಗಿದಮೇಲೆ ಚರ್ಚಿಸೋಣ" ಅಂತ ಸಮಾಧಾನ ಹೇಳಿ, "ಬಸ್ ಬಂತು" ಅಂತ ತಪ್ಪಿಸಿಕೊಂಡ ಪುಣ್ಯಾತ್ಮರೂ ಇದ್ದರು. ಇದನ್ನೆಲ್ಲಾ ಕಣ್ತುಂಬ ನೋಡಿ ಆನಂದಿಸುತ್ತಾ, ಕಡ್ಲೇ ಕಾಯಿ, ಖಾರದಪುರಿ ಕಟ್ಟಿಸಿಕೊಂಡು, ಖರೀದಿಮಾಡುತ್ತಿರುವಾಗ..........

 

ನಿಂತ ಬಸ್ಸೊಂದ್ರಿಂದ ಒಂದು ಅಜ್ಜಿ, ಯುವತಿ, ಟ್ರಂಕು ಮತ್ತು ಚೀಲದೊಂದಿಗೆ ಕೆಳಗಿಳಿದರು. ಇಬ್ಬರ ಮುಖದಲ್ಲೂ ಸ್ವಲ್ಪ ಆತಂಕವಿತ್ತು. ಅವರ ನಡುವೆ ಸಂಭಾಷಣೆ ಹೀಗೆ ಸಾಗಿತ್ತು .......... ಅಜ್ಜಿ ನಮ್ಮನ್ನೆಲ್ಲಾ ನೋಡುತ್ತಾ "ನೋಡೇ ಶಾಂಭವಿ, ಈ ಹುಡುಗರನ್ನ ಕೇಳೇ ನಮ್ಮ ಶ್ರೀಧರನ ಮನೆ ಎಲ್ಲಿ ಈ ಊರಲ್ಲಿ? ಅಂತ". ಶಾಂಭವಿ: ಅಜ್ಜಿ, ಈ ಹುಡುಗರು ಕಡ್ಲೇ ಪುರಿ ತಗೊಂಡು ಎಲ್ಲಿಗೋ ಹೋಗ್ತಿವೆ, ಅಷ್ಟಕ್ಕೂ ಇವುಕ್ಕೇನು ಗೊತ್ತಿರತ್ತೆ ನಮ್ಮ ಶ್ರೀಧರ ಮಾಮನ ಮನೆ? ಅಜ್ಜಿ: ಕೇಳೋದ್ ಕೇಳು, ನೋಡೋಣ. ಶಾಂಭವಿ: ನಮ್ಮನುದ್ಧೇಶಿಸಿ "ನಮ್ಮ ನೆಂಟರೊಬ್ಬರು ಈ ಊರಿನ "ಕೋಟೆ" ಯಲ್ಲಿದ್ದಾರೆ, ಹೆಸರು ಶ್ರೀಧರ್ ಅಂತ. ಅವರಿಗೆ ನಾವು ಬರೋದು ತಿಳಿದಿಲ್ಲ, ಹಾಗೇ ದಾರೀಲಿ ಇಳಿದು ನೋಡಿಕೊಂಡು ಹೋಗೋಣ ಅಂತ ಬಂದ್ವಿ. ನಿಮಗೇನಾದರೂ ಅವರ ಮನೆ ಗೊತ್ತಾ? ನಾವೆಲ್ಲ: ಶ್ರೀಧರ್ ಅನ್ನೋವರು ತುಂಬಾ ಜನ ಇದ್ದಾರೆ ಕೋಟೇಲಿ, ಅವರು ನೋಡಕ್ಕೆ ಹೇಗಿದಾರೆ ಅಂತ ಹೇಳಿ? ಶಾಂಭವಿ: ಎತ್ತರಕ್ಕೆ, ಬೆಳ್ಳಗೆ ಇದ್ದಾರೆ. ಮಧ್ಯ ವಯಸ್ಕರು, ಕನ್ನಡಕ ಇಲ್ಲ, ತಲೆಲ್ಲಿ ಸ್ವಲ್ಪ ಸೆಂಟ್ರಲ್ ಬಾಲ್ಡ್ ನೆಸ್, ತೆಳ್ಳಗೂ ಇಲ್ಲ, ದಪ್ಪಗೂ ಇಲ್ಲ. ನಾವು: ಅವರು ಕೆ. ಇ. ಬಿ. ನಲ್ಲಿ ಕೆಲಸ ಮಾಡ್ತಾರಾ? ಎರಡು ಸಣ್ಣ ಹೆಣ್ಣು ಮಕ್ಕಳು ಅವರಿಗೆ ಅಲ್ವಾ? ಅಜ್ಜಿ: ಹೌದು ಕಣೇ ಶಾಂಭವಿ, ಶ್ರೀಧರ ಕೆ. ಇ. ಬಿ ನಲ್ಲೇ ಕೆಲಸ ಮಾಡೋದು, ಅವನಿಗೆ ಎರಡು ಹೆಣ್ಣು ಮಕ್ಕಳು. ನಾವು: ಅವರನ್ನ ಕೋಟೇಲಿ ನೋಡಿದೀವಿ, ಅವರ ಮನೆ ಗೊತ್ತಿಲ್ಲ ಕೋಟೇಲಿ ಎಲ್ಲಿ ಅಂತಾ. ಹೇಗಿದ್ರೂ ನಾವೆಲ್ಲ ಪ್ರವಾಸಿ ಮಂದಿರದ ಹತ್ತಿರ ಉದ್ಯಾನವನಕ್ಕೆ ಹೊರಟಿದ್ದೇವೆ, ಅಲ್ಲೇ ಹತ್ತಿರ ಕೆ. ಇ. ಬಿ. ಕಛೇರಿನೂ ಇದೆ. ನಿಮ್ಮನ್ನು ಅಲ್ಲಿಗೆ ಬಿಡುತ್ತೇವೆ" ಎಂದು ನಮ್ಮ ಜಿ. ಪಿ. ಎಸ್ ನಲ್ಲಿ ಮೊದಲನೇ ಡೆಸ್ಟಿನೇಶನ್ - ಕೆ. ಇ. ಬಿ ಕಛೇರಿ, ಎರಡನೇ ಡೆಸ್ಟಿನೇಶನ್ - ಉದ್ಯಾನವನ, ಮೂರನೇ ಡೆಸ್ಟಿನೇಶನ್ - ಪ್ರವಾಸಿ ಮಂದಿರ ಅಂತ ಎಂಟ್ರೀ ಹಾಕಿ ಅಜ್ಜಿ, ಶಾಂಭವಿ ಅವರನ್ನು ಹೊರಡಿಸಿ, ಕೂಲಿ ಹುಡುಗನ ತಲೆಯ ಮೇಲೆ ಅಜ್ಜಿಯ ಟ್ರಂಕ್ ಹೊರಿಸಿ, ಕಡೆಗೂ ಒಂದ್ ಸಲ ಬಸ್ ನಿಲ್ದಾಣದಿಂದ ಹೊರ ಹೊರಟೆವು. ನಮ್ಮ ಹಿಂದೆ ಶಾಂಭವಿ, ಅಜ್ಜಿ, ಅಜ್ಜಿ ಹಿಂದೆ ಕೂಲಿ ಹುಡುಗ ಟ್ರಂಕಿನೊಡನೆ, ಮೆರವಣಿಗೆಯಂತಿತ್ತು ನಮ್ಮ ಸವಾರಿ.

 

ಅದಕ್ಕೇ ಹೇಳೋದು "ಎಲ್ಲಾದರೂ ಹೊರಟಾಗ ಮಧ್ಯೆ ನಿಲ್ಲಿಸಬಾರದು" ಅಂತ, ಅದರಲ್ಲೂ ಬಸ್ ನಿಲ್ದಾಣದಲ್ಲಿ ಜಾಸ್ತಿ ಹೊತ್ತು ಇದ್ದರೆ, ಈ ತರಹ ಏನಾದರೂ ಬಂದು ಒಕ್ಕರಿಸುತ್ತೆ. ನಮ್ಮ ಜಿ. ಪಿ. ಎಸ್ ಕೂಡಾ ಒಂದು ವಾರ್ನಿಂಗ್ ಕೊಟ್ಟಿತ್ತು ನಾವು ಬಸ್ ನಿಲ್ದಾಣದಲ್ಲಿ ಪ್ರಯಾಣ ನಿಲ್ಲಿಸಿದಾಗ - " ರೀ ರೌಟಿಂಗ್ - ಕ್ಯಾಲಿಕ್ಯೂಲೇಟಿಂಗ್ ದ ರೌಟ್" ಅಂತ. ಅಜ್ಜಿ ಉಸ್ಸಪ್ಪಾ- ಉಸ್ಸಪ್ಪ ಅಂತಲೇ ಬಿರುಸಾಗಿ ನಡೆದಿತ್ತು. ನಾವು ಐದು ಗಂಟೆ ಯೊಳಗೆ ಕೆ. ಇ. ಬಿ. ಕಛೇರಿ ತಲುಪಬೇಕಿತ್ತು, ೧೦ ನಿಮಿಷಗಳ ಅವಧಿಯಷ್ಟೇ ಇತ್ತು. ಏಷ್ಟು ವೇಗವಾಗಿ ನಡೆಯಬೇಕು ಅಂತ ಲೆಕ್ಕ- ಚಾರ ಹಾಕಲು ಸಮಯವಿರಲಿಲ್ಲ. ನಮ್ಮ ನಮ್ಮಲ್ಲೇ ಮಾತಾಡಿಕೊಂಡ್ವಿ "ಬೇಗ ಇವರನ್ನ ಕೆ. ಇ. ಬಿ ಕಛೇರಿಯಲ್ಲಿ ಸಾಗುಹಾಕಿ ನಾವು ಉದ್ಯಾನವನ ತಲುಪೋದು ಅಂತ". ಕೂಲಿ ಹುಡುಗ ಕೊಂಕು ಶುರು ಮಾಡ್ದ " ಇನ್ನೂ ಎಷ್ಟು ದೂರ ಐತೆ? ಎಂಟಾಣೆ ಕಮ್ಮಾಯ್ತು". ಇದೆಲ್ಲಿ ಗ್ರಹಚಾರ ನಮ್ಮದು? ಫ್ರೀ ಜಿ. ಪಿ. ಎಸ್, ಫ್ರೀ ಡೈರಕ್ಶನ್ಸ್, ಫ್ರೀ ಪಬ್ಲಿಕ್ ಸರ್ವೀಸ್, ಇಷ್ಟಾದ್ರೂ ಹೊಸ ಸಮಸ್ಯೆ. ಅವನಿಗೆ ಇನ್ನೇನ್ ಸಿಕ್ತು ಅಂತ ಸಮಾಧಾನ ಹೇಳಿ ಹಾಗೂ ಹೀಗೂ ಕೆ.ಇ. ಬಿ ಕಛೇರಿ ತಲುಪಿ, ಅಲ್ಲೇ ಹೊರಗೆ ಬರುತ್ತಿದ್ದ ಕೆಲಸಗಾರರನ್ನು ಕೇಳಿದ್ವಿ "ಶ್ರೀಧರ್ ಎಲ್ಲಿ ಸಿಕ್ತಾರೆ?" ಅಂತ. ಅವರಲ್ಲೊಬ್ರು "ಇದೇನ್ ಈಗ್ ಬಂದ್ ಕೇಳ್ತಿದ್ದೀರಾ? ಅವರ ಮನೆ ದೂರಾ ಅಂತ ಅವರು, ಮುಂಚೆನೇ ಮನೆಗೆ ಹೋಗ್ತಾರೆ ಸಾಮಾನ್ಯವಾಗಿ. ಇದ್ದರೆ, ಆ ಕೊನೇ ಕೋಣೇಲಿ ನೋಡಿ" ಅಂತ ಹೇಳಿ ನಮ್ಮಿಂದ ತಪ್ಪಿಸಿಕೊಂಡರು.

 

ಎಲ್ಲರೂ ಹೇಗೋ ತಪ್ಪಿಸಿಕೊಳ್ತಾರೆ, ಆದರೆ ನಮಗ್ಯಾಕೋ ಇವತ್ತು ಈ ಅಜ್ಜಿ, ಶಾಂಭವಿ ಯಿಂದ ಬಿಡುಗಡೆ ಕಾಣಿಸಲಿಲ್ಲ. ಇನ್ನು, ಶ್ರೀಧರ್ ಅವರು ಮನೆಗೆ ಹೊರಟಿದ್ದರೆ, ನಾವೇ ಇವರನ್ನು ಕೋಟೇವರೆಗೂ ಕರೆದುಕೊಂಡು ಹೋಗ್ಬೇಕಾಗಬಹುದು ಅಂತ ಯೋಚಿಸಿ, ತಕ್ಷಣ ಓಡಿ ಕಡೇ ಕೋಣೆಯೋಳಗೆ ನುಗ್ಗಿ ಶ್ರೀಧರ್ ಅವರನ್ನು ಕಂಡು ಮಾತಾಡಿದ್ವಿ: "ನಿಮ್ಮ ನೆಂಟರು ಒಬ್ಬರು ಬಸ್ನಿಂದ ಇಳಿದು, ನಮ್ಮ ಸಹಾಯ ಕೇಳಿದ್ರು, ಇಲ್ಲಿಗೆ ಕರಕೊಂಡು ಬಂದ್ವಿ". ಅಷ್ಟೊತ್ತಿಗೆ, ಅಜ್ಜಿ( ಉಸ್ಸಪ್ಪಾ - ಉಸ್ಸಪ್ಪ ಅನ್ನುತ್ತಾ), ಶಾಂಭವಿ ಮತ್ತು ಕೂಲಿ ಹುಡುಗ ಎಲ್ಲರೂ ಅಲ್ಲಿಗೆ ಬಂದರು. ಶ್ರೀಧರ್ ಅವರು ನಮಗೆ ವಂದನೆ ಹೇಳುವ ಬದಲು, ಸುಸ್ತಾಗಿದ್ದ ಅಜ್ಜಿನ ನೋಡಿ, ನಮ್ಮನ್ನುದ್ಧೇಶಿಸಿ ಉವಾಚ: "ಅಯ್ಯೋ, ಬಸ್ ನಿಲ್ದಾಣದಿಂದ ಕೋಟೇಲ್ಲಿರೋ ನಮ್ಮ ಮನೆಗೆ ಸೀದ ಕರಕ್ಕೊಂಡು ಹೋಗೊದ್ ಬಿಟ್ಟು, ಇಷ್ಟು ದೂರ ಈ ಅಜ್ಜಿನ ನಡೆಸ್ಕೊಂಡು ಬಂದಿದೀರಲ್ಲ. ನಿಮಗೇನಾದ್ರೂ ಬುದ್ಧಿ ಇದೆಯೇ? ದಿನಾ ಅಲ್ಲೇ ಚಿನ್ನಿ-ದಾಂಡು, ಕುಂಟಪಿಲ್ಲೆ ಆಡ್ತಿರ್ತೀರ? ನಮ್ಮನೆ ಗೊತ್ತಿಲ್ವೇ? ಇನ್ನೂ ಏನೇನ್ ಬೈತಿದ್ದರೋ ಏನೋ ಕೂಲಿ ಹುಡುಗ ಗಲಾಟೆ ಮಾಡ್ದೇ ಇದ್ದಿದ್ರೇ ..."ಸಾರ್, ಈ ಟ್ರಂಕ್ ತುಂಬಾ ಭಾರ, ಇಲ್ಲೇ ಇಳಿಸೋದಾ? ಕಾಸ್ ಕೊಡಿ ಸಾರ್, ನಾನು ವಾಪಸ್ ಹೋಗಿ ಬೇರೆ ಗಿರಾಕಿನ ಹುಡುಕ್ ಬೇಕು" ಎಂದು ಟ್ರಂಕ್ ಇಳಿಸೇ ಬಿಟ್ಟ. ಶ್ರೀಧರ್ ಇನ್ನೊಂದ್ ಸಲ ಟ್ರಂಕ್ ನ ಸರಿಯಾಗಿ ನೋಡಿ, : "ಇದನ್ನ ಮನೇ ತನಕ ನನ್ನ ಕೈಯಲ್ಲಿ ಎತ್ತಕ್ಕಾಗಲ್ಲ, ನೀನೇ ಮನೆ ವರೆಗೂ ತಗೊಂಡ್ಬಾ, ಮನೆ ಹತ್ರ ದುಡ್ಕೊಡ್ತೀನಿ" ಅಂದರು. ಅಜ್ಜಿ ಸ್ವಲ್ಪ ಸುಧಾರಿಸಿಕೊಂಡು "ಶ್ರೀಧರ, ಈ ಮಕ್ಕಳಿಗೇನಾದ್ರೂ ಕೊಡೋ, ಅಷ್ಟು ದೂರದಿಂದ ನಮಗೆ ದಾರಿ ತೋರಿಸಿವೆ" ಅಂತು.

 

ಶ್ರೀಧರ್ ಅವರು "ನನಗೆ ಇನ್ನೂ ಸ್ವಲ್ಪ ಕೆಲಸ ಇದೆ, ನೀವೆಲ್ಲ ಕೂಲಿ ಜೊತೆ ಇವರನ್ನು ಮನೆಗೆ ಬಿಟ್ಬಿಡಿ. ನಮ್ಮನೆ ಅದೇ ಕತ್ತಿ ಮರದ ಮುಂದೆ ಇರುವ ವಠಾರದಲ್ಲಿದೆ." ಎಂದು ಸ್ವಲ್ಪ ನಿಧಾನವಾಗಿ ಆಜ್ಞೆ ಮಾಡಿದರು. ನಾವೆಲ್ಲ ಒಕ್ಕೊರಲಿನಿಂದ "ಸಾಯಂಕಾಲ ಆಗಿದೆ, ಕತ್ತಲಾಗುವ ಒಳಗೆ ನಾವು ಉದ್ಯಾನವನದಲ್ಲಿ, ಪ್ರವಾಸಿಮಂದಿರದಲ್ಲಿ ಆಡಿ ಮನೆ ಸೇರಬೇಕು. ನಮಗೇನೂ ಬೇಡ, ಕಡ್ಲೇ- ಪುರಿ ಎಲ್ಲ ಇದೆ ಎಂದು ಅಲ್ಲಿಂದ ಓಟ ಕಿತ್ವಿ. (ಅದನ್ನ ಕಟ್ಟಿಸಿಕೊಳ್ಳೋ ಗಲಾಟೆಯಲ್ಲೇ ಇಷ್ಟೆಲ್ಲಾ ಅವಾಂತರ ಆಯಿತು ಅಂತ ಮನಸ್ಸಿಗೆ ಬರದೇ ಇರಲಿಲ್ಲ). ಹಿಂದಿನಿಂದ ಶಾಂಭವಿ ಚೀಲದಿಂದ ತೆಗೆದ ಕೋಡುಬಳೆ, ಚಕ್ಕುಲಿ, ಹುರಿಗಾಳು ತೆಗೆದು ನಮಗೆಲ್ಲ ಕೊಟ್ಟಳು. ಕಡೆ ಸಾರಿ ನಮ್ಮ ಜಿ. ಪಿ. ಎಸ್ ನ ಅಪ್ಡೇಟ್ ಮಾಡಕ್ಕೆ ಹೋದಾಗ, ಜಿ. ಪಿ. ಎಸ್ ಗೂ ಕನ್ಫ್ಯೂಸ್ ಆಗಿ " ಡು ಯು ವಾಂಟ್ ರೌಟ್ ಟು ಹೋಮ್?" ಅಂತ ಕೇಳ್ತು. ನಮಗನಿಸಿದ್ದು "ಎಲಾ ಇವನಾ?".

 

೨-ದಿನಗಳ ನಂತರ ಮನೆಯ ಮುಂದೆ ಆಟವಾಡುತ್ತಿದ್ದಾಗ.......... ಅಜ್ಜಿ, ಶಾಂಭವಿ ಊರಿಗೆ ಹೊರಟಿದ್ದರು. ಅದೇ ಕೂಲಿ ಹುಡುಗ ಅಜ್ಜಿ ಟ್ರಂಕ್ ಹೊತ್ಗೊಂಡು ಹಿಂದೆ ನಡೆಯುತ್ತಿದ್ದ. ಅಜ್ಜಿ ನಗುತ್ತಾ "ನಿಮ್ಗಳ ಮನೆ ಇಲ್ಲೇನಾ? ಅದಕ್ಕೇ ನಮ್ ಶ್ರೀಧರ ಹಾಗ್ ಕೂಗಾಡ್ದ ಅವತ್ತು. ಶಾಂಭವಿ, ನಿಂಗ್ ದಾರಿ ಗೊತ್ತೇನೇ ನಿಲ್ದಾಣಕ್ಕೆ? ನೋಡು, ಅದೇ ಹುಡುಗ್ರನ್ನು ಇವತ್ತೂ ನಮಗೆ ದಾರಿ ತೋರಿಸಕ್ಕೆ ಕರೆದ್ಕೊಂಡ್ ಹೋಗ್ಬಹುದು" ಅಂತು. ಶ್ರೀಧರ್ ಮಾಮ ಪತ್ತೇನೇ ಇರಲಿಲ್ಲ ಇವತ್ತು. ಕೂಲಿ ಹುಡುಗ ಖುಷಿಯಿಂದ ನಮ್ಮನ್ನೆಲ್ಲಾ ನೋಡಿ "ಬಸ್ ಸ್ಟಾಪ್ ನನಗೆ ಚೆನ್ನಾಗಿ ಗೊತ್ತೈತೆ, ನೀವೇನ್ ಬರೋದ್ ಬ್ಯಾಡ" ಅಂದ. ನಾವೆಲ್ಲ ನಕ್ಕು "ನಮ್ಮ ಜಿ. ಪಿ. ಎಸ್ ಔಟ್ ಆಫ್ ಆರ್ಡರ್ ಇವತ್ತು" ಅಂತ ಹೇಳಿ, ಅಜ್ಜಿ ಮತ್ತು ಶಾಂಭವಿ ಗೆ ಟಾ - ಟಾ ಮಾಡಿದ್ವಿ! ೩೫ ವರುಷಗಳ ಹಿಂದೆ ನಾವು "ಜಿ. ಪಿ. ಎಸ್." ಆಗಿದ್ದು ಹೀಗೆ !! ಇನ್ನೂ ಚೆನ್ನಾಗಿ ನಡೀತಿದೆ !!!

Rating
No votes yet

Comments