ಕನ್ನಡಿ ಕವನಗಳು
ಕವನ
ಕನ್ನಡಿ
ಎಳೆತನದಿ ಹಸುಳೆ ನಗುವ ಬಿಂಬಿಸಿ,ಪ್ರತಿಬಿಂಬಿಸಿ
ನಕ್ಕು... ನಗಿಸಿ ನಲಿದ ಸಂಗಾತಿ
ಕೈ ಹಿಡಿದ ಹರಯದ ಬಣ್ಣ ಬಣ್ಣದ
ಕನಸುಗಳ ಹೆಣೆಯುತ್ತಾ
ನಿನ್ನಲ್ಲಿ,ತನ್ನ ಕಾಣಬಯಸುವ
ಕನಸುಗಣ್ಣುಗಳಿಗೆ ಕಳೆಯೇರಿಸುವ ಸಂಗಾತಿ.
ನಿನ್ನನ್ನು ಕಂಡರೆ ಇಳಿವಯಸ್ಸು ಹೆದರಿ
ನಡುಗುತ್ತಾ ದ್ವೇಷಿಸುವಂತಹುದೇ ಕನ್ನಡಿ
ಬದುಕಿಗೆ ಹಿಡಿದ ಕನ್ನಡಿ
ಕನ್ನಡಿ ದನಿ
ಎಲ್ಲವನೂ ಎಲ್ಲರನೂ ಸೆರೆ ಹಿಡಿದು ಬಿಡುವ
ಕನ್ನಡಿಗೂ ದನಿ ಇರುವಂತಿದ್ದರೆ
ನೂರಾರು ನಗು-ನಿಟ್ಟುಸಿರ
ಸಂಪುಟವ ಬಯಲಿಗಿಡುತ್ತಿತ್ತು
ನೆನ್ನೆಯ ಮೊನ್ನೆಗೆ ಸರಿಸಿ
ಇಂದನ್ನು ನೆನ್ನೆ ಮಾಡುವ
ಬದುಕಿನ ಪುಟ ಪುಟಗಳು
ಹಳೆಯ ವರ್ತಮಾನ ಪತ್ರಿಕೆಯಂತೆ
ಮೊನ್ನೆ ತನ್ನ ನಗೆಗೆ ತಾನೇ ಮರುಳಾದ
ನೆನ್ನೆ ನಗುವಿನ ಲೇಪನ ಧರಿಸಿ ನಗಲಾರದ ನಕ್ಕ
ಇಂದು ನಗುವೇ ಇಲ್ಲದ
ತೆರೆಯಿಂದ ಮರೆಗೆ ಸರಿದ ಚಿತ್ರಗಳ ಕೊಡುತ್ತಿತ್ತು
ಸತ್ಯ
ನಮ್ಮ ಆತ್ಮಕ್ಕೆ
ಪ್ರಶ್ನೆಗಳ ಕನ್ನ ಕೊರೆ ಕೊರೆದು
ನೀನು ಇಷ್ಟೇ
ಎಂಬ ಸತ್ಯ ಸಾರುವಂತಹುದು
ಈ ಕನ್ನಡಿ