ನನ್ನವರ ಲೋಕ

ನನ್ನವರ ಲೋಕ

ಕವನ
ನೋಡೆ, ಅವರು ಹೀಗೆಂದರು, ಇವರು ಹಾಗೆಂದರು ಎಂದು ದಿನಾ ಹೀಗೆ ಕೊರಗುತ್ತಿದ್ದರೆ, ಒಂದು ದಿನ ಅವರ ಹಲ್ಲು ಮುರಿದು ಕೈಗೆ ಕೊಡುತ್ತೇನೆ ಎನ್ನುತ್ತಾರೆ ನನ್ನವರು ಎಷ್ಟಾದರೂ ಅವರು ದಂತವೈದ್ಯರು. ಅಮ್ಮಾ, ಹೀಗೇಕೆ ಬೇಕಾದ್ದಕ್ಕೆ, ಬೇಡಾದ್ದಕ್ಕೆ ಚಿಂತಿಸಿ ಕೊರಗುವಿರಿ, ಬಿಟ್ಟುಬಿಡಿ ಅದನೆಲ್ಲಾ ಎಂದು ಎಕ್ಸ್ ರೇ ನೋಟದಲ್ಲೇ ನನ್ನನು ಸ್ಕ್ಯಾನ್ ಮಾಡಿ ಹೇಳುತ್ತಿರುತ್ತಾಳೆ ನನ್ನ ಮಗಳು ಎಷ್ಟಾದರೂ ಅವಳು ಸ್ಕ್ಯಾನ್ ಮಾಡುವ ರೇಡಿಯಾಲಜಿಸ್ಟ್ ನೀವು ಹೇಳಿ-ಕೇಳಿ ಮಾಡುವುದೇನೀಗ ಬದಲಾಯಿಸಬಹುದೇ ಯಾರ ರೋಗ ಸುಮ್ಮನಿದ್ದು ಬಿಡಿ ಎಂದು ಮೈಕ್ರೋಸ್ಕೋಪಿಕ್ ಮಾತಿನಿಂದ ಹೇಳುತ್ತಾರೆ ನನ್ನ ಅಳಿಯ ಎಷ್ಟಾದರೂ ಅವರು ರೋಗ ಪತ್ತೆ ಹಚ್ಚುವ ಪೆಥಾಲಜಿಸ್ಟ್ ಅಮ್ಮಾ, ಅತ್ತೆ ನಿಮಗೇಕೆ ಅವರಿವರ ಹುಚ್ಚು ಬಿಡಿಸುವ ಹುಚ್ಚು ಹುಚ್ಚರ ಜಗದಲ್ಲಿ ಹುಚ್ಚರಂತೆ ಇರದಿದ್ದರೆ... ನಾವೂ ಅವರ ಕಣ್ಣಿಗೆ ಹುಚ್ಚರಾಗುತ್ತೇವೆ ಮನವ ಕಾಡಿದರೂ, ಕಂಡರೂ... ಕಾಣದಂತೆ ಮೌನದಲ್ಲಿದ್ದುಬಿಡಿ ಎನ್ನುತ್ತಾರೆ ಮತ್ತೊಬ್ಬ ಮಗಳು-ಅಳಿಯ ಎಷ್ಟಾದರೂ ಅವರಿಬ್ಬರೂ ಮನೋರೋಗ ಚಿಕಿತ್ಸಕರು ಪಂಚ ಪಾಂಡವರ ನಡುವೆ ಪಾಂಚಾಲಿಯಿದ್ದಳಂತೆ... ಪಂಚಾಗ್ನಿಯ ನಡುವಣ ತಪಸ್ವಿನಿಯಂತೆ. ನಮ್ಮ ಮನೆಯ ಪಂಚ ಡಾಕ್ಟರ ನಡುವೆ ಡಾಕ್ಟರಾದರೂ ಡಾಕ್ಟರಲ್ಲದ ಡಾಕ್ಟರೇಟಿನ ನಾನೂ ಇದ್ದೇನೆ ಅವರ ಮಾತೂ ಕೇಳಿಯೂ ಕೇಳದಂತೆ

Comments