ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...
...”ವಿಶ್ವ ತಂಬಾಕು ರಹಿತ” ದಿನ.
ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ ಯಾವನೂ ಸಿಗರೇಟ್, ಬೀಡಿ ಸಹವಾಸ ಬೇಡ ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ. ಧೂಮಪಾನ ಮಾಡಬಾರದು ಎಂದು ಬಾಲ್ಯದಲ್ಲಿ ಪಾಲಕರೂ, ಯೌವನದಲ್ಲಿ ಅರ್ಧಾಂಗಿನಿಯರೂ ಹೇಳುವುದನ್ನು ಕವಡೆ ಕಾಸಿಗೆ ಬೆಲೆ ಕಲ್ಪಿಸದೆ ಸೇದುವವರ ಸಂಖ್ಯೆಯೇ ಅಧಿಕ. ಇನ್ನು ಈ ನಡವಳಿಕೆಯಲ್ಲಿ ಏನಾದರೂ ಪರಿವರ್ತನೆ ಬರಬೇಕೆಂದರೆ ಡಿಸೆಂಬರ್ ೩೧ ಅಥವಾ ಜನವರಿ ೧, ಹೊಸವರ್ಷದ ನಿರ್ಣಯವಾಗಿ ಆಶ್ವಾಸನೆ, ನಾನಿನ್ನು ಸಿಗರೇಟ್ ಸೇದೊದಿಲ್ಲ ಎಂದು. ಈ ನಿರ್ಣಯದ ಆಯುಷ್ಯ ಹೆಚ್ಚು ಎಂದರೆ ೭೨ ಘಂಟೆಗಳು. ಮೂರು ದಿನ.
Smokers are beggars ಅಂತಾರೆ. ಒಂದು ‘ಕಡ್ಡಿ’ ಇದ್ಯೇನಣ್ಣ? lighter please.. ಪರಿಚಯದ ಅವಶ್ಯಕತೆಯಿಲ್ಲ, instant beggars. ಅವರುಗಳ ನಡುವಿನ camaraderi ಅಂಥದ್ದು. ಸ್ಮೋಕರ್ ಗಳು humble ಅಂತೆ, ಏಕೆಂದರೆ ಅವರು ಸ್ಮೋಕಿಸಲೆಂದು ಬೀಡಿ ಸಿಗರೇಟಿಗೆ ಕಿಡಿ ಹೊತ್ತಿಸುವಾಗ ಸ್ವಲ್ಪ ನಾಜೂಕಾಗಿ ಬಗ್ಗಿ ತಾನೇ ಹಚ್ಚೋದು? ಹಾಗೆಯೇ ಒಂದು “ಕಡ್ಡಿ” ಕೊಡಣ್ಣ ಎಂದು ಗಿಂಜುತ್ತಾ ಕೇಳುವುದರಲ್ಲೂ ತುಂಬಿದೆ “ಹಂಬಲ್” ನೆಸ್, ಅಲ್ವೇ?
ಧೂಮಪಾನಿಗಳು ಯಾವುದೇ ವಿಷಯದಲ್ಲೂ ಕಂಜೂಸ್ ಗಳಾದರೂ ತಮ್ಮ ಪ್ರೀತಿಯ ಧೂಮಪಾನದ ಖರ್ಜಿಗೆ ಮಾತ್ರ ಹಿಂದೆ ಮುಂದೆ ನೋಡರು. ಚಟವೇ ಹಾಗೆ ನೋಡಿ. ಮೊದಲು ತಮಾಷೆಗೆ, ಮೋಜಿಗೆ ಎಂದು ಆರಂಭವಾದ ಚಟ ನಮ್ಮನ್ನು ಗುಲಾಮರನ್ನಾಗಿಸುತ್ತದೆ. ಕೆಲವೊಮ್ಮೆ ಈ ಚಟ ಬಹುಬೇಗನೆ ಚಟ್ಟ ಏರಲೂ ನೆರವಾಗುತ್ತದೆ. ಅನೇಕ ರೀತಿಯ ಕ್ಯಾನ್ಸರ್ ಗಳಿಗೆ ಕಾರಣ ಧೂಮಪಾನ. ಧೂಮಪಾನ ಯಾವಾಗ ಬಿಡ್ತೀಯ ಎಂದು ಅವಿವಾಹಿತನನ್ನು ಕೇಳಿದರೆ ತನ್ನ ತುಟಿಗಳಿಗೆ ಪರ್ಯಾಯವಾದದ್ದು ಸಿಕ್ಕ ನಂತರ ಎನ್ನುತ್ತಾನೆ. ಅಂದ್ರೆ ಅವನಿಗೊಂದು ಚೆಂದುಳ್ಳಿ ಹೆಣ್ಣನ್ನು ಹೊಂದಿಸಿ ಕೊಟ್ಟ ಕೂಡಲೇ ತನ್ನ ಚಟವನ್ನು ಬಿಡುತ್ತಾನೆ ಎನ್ನುವ ಖಾತರಿಯಿಲ್ಲ. “ಪರ್ಯಾಯ” ವಾಗಿ ಸಿಕ್ಕಿದ್ದು boredom ಆಗಿ ಕಾಣುತ್ತಿದ್ದಂತೆಯೇ ವಾಪಸ್ ಹಳೇ ಧಂಧೆಗೆ.
ಸಿಗರೇಟ್ ಸೇದುವವರ ಮಧ್ಯೆ ಸಿಕ್ಕಿ ಕೊಂಡ ನಮ್ಮ ಪಾಡು ಸ್ವಲ್ಪ ನೋಡಿ. ಸೇದುವವನೇನೋ ಸುಖವಾಗಿ, ತನ್ನ ಚಟದ ಮಜಾ ತೆಗೆದು ಕೊಳ್ಳುತ್ತಾ, ಸುರುಳಿಯಾಗಿಯೂ, ಕೊಳವೆಯಾಗಿಯೂ, ತರಾವರಿ ರೀತಿಯ ಹೊಗೆಯನ್ನು ಬಿಡುತ್ತಾ, ಹೊಗೆ ಬಿಡುವ ತನ್ನ creativity ಗೆ ತನಗೆ ತಾನೇ ತಲೆದೂಗುತ್ತಾ ಮತ್ತಿನಲ್ಲಿರುತ್ತಾನೆ. ಆದರೆ ನಾವು? ನಮಗೇನು ಸಿಗುತ್ತದೆ ಅದರಿಂದ ಆನಂದ? ಅವನ ಸಿಗರೇಟ್ ನ ತುದಿಯಿಂದ ಹೊರ ಬರುವ ಹೊಗೆ, ಅವನ ಬಾಯಿಂದ ಬರುವ ಹೊಗೆ, ಅವನ ಮೂಗಿನಿಂದ ಬರುವ ಹೊಗೆ, ಅವನ ಕವಿ ಕಣ್ಣುಗಳಿಂದ ಬರುವ ಹೊಗೆ, ಹೀಗೆ ನಾನಾ ರೀತಿಯಲ್ಲಿ, ಅವನ ಶರೀರದ ಎಲ್ಲಾ ರಂಧ್ರಗಳಿಂದಲೂ ‘ಫಿಲ್ಟರ್’ ಆಗಿ ಬರುವ ಹೊಗೆಯನ್ನು ನಾವು ಸೇವಿಸಬೇಕು. ಪ್ರತಿಭಟಿಸಿದಿರೋ, ಮೇಲೆ ಹೇಳಿದ ಹಂಬಲ್ ನೆಸ್ ಎಲ್ಲಾ ಮಾಯಾ. ನಿಮ್ಮ ಕಡೆ ಕೆಕ್ಕರಿಸಿ ಒಂದು ನೋಟ, ದಮ್ಮು ಸೇರಿಸಿ ಜೋರಾಗಿ ಮತ್ತೊಂದು ದಮ್ಮು. ಹೀಗೆ ಸಿಗರೆಟ್ ಸೇದದೆಯೂ ಅದರ ಎಲ್ಲಾ ಬ್ಯಾನೆಗಳನ್ನು ಅಂಟಿಸಿ ಕೊಳ್ಳುವ ಸೆಕೆಂಡರಿ ಸ್ಮೋಕರ್ ಗಳಾದ ನಮಗೆ ಯಾವ ರಕ್ಷಣೆಯೂ ಇಲ್ಲ. secondary smoking, ವೈದ್ಯಕೀಯ ಅಧ್ಯಯನದ ಪ್ರಕಾರ, active smoking ಗಿಂತ ಅಪಾಯಕಾರಿ ಅಂತೆ. ಕೆಲವು ವರ್ಷಗಳ ಹಿಂದೆ ಹೀಗೆ ಸೆಕೆಂಡರಿ ಸ್ಮೋಕಿಂಗ್ ಕಾರಣ ಕ್ಯಾನ್ಸರ್ ತಗುಲಿಸಿಕೊಂಡ ಕೊಂಡ ಓರ್ವ ಪಾಶ್ಚಾತ್ಯ ಮಹಿಳೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು ಪರಿಹಾರ ಕೇಳಿ ಎಂದು ಓದಿದ ನೆನಪು. ಪರಿಹಾರ ಸಿಕ್ಕಿತೋ ಇಲ್ವೋ ಗೊತ್ತಿಲ್ಲ. ‘ಫಿಲಿಪ್ ಮೋರಿಸ್’ ನಂಥ ಕಂಪೆನಿಗಳಿಂದ ಹಣ ಕೇಳೋದು ಒಂದೇ, ಹೋದ ಪ್ರಾಣ ವಾಪಸ್ಸು ಕೊಡು ಎಂದು ಯಮನ ಹಿಂದೆ ಬೀಳೋದು ಒಂದೇ.
ಮುಂದುವರಿದ ದೇಶಗಳಲ್ಲಿ ಧೂಮಪಾನಿಗಳಿಗೆ ಎಲ್ಲೂ ಧೂಮಪಾನ ಮಾಡಲು ಸ್ಥಳವಿಲ್ಲದಂತೆ ಮಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದರ ಮೇಲೆ ಜನ ಜಾಗೃತಿ, ಅಭಿಯಾನ ಬೇರೆ. ಹಾಗಾದರೆ ಮುಂದುವರಿದ ದೇಶಗಳಲ್ಲೇ ಹುಟ್ಟಿದ, ಅವರೇ ನಡೆಸುವ ಸಿಗರೆಟ್ ಕಂಪೆನಿಗಳ ಕಥೆ ? ಅಲ್ಲಿನ ಜನರು ಧೂಮಪಾನ ಕಂಪೆನಿಗಳನ್ನು “ಮುಂದಕ್ಕೆ ಹೋಗಪ್ಪಾ” ಎಂದು ಅಟ್ಟಿದರೆ, ಇವರುಗಳು ಮುಂದು ಮುಂದಕ್ಕೆ ಬಂದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ, ಹೊಂದದ ದೇಶಗಳಿಗೆ ತಮ್ಮ ಸರಕುಗಳನ್ನು ಇಳಿಸಿದರು. ಸುಲಭ ಬೆಲೆಗೆ ಮಾರಲು ಶುರು ಮಾಡಿದರು. ಇಲ್ಲಿ ಸೌದಿ ಅರೇಬಿಯಾದಲ್ಲಿ ಯುವಜನರ ಫೇವರಿಟ್ ಆದ marlboro ಸಿಗರೇಟ್ ಒಂದು ಪ್ಯಾಕ್ ಗೆ ೫.೫೦ ರಿಯಾಲ್ ( ೭೦.೦೦ ರೂ) ಆದರೆ marlboro ಕಂಪೆನಿಯ ತವರೂರು ಅಮೆರಿಕೆಯಲ್ಲಿ ಈ ಸಿಗರೆಟ್ ಗೆ ಬೆಲೆ ನಾಲ್ಕು ಪಟ್ಟು ಹೆಚ್ಚು. ಸೇದಬಾರದು ಎಂದು ಎಟುಕದ ಬೆಲೆ. ನೋಡಿ, ಸ್ವದೇಶೀಯರನ್ನು ಎಷ್ಟು ಚೊಕ್ಕವಾಗಿ ಇಟ್ಟುಕೊಳ್ಳುತ್ತಾರೆ ಅಮೆರಿಕನ್ನರು.
ಧೂಮಪಾನವನ್ನು ದೊಡ್ಡ ಹವ್ಯಾಸವಾಗಿ ತೆಗೆದು ಕೊಳ್ಳುತ್ತಿರುವ ಮತ್ತೊಂದು ದೇಶ ಎಂದರೆ ಇಂಡೋನೇಶಿಯ. ಈ ದೇಶದಲ್ಲಿ ಎರಡು ಕೋಟಿ ಗೂ ಹೆಚ್ಚು “ಬಾಲ ಧೂಮಪಾನಿ” ಗಳಿದ್ದಾರಂತೆ. ನಮ್ಮಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಥರ. ನೈಜೀರಿಯ, ಯುಕ್ರೇನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಸಿಗರೆಟ್ ಕಂಪೆನಿಗಳು ಬರೀ ಕ್ರೀಡೆಗಳನ್ನು ಮಾತ್ರವಲ್ಲ ರಾತ್ರಿ ಕ್ಲಬ್ಬುಗಳನ್ನೂ ಪ್ರಾಯೋಜಿಸುತ್ತಿದ್ದಾರಂತೆ. ಕುಡಿದು, ಸೇದಿ, ಮಸ್ತ್ ಮಜಾ ಮಾಡಿ ಎಂದು. Life is short, you see? ರಷ್ಯಾದಲ್ಲಿ ಮಹಿಳೆಯರನ್ನು ಸ್ಮೋಕಿಂಗ್ ಚಟಕ್ಕೆ ಎಳೆಯಲು ಸಿಗರೆಟ್ ಪ್ಯಾಕೆಟ್ ಗಳನ್ನು ವಜ್ರ ಲೇಪನದ ಸುಗಂಧ್ಯ ದ್ರವ್ಯದ ಬಾಟಲಿನಂತೆ ರೂಪಿಸಿದ್ದಾರಂತೆ. ನೋಡಿದಿರಾ, ಜನರನ್ನು ಕೊಲ್ಲಲು ಅನುಸರಿಸುವ ವಿಧಿ ವಿಧಾನಗಳನ್ನು? ಆದರೂ ಇವರು ಪಾಶ್ಚಾತ್ಯರು, ಸುಸಂಸ್ಕೃತರು. ಇವರು ಮಾಡುವಕ್ಕೆದೆಲ್ಲಾ free trade ಎನ್ನುವ ಹಣೆಪಟ್ಟಿ.
ಕ್ಯಾನ್ಸರ್ ತಜ್ಞ ನೂ (oncologist) ಆದ ಉರುಗ್ವೆ ದೇಶದ ಅಧ್ಯಕ್ಷ ಧೂಮಪಾನದ ಮೇಲೆ ನಿಗ್ರಹ ಹೇರಿದ್ದಕ್ಕೆ ವಿಶ್ವ ವಿಖ್ಯಾತ ಸಿಗರೆಟ್ ಕಂಪೆನಿ ‘ಫಿಲಿಪ್ ಮೋರಿಸ್’ ಅಲ್ಲಿನ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದಿದೆ. ಈ ವ್ಯಾಜ್ಯದಲ್ಲಿ ಒಂದು ವೇಳೆ ಗ್ರಹಚಾರಕ್ಕೇನಾದರೂ ಉರುಗ್ವೆ ಸೋತರೆ ಸುಮಾರು ೯,೦೦೦ ಸಾವಿರ ಕೋಟಿ ರೂಪಾಯಿ ಈ ಕಂಪೆನಿಗೆ ಪಾವತಿಸಬೇಕಂತೆ. ಪಾಪ ಟೋಬಾಕೋ ಕಂಪೆನಿಗಳ ಈ ನಿಲುವಿಗೆ ಹೆದರಿ ಮಧ್ಯ ಅಮೆರಿಕೆಯ ಇತರ ಬಡ ರಾಷ್ಟ್ರಗಳು ಸೊಕ್ಕಿದ ಫಿಲಿಪ್ ಮೋರಿಸ್ ನಂಥ ಕಂಪೆನಿಗಳ ಸಹವಾಸಕ್ಕೆ ಹೋಗುತ್ತಿಲ್ಲವಂತೆ. ಉರುಗ್ವೆ ವಿರುದ್ಧದ ಈ ವ್ಯಾಜ್ಯದಲ್ಲಿ ಫಿಲಿಪ್ ಮೋರಿಸ್ ಗೆದ್ದರೆ ಗೊತ್ತೇ ಇದೆಯಲ್ಲಾ, ಇನ್ನಷ್ಟು ರಂಗು ರಂಜಿತ ಪ್ಯಾಕೆಟ್ ಗಳು ಮಾರಾಟಕ್ಕೆ ಬರುತ್ತವೆ. ಧೂಮ ಪಾನ ಪ್ರೊಮೋಟ್ ಮಾಡಲು ಮತ್ತಷ್ಟು ಬೆಡಗಿಯರನ್ನು hire ಮಾಡುತ್ತಾರೆ. ಒಂದು ಕಡೆ ಇವರುಗಳು ಉತ್ಪಾದಿಸುವ ಸಿಗರೆಟ್ ಸೇದೀ ಸೇದೀ ಯುವಜನರು ರೋಗಗಳನ್ನು ಅಂಟಿಸಿ ಕೊಂಡು ಸಾಯುತ್ತಿದ್ದರೆ, ಮತ್ತೊಂದು ಕಡೆ ಸಾವಿನ ಅಂಗಡಿ ತೆರೆದು ಕೂತಿರುವ ಸಿಗರೆಟ್ ಕಂಪೆನಿಗಳ CEO ಗಳು, ಉನ್ನತ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಬೋನಸ್ ಆಗಿ ಪಡೆದು “SMOKE FREE” ವಲಯಗಳಲ್ಲಿ, ರೆಸಾರ್ಟ್ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಶ್ ಶ್ ಶ್, the world is still a fair place.
ಎಲ್ಲ ದಿನಗಳ ರೀತಿ ಸೂರ್ಯ ಮುಳುಗುವುದರೊಂದಿಗೆ ತಂಬಾಕು ರಹಿತ ದಿನವೂ ಮಾಯಾವಾಗುತ್ತದೆ. ಅದರೊಂದಿಗೆ ಸಾವಿರಾರು ಬಡ ಜೀವಗಳೂ ಸಹ.
ಚಿತ್ರ: Stefan-Xp
Comments
ಉ: ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...
ಉ: ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...
ಉ: ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...
ಉ: ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...
ಉ: ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...