ಬೆಂಗಳೂರಿನ ಸ್ಟ್ರೀಟ್‌ವ್ಯೂ
ಬೆಂಗಳೂರಿನ ಸ್ಟ್ರೀಟ್‌ವ್ಯೂ
ಗೂಗಲ್ ನಕಾಶೆಗಳನ್ನು ಒದಗಿಸುವ ಗೂಗಲ್ ಮ್ಯಾಪ್ ಸೇವೆಯನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ.ಸ್ಮಾರ್ಟ್‌ಪೋನ್ ಬಳಕೆದಾರರಂತೂ,ಜಿಪಿಎಸ್ ಸೇವೆ ಬಳಸಿ,ಪ್ರಯಾಣಿಸುವಾಗ ದಾರಿ ಕಂಡುಕೊಳ್ಳಲೂ ಮ್ಯಾಪ್‌ಗಳನ್ನು ಬಳಸುತ್ತಾರೆ.ಗೂಗಲ್ ಇಪ್ಪತ್ತೇಳು ದೇಶಗಳಲ್ಲಿ ಈಗಾಗಲೇ ಸ್ಟ್ರೀಟ್‌ವ್ಯೂ ಎನ್ನುವ ಸೇವೆಯನ್ನೂ ನೀಡುತ್ತದೆ.ಇದರಲ್ಲಿ,ರಸ್ತೆಗಳ 360 ಕೋನಗಳ ದೃಶ್ಯಗಳನ್ನು ನೀಡುತ್ತದೆ.ಇದರಿಂದ ಬಳಕೆದಾರರು ತಮ್ಮ ಮನೆಯನ್ನು ಇತರರಿಗೆ ತೋರಿಸಬಹುದು.ಆಸ್ತಿ ಖರೀದಿಸುವವರು,ಅದರ ಸುತ್ತಲಿನ ಪರಿಸರವನ್ನು ಗಮನಿಸಬಹುದು.ವ್ಯಾಪಾರಸ್ಥರು ತಮ್ಮ ಅಂಗಡಿಯ ಸುತ್ತಲಿನ ಪಾರ್ಕಿಂಗ್ ವ್ಯವಸ್ಥೆಗಳನ್ನು ಗ್ರಾಹಕರಿಗೆ ತೋರಿಸಬಹುದು.ಹೀಗೆ ಹಲವು ಪ್ರಯೋಜನಗಳಿರುವ ಸ್ಟ್ರೀಟ್‌ವ್ಯೂ ಸೇವೆಯನ್ನು ಬೆಂಗಳೂರಿನ ರಸ್ತೆಗಳಿಗೂ ತರಲು ಗೂಗಲ್ ಆರಂಭಿಸಿದೆ.ಗೂಗಲ್‌ನ ವಾಹನಗಳು ರಸ್ತೆಯಲ್ಲಿ ತಿರುಗಾಡಿ,ಕ್ಯಾಮರಾ ಮೂಲಕ ದೃಶ್ಯಗಳನ್ನು ಸೆರೆ ಹಿಡಿದು,ಸೇವೆಯನ್ನು ವಿಸ್ತರಿಸಲು ಆರಂಭಿಸಿವೆ.ಜನರ ಖಾಸಗಿತನದ ಉಲ್ಲಂಘನೆಯಾಗದಂತೆ,ಜನರ ಮುಖಗಳನ್ನು ಅಸ್ಪಷ್ಟಗೊಳಿಸಲು ಮತ್ತು ವಾಹನದ ನಂಬರ್ ಪ್ಲೇಟುಗಳನ್ನೂ ಮಂಕಾಗಿಸಲು ಗೂಗಲ್ ಕ್ರಮ ಕೈಗೊಳ್ಳುತ್ತದೆ.ಸ್ಮಾರಕಗಳ ಸ್ಟ್ರೀಟ್‌ವ್ಯೂ ಕೂಡಾ ಸಿಗಲಿದ್ದು,ಅವುಗಳ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಗೂಗಲ್ ವಕ್ತಾರ ತಿಳಿಸಿದ್ದಾರೆ.ಸಾರ್ವಜನಿಕ ಪ್ರದೇಶಗಳ ಸ್ಟ್ರೀಟ್‌ವ್ಯೂ ಮಾತ್ರಾ ದೊರಕಲಿದೆ.
----------------------------------------------------
ಐಫೋನ್4 ಭಾರತದಲ್ಲಿ ಲಭ್ಯ
ಐಫೋನ್4 ಸ್ಮಾರ್ಟ್‌ಪೋನ್ ಈಗ ಭಾರತದಲ್ಲೂ ಲಭ್ಯವಾಗಲಿದೆ.ಅಮೆರಿಕಾದಲ್ಲಿ ಇದನ್ನು ಮಾರುಕಟ್ಟೆಗೆ ಬಿಟ್ಟು ಸರಿಸುಮಾರು ಒಂದು ವರ್ಷವೇ ಆಯಿತು.ಆದರೆ ತ್ರೀಜಿ ಸೇವೆ ಲಭ್ಯವಿರುವ ಈ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಒದಗಿಸಲು ಆಪಲ್ ಕಂಪೆನಿ ಇಷ್ಟು ತಡ ಮಾಡಿದ್ದರಲ್ಲಿ ಕಾರಣ ಸ್ಪಷ್ಟ-ಭಾರತದಲ್ಲಿ ತ್ರೀಜಿ ಸೇವೆಗಳು ಆಗಿನ್ನೂ ಆರಂಭವಾಗಿರಲಿಲ್ಲ ಅಥವಾ ಬಹಳ ಸೀಮಿತವಾಗಿತ್ತು.ವೀಡಿಯೋ ಕರೆಗಳನ್ನು ಮಾಡಲು ಕೂಡಾ ಇದರಲ್ಲಿ ಬಳಸುವವನು ಮುಖದ ಚಿತ್ರ ಹಿಡಿಯುವ ಕ್ಯಾಮರಾ ಜತೆಗೆ ಹಿಂಬದಿ ಕ್ಯಾಮರಾವೂ ಇದೆ.ಹಿಂಬದಿ ಕ್ಯಾಮರಾವು ಐದು ಮೆಗಾಪಿಕ್ಸೆಲ್ ಸ್ಪಷ್ಟತೆಯದ್ದು.ಹದಿನಾರು ಜಿಬಿ ಸ್ಮರಣಕೋಶದ ಐಫೋನ್4ಗೆ ಮೂವತ್ತನಾಲ್ಕು ಸಾವಿರ ಮತ್ತು ಮೂವತ್ತೆರಡು ಜೀಬಿಯದ್ದಕ್ಕೆ ನಲುವತ್ತೊಂದು ಸಾವಿರ ಬೆಲೆ ನಿಗದಿ ಪಡಿಸಲಾಗಿದೆ.
--------------------------------------------
ಸ್ಮಾರ್ಟ್‌ಪೋನುಗಳಲ್ಲಿ ಗೂಗಲ್ ಮ್ಯಾಪ್
ಗೂಗಲ್ ಮ್ಯಾಪನ್ನು ಸ್ಮಾರ್ಟ್‌ಪೋನುಗಳ ಮೂಲಕ ಬಳಸುವವರ ಸಂಖ್ಯೆ ಸತತವಾಗಿ ಏರುತ್ತಿದೆ.ಜಿಪಿಎಸ್ ಸ್ಥಾನ ಪತ್ತೆ ಸೇವೆಯ ಮೂಲಕ ರಸ್ತೆಯ ಮಾರ್ಗದರ್ಶನ ನೀಡುವ ಸೇವೆಯು ಬಹು ಉಪಯುಕ್ತವಾಗುತ್ತದೆ.ಇಪ್ಪತ್ತು ಕೋಟಿ ಮೊಬೈಲ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ.ದೈನಂದಿನ ಬಳಕೆಯ ವಿವರಗಳನ್ನು ಪರಿಶೀಲಿಸಿದರೂ,ಗೂಗಲ್ ಮ್ಯಾಪ್ ಬಳಕೆ ಬಹು ಜನಪ್ರಿಯವಾಗಿದೆ.ಇನ್ನು ವಾರಾಂತ್ಯಗಳಲ್ಲಿ ಪ್ರವಾಸ ಹೋಗುವವರ ಸಂಖ್ಯೆ ಏರುವುದರಿಂದ,ಮ್ಯಾಪ್ ಬಳಕೆ ಏರುತ್ತದೆ.ಗೂಗಲ್ ಲ್ಯಾಟಿಟ್ಯೂಡ್ ಸೇವೆಯ ಬಳಕೆಯಿಂದ,ವ್ಯಕ್ತಿಗೆ ಆತನ ಸುತ್ತಮುತ್ತಲು ಲಭ್ಯವಿರುವ ವಿವಿಧ ವ್ಯವಹಾರ ಸ್ಥಳಗಳ ಮಾಹಿತಿ ದೊರೆಯುತ್ತದೆ.
---------------------------------
ಚಂದ್ರಮನಲ್ಲಿ ನೀರು
ಚಂದ್ರನ ನೆಲ ಒಣಕಲು ಅಲ್ಲ,ಅಲ್ಲಿ ನೀರಿನಂಶದಿಂದ ಒದ್ದೆಯಾದ ಪದರಗಳಿವೆ ಎನ್ನುವ ಅನಿರೀಕ್ಷಿತ ಅಂಶ ಬೆಳಕಿಗೆ ಬಂದಿದೆ.ಸಹರಾ ಮರುಭೂಮಿ ಪ್ರದೇಶಕ್ಕಿಂತ ಚಂದ್ರನ ಮೇಲ್ಮೈಯಲ್ಲಿ ಹೆಚ್ಚು ಒದ್ದೆಯಾದ ಪ್ರದೇಶಗಳಿವೆ.ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ವ್ಯೋಮಯಾನಿ ಪೌಲೋ ನೆಪೋಲಿ ತೆಗೆದ ಚಿತ್ರಗಳಿಂದ ಈ ವಿಚಾರ ಪತ್ತೆಯಾಗಿದೆ.ಕಳೆದ ಅಕ್ಟೋಬರಿನಲ್ಲಿ ಚಂದ್ರನ ಕಣಿವೆಯೊಂದರಲ್ಲಿ ಅಪಾರ ಪ್ರಮಾಣದ ನೀರು ಇರುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಹೇಳಿದ ನಂತರ,ಈ ಹೊಸ ಮಾಹಿತಿಗಳು ಚಂದ್ರನ ಬಗ್ಗೆ ನಮ್ಮ ತಿಳುವಳಿಕೆ ಅಪೂರ್ಣ ಎನ್ನುವುದನ್ನು ಬೊಟ್ಟು ಮಾಡುತ್ತದೆ.ಭೂಮಿಯು ಯಾವುದೋ ಆಕಾಶಕಾಯದ ಜತೆ ಡಿಕ್ಕಿಯಾದಾಗ,ಭೂಮಿಯ ಭಾಗ ಸಿಡಿದು,ಬೇರೆಯಾಗಿಅದರಿಂದ ಚಂದ್ರನ ಉಗಮವಾಯಿತು ಎನ್ನುವ ಸಿದ್ಧಾಂತದ ಪ್ರಕಾರ,ಸ್ಫೋಟದಿಂದ ಬಿಡುಗಡೆಯಾದ ಅಪಾರಶಕ್ತಿಯ ಕಾರಣ,ಚಂದ್ರನಲ್ಲಿದ್ದ ನೀರಿನಂಶ ಒಣಗಿ ಹೋಗಬೇಕಿತ್ತು.ಈಗ ಈ ಸಿದ್ಧಾಂತವು ಸರಿಯೇ ಎನ್ನುವ ಸಂಶಯ ಬರುವ ಹಾಗಾಗಿದೆ.
-----------------------------------------
ಅಂತರ್ಜಾಲ ಶೋಧ:ಹೊಸ ಮಾಹಿತಿ
ಅಂತರ್ಜಾಲ ಶೋಧ ನಡೆಸಿದವರ ವಿವರಗಳು ನಮಗೆ ಹೆಚ್ಚು ಉಪಯುಕ್ತವೇ?ಗೂಗಲ್ ಹೌದೆನ್ನುತ್ತದೆ.ಗೂಗಲ್ ಕೊರಿಲೇಟ್ ಎನ್ನುವ ಹೊಸ ಸೇವೆಯು,ಒಂದು ಪದಗುಚ್ಛವನ್ನು ಶೋಧಕ್ಕಾಗಿ ಬಳಸಿದವರ ಸಂಖ್ಯೆಯಲ್ಲಿ ಏರಿಳಿಕೆಯು ನೈಜ ಸಂಗತಿಗಳೊಂದಿಗೆ ತಳಕು ಹಾಕಿಕೊಂಡಿರುವುದನ್ನು ಶ್ರುತ ಪಡಿಸುತ್ತದೆ.ಉದಾಹರಣೆಗೆ "ಫ್ಲೂ" ಎನ್ನುವ ಪದವನ್ನು ಶೋಧಿಸಿದವರ ಸಂಖ್ಯೆಯು,ಆಯಾಯ ಸಮಯದಲ್ಲಿ ಫ್ಲೂ ಪೀಡಿತರಾದವರ ಸಂಖ್ಯೆಯ ಅನುಪಾತದಲ್ಲಿರುವುದನ್ನು ತೋರಿಸಿದೆ.ಇನ್ನು ರೈಬೋಸೋಮ್ ಮತ್ತು ಮೈಟೋಕಾಂಡ್ರಿಯಾದಂತಹ ಪದಗುಚ್ಛವನ್ನು ಹುಡುಕಿದವರ ಪ್ರಮಾಣ ಒಂದೇ ದರದಲ್ಲಿ ಏರಿಳಿಕೆಯಾಗಿರುವ ಅಚ್ಚರಿಯ ಅಂಶವೂ ಬೆಳಕಿಗೆ ಬಂದಿದೆ.ಇದೇಕೆ ಹೀಗೆ ಎನ್ನುವುದರ ಕಡೆಗೆ ಸಂಶೋಧನೆ ನಡೆಯಬೇಕಿದೆ.
-------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS33 ನಮೂದಿಸಿ.)
*ಭ್ರಷ್ಟಾಚಾರ ನಿಯಂತ್ರಣ ಅಥವಾ ಹೋರಾಟಕ್ಕೆ ಮೊಬೈಲ್ ಮೂಲಕ ಯಾವ ರೀತಿಯಲ್ಲಿ ಸಹಾಯ ಪಡೆಯಬಹುದು?
ಕಳೆದ ವಾರದ ಸರಿಯುತ್ತರಗಳು:
*ಬ್ಯಾಂಕ್ ವೆಬ್‌ಸೈಟಿನಲ್ಲಿ ಲಾಗಿನ್ ಪುಟದಲ್ಲಿ ಪಾಸ್‌ವರ್ಡ್ ಕದಿಯುವ ತಂತ್ರಾಂಶಗಳಿಂದ ರಕ್ಷಣೆ ಪಡೆಯಲು ಸವಲತ್ತು ಮಿಥ್ಯಾ ಕೀಲಿಮಣೆ.ಸ್ಕ್ರೀನಿನಲ್ಲಿ ಗೋಚರಿಸುವ ಈ ಕೀಲಿಮಣೆಯ ಕೀಲಿಗಳ ಮೇಲೆ ಕ್ಲಿಕ್ಕಿಸಿ,ಪಾಸ್‌ವರ್ಡ್ ನೀಡುವುದು ಸುರಕ್ಷಿತ.
*ಮೊಬೈಲ್ ಬಳಸಿ,ಬ್ಯಾಂಕ್ ತಾಣದಲ್ಲಿ ಬಳಕೆದಾರನ ಸಾಚಾತನದ ಪರೀಕ್ಷೆಗೆ ಒಂದು ಸಲ ಬಳಕೆಗೆ ಪಾಸ್‌ವರ್ಡನ್ನು ನೋಂದಾಯಿತ ಮೊಬೈಲಿಗೆ ಕಳುಹಿಸಲಾಗುತ್ತದೆ.
ಬಹುಮಾನ ಗೆದ್ದವರು ಸುಮಂತ್ ಶಾನುಭಾಗ್. ವಿ,ವಡೇರಹೋಬ್ಳಿ,ಕುಂದಾಪುರ. ಅಭಿನಂದನೆಗಳು.
----------------------------------------
ಜಿಮೇಲ್‌ಗೆ ರಂಗು
ಇನ್ನು ಕೆಲವೇ ವಾರಗಳಲ್ಲಿ ಜಿಮೇಲ್ ಮಿಂಚಂಚೆಯಲ್ಲಿ ವ್ಯಕ್ತಿಯು ತನ್ನ ಸಂಪರ್ಕಗಳ ಬಗ್ಗೆ ಹೆಚ್ಚು ವಿವರಗಳನ್ನು ಪಡೆಯಲು ಸಾಧ್ಯ.ಆಯ್ದ ಸಂಪರ್ಕದ ಜತೆ ನಡೆಸಿದ ಸಂವಾದ,ಕಳುಹಿಸಿದ ಮಿಂಚಂಚೆ,ಬಜ್ ಸೇವೆಯಲ್ಲಿ ಆತನ ಸಂದೇಶಗಳು ಇತ್ಯಾದಿ ವಿವರಗಳು ತಕ್ಷಣ ಲಭ್ಯವಾಗಲಿದೆ.
----------------------------
ಗುರ್ರ್ ಎಂದ ಗುರುಗುಂಟಿರಾಯರು
ಕಳೆದವಾರ ವೃತ್ತಿಪರರ ನೆಟ್‌ವರ್ಕಿಂಗ್ ತಾಣ ಲಿಂಕ್‌ಡಿನ್ ಶೇರು ಬಗ್ಗೆ ನೀಡಿದ ತುಣುಕಿನಲ್ಲಿ ಶೇರು ಬೆಲೆ ರುಪಾಯಿಗಳು ಎಂದು ಪ್ರಕಟವಾಗಿತ್ತು.ಅಮೇರಿಕಾದ ಶೇರು ಮಾರುಕಟ್ಟೆಯ ಶೇರು ಬೆಲೆ ಡಾಲರುಗಳಲ್ಲವೇ ಎಂದು ಗುರುಗುಂಟಿರಾಯರು ಹರಿಹಾಯ್ದಿದ್ದಾರೆ.ಹೌದು-ಅದು ಡಾಲರುಗಳಾಗಬೇಕಿತ್ತು.ತಪ್ಪಿಗಾಗಿ ವಿಷಾದಗಳು.
*ಅಶೋಕ್‌ಕುಮಾರ್ ಎ