ಇ-ಲೋಕ-10(16/2/2007)

ಇ-ಲೋಕ-10(16/2/2007)

ಬರಹ

ದನ,ಕುರಿ ಸಾಕುವ ಔಷಧ ಕಂಪೆನಿಗಳು
 ಅಮೆರಿಕಾದ ಔಷಧಿ ಕಂಪೆನಿಗಳೀಗ ಆಡು,ಕುರಿ ಮೊಲ ಸಾಕುತ್ತಿವೆ. ಔಷಧಿಗಳನ್ನು ಪ್ರಯೋಗಿಸಿ ನೋಡಲು ಪ್ರಯೋಗ ಪಶುವಾಗಿ ಇವನ್ನು ಬಳಸಲಾಗುತ್ತದೆ ಎಂದು ನೀವು ತಿಳಿದರೆ ಅದು ಪೂರ್ತಿ ಸರಿಯಲ್ಲ. ಈ ಪ್ರಾಣಿಗಳು ಭ್ರೂಣಾವಸ್ಥೆಯಲ್ಲಿದ್ದಾಗ ಅವುಗಳ ಜಿನೋಮ್ ಬದಲಿಸಿ,ಅವುಗಳು ಉತ್ಪಾದಿಸುವ ಹಾಲು ವಿಶೇಷ ಪ್ರೊಟೀನ್ ಉತ್ಪಾದಿಸುವಂತೆ ಮಾಡಲಾಗಿರುತ್ತದೆ. ಹಾಗಾಗಿ ಇವುಗಳ ಹಾಲಿನಿಂದ ಆ ಪ್ರೊಟೀನುಗಳನ್ನು ಪ್ರತ್ಯೇಕಿಸಿ, ಔಷಧ ತಯಾರಿಸಲು ಬರುತ್ತದೆ. ಹೃದಯದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆಂಟಿ ಥ್ರೋಂಬಿನ್ ಎನ್ನುವ ಪ್ರೊಟೀನ್, ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಇದರ ಕೊರತೆ ತೀವ್ರ ರಕ್ತಸ್ರಾವವಾದವರಿಗೆ ಅಥವಾ ಜನ್ಮತ: ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಇತರರ ರಕ್ತದಿಂದ ಪ್ರತ್ಯೇಕಿಸಿದ ಆಂಟಿಥ್ರೋಂಬಿನ್ ನೀಡುವುದೇ ಈಗಿದ್ದ ಪರಿಹಾರ. ಆದರೆ ಹೊಸ ಜೀನ್ ಪರಿವರ್ತಿತ ಪ್ರಾಣಿಗಳ ತಾಂತ್ರಿಕತೆಯ ಮೂಲಕ ಪ್ರಾಣಿಯ ಹಾಲಿನಲ್ಲಿ ಈ ಪ್ರೊಟೀನ್ ಇರುವಂತೆ ಮಾಡಬಹುದು. ಹಾಲಿನಿಂದ ಪ್ರತ್ಯೇಕಿಸಿದ ಪ್ರೊಟೀನ್‌ನ್ನು ಸಮಸ್ಯೆಯಿದ್ದವರಿಗೆ ಕೊಟ್ಟು ಹೃದಯದ ಸಮಸ್ಯೆಗೆ ಪರಿಹಾರ ನೀಡಬಹುದು. ಐವತ್ತು ಸಾವಿರ ಜನರ ರಕ್ತದಾನದ ಮೂಲಕ ಪಡೆಯಬಹುದಾದ ಪ್ರೊಟೀನ್‌ನ ಅಂಶವನ್ನು ಒಂದು ವಿಶೇಷ ತಳಿ ಆಡಿನಿಂದ ಒಂದು ವರ್ಷದಲ್ಲಿ ಪಡೆಯಬಹುದು.
 ಹೀಮೋಫಿಲಿಯಾ,ಕ್ಯಾನ್ಸರ್‍ ಚಿಕಿತ್ಸೆಯಲ್ಲೂ ಹೊಸ ಪದ್ಧತಿ ಪರಿಣಾಮಕಾರಿ. ಮಸಾಚುಸೆಟ್ಸ್‌ನ ಜಿಟಿಸಿ ಬಯೋ ತೆರಪಟಿಕ್ಸ್‌,ಸ್ಕಾಟ್ಲೆಂಡಿನ ರೋಸ್ಲಿನ್ ಇನ್‌ಸ್ಟಿಟ್ಯೂಟ್,ಕ್ಯಾಲಿಫೊರ್ನಿಯಾದ ಒರಿಜನ್ ತೆರಪೆಟಿಕ್ಸ್ ಮುಂತಾದ ಕಂಪೆನಿಗಳು ಪ್ರಾಣಿಗಳ ಮೂಲಕ ಔಷಧಿ ಪಡೆಯುತ್ತಿವೆ. ಹಂದಿ,ದನ,ಕೋಳಿ, ಮೊಲ,ಕುರಿ ಇವುಗಳೇ ಅಲ್ಲದೆ ಇಲಿಯೂ ಔಷಧಿ ಉತ್ಪಾದಿಸಿಕೊಡಲು ಬಳಕೆಯಾಗುತ್ತವೆ.
 

ವಿಡಿಯೋ ಮೂಲಕ ಕೈತುಂಬಾ ಹಣ ಗಳಿಸಿ!
 ಜನರು ಸೆರೆ ಹಿಡಿದ ವಿಡಿಯೋಗಳನ್ನು ಇತರರಿಗೆ ಲಭ್ಯವಾಗಿಸುವ ಗೂಗಲ್, ಯುಟ್ಯೂಬ್ ಅಂತಹ ಜಾಲತಾಣಗಳು  ಈಗ ಜನಪ್ರಿಯವಾಗಿವೆ. ಆದರೆ ಇವುಗಳು ವಿಡಿಯೋ ತುಣುಕುಗಳನನು ಒದಗಿಸಿದವರಿಗೆ ಹಣ ಪಾವತಿಸುವ ಸಂಪ್ರದಾಯ ಹೊಂದಿಲ್ಲ. ಆದರೆ ಇನ್ನು ಕೆಲವು ಜಾಲತಾಣಗಳು ವಿಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಒದಗಿಸುವುದಷ್ಟೇ ಅಲ್ಲದೆ ಅವುಗಳಿಗೆ ಜನಪ್ರಿಯತೆಯ ಆಧಾರದ ಮೇಲೆ ಹಣವನ್ನೂ ಪಾವತಿಸುತ್ತವೆ.ಕೆಲವು ತಾಣಗಳು ತಮ್ಮ ಜನಪ್ರಿಯತೆಯ ಮೂಲಕ ಗಳಿಸುವ ಜಾಹೀರಾತು ಆದಾಯವನ್ನು ಹಂಚಿಕೊಂಡರೆ, ಇನ್ನು ಕೆಲವು ವೀಕ್ಷಕರು ವಿಡಿಯೋ ವೀಕ್ಷಣೆಗೆ ಪಾವತಿ ಮಾಡುವಂತೆ ಮಾಡುವ ಮೂಲಕ ಬಂದ ಆದಾಯವನ್ನು ವಿಡಿಯೋ ಒದಗಿಸಿದವರ ಜತೆ ಹಂಚಿಕೊಳ್ಳುತ್ತಾರೆ.
Revver, Metacafe, Blip.tv,Brightcove,DivX,Stage6,Cruxy ಮುಂತಾದ ಜಾಲತಾಣಗಳು ಹೀಗೆ ಪಾವತಿ ಮಾಡುವ ಸಂಪ್ರದಾಯ ಹೊಂದಿದೆ. ಜನರ ಆಕರ್ಷಣೆಯನ್ನು ಗಳಿಸಲು ಸಮರ್ಥವಾದ ವಿಡಿಯೋ ದೃಶ್ಯಗಳು ಮಿಲಿಯಗಟ್ಟಲೆ ವೀಕ್ಷಣೆ ಕಂಡು ಅದರ ಸೆರೆ ಹಿಡಿದವರಿಗೆ ಕೈತುಂಬಾ ಹಣ ಗಳಿಸಿಕೊಡಬಲ್ಲವು. ಆದರೆ ಮೊದಲಿಗೆ ಜನರನ್ನು ಆಕರ್ಷಿಸುವುದು ಕಠಿನವೇ ಸರಿ.ಜನಪ್ರಿಯ ತುಣುಕುಗಳನ್ನು ಸೆರೆ ಹಿಡಿದವರ ರೇಟಿಂಗ್ ಏರುವುದರಿಂದ,ಅವರ ತುಣುಕುಗಳು ಹೆಚ್ಚು ಜನಾಕರ್ಷಣೆ ಪಡೆಯುತ್ತವೆ. ತಮ್ಮ ಉದ್ಯೋಗ ಬಿಟ್ಟು ಹೀಗೆ ವಿಡಿಯೋ ನಿರ್ಮಿಸುವುದನ್ನೇ ಕಸುಬಾಗಿ ಮಾಡಿಕೊಂಡವರೂ ಇದ್ದಾರೆ. ಕಾರ್ಡ್ ಟ್ರಕ್ಸ್‌ಗಳು,ಸಾಹಸ ಕ್ರೀಡೆಗಳ ತುಣುಕುಗಳು,ಪ್ರೇಕ್ಷಣೀಯ ಸ್ಥಳಗಳ ಬಗೆಗಿನ ಮಾಹಿತಿಗಳು ಜನಪ್ರಿಯತೆ ಗಳಿಸುತ್ತವೆ.
 

ವೈರಸ್‌ಜನಕರು ಪೊಲೀಸ್ ಬಲೆಗೆ
 ಚೈನಾದ ಪೊಲೀಸರು ಇಪ್ಪತ್ತೈದು ವರ್ಷ ವಯಸ್ಸಿನ ಲಿ ಜುನ್ ಮತ್ತಾತನ ಸಹಚರರನ್ನು ಬಂಧಿಸಿದ್ದಾರೆ. ವೈರಸ್ ಪ್ರೊಗ್ರಾಮನ್ನು ಬರೆದ ಆರೋಪದ ಮೇಲೆ ಈ ಬಂಧನ ನಡೆದಿದೆ. ಕಳೆದ ಅಕ್ಟೋಬರದಲ್ಲಿ ಲಿ ವೈರಸ್ ಪ್ರೊಗ್ರಾಮ್ ಬರೆದನಂತೆ. ಇದು ಕಂಪ್ಯೂಟರಿನ ಕಡತಗಳನ್ನು ಬಾಧಿಸಿ, ಜನಪ್ರಿಯ ಜಾಲತಾಣದ ಆನ್‌ಲೈನ್ ಆಟದ ಖಾತೆಯ ಗುಪ್ತಪದವನ್ನು ಕದಿಯುವಂತೆ ರಚಿತವಾಗಿತ್ತು. ಈ ವೈರಸ್‌ನ್ನು ಇತರರಿಗೆ ಮಾರಿ ಲಿ ಹನ್ನೆರಡು ಸಾವಿರ ಡಾಲರು ಗಳಿಸಿದ್ದನಂತೆ. ಪಾಂಡಾ ವೈರಸ್ ಎಂದು ಕುಖ್ಯಾತಿ ಗಳಿಸಿದ್ದ ವೈರಸ್ ಕಂಪ್ಯೂಟರನ್ನು ಬಾಧಿಸಿದಾಗ ಪಾಂಡಾ ಪ್ರಾಣಿಯ ಚಿತ್ರ ಪ್ರದರ್ಶಿಸುತ್ತಿತ್ತು.ಇನ್ನೂ ಕೆಲವು ವೈರಸ್‌ಗಳ ಸೃಷ್ಟಿಗೂ ತಾನು ಕಾರಣಕರ್ತ ಎಂದು ಲಿ ಒಪ್ಪಿಕೊಂಡಿದ್ದಾನೆ.
 

 ಗೂಗಲ್‌ಗೆ ನ್ಯಾಯಾಲಯ ಅಡ್ಡಗಾಲು


 ಗೂಗಲ್ ತನ್ನ ಶೋಧ ಸೇವೆಯಲ್ಲಿ ಬೆಲ್ಜಿಯಂನ ಪ್ರೆಂಚ್ ಮತ್ತು ಜರ್ಮನ್ ಪತ್ರಿಕೆಗಳ ಲೇಖನಗಳನ್ನು ಒದಗಿಸದಂತೆ ಬೆಲ್ಜಿಯಂನ ನ್ಯಾಯಾಲಯ ತಡೆ ಒಡ್ಡಿದೆ.ಇದರ ಮೂಲಕ ಈ ರೀತಿ ನಿಷೇಧ ಕೇಳುತ್ತಿರುವ ಹಲವು ಯುರೋಪ್‌ನ ದೇಶಗಳಲ್ಲಿ ಇಟೆಲಿ ಮತ್ತು ಆಸ್ಟ್ರಿಯಾ ಸೇರಿವೆ.
 ಅಂತರ್ಜಾಲದ ಮೂಲಕ ಅತ್ಯುತ್ತಮ ಶೋಧ ಸೇವೆ ಒದಗಿಸುತ್ತಿರುವ ಗೂಗಲ್ ಕಂಪೆನಿಗೆ ಇದೊಂದ ಹಿನ್ನಡೆ ಎಂದು ಭಾವಿಸಲಾಗಿದೆ. ಹೀಗೆ ಪ್ರತಿ ದೇಶದಲ್ಲೂ ಇಂತಹ ನಿಷೇಧ ಜಾರಿಗೆ ಬಂದರೆ, ಶೋಧ ಸೇವೆಯು ಅರ್ಥ ಕಳೆದು ಕೊಳ್ಳುವುದರಲ್ಲಿ ಸಂಶಯವಿಲ್ಲವಷ್ಟೇ?
*ಅಶೋಕ್‌ಕುಮಾರ್‍ ಎ