ಮರೆಯಲಾಗದ ಸಿನೆಮಾಗಳು-೧
೩೦ ವರ್ಷ ಹಳೆಯ ಸಿನೆಮಾ. ಸಿನೆಮಾದ ಬಗ್ಗೆ ಹೇಳುವ ಮೊದಲು ಸ್ವಲ್ಪ ಪೀಠಿಕೆ- ನಾವು ಗೆಳೆಯರು ೧೫ ಮಂದಿ ಮೆಟಡೋರ್ನಲ್ಲಿ ಒಂದು ಟೂರ್ ಹೊರಟೆವು. ಟೂರ್ ಎಲ್ಲಿಗೆ ಎಂದೆಲ್ಲಾ ಹೇಳುತ್ತಾ ಹೋದರೆ ಪ್ರಸಂಗಕ್ಕಿಂತ ಪೀಠಿಕೆಯೇ ಜಾಸ್ತಿಯಾಗುವುದು. ಸಿನೆಮಾದ ಬಗ್ಗೆ ಹೇಳಬೇಕಲ್ಲಾ.......
ಸುತ್ತಾಡಿ ಸುತ್ತಾಡಿ ಹಿಂದೆ ಬರುವಾಗ ಸೋತು ಸುಣ್ಣವಾಗಿದ್ದೆವು. ಅರ್ಧದಾರಿ ಬಂದಿದ್ದೇವೋ ಇಲ್ಲವೋ ಮೆಟಡೋರ್ ಸಹ ಕೈಕೊಟ್ಟಿತು. ಸರಿ.."ತಳ್ಳುಗಾಡಿ ಐಸಾ.." ಮಾಡಿದೆವು. ಒಂದು ಪೇಟೆ ಸಿಕ್ಕಿತು, ಆದರೆ ರಾತ್ರಿ ಹೊತ್ತಾದುದರಿಂದ ಮೆಕಾನಿಕ್ ಸಿಗಲಿಲ್ಲ. ಡ್ರೈವರ್ ಊರವರೊಂದಿಗೆ ವಿಚಾರಿಸುತ್ತಿದ್ದನು. ಹೇಗೂ ಗಾಡಿ ರೆಡಿಯಾಗುವಾಗ ೨-೩ ಗಂಟೆ ತಗಲುವುದು. ಎದುರಿಗೆ ಒಂದು ಥಿಯೇಟರ್ ಇತ್ತು. ಟಿಕೆಟ್ ಸಿಕ್ಕರೆ ಟೈಮ್ ಪಾಸಾಗುವುದು ಎಂದಾಲೋಚಿಸಿ ನಾವು ೫ ಮಂದಿ ಹೋಗಿ ಕೌಂಟರ್ನಲ್ಲಿ ವಿಚಾರಿಸಿದೆವು. "ಸಿನೆಮಾ ಶುರುವಾಗಿ ಅರ್ಧ ಗಂಟೆ ಕಳೆದಿದೆ" ಎಂದನು. ಒಂದು ಗಂಟೆಯಾಗಿದ್ದರೂ ನಾವು ನೋಡಲು ರೆಡಿಯಾಗಿದ್ದೆವು. ಬಾಲ್ಕನಿಗೆ ಹೋಗಿ ಸೀಟಲ್ಲಿ ಕಾಲು ನೀಡಿ ಕುಳಿತದ್ದೆ ನೆನಪು- ಮೊದಲೇ ಸುಸ್ತಾಗಿತ್ತು, ಜೊತೆಗೆ ಫ್ಯಾನ್ ಗಾಳಿ, ಜೋರು ನಿದ್ರೆ ಬಂತು. ಪರದೆ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಇಂಟರ್ವಲ್ ಟೈಮಿಗೆ ಕಷ್ಟಪಟ್ಟು ಒಂದು ಕಣ್ಣು ಬಿಡಿಸಿ ಪಕ್ಕಕ್ಕೆ ನೋಡಿದೆ- ನನ್ನ ಎಲ್ಲಾ ಗೆಳೆಯರೂ ಗಾಢ ನಿದ್ರೆಯಲ್ಲಿದ್ದರು!
ಸಿನೆಮಾ ಮುಗಿದು ಎಷ್ಟು ಹೊತ್ತಾಗಿತ್ತೋ ಏನೋ, ಗೇಟ್ ಕೀಪರ್ ಬಂದು ಎಬ್ಬಿಸಿದ ಮೇಲೆ ಹೊರಬಂದೆವು. ನೋಡಿದರೆ-ಮೆಟಡೋರೂ ಇಲ್ಲಾ! ಉಳಿದ ಗೆಳೆಯರೂ ಇಲ್ಲಾ!! ನಮ್ಮನ್ನು ಬಿಟ್ಟೇ ಊರಿಗೆ ಹೋದರಾ!? ಏನು ಮಾಡುವುದು? ಯಾರನ್ನಾದರೂ ಕೇಳೋಣ ಎಂದರೆ ರಸ್ತೆ ಪೂರ್ತಿ ಖಾಲಿ ಖಾಲಿ.. ದೂರದಲ್ಲಿ ಒಂದು ಅಂಗಡಿಯ ಮುಚ್ಚಿದ ಬಾಗಿಲ ಎದುರು ಕೆಲ ಭಿಕ್ಷುಕರು ಮಲಗಿದ್ದು ಕಾಣಿಸಿತು. ಅವರಲ್ಲೊಬ್ಬ ನಮ್ಮ ಕಡೆ ಕೈಸನ್ನೆ ಮಾಡಿದ. ಜನ ಕಂಡರೆ ಸಾಕು ಮಲಗಿದ್ದಲ್ಲಿಂದಲೇ ಬೇಡುತ್ತಾರೆ ಅಂದು ನಾವು ಮಾತನಾಡಿಕೊಂಡೆವು. ನಮ್ಮ ಹೆಸರು ಹಿಡಿದು ಕರೆದಾಗಲೇ ಗೊತ್ತಾಯಿತು ಅವರು ನಮ್ಮವರು ಎಂದು. "ಮೆಟಡೋರ್ ಕಾರಿಗೆ ಕಟ್ಟಿ ರಿಪೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಹೋಟಲ್ನಲ್ಲೂ ರೂಮ್ ಸಿಕ್ಕಿಲ್ಲ. ಬೇಗ ಮಲಗಿಕೊಳ್ಳಿ. ಒರಿಜಿನಲ್ ಭಿಕ್ಷುಕರು ಬಂದರೆ ಈ ಸ್ಥಳನೂ ಸಿಗದು." ಎಂದ ಅವನು. ಅಲ್ಲೇ ಅಡ್ಜಸ್ಟ್ ಮಾಡಿ ಮಲಗಿಕೊಂಡೆವು..
ಅಂದ ಹಾಗೇ, ಅಂದು ನಾವು ನೋಡಿ(ಡ)ದ ಮರೆಯಲಾಗದ ಸಿನೆಮಾ- ಲಾವಾರಿಸ್.
-ಗಣೇಶ.
ಮುಂದಿನ ಸಿನೆಮಾ- ಆಸ್ಕರ್ ವಿಜೇತ ಇಂಗ್ಲೀಷ್ ಸಿನೆಮಾ.
Comments
ಉ: ಮರೆಯಲಾಗದ ಸಿನೆಮಾಗಳು-೧
ಉ: ಮರೆಯಲಾಗದ ಸಿನೆಮಾಗಳು-೧
In reply to ಉ: ಮರೆಯಲಾಗದ ಸಿನೆಮಾಗಳು-೧ by ಸುಮ ನಾಡಿಗ್
ಉ: ಮರೆಯಲಾಗದ ಸಿನೆಮಾಗಳು-೧
ಉ: ಮರೆಯಲಾಗದ ಸಿನೆಮಾಗಳು-೧