ಮಂಜುನಾಥನ "ಆಣೆ"!
ಗುರುವರ‍್ಯರುಗಳ ಆತಂಕದ ಹಿತೋಕ್ತಿಯ ಹೊರತಾಗಿಯೂ, ಮುಖ್ಯಮಂತ್ರಿ ಮತ್ತು ಜೆಡಿ (ಎಸ್) ನಾಯಕರು, ಉದ್ದೇಶಿತ ಪ್ರತಿಜ್ಞಾ ಪ್ರಸಂಗದಿಂದ ಹಿಂದೆ ಸರಿಯದಿರಲಿ. ಕರ್ನಾಟಕದ ಮಹಾಮಾನ್ಯ ಮಂಜುನಾಥನ ಸಮ್ಮುಖದಲ್ಲವರು ತಮ್ಮ ತಮ್ಮ ಸತ್ಯವನ್ನು ಪ್ರಮಾಣ ಮಾಡಿ ಹೇಳಲಿ. ಇದರಿಂದ ತಮ್ಮ ನಾಯಕಮಣಿಗಳ ದೈವನಿಷ್ಠೆ ಮತ್ತು ಸತ್ಯಸಂಧತೆಗಳನ್ನು ವರೆಹಚ್ಚಲು ಮಹಾಜನತೆಗೊಂದು ಅಪರೂಪದ ಅವಕಾಶ ಸಿಕ್ಕಂತಾಗುತ್ತದೆ! ಈ ಪೈಕಿ ಒಬ್ಬರೇನೋ ತಮ್ಮ ಸತ್ಯಕ್ಕೆ ಬಲವಾಗಿ ಅಂಟಿ ಪ್ರತಿಜ್ಞೆಗೆ ಸಿದ್ಧರಾಗಿ ನಿಂತಿದ್ದಾರೆ. ಈ ಹಂತದಲ್ಲಿ, ಇನ್ನೊಬ್ಬರು, ತಮ್ಮ ಆತಂಕಿತ ಗುವರೇಣ್ಯರುಗಳ ಉಪದೇಶದ ನೆಪವೊಡ್ಡಿ ಓಡಿಹೋದರೆ, ಈಗಾಗಲೇ ಮಾಸಿಹೋಗಿರುವ ಅವರ ಇಮೇಜ್ ಇನ್ನಷ್ಟು ಮಸುಕಾಗುವುದು ಖಂಡಿತಾ! ಅವರಿಗೀಗ ಎರಡು ದಾರಿ ಉಳಿದಿವೆ. ಒಂದು, ತಾವು ಕುಮಾರಸ್ವಾಮಿಯವರಿಗೆ ಯಾವ ಭ್ರಷ್ಟ ಆಹ್ವಾನವನ್ನೂ ನೀಡಿಲ್ಲವೆಂದು, ಯಾವುದೇ ದೈವ-ದೆಯ್ಯಗಳಿಗೂ ಹೆದರದೇ ಘಂಟಾಘೋಷವಾಗಿ ಹೇಳಿ, ಅಷ್ಟರಮಟ್ಟಿಗೆ ಜತ್ಯತೀತ ಎನಿಸಿಕೊಳ್ಳುವುದು; ಇನ್ನೊಂದು, ವಿಷಾದಪೂರ್ವಕವಾಗಿ ತಮ್ಮೀ ರಾಜಕೀಯ ದುರಾಸೆಯ ಈ ಕ್ರಮವನ್ನು ಒಪ್ಪಿಕೊಂಡು ದೈವಶರಣನೆಂಬ ಬಿರುದುಳಿಸಿಕೊಳ್ಳುವುದು. ಆದರೆ ಈ ಎರಡಕ್ಕೂ ಖಂಡಿತಾ ಗುಂಡಿಗೆಯಂತೂ ಬೇಕಾಗುತ್ತದೆ!