ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್

ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್

ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್


ಈ ಸಲದ ಗೂಗಲ್ ಡೂಡಲ್‌ನಲ್ಲಿ ಸ್ಪೆಷಲ್ ಏನು ಗೊತ್ತೇ?ದೀರ್ಘ ಗ್ರಹಣದ ಡೂಡಲ್ ಈ ಸಲದ ಗೂಗಲ್ ಶೋಧ ಪುಟದಲ್ಲಿ ಪ್ರತ್ಯಕ್ಷವಾಯಿತು.ಮಾತ್ರವಲ್ಲ,ಗ್ರಹಣದ ದೃಶ್ಯಾವಳಿಗಳ ಲೈವ್ ಕವರೇಜನ್ನೂ ಒದಗಿಸಲಾಯಿತು.ಹಲವರು ಗ್ರಹಣವನ್ನು ಕುಳಿತಲ್ಲೇ ಕಂಪೂಟರ್‌ನಲ್ಲಿ ವೀಕ್ಷಿಸಿದರು.ಉತ್ತರ ಅಮೆರಿಕದಲ್ಲಾಗ ಹಗಲಾದ್ದರಿಂದ ಗ್ರಹಣ ಲಭ್ಯವಿರಲಿಲ್ಲ.ದಕ್ಷಿಣ ಆಫ್ರಿಕಾ,ದುಬೈ ಮತ್ತು ಕ್ಯಾನರಿ ದ್ವೀಪಗಳಿನ ಗ್ರಹಣಗಳ ನೇರ ದೃಶ್ಯಾವಳಿಗಳು ಅಂತರ್ಜಾಲಿಗರಿಗೆ ಲಭ್ಯವಾಯಿತು.ಎರಡು ನಿಮಿಷಗಳಿಗೊಮ್ಮೆ ಗ್ರಹಣ ದೃಶ್ಯ ಬದಲಾಗುತ್ತಿತ್ತು.ಮೋಡ ಮುಸುಕಿ,ಚಂದ್ರದರ್ಶನವಾಗದ ಭಾರತವಾಸಿಗಳಿಗೂ ಗ್ರಹಣ ದೃಶ್ಯವನ್ನಿಲ್ಲಿ ನೋಡಿ ತೃಪ್ತಿ ಪಡಬೇಕಾದ ಪ್ರಮೇಯವೂ ಬಂತೆನ್ನಿ.
------------------------
ಗುಟ್ಟು ರಟ್ಟಾಗಿಸಿ!
ವಿಕಿಲೀಕ್ಸ್ ತಾಣದ ಮೂಲಕ ಹಲವು ದೇಶಗಳ ಗುಟ್ಟುಗಳು ಬಹಿರಂಗವಾಗಿ,ಗುಲ್ಲಾದ್ದು ಈಗ ಹಳೆಯ ಸುದ್ದಿ.ಕಚೇರಿ,ಆಡಳಿತಗಳ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಇರುವವರು ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಈಗ ಅನೇಕ ತಾಣಗಳು ಲಭ್ಯವಾಗಿವೆ.ಕೆಲವು ತಾಣಗಳಂತೂ ಮಾಹಿತಿ ಹಂಚಿಕೊಳ್ಳುವವರ ಬಗೆಗಿನ ವಿವರಗಳೂ ಗೌಪ್ಯವಾಗಿರುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತವೆ.ಬಾಲ್ಕನ್‌ಲೇಕ್ಸ್,ಇಂಡೋಲೀಕ್ಸ್ ಅಂತಹ ತಾಣಗಳು ನಿಗದಿತ ಪ್ರದೇಶಗಳ ಗುಟ್ಟುಗಳನ್ನು ಬಹಿರಂಗವಾಗಿಸಲು ಲಭ್ಯವಾಗಿರುವ ತಾಣಗಳಾಗಿವೆ.ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯೂ ಗುಟ್ಟು-ರಟ್ಟಾಗಿಸಲು ಸೇಫ್‌ಹೌಸ್ ಅನ್ನುವ ತಾಣವನ್ನು ಒದಗಿಸಿದೆ.ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮಟ್ಟಿಗೆ ಪತ್ರಿಕೆ ಸೀಮಿತ ಆಶ್ವಾಸನೆಯನ್ನಷ್ಟೇ ನೀಡುತ್ತಿದೆ.ಕೋರ್ಟು ಖಟ್ಲೆಯ ಸಂದರ್ಭದಲ್ಲಿ ಮಾಹಿತಿದಾರನ ಮೂಲವನ್ನು ಬಹಿರಂಗ ಪಡಿಸುವ ಅನಿವಾರ್ಯತೆಯನ್ನು ತಾಣದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.ಓಪನ್‌ಲೀಕ್ಸ್ ತಾಣ ಆ ಮಟ್ಟಿಗೆ ಹೆಚ್ಚು ನಂಬಿಕೆಗೆ ಅರ್ಹವಾಗುವ ಸೂಚನೆಯಿದೆ.ಇದಿನ್ನೂ ಸಂಪೂರ್ಣ ಸಿದ್ಧವಾಗಿಲ್ಲ.ಮಾಹಿತಿದಾರನ ತಾಣ ಯಾವುದೆನ್ನುವುದನ್ನು ಗುಪ್ತವಾಗಿಸಲು ತಂತ್ರಾಂಶಗಳೂ ಇವೆ.ಟೋರ್ ಎನ್ನುವ ತಂತ್ರಾಂಶ,ಅಂತರ್ಜಾಲದಲ್ಲಿ ಹರಡಿರುವ ಸ್ವಯಂಸೇವಕರ ಗಣಕಗಳ ಸಹಾಯ ಪಡೆದು,ಮೂಲವನ್ನು ಮರೆಮಾಚುವ ತಂತ್ರವನ್ನು ಬಳಸುತ್ತದೆ.
------------------------------------------
ಜನಪ್ರಿಯ ಗುಪ್ತ ಸಂಖ್ಯೆಗಳು
ಪೋನನ್ನು ಲಾಕ್ ಮಾಡಲು ಬಳಸುವ ಗುಪ್ತ ಸಂಖ್ಯೆಗಳ ಪೈಕಿ,ಅತ್ಯಧಿಕ ಜನರು ಬಳಸುವ ಸಮ್ಖ್ಯೆಗಳು ಯಾವುವು? 1234, 0000, 2580 (ಪೋನ್ ಕೀಪ್ಯಾಡಿನ ಮಧ್ಯದ ಸಾಲಿನ ಕಿಲಿಯಲ್ಲಿರುವ ಅಂಕಿಗಳು), 1111 ಮತ್ತು 5555. ಇನ್ನೊಂದು ಜನಪ್ರಿಯ ಸಂಖ್ಯೆಯೆಂದರೆ 5683,ಇದು ಲವ್ ಎನ್ನುವ ಪದವನ್ನುಟೈಪಿಸಲು ಬೇಕಾದ ಕೀಲಿಯಲ್ಲಿರುವ ಅಂಕಿಗಳು.ಉಳಿದ ಸಂಖ್ಯೆಗಳು 0852 , 2222, 1212 ಮತ್ತು 1998.ಆಪಲ್ ಐಫೋನ್‌ನ್ನು ಲಾಕ್ ಮಾಡಲು ಬಳಕೆಯಾಗುವ ಸಂಖ್ಯೆಗಳನ್ನು ಡೇನಿಯಲ್ ಅನಾಟಲಿ ಎನ್ನುವ ತಂತ್ರಜ್ಞ ತನ್ನ ಭದ್ರತಾ ತಂತ್ರಾಂಶದ ಮೂಲಕ ಕಂಡುಕೊಂಡಾಗ, ಈ ವಿಷಯ ತಿಳಿಯಿತು.ನಾಲ್ಕಂಕಿ ಬಳಸಿ 0000-9999ರ ವರೆಗಿನ ಹತ್ತು ಸಾವಿರ ವಿವಿಧ ಸಂಖ್ಯೆಗಳನ್ನು ಬಳಸುವ ಆಯ್ಕೆಯಿದ್ದರೂ,ಜನರು ಸಾಮಾನ್ಯವಾಗಿ ಮೊದಲು ಹೇಳಿದ ಹತ್ತು ಸಂಖ್ಯೆಗಳನ್ನೇ ಬಳಸಿ,ತಮ್ಮ ಸಾಧನದ ಭದ್ರತೆಗೆ ಕುಂದು ತಂದುಕೊಳ್ಳುತ್ತಾರೆ.ಓದುಗರು ಇಂತಹ ಸಂಖ್ಯೆಗಳನ್ನು ಬಳಸದೆ ಇರುವುದು ಕ್ಷೇಮ.
----------------------------------------------
ಅಗ್ಗದ ಸಾಧನ ಯಾವ ತಾಣದಲ್ಲಿ ಲಭ್ಯ?
http://www.shopobot.com/ ಒಂದು ಹೊಸ ರೀತಿಯ ತಾಣ.ಈ ತಾಣ ಅಮೇಜಾನ್,ವಾಲ್‌ಮಾರ್ಟ್,ನ್ಯೂಎಗ್ ಮುಂತಾದ ಪ್ರಸಿದ್ಧ ತಾಣಗಳಲ್ಲಿ ವಿವಿಧ ಸಾಧನಗಳ ದರಗಳೆಷ್ಟಿವೆ ಎನ್ನುವುದನ್ನು ಪರಿಶೀಲಿಸುತ್ತಿರುತ್ತದೆ.ಇದು ಸ್ವಯಂಚಾಲಿತ ವ್ಯವಸ್ಥೆಯಾಗಿದೆ.ಸಾಧನಗಳನ್ನು ವಿವಿಧ ಹೊತ್ತಿನಲ್ಲಿ ವಿವಿಧ ತಾಣಗಳು ಬೇರೆ ಬೇರೆ ಬೆಲೆಯಲ್ಲಿ ಮಾರುತ್ತಿರುತ್ತವೆ.ಶಾಪೋಬೋಟ್ ತಾಣಕ್ಕೆ ಭೇಟಿ ನೀಡಿದವರಿಗೆ ಅಗ್ಗದಲ್ಲಿ ಸಾಧನ ಮಾರಾಟವಾಡುತ್ತಿರುವ ಸ್ಟೋರ್ ಯಾವುದು ಮತ್ತು ಎಷ್ಟು ಹೊತ್ತಿಗೆ ಬೆಲೆ ಕಡಿಮೆ ಎನ್ನುವುದು ತಿಳಿಯುತ್ತದೆ.ಇದರ ಲಾಭವನ್ನು ಗ್ರಾಹಕರು ಪಡೆಯಬಹುದು.
-----------------------------------------
ಕೂಲಿ:ಬ್ರಾಡ್‌ಬ್ಯಾಂಡ್‌ ಕೆಲಸಕ್ಕಿಲ್ಲ
ಮಹಾತ್ಮಾ ಗಾಂಧಿ ರಾಷೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಜನರಿಗೆ ಕೆಲಸದ ಖಾತರಿ ನೀಡುವ ಯೋಜನೆಯಾಗಿದೆ.ರಸ್ತೆ ದುರಸ್ತಿಯಂತಹ ಕೆಲಸಗಳನ್ನು ಇದರ ಮೂಲಕ ಮಾಡಿಸಲು ಅನುಮತಿಯಿದೆ.ಪ್ರತಿ ಹಳ್ಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಯೋಜನೆಗೆ,ಕೇಬಲ್ ಜಾಲ ನಿರ್ಮಾಣವಾಗ ಬೇಕಷ್ಟೇ?ಈ ಯೋಜನೆಯನುಸಾರ ಇದನ್ನು ಮಾಡಿಸಲು,ಅನುಮತಿ ಕೊಡಬೇಕೆಂದು ದೂರಸಂಪರ್ಕ ಇಲಾಖೆಯು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿತ್ತು.ಎರಡು ಲಕ್ಷ ಕಿಲೋಮೀಟರ್ ಕೇಬಲ್ ಅಳವಡಿಸಲು ದೇಶದ ಉದ್ದಗಲಕ್ಕೂ ತೋಡು ನಿರ್ಮಿಸಿ,ಕೇಬಲ್‌ಗಳನ್ನು ಅಳವಡಿಸಲು ಬೇಕಾದ ಮಾನವ ಯತ್ನಕ್ಕೆ ಈ ಯೋಜನೆಯಡಿ ಕೆಲಸದವರು ಲಭ್ಯರಾಗಿದ್ದರೆ,ಕೆಲಸ ಚುರುಕಾಗಿ ನಡೆಯಲು ಸಾಧ್ಯವಿತ್ತು.ಕೇಬಲ್ ಜಾಲಕ್ಕೆ ಬೇಕಾದ ಹೂಡಿಕೆಯೂ ಕಡಿಮೆಯಾಗುತ್ತಿತ್ತು.ಆದರೆ ವಿಶ್ವಬ್ಯಾಂಕ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಇಂತಹ ಕೆಲಸ ಒಳಗೊಳ್ಳದೆ ತೊಡಕಾಗಿದೆ.ಸ್ಯಾಮ್ ಪಿಟ್ರೊಡಾ ಅವರೂ ಕೂಡಾ ಈ ಕೋರಿಕೆಯನ್ನು ಬೆಂಬಲಿಸಿದ್ದರು.
--------------------------------------------
ಐಬಿಎಂ:ನೂರು

ಐಬಿಎಂ ಕಂಪೆನಿ ಈಗ ನೂರು ವರ್ಷ ಪೂರೈಸಿದೆ.ಬಿಗ್‌ಬ್ಲೂ ಎಂಬ ಅಡ್ಡಹೆಸರು ಕಂಪೆನಿಗಂಟಿದ್ದರೂ,ಈ ಹೆಸರಿಗೇನು ಕಾರಣವೆನ್ನುವುದು ಸ್ಪಷ್ಟವಿಲ್ಲ.ಐಬಿಎಂ ಕಂಪೆನಿಯ ಹೆಸರನ್ನು ಬರೆಯಲು ಬಳಸುವ ನೀಲಿ ಬಣ್ಣದಿಂದ ಹೆಸರು ಬಂದಿರಬಹುದು ಎನ್ನುವುದು ಒಂದು ಊಹೆ.ಮೊದಲ ಪಿಸಿ,ಏಟಿಎಂ ಸಾಧನಗಳು ಐಬಿಎಂನ ಕೊಡುಗೆ.ಈಗ ತಂತ್ರಾಂಶ,ಯಂತ್ರಾಂಶ ಮತ್ತು ವಿವಿಧ ಸೇವೆಗಳ ಪೂರೈಕೆಯ ಮೂಲಕ ಕಂಪೆನಿ ಚಲಾವಣೆಯಲ್ಲಿದೆ.1911ನ ಜೂನ್ ಹದಿನಾರರಂದು ಕಂಪೆನಿಯ ಸ್ಥಾಪನೆಯಾಯಿತು.ತಂತ್ರಜ್ಞಾನ ಕಂಪೆನಿಗಳ ದಿಗ್ಗಜರಲ್ಲಿ ಐಬಿಎಂ ಕಂಪೆನಿಯೂ ಒಂದಾಗಿದೆ.
------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
*ಬಿಟ್‌ಟೊರೆಂಟ್ ಅಂದರೇನು?
*ಇತ್ತೀಚೆಗೆ ಇದರ ಬಗ್ಗೆ ಬಂದ ಸುದ್ದಿಯೇನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS36 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಜೈವಿಕ ಚಹರೆ ಮೂಲಕ ಯಾವುದೇ ವ್ಯವಸ್ಥೆಗೆ  ಲಾಗಿನ್ ಆಗಲು ಬಳಸುವ ವಿವಿಧ ಚಹರೆಗಳು ಬೆರಳಚ್ಚು,ಮುಖಮುದ್ರೆ ಮತ್ತು ಕಣ್ಣಿನ ಐರಿಸ್.
*ಇವುಗಳ ಬಳಕೆಯಲ್ಲಿ ಸಮಸ್ಯೆಗಳಿವೆ-ಬೆರಳಚ್ಚು ಸ್ಪಷ್ಟವಿಲ್ಲದಿರುವುದು,ಮುಖದಲ್ಲಿ ಬದಲಾವಣೆ-ಕ್ಯಾಮರದ ಮುಂದಿರುವ ಮುಖದ ಕೋನ.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರತೀಕಾ,ಕಾವು,ಪುತ್ತೂರು.ಅಭಿನಂದನೆಗಳು.
Udayavani
UDAYAVANI UNICODE
*ಅಶೋಕ್‌ಕುಮಾರ್ ಎ