ಹರಕು ಚಪ್ಪಲಿ!

ಹರಕು ಚಪ್ಪಲಿ!

ಕಾಲುಗಳಲ್ಲಿ ಹರಕು ಚಪ್ಪಲಿ!


"ಅಲ್ಲವೇ ಮತ್ತೆ? ಹತ್ತು ಮೈಲಿ ಒಡಾಡಿದ್ದು, ಧೂಳಿನಲ್ಲಿ ಅಲೆದಾಡಿದ್ದು, ಕುದಿವ ರಸ್ತೆಯ ಮೇಲೆ ಕಾಲು ಎಳೆದು ನಡೆದದ್ದು,


ಸವೆದ ಚಪ್ಪಲಿಯ ತಳದಿಂದ ಮುಳ್ಳು ಚುಚ್ಚಿ ಕಣ್ಣೀರು ಇಟ್ಟಿದ್ದು"


ಎನ್ನುವುದು ಸ್ವಾನುಕಂಪ


 


ಕಾಲುಗಳಲ್ಲಿ ಹರಕು ಚಪ್ಪಲಿ!


"ಇದು ನನ್ನ ಅಪ್ಪ ಕೊಡಿಸಿದ್ದು, ಹಳೆಯದು ಹರಿಯಿತೆಂದು, ಕೂಡಿತ್ತ ಹಣ ತೆಗೆದು ತಮಗೆ ಚಪ್ಪಲಿ ಇಲ್ಲದೆಯೂ,


ನನಗೆ ಹೊಸ ಚಪ್ಪಲಿಯ ಕೊಡಿಸಿದ್ದು, ಈಗ ಮಾಸುತ್ತಿದೆ"


ಎನ್ನುವುದು ಧನ್ಯತಾ ಭಾವ


 


ಕಾಲುಗಳಲ್ಲಿ ಹರಕು ಚಪ್ಪಲಿ!


"ಅವಳ ಕಾಲು ನೋಡು, ದಿನಕ್ಕೊಂದು ಜೊತೆ, ಸೀರೆಗೊಪ್ಪುವಂತೆ,  ಎತ್ತರ ಹಿಮ್ಮಡಿಯ ಚಪ್ಪಲಿ,


ಬಣ್ಣ ಬಣ್ಣದ ಚಪ್ಪಲಿ, ನನಗೆ ಮಾತ್ರ ಈ ಹರಕು"


ಎನ್ನುವುದು ಅಸೂಯೆ


 


ಕಾಲುಗಳಲ್ಲಿ ಹರಕು ಚಪ್ಪಲಿ!


"ಕೈಯಲ್ಲಿ ದುಡ್ಡಿರುವಾಗ ತಿಂಗಳಿಗೊಂದು ಜೊತೆ ಕೊಂಡೆ, ಚೆನ್ನಾಗಿದ್ದರೂ ಬಣ್ಣ ಮಾಸಿದ ಮತ್ರಕ್ಕೆ ಹೊರಗೆಸೆದೆ,


ಚಪ್ಪಲಿ ಹೊಲೆಯುವವನತ್ತ ಒಮ್ಮೆಯೂ ತಿರುಗಿ ನೋಡಿಲ್ಲ, ಈಗ ಹೊಸತು ಕೊಳ್ಳಲು ಕಾಸಿಲ್ಲ, ಅದೇ ಹರಕು ಚಪ್ಪಲಿ"


ಎನ್ನುವುದು ಪಶ್ಚಾತ್ತಾಪ


 


ಕಾಲುಗಳಲ್ಲಿ ಹರಕು ಚಪ್ಪಲಿ!


ಅಂತೂ ಹಳತಾಯಿತು, ಅಣ್ಣ ಹೊಸದು ಕೊಡಿಸುತ್ತಾನೆ, ಈ ಬಾರಿ ಹೆಚ್ಚು ಬೆಲೆಯ ಚಪ್ಪಲಿ ಕೊಳ್ಳುವೆ !"


ಎನ್ನುವುದು ಉತ್ಸಾಹ


 


ಕಾಲುಗಳಲ್ಲಿ ಹರಕು ಚಪ್ಪಲಿ!


"ಇದೇ ಹರಕು ಚಪ್ಪಲಿ ಧರಿಸಿದ್ದಾಗ ನನ್ನ ಭವನದ ಒಳಗೆ ಬಿಡಲಿಲ್ಲ,  ಈಗ ನನ್ನ ಅಂತಸ್ತಿಗೆ, ಇದೇ ಹರಕು ಚಪ್ಪಲಿಗೆ ನಮಸ್ಕರಿಸಿ ಒಳ ಬಿಡಬೇಕು"


ಎನ್ನುವುದು ಹಠ


 


ಕಾಲುಗಳಲ್ಲಿ ಹರಕು ಚಪ್ಪಲಿ!


"ಹರಕಾದರೂ ಕೂಡ ಚಪ್ಪಲಿ ಇದೆಯಲ್ಲ"


ಎನ್ನುವುದು ಆಶಾವಾದ


 


ಕಾಲುಗಳಲ್ಲಿ ಹರಕು ಚಪ್ಪಲಿ!


"ಚಪ್ಪಲಿಯಾದರೂ ಇದೆಯಲ್ಲ !"


ಎನ್ನುವುದು ಕೃತಜ್ಞತಾಭಾವ


 


ಈಗ ಹೇಳಿ, ನೀವೆಂಥ ಹರಕು ಚಪ್ಪಲಿ ಹಾಕಿದ್ದೀರಿ?

Rating
No votes yet

Comments