ನೆನಪುಗಳ ಅಂಕಣದಿಂದ ---- ಕೈ ಚೀಲ
ನೆನಪುಗಳ ಅಂಕಣದಿಂದ
ಕೈ ಚೀಲ ...
ಅವತ್ತು ಮಧ್ಯಾಹ್ನ ಮೂರರ ಹೊತ್ತಿಗೆ ಎನ್ ಎ ಎಲ್ ಕ್ಯಾಂಟೀನ್ ಗಂಟೆ ಹೊಡ್ಕೊಳಕ್ಕೆ ಶುರು ಮಾಡ್ತು, ಅದು ಕಾಫಿಯ ಸಮಯ. ನಾನು ಎಂದಿನಂತೆ ಕ್ಯಾಂಟೀನ್ ಕಡೆ ಯಾವುದೊ ಯೋಚನೆಯಲ್ಲಿ ವೇಗವಾಗಿ ಹೋಗುತ್ತ ಇದ್ದೆ. ದಾರಿಯಲ್ಲಿ ಹೋಗೊ ಬರೋರೆಲ್ಲ ನನ್ನನ್ನೆ ನೋಡುತ್ತ ಇದ್ರು, ಕಾರಣ ?, ನನ್ನ ನಡೆಯುವ ಶೈಲಿ. ನಾನು ಅಗತ್ಯವಿಲ್ಲದಿದ್ದರು ಬಹಳ ವೇಗವಾಗಿ ಹೆಜ್ಜೆ ಇಡುತ್ತೇನೆ, ಇದರ ಅನುಭವ ನನ್ನ ಜೊತೆ ನಡೆದವರಿಗೆ ಆಗಿಯೆ ಇರುತ್ತೆ. ಇದು ನೆನ್ನೆ ಮೊನ್ನೆ ಸುಖಾಸುಮ್ಮನೆ ಬೆಳೆಸಿಕೊಂಡದ್ದಲ್ಲ, ಚಿಕ್ಕವನಿದ್ದಾಗಿಂದಲು ಯಾವುದೇ ಪೂರ್ವಾಪರವಿಲ್ಲದೆ ರೂಢಿಸಿಕೊಂಡ ಅಭ್ಯಾಸ. ನಡ್ಕೊಂಡು ಹೋಗಲೆ ಯಾಕಿಂಗ್ ಓಡ್ತ ಇದಿಯ ಅಂತ, ಎಷ್ಟೋ ಬಾರಿ ನನ್ನ ಆಪ್ತರ ಕೈಲಿ ಬೈಸಿಕೊಂಡಿದ್ದು ಇದೆ. . ಕ್ಯಾಂಟೀನ್‍ನ ಒಳಗೆ ಹೋಗಿ ನನ್ನ ಹಣದ ಥೈಲಿನ ತೆಗೆದು ನೋಡಿದಾಗ ಚಿಲ್ಲರೆ ಕಾಸು ಬಿಟ್ಟರೆ ಇನ್ನೇನು ಇರಲಿಲ್ಲ . ಅಯ್ಯೊ ರಾಮ ಅನ್ಕೊಂಡು ಹೊರಗಡೆ ಇರೊ ಎ ಟಿ ಮ್ ನ ಕಡೆಗೆ ದಡಬಡನೆ ದೌಡಾಯಿಸಿದೆ. ಹಣವನ್ನು ತೆಗೆದುಕೊಂಡು ಆಚೆ ಬಂದಾಗ ಒಬ್ಬ ವ್ಯಕ್ತಿ ಕೈ ಚೀಲ ಮಾರುತ್ತಿದ್ದುದು ಗಮನಕ್ಕೆ ಬಂತು. ಆತ ನಮ್ಮ ಈ ಗಾಂಧಿನಗರ , ಶಿವಾಜಿನಗರದ ವರ್ತಕರಂತೆ ಗಂಟಲು ಹೋಗುವ ಹಾಗೆ ಅರಚಿಕೊಂಡು ಮಾರುತ್ತಿರಲಿಲ್ಲ .. ಕೈ ಚೀಲವನ್ನು ಒಂದು ಮರದ ತಡಿಕೆಗೆ ನೇತುಹಾಕು ಸುಮ್ಮನೆ ನಿಂತುಕೊಂಡಿದ್ದ, ದಾರಿಯಲ್ಲಿ ಹೋಗುವವರಿಗೆ ಇದು ಮರಾಟಕ್ಕಿದೆ ಎನ್ನುವ ಸೂಚನೆಯ ಕೊಡುವ ಹಾಗೆ !!.
ನನಗೆ ಈ ಪತ್ರಕರ್ತರು ಗಾಂಧಿವಾದಿಗಳು ಹೆಗಲಿಗೆ ನೇತುಹಾಕಿಕೊಳ್ಳುತ್ತಾರಲ್ಲ ಖಾದಿಯ ಇಲ್ಲವೆ ಬಟ್ಟೆಯ ಚೀಲ ಬಹಳ ಅಚ್ಚುಮೆಚ್ಚು . ಎಲ್ಲೆ ಕಂಡರು ಅದನ್ನು ತೆಗೆದುಕೊಂಡುಬಿಡುವುದು ನನ್ನ ಹುಚ್ಚು. ಆ ವ್ಯಕ್ತಿಯ ಮಾರುತ್ತಿದ್ದ ಒಂದು ಶ್ವೇತ ವರ್ಣದ ಚೀಲ ನನ್ನ ಗಮನ ಸೆಳೆಯಿತು . ತಡಮಾಡದೆ ಅವನ ಬಳಿ ಹೋಗಿ ಎಷ್ಟು ಗುರು ಇದು ಅಂದೆ ? . ಆ ವ್ಯಕ್ತಿ ನನ್ನ ಸಂಬೋಧನೆಯಿಂದ ಸ್ವಲ್ಪ ವಿಕಸಿತನಾದರು ಸಹಜವಾಗಿ ಒಂದು ಜ಼ಿಪ್ ಇರೋದು ೪೦ ರುಪಾಯಿ ಎರಡು ಇರೊದು ೬೦ ರುಪಾಯಿ ಸಾರ್ ಅಂದ. ನಾನು ಅವನ ಮುಂದೆ ನಿಂತಿದ್ದರು ಅವನು ಮುಖವನ್ನು ಎತ್ತೆತ್ತಲೊ ತಿರುಗಿಸಿಕೊಂಡು ಮಾಡುತ್ತಿದ್ದ ಹಾವಭಾವ ಸ್ವಲ್ಪವು ಹಿಡಿಸಲಿಲ್ಲ.
ಅಲ್ಲಯ್ಯ ಸುಮ್ಮನೆ ಹೀಗೆ ನೇತುಹಾಕಿಕೊಂಡು ನಿಂತರೆ ಯಾರು ಬಂದು ತೊಗೊತಾರೆ ?? ನೀನು ಜನರನ್ನ ಕೂಗಿ ಕರೆದು ವ್ಯಾಪಾರ ಮಾಡಬೇಕು ತಾನೆ .. ವ್ಯಾಪಾರ ಅಂದರೆ ಆಕರ್ಷಣೆ ಅಲ್ಲವೇನಯ್ಯ ??
ತಪ್ಪಾಗುತ್ತೆ ಸಾರ್ ... ವ್ಯಾಪಾರ ಅಥವ ವಸ್ತುಗಳು ನಮ್ಮ ನಿಮ್ಮ ಅವಶ್ಯಕತೆಗಳನ್ನು ಪೂರೈಸಬೇಕೆ ಹೊರತು ಆಕರ್ಷಣೆಗಳನ್ನಲ್ಲ ಸಾರ್ ಎಂದ
ಗುರು ನನಗೆ ಇದರ ಅವಶ್ಯಕತೆಯಿಲ್ಲ ... ನಾನು ಇದನ್ನು ತೆಗೆದುಕೊಳ್ಳಬೇಕು ಅಂದುಕೊಂಡಿದ್ದು ಇದರ ಮೇಲಿನ ಆಕರ್ಷಣೆಯಿಂದ ಮಾತ್ರ !!? ಇದಕ್ಕೇನಂತಿ
ಹಾಗಲ್ಲ ಸಾರ್ ... ಚೆನ್ನಾಗಿರುವುದನ್ನು ಕಂಡಾಗಲೆಲ್ಲ ಮನುಷ್ಯನಲ್ಲಿ ಅದನ್ನು ಸ್ವಂತವಾಗಿಸುವ ಆಸೆ ಹುಟ್ಟುತ್ತದೆ, ಅದು ಸರ್ವೇ ಸಾಮಾನ್ಯ. ಆ ಆಸೆಗೆ ಸೋಲುವುದು ಬಿಡುವುದು ಅವರವರ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ನೀವು ಈ ವಸ್ತುವಿನ ವಿಷಯದಲ್ಲಿ ದುರ್ಬಲರಿರಬಹುದು , ಅದಕ್ಕೆ ಇದರ ಅವಶ್ಯಕತೆ ನಿಮಗಿರದಿದ್ದರು ಇದರ ಮೇಲಿನ ಆಕರ್ಷಣೆಯಿಂದ ಬಂದಿರಿ. ಅಲ್ಲವೆ ?? ಇಂತಹ ಆಕರ್ಷಣೆ ಕೊಳ್ಳುವವರ ಮನಸ್ಸಿನಲ್ಲಿ ತಾನಾಗೆ ಹುಟ್ಟಬೇಕೆ ಹೊರತು ನಮ್ಮ ವ್ಯಾಪಾರದಿಂದಲ್ಲ ಎನ್ನುವುದಷ್ಟೆ ನನ್ನ ವಾದ .
ನನಗೆ ಅವನ ವಾದದಲ್ಲಿ ನಿಜಾಯಿತಿ ಕಾಣಿಸಿತಾದರು, ಮುರ್ಖತನ ಎದ್ದು ಕಾಣುತ್ತಿತ್ತು. ಥು ನನಗೆ ಯಾಕೆ ಬೇಕಿವೆಲ್ಲ ಅಂತ ಬೈಕೊಂಡು, ಚಿಲ್ಲರೆ ಇದೆಯೆನಪ್ಪ ಅಂತ ಕೇಳಿದೆ. ಅದಕ್ಕವನು ಎಷ್ಟಕ್ಕೆ ಸಾರ್ ಅಂದ ?, ೧೦೦ ರುಪಾಯಿಗೆ ಅಂದೆ. ಇದೆ ಕೊಡಿ ಸಾರ್ ಕೊಡ್ತಿನಿ ಅಂದ. ನಾನು ಕಿಸೆಯಿಂದ ೧೦೦ ರುಪಾಯಿ ನೋಟೊಂದನ್ನು ತೆಗೆದು ತೊಗೊಳಪ್ಪ ಅಂತ ಅವನ ಮುಂದೆ ಕೈ ಚಾಚಿದೆ. ಅ ವ್ಯಕ್ತಿ ದುಡ್ಡು ಎಲ್ಲಿದೆ ಎಂದು ಹುಡುಕಲು ಪ್ರಯತ್ನಿಸಿದಾಗಲೆ ನನಗೆ ಅವನು ಕುರುಡ ಎಂದು ಅರಿವಾದದ್ದು. ಛೆ ಅಂತ ಮನಸ್ಸಿನಲ್ಲೆ ಉದ್ಗಾರ ತೆಗೆಯುತ್ತ , ಬೇಸರದಿಂದ ನಾನೆ ಅವನ ಕೈಯಲ್ಲಿ ಹಣವನ್ನು ಇಟ್ಟೆ. ಅವನು ಇದೆಲ್ಲ ಅಂಗವಿಕಲರು ಮಾಡಿರೊದು ಸಾರ್ ಅಂದ. ಎಲ್ಲೊ ಮನಸ್ಸಿನ ಮೂಲೆಯಲ್ಲಿ ಬೇಸರ ಇನ್ನು ಹೆಚ್ಚಾಯಿತು. ಅದು ಬೇಸರವೊ ಅನುಕಂಪವೊ ನನಗೆ ಗೊತ್ತಿಲ್ಲ!. ಅವನು ೧೦೦ ರುಪಾಯಿ ನೋಟನ್ನು ಎರಡು ಕೈಗಳಿಂದ ಹಿಂದೆ ಮುಂದೆ ಮಾಡಿ ಉದ್ದ ಅಗಲಗಳನ್ನು ಕೈಯಲ್ಲೆ ಅಳೆಯುವಂತೆ ಮಾಡಿ, ಅದು ನೂರರ ನೋಟೆಂದು ಖಾತ್ರಿಯಾದ ಮೇಲೆ ಬಲಗಡೆ ಕಿಸೆಯಲ್ಲಿರಿಸಿದ. ಸಾರ್ ಹತ್ತು ರುಪಾಯಿ ಚಿಲ್ಲರೆ ಇದ್ದರೆ ಕೊಡಿ ಐವತ್ತು ರುಪಾಯಿ ಕೊಟ್ಟುಬಿಡುತ್ತೇನೆ ಅಂದ. ಸರಿ ಅಂತ ಹತ್ತು ರುಪಾಯಿ ನೋಟನ್ನು ಅವನ ಕೈಗಿರಿಸಿದೆ .
ಮೊದಲ ಹಾಗೆಯೆ ಅದು ಹತ್ತರ ನೋಟೆಂದು ಅವನು ತನ್ನದೆ ರೀತಿಯಲ್ಲಿ ಖಾತ್ರಿ ಮಾಡಿಕೊಂಡು ಜೇಬಿನಲ್ಲಿರಿಸಿ ನನಗೆ ಐವತ್ತರ ನೋಟನ್ನು ನೀಡಿದ. ಅಲ್ಲ ನಿಮಗೆ ನೋಟುಗಳ ನಡುವಿನ ವ್ಯತ್ಯಾಸ ಹೇಗೆ ಗೊತ್ತಾಗುತ್ತೆ ಅಂತ ಕೇಳಿದೆ. ಅದಕ್ಕವನು, ನೋಡಿದರೆ ಗೊತ್ತಾಗುತ್ತೆ ಸಾರ್ ಅಂದ . ನಾನು ಅವಾಕ್ಕಾಗಿ ನಿಮಗೆ ಕಣ್ಣು ಕಾಣಲ್ಲ ಅಲ್ವ ಹೆಂಗೆ ನೋಡುತ್ತಿರ ಅಂತ ಮೂರ್ಖನ ಹಾಗೆ ಪ್ರಶ್ನೆ ಮಾಡಿದೆ ? ಅವನು ವಿನಮ್ರವಾಗಿ ಸ್ಪರ್ಶದಿಂದ ಗೊತ್ತಾಗುತ್ತೆ ಸಾರ್ ಅಂದ. ಅವನು ಹೇಳಿದ ರೀತಿ ಮಾತ್ರ ನಾನು ನನ್ನ ಜೀವನದಲ್ಲಿ ಎಂದಿಗು ಮರೆಯುವುದಿಲ್ಲ . ಆ ಮಾತನ್ನಾಡಿದಾಗ ಅವನ ಕಣ್ಣುಗಳಲ್ಲಿದ್ದ ಕಾಂತಿ ಮುಖದಲ್ಲಿದ್ದ ತೇಜಸ್ಸನ್ನು ನೆನೆಸಿಕೊಂಡಾಗಲೆಲ್ಲ ದಿಗ್ಭ್ರಮೆಯುಂಟಾಗುತ್ತದೆ. ಅವನ ಮುಖದಲ್ಲಿದ್ದ ಯಾವುದೆ ಏರಿಳಿತಗಳಿಲ್ಲದ ಮುಕ್ತವಾದ ನಗು ಸಹಜವೆನಿಸಲಿಲ್ಲ. ಚೀಲವನ್ನು ತೆಗೆದುಕೊಂಡು ದಾರಿಯಲ್ಲಿ ನಡೆಯುವಾಗ ಹಿಂದೆ ವಯಸ್ಸಾದ ಹಿರಿಯೊಬ್ಬರು ಹೇಳಿದ ಮಾತು ನೆನಪಿಗೆ ಬಂತು - ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ಮನುಷ್ಯನು ವಿಕಲಾಂಗನೆ ಮಗು . ಕೆಲವರಿಗೆ ಮಾತ್ರ ಅದು ದೈಹಿಕವಾಗಿರುತ್ತದೆ , ಉಳಿದವರಿಗೆಲ್ಲ ಅದು ಮಾನಸಿಕ ರೂಪದಲ್ಲಿರುತ್ತದೆ. ಅರೆ ಎಷ್ಟು ನಿಜ ಅಲ್ಲವೆ ಎಂದು ಉದ್ಗಾರ ತೆಗೆಯುತ್ತ ಕ್ಯಾಂಟೀನ್‍ನ ಕಡೆಗೆ ಹೆಜ್ಜೆ ಹಾಕಿದೆ. ಸದ್ಯದ ಮಟ್ಟಿಗೆ ನಾನಂತು ವಿಕಲಾಂಗನೆ ... ನೀವು ??
Comments
ಉ: ನೆನಪುಗಳ ಅಂಕಣದಿಂದ ---- ಕೈ ಚೀಲ
In reply to ಉ: ನೆನಪುಗಳ ಅಂಕಣದಿಂದ ---- ಕೈ ಚೀಲ by karababu
ಉ: ನೆನಪುಗಳ ಅಂಕಣದಿಂದ ---- ಕೈ ಚೀಲ
ಉ: ನೆನಪುಗಳ ಅಂಕಣದಿಂದ ---- ಕೈ ಚೀಲ