ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ
ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.
೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.
ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.
ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.
ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.
Rating