ಮೊಬೈಲ್ ರಿಂಗ್‌ಟೋನ್

ಮೊಬೈಲ್ ರಿಂಗ್‌ಟೋನ್

ಅಲ್ಲಿ ನೋಡಲು ಮೋರಿ.. ಇಲ್ಲಿ ನೋಡಲು ಮೋರಿ.. ಎಲ್ಲಿ ನೋಡಿದರಲ್ಲಿ ಮೋರಿಯೇ ಮೋರಿ!

ಮೆಟ್ರ‍ೋ, ಚತುಷ್ಪಥ ರಸ್ತೆ, ಎಂದೆಲ್ಲಾ ಜಂಬ ಕೊಚ್ಚಿಕೊಳ್ಳುತ್ತಾರೆ. ಆದರೆ ನನಗೆ ಮಾತ್ರ ಬೆಂಗಳೂರಿನ ದಾಸರಹಳ್ಳಿಯಿಂದ- ಬನಶಂಕರಿ, ಕೆಂಗೇರಿಯಿಂದ ಕೃಷ್ಣರಾಜಪುರದವರೆಗೆ ರಸ್ತೆಗಿಂತ ಜಾಸ್ತಿ ಮೋರಿಗಳೇ ಕಾಣಿಸುವುದು. ರಸ್ತೆಯನ್ನೇ ಎಲ್ಲಿ ನೋಡಿದರೆ ಅಲ್ಲಿ ಅಗೆದು ಮೋರಿ ಮಾಡಿದ್ದಾರೆ. ನನ್ನ ಮಾರುತಿಗೆ ಈ ಲಂ(ಘನ)ಕೆ(ಲಸ) ಬೇಡ ಎಂದು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಬಸ್ಸಲ್ಲಿ ಹೋಗುತ್ತಿದ್ದೆ.

ಬಸ್ ಪ್ರಯಾಣ ಅಂದ್ರೆ ಸುಲಭಾನಾ? ಬಹಳ ತಯಾರಿ ಬೇಕು- ಬೇಗ ಏಳಬೇಕು. ಬಸ್ ಸ್ಟ್ಯಾಂಡ್‌ವರೆಗೆ ನಡೆಯಬೇಕು. ಬಸ್‌‍ಗೆ ಕಾಯಬೇಕು. ನಿಂತಿರುವ ಬಸ್ ಮಾರ್ಕೆಟ್‌ಗೆ ಹೋಗುತ್ತಾ ಎಂದು ಕೇಳಿದವರಿಗೆ ಉತ್ತರಿಸಬೇಕು. ಕಿಸೆಯಲ್ಲಿ ೧೦೦ರೂ, ೫೦ರೂ, ೧೦ರೂ.ಗಳಿದ್ದರೆ ಸಾಲದು ೧ರೂ,೨ರೂಗಳೂ ಸಹ ಇರಬೇಕು...ತುಂಬಾ ಕಷ್ಟದ ಕೆಲಸ. ಆದರೂ ಅಡ್ಜಸ್ಟ್ ಆದೆ.

ತಾಪತ್ರಯವಾದುದೇ ಮೊಬೈಲ್‌ನದ್ದು- ಆಫೀಸಲ್ಲೂ, ಮನೆಯಲ್ಲೂ ಖಡಕ್ ಬಾಸ್‌ಗಳಿರುವುದರಿಂದ, ಬಸ್ಸಲ್ಲಿ ಹೋಗುವಾಗ ಮೊಬೈಲ್ ಆಫ್ ಮಾಡಿಡಲು ಸಾಧ್ಯವಿಲ್ಲ. ಕಿಸೆಯಲ್ಲೇ ಇರುತ್ತಿದ್ದ ಮೊಬೈಲ್ ಕಳ್ಳತನದ ಭಯದಿಂದ ಬ್ಯಾಗ್ ಒಳಸೇರಿತು. ಬಸ್ಸಲ್ಲಿ ನನ್ನ ಸಮೀಪ ಯಾರದ್ದೇ ಫೋನ್ ರಿಂಗಾದರೂ, ನಾನು ಬ್ಯಾಗ್ ತೆಗೆದು, ನನ್ನ ಮೊಬೈಲ್ ಹುಡುಕಾಡಿ ನೋಡುವುದು ಮಾಡುತ್ತಿದ್ದೆ.

ಇದನ್ನು ತಪ್ಪಿಸಬೇಕಾದರೆ ನನ್ನ ಮೊಬೈಲ್ ರಿಂಗ್ ಟೋನ್ ಡಿಫರೆಂಟ್ ಆಗಿರಬೇಕು. ಉಳಿದ ಕೇಳುಗರಿಗೂ ಕಿರಿಕಿರಿಯಾಗಬಾರದು ಅಂತ ಆಲೋಚಿಸಿ, ಸುಮಧುರ ಹಾಡುಗಳ ಲಿಸ್ಟ್ ಮಾಡಿ, ಅದರಲ್ಲಿ ಒಂದನ್ನು ರಿಂಗ್‌ಟೋನಾಗಿ ಸೆಟ್ ಮಾಡಿದೆ.

"...ಹಾಡಿದ್ದಲ್ವಾ?" "ಬಹಳ ಚೆನ್ನಾಗಿದೆ" "ನನ್ನ ಇಷ್ಟದ ಹಾಡು"..., ಹೀಗೇ ಅಕ್ಕಪಕ್ಕದವರು ಮಾತನಾಡಿಸಿ ಅವರೊಂದಿಗೆ ನನ್ನ ಗೆಳೆತನವೂ ಬೆಳೆಯಿತು. ದಿನಾ ಹೋಗೋ ರೂಟು-ಬಸ್‌ಪಥ-ನನ್ನ ಮಾತಿಗೆ (ಭಾಷಣಕ್ಕೆ) ಅಭಿಮಾನಿಗಳೂ ಇದ್ದರು! ನನ್ನ ಭಾಷಣ ಧರ್ಮಸ್ಥಳದಿಂದ ಆರಂಭವಾಗಿ ಅಮೇಏಏರಿಕಾ ತಲುಪಿದರೂ ಬಸ್ ಮಾತ್ರಾ ಸಿಗ್ನಲ್ಲೂ ದಾಟಿರುವುದಿಲ್ಲ! ಪುನಃ ಭಾಷಣ ಇನ್ನೊಂದು ವಿಷಯದ ಮೇಲೆ- ಟ್ರಾಫಿಕ್, ಮೆಟ್ರೋ, ಮೋರಿ ದಾಟಿ ಪೂರ್ವಕ್ಕೆ ಸಿಂಗಾಪುರ, ಜಪಾನ್ ತಲುಪುವಾಗ,- ಬಸ್ ಸಿಗ್ನಲ್ ದಾಟಿರುತ್ತದೆ!! ರಸ್ತೆ ಜಾಮ್ ಆದುದರಿಂದ ಪುನಃ ನಿಂತಿರುತ್ತದೆ :( ಈ ಸಮಯದಲ್ಲಿ ೧೦-೧೫ ಆದರೂ ಮೊಬೈಲ್ ರಿಂಗಾಗಿ ನನಗೆ ಡಿಸ್ಟರ್ಬ್ ಮಾಡುತ್ತಿರುತ್ತದೆ. ಒಂದು ೨೦ ಮಂದಿಯಾದರೂ ಗಟ್ಟಿಯಾಗಿ ಮೊಬೈಲಲ್ಲಿ ಮಾತನಾಡುತ್ತಿರುತ್ತಾರೆ- ಮಾಮೂಲಿ ಲವ್‌, ಆತ್ಮಹತ್ಯೆ, ಮರ್ಡರ್‌ವರೆಗೆ ಬೆದರಿಕೆಗಳು ಮೊಬೈಲಲ್ಲೇ ಆಗುವುದು. ಈ "ಲವ್"ನೂ ಬೆದರಿಕೆ ಲಿಸ್ಟ್‌ಗೆ ಸೇರಿಸಬೇಕಾಗಿ ಬಂದುದು ವಿಷಾದನೀಯ.

ಇದು ಹೇಗೋ ಸಹಿಸಬಹುದು. ಆದರೆ ರಿಂಗ್‌ಟೋನ್‌ಗಳು- ದೇವರೇ! ಒಂದು ಫೋನ್ ಅರಚುತ್ತಾ ಇದೆ- " ಅಪ್ಪಾ.. ಅಪ್ಪಾ..ಫೋನ್ ಎತ್ತುಂಗೋ.."ನೋ ಏನು ಸಾವೋ. ಇನ್ನೊಂದು "ನಾಕು ಮಗಾ ನಾಕು ಮಗಾ" ಎಂದು ಚೀನೀ ಸೆಟ್‌ನಲ್ಲಿ ಬಸ್ಸನ್ನೇ ನಡುಗಿಸುತ್ತಿರುತ್ತದೆ. ನನ್ನಂತಹ ಹಿರಿಯರು ಇವರನ್ನೆಲ್ಲಾ ತಿದ್ದದಿದ್ದರೆ ಹೇಗೆ? ಪುನಃ ಭಾಷಣ ಶುರು ಮಾಡಿದೆ- ಎಷ್ಟೊಂದು ಒಳ್ಳೆಯ ಹಾಡುಗಳಿವೆ-ಭಕ್ತಿಗೀತೆಗಳು, ಭಾವಗೀತೆಗಳು,ದೇಶಭಕ್ತಿಗೀತೆಗಳು.., ಇದೂ ಬೇಡವೆಂದರೆ ಕೊಳಲು, ನಾದಸ್ವರ, ಶಹನಾಯ್, ಹಾರ್ಮೋನಿಯಂ ಇತ್ಯಾದಿ ವಾದ್ಯ ಸಂಗೀತಗಳೂ ಇದೆ. ಪುನಃ ಪುನಃ ಕೇಳಿದರೂ ಬೋರಾಗುವುದಿಲ್ಲ. ಅದು ಬಿಟ್ಟು "ಮುನ್ನಿ ಬದ್‌ನಾಮ್ ಹುಯಿ ಡಾರ್ಲಿಂಗ್.." ಅನ್ನು ರಿಂಗ್ ಟೋನ್ ಮಾಡುತ್ತೀರಲ್ಲಾ, ಅನ್ನುವಾಗಲೇ ನನ್ನ ಪಕ್ಕದಲ್ಲೇ ಯಾರೋ ಒಬ್ಬನ ಫೋನ್ ಅರಚಿತು-"ಶೀಲಾ...ಶೀಲಾ ಕಿ ಜವಾನಿ.." ಬಸ್ ನಿದಾನಕ್ಕೆ ಫಸ್ಟ್‌ಗೇರಲ್ಲಿ ಮುಂದೆ ಹೋಗುತ್ತಿದ್ದರೆ, ನನ್ನ ಭಾಷಣ ಟಾಪ್ ಗೇರ‍ಲ್ಲಿತ್ತು- ಹಾಡು ಚೆನ್ನಾಗಿದೆ ಸರಿ. ಸೂಪರ್ ಹಿಟ್ ಸಹ..ಒಪ್ಪುತ್ತೇನೆ. ಆದರೆ ರಿಂಗ್ ಟೋನಾಗಿ ಉಪಯೋಗಿಸುವುದು ತಪ್ಪು. ಶೀಲಾ ಹೆಸರಿನ ಹೆಣ್ಣು ಮಕ್ಕಳು ಈ ಬಸ್ಸಲ್ಲೂ ಇರಬಹುದು. ಅವರಿಗೆ ಮುಜುಗುರವಾಗದೇ? ಇಂತಹವರ ಮೊಬೈಲ್ ತೆಗೆದು ಬಸ್‌ನ ಚಕ್ರದಡಿ ಇಟ್ಟು ಹಪ್ಪಳ ಮಾಡಿ ಹಿಂತಿರುಗಿಸಬೇಕು...ಎನ್ನುತ್ತಿದ್ದಾಗಲೇ ಪಕ್ಕದಲ್ಲಿದ್ದಾತ ನನ್ನನ್ನು ತಟ್ಟಿಕರೆದು "ಅಂಕ್‌ಲ್ ನಿಮ್ಮ ಮೊಬೈಲ್ ಆಗಿನಿಂದ......"

ಈವಾಗ ಮೋರಿ ಹಾರಿಕೊಂಡು ಹೋಗುವ "ಹೊಂಡ" ಬೈಕಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ. ಮೊಬೈಲ್ ಬ್ಯಾಗ್‌ನಿಂದ ಪುನಃ ಕಿಸೆ ಸೇರಿದೆ. " ಸಾಕಿಯಾ...ಜಾಯೆ ಕಹಾಂ.." ಓ ಬಾಸ್ ಫೋನಿರಬೇಕು. ಫೋನ್ ಅಟೆಂಡ್ ಮಾಡುವ ಮೊದಲು ನಿಮಗೊಂದು ಮಾತು- ಶೀಲಾ ಹಾಡು ನನ್ನ ಮೊಬೈಲಲ್ಲಿ ಗೇಮ್ಸ್ ಆಡುತ್ತಿದ್ದ ಮಕ್ಕಳ ಕೆಲಸ ಅಂದರೆ ಯಾರೂ ನಂಬುತ್ತಿಲ್ಲ. ನೀವಾದರೂ ನಂಬುತ್ತೀರಾ..

-ಗಣೇಶ

 

ಚಿತ್ರ: computrgeek.wordpress.com

Rating
No votes yet

Comments