ನನ್ನ peer-group

ನನ್ನ peer-group

        ಮತ್ತದೇ ಬೆಳಗಿನ ಬೆಳಕು. ಗಡಿಯಾರದ ಮುಳ್ಳಿನ ಜೊತೆಗೆ ನಾವೂ ಓಡುತ್ತೇವೆ. ಬೆಳಿಗ್ಗೆ ೫ಕ್ಕೆ ಏಳುವುದು ನಮಗೆ ಬೇಜಾರಾದರೂ ಇತರರಿಗೆ "ವ್ಯಕ್ತಿತ್ವ"ಕ್ಕೆ ಅಂಟಿದ ವಿಷಯವಾದ್ದರಿಂದ ಏಳುತ್ತೇವೆ. ಹಾಸಿಗೆ ಬಿಟ್ಟು ಎದ್ದ ಕೂಡಲೆ ಸೀದ ಅಡಿಗೆಮನೆಗೇ ತೆರಳುತ್ತೇನೆ. ಹಾಲು ಕಾಯಲು ಇಟ್ಟು, ಕಾಫ಼ಿ ಮೇಕರ್ ನಲ್ಲಿ ಪುಡಿ ಮತ್ತು ನೀರು ತುಂಬಿಸಿ ಸ್ವಿಚ್ ಒತ್ತಿ ನಂತರವೇ ಬಚ್ಚಲಿಗೆ ತೆರಳುತ್ತೇನೆ. ಮನಸ್ಸಲ್ಲೆ  "pre-empt the process"  ನೆನಪಿಸಿಕೊಂಡು ನಗುತ್ತೇನೆ. ಮಧ್ಯದಲ್ಲೊಮ್ಮೆ ಗಡಿಯಾರ ನೋಡುತ್ತೇನೆ, ಒಹ್, ಅದಾಗಲೇ ೧೫ ನಿಮಿಷಗಳು ಕಳೆದಿವೆ. ಸರಸರನೆ ಅಕ್ಕಿ, ಬೇಳೆ ಪಾತ್ರೆಗಳಿಗೆ ತುಂಬಿಸಿ, ತರಕಾರಿ ಹಾಕಿ ಕುಕ್ಕರ್ ಜೋಡಿಸುತ್ತೇನೆ. ಅಗೋ ಅಲ್ಲಿ, ಟಿಫ಼ಿನ್ ಡಬ್ಬ ತೊಳೆದಿಲ್ಲ, ಎಲ್ಲವನ್ನೂ ತೊಳೆಯುತ್ತೇನೆ. ಅಯ್ಯೋ, ಹಾಲು ಉಕ್ಕುತ್ತಿದೆ. ಧಡಾರನೆ ಜಿಗಿಯುತ್ತೇನೆ, ಹಾಲು ಉಕ್ಕಿಯೇ ಬಿಡುತ್ತದೆ, ಜೊತೆಗೆ ನಾನು ಜಿಗಿದ ರಭಸಕ್ಕೆ ಕೈ ತಾಗಿ ಪಾತ್ರೆಗಳೆರಡು ಬೀಳುತ್ತವೆ. ಅತ್ತೆ ಮಲಗಿದಲ್ಲಿಂದಲೇ ಗೊಣಗುತ್ತಾರೆ. ನಾನು ನನ್ನ ಅಕ್ಕ ಪಕ್ಕ ಇರುವುದನ್ನೆಲ್ಲ ಶಪಿಸುತ್ತೇನೆ. ಅಂತೂ ಕುಕ್ಕರ್ ಕೂಗಿ, ಅನ್ನ, ಹುಳಿ ಮಾಡಿ ಪುಟ್ಟನ ಡಬ್ಬಿ ಕಟ್ಟುವ ಹೊತ್ತಿಗೆ ೬ ಘಂಟೆ ಆಗಿಯೇ ಬಿಡುತ್ತದೆ.

 ಕೈಯಲ್ಲಿ ಎರಡು ಲೋಟ ಕಾಫ಼ಿ ಹಿಡಿದು ರೂಮ್ ಗೆ ಹೋಗುತ್ತೇನೆ. ಯಾವುದೇ ರಂಗಿನ ಭಾವನೆಗಳಿಗೆ ಆಸ್ಪದ ಕೊಡದೇ ಗಂಡನನ್ನು ನಿರ್ಧಾಕ್ಶಿಣ್ಯವಾಗಿ ಎಬ್ಬಿಸುತ್ತೇನೆ. ಅವ "ಪಿಚ್ ಪಿಚ್" ಎಂದುಕೊಂಡು ಏಳುವಾಗ ಕರುಣೆ ಉಕ್ಕಿ ಬಂದರೂ, ತೋರಿಸಿಕೊಳ್ಳದೇ ಕಾಫ಼ಿ ಲೋಟ ಕೈಯಲ್ಲಿ ತುರುಕುತ್ತೇನೆ. ಅದಾದಮೇಲೆ ಕಾಫ಼ಿ ಮುಗಿಯುವವರೆಗೂ ಅಗಾಧ ಮೌನ. ಅಲ್ಲಿಂದ ಪುಟ್ಟನನ್ನು ಎಬ್ಬಿಸುವ ಕೆಲಸ ಶುರು. ಸಮಯ ಮೀರಿ ಹೋಗುತ್ತಿದ್ದರೂ "ಚಿನ್ನಿ, ಪುಟ್ಟ" ಎಂತೆಲ್ಲ ಹೇಳಿ ಎಬ್ಬಿಸುವುದು ಬಲು ಪ್ರಯಾಸದ ಕೆಲಸ. ಅಂತೂ ಇಂತೂ ಜೋರು ಮಾಡಿಯೋ, ಒಂದೇಟು ಹಾಕಿಯೋ ಅವನನ್ನು ಸಿದ್ಧ ಮಾಡಿದರೆ ಒಂದು ಹಂತ ಮುಗಿದಂತೆ.

 
ನಾನು ಸ್ನಾನಕ್ಕೆ ಓಡುತ್ತೇನೆ. ಇತ್ತೀಚೆಗೆ ತಂದಿಟ್ಟ ಸೋಪ್ ಸಲೂಶನ್ ಬಳಸಿ, ಅದರ ಗಂಧದಲ್ಲಿ ತೇಲಿಹೋಗುತ್ತೇನೆ. ಸ್ನಾನದ ನಂತರ ಧರಿಸಲು ಹತ್ತಿಯ ಬಟ್ಟೆಯೇ ಆಗಬೇಕು  "formal"  ಆಗಿ ಕಾಣಲು.  deodourent  ಬೇಕು ಬೆವರು ನಾತವನ್ನು ಪರಿವರ್ತಿಸಲು. ಮುಖದ ತುಂಬ ಎಣ್ಣೆ ಸುರಿದಂತೆ ಕಂಡರೂ  sunscreen lotion  ಬೇಕು ತ್ವಚೆಯನ್ನು ಮೃದುವಾಗಿಡಲು. ಸ್ನಾನ ಮಾಡಿದ ನಂತರವೇ ಅನುಭವಕ್ಕೆ ಬರುವ ಮೈಯ ತಾಜಾತನವನ್ನು  body lotion ಇಂದ ಮುಚ್ಚಿಬಿಡುತ್ತೇನೆ. ಕೂದಲನ್ನು ತಿದ್ದಿ ಬಾಚುತ್ತೇನೆ. IT   ಜಗತ್ತಿನ ಒತ್ತಡಗಳಲ್ಲಿ ಅರ್ಧ ಕೂದಲು ಕಳೆದುಕೊಂದರೂ ಇರುವ ಕೂದಲಿಗೆ  shampoo, conditioner ಹಾಕಿ ಹೊಳಪಿಸುತ್ತೇನೆ. ತಿದ್ದಿ ಬಾಚಿದ ಕೂದಲನ್ನು   groom up ನೆನಪಿಸಿಕೊಂದು ಹಗುರಾಗಿಸುತ್ತೇನೆ. ೧೦೦೦ ರೂ. ಚಪ್ಪಲಿಯನ್ನು comfortable ಎನ್ನಿಸಿ ಧರಿಸಿ laptop ಚೀಲದೊಡನೆ ಹೊರಬೀಳುತ್ತೇನೆ. ಮನದೊಳಸಂಖ್ಯ ಬಾಂಬುಗಳು ಸ್ಫೋಟಿಸಲು ಸಿದ್ಧವಿದ್ದರೂ ಮುಖದ ಮೇಲೆ ಮಂದ ಮುಗುಳ್ನಗೆ ಹೊತ್ತು ದಿಟ್ಟ ಹೆಜ್ಜೆ ಇಟ್ಟು ನಡೆಯುತ್ತೇನೆ.
 
ಒಹ್! ಅವರು  unit head , ಇವರು  CEO, ಇವರು  director !!! ನನ್ನ ಮುಖ ಬಾಡುತ್ತದೆ. ನಾನು? ಪ್ರಶ್ನಿಸಿಕೊಳ್ಳುತ್ತೇನೆ. ಬರೀ   manager.  ಸಂಬಳ ಆರಂಕಿ ದಾಟಿತ್ತೇ? ಮನದಲ್ಲೇ "ಇನ್ನೂ ಇಲ್ಲ" ಎಂದುಕೊಳ್ಳುತ್ತೇನೆ.
 
 perfection  ನ ಹಿಂದೆ ಓಡುತ್ತಲೇ ಎಲ್ಲದಕ್ಕೂ  process  ಹಾಕುತ್ತೇನೆ.  "systems?"  ಪ್ರಶ್ನಿಸುತ್ತೇನೆ.  reviews  ಮಾಡುತ್ತೇನೆ.  reviews  ಗೆ ಒಳಗಾಗುತ್ತೇನೆ. ತಲೆಯ ಮೇಲಿನ ಅಧಿಕಾರಿ ಬೈದಿದ್ದನ್ನು ಇನ್ನಾವುದೊ ರೀತಿ  positive  ಶೀರ್ಷಿಕೆಯಡಿ ಕೆಳಗಿನವರಿಗೆ ವರ್ಗಾಯಿಸುತ್ತೇನೆ. ಹತ್ತಿಯ ವಸ್ತ್ರ ಧರಿಸಿ, ಎಣ್ಣೆ ಮೂತಿ ಮಾಡಿಕೊಂಡು, ವಾಸನೆ ಓಡಿಸುವ ದ್ರಾವಣ ಪೂಸಿ ಅದರ ವಾಸನೆ ಹೊರಡಿಸುತ್ತಾ ಜೋರು ದನಿಯಲ್ಲಿ "ಆಯಿತೇ ಕೊಟ್ಟ ಕೆಲಸ?" ಎಂದು ವಿಚಾರಿಸುತ್ತಾ ಗಂಭೀರವದನಳಾಗಿ ಓಡಾಡುವ ನಾನು manager   ಬದಲಾಗಿ ನಮ್ಮ ಕೆಳಗಿನವರಿಗೆ Hitler ತರಹ ಕಾಣುತ್ತೇನೆ. ದಿನಪೂರ್ತಿ ಅಲ್ಲಿಂದಿಲ್ಲಿ ಓಡಾಡಿ, ಗಂಟಲು ಹರಿದುಕೊಂಡು ಮಾತಾಡಿ, ಅವರಿವರೊಂದಿಗೆ ಗುದ್ದಾಡಿ ಕಡೆಗೆ ಸುಸ್ತಾಗಿ ಕುಳಿತುಕೊಳ್ಳುತ್ತೇನೆ.
 
mail ಒಂದು ಗಮನ ಸೆಳೆಯುತ್ತದೆ. "ನಿಮ್ಮ ಸಂಬಳವನ್ನು ೯೫೦೦೦ ಗಳಿಂದ ೧೦೩೦೦೦ಕ್ಕೆ ಹೆಚ್ಚಿಸಿದ್ದೇವೆ" ಎಂಬ ಸಾಲನ್ನು ಹತ್ತು ಬಾರಿ ಓದುತ್ತೇನೆ. ಪ್ರಳಯಾಂತಕ ಕೋಪ ಬರುತ್ತದೆ. ನನಗೆ ಹೇಳಿದ್ದೊಂದು, ಈತ ಕೊಟ್ಟಿರುವುದೊಂದು - ಕೋಪದಲ್ಲಿ ಮೈ, ಮನ ಮತ್ತು ತಲೆ - ಎಲ್ಲ ಬಿಸಿಯಾಗುತ್ತವೆ. ಹಣದುಬ್ಬರಕ್ಕಿಂತ ಕಡಿಮೆ ಈ ಭತ್ಯೆ ಎಂದು ಶಪಿಸುತ್ತೇನೆ. ಈ ವರ್ಷ ಆ ಹೊಸ  manager  ಇರದಿದ್ದರೆ, ನನಗೆ ಇನ್ನೂ ಹೆಚ್ಚಿನ ರಾಂಕಿಂಗ್ ಬಂದಿರುತ್ತಿತ್ತು. ನನ್ನ peer group ಸರಿ ಇಲ್ಲ ಎಂದುಕೊಳ್ಳುತ್ತೇನೆ. ನಾನು ಬರೀ manager ಎಂದುಕೊಳ್ಳುತ್ತೇನೆ.
 
ಸಪ್ಪೆ ಮೋರೆಯೊಂದಿಗೆ, ಪುಟ್ಟನೊಂದಿಗೆ ಮನೆಗೆ ಹಿಂದಿರುಗುತ್ತೇನೆ. ಅಪ್ಪ, ಅಮ್ಮ ಮನೆಗೆ ಬಂದಿರುತ್ತಾರೆ. ಅಮ್ಮ ಮುಗುಳ್ನಗುತ್ತಾರೆ. ಅಪ್ಪ ಸಂತೋಷದ ನೋಟ ನೀಡುತ್ತಾರೆ. ನಮ್ಮವರೇ ಸಂಬಂಧಿಕರು "ಚೆನ್ನಾಗಿದೀಯೇನಮ್ಮ" ಎಂದು ಕೇಳುತ್ತಾರೆ. ನಾನು ನಿಶ್ಯಬ್ಧ ಮುಗುಳ್ನಗೆಯೊಂದನ್ನಿತ್ತು ಬಾತ್‍ರೂಮ್ ಸೇರುತ್ತೇನೆ. ಹೊರಗೆ ಮಾತು ಕೇಳಿಸುತ್ತದೆ.
 
"ಏನೇ ಹೇಳಿ ಸರ್, ನಿಮ್ಮ ಮಗಳು ಬಹಳ ಬುದ್ಧಿವಂತೆ. ಒಳ್ಳೆ ಕೆಲಸದಲ್ಲಿದ್ದಾಳೆ. ಒಳ್ಳೆ ಸಂಬಳ ತರ್ತಾಳೆ. ಮಗುವನ್ನೂ ನೋಡಿಕೊಂಡು ಸಂಪಾದನೆನೂ ಮಾಡಿಕೊಂಡು ಇದ್ದಾಳೆ. ಈ ಛಲ ಬಹಳ ಅಪರೂಪ"
 
ಅಪ್ಪ ದನಿಗೂಡಿಸುತ್ತಾರೆ. "ಮುಂಚಿನಿಂದಲೂ ಹೀಗೆ, ಆಟ ಪಾಠಗಳಲ್ಲಿ ಸದಾ ಮುಂದು. ೧೦ ನೇ ತರಗತಿಯಲ್ಲಿ ತಲ್ಲೂಕಿಗೇ ಮೊದಲು ಬಂದವಳು. ೨-೩ ವರ್ಷ ಓದಿನಲ್ಲಿ ಅಂತರವಿದ್ದರೂ, ದೂರ ಶಿಕ್ಷಣದಲ್ಲಿ ಓದಿ ಮಾಸ್ಟರ್ ಡಿಗ್ರೀ ಮಾಡಿದ್ದಾಳೆ. ಅವಳ ವಯಸ್ಸಿನವರೆಗಿಂತ ಹಿಂದೇನೂ ಇಲ್ಲ, ಚೆನ್ನಾಗಿ ಮುಂದೆ ಬಂದಿದ್ದಾಳೆ. ಈಗ ನೋಡಿ  manager ಆಗಿದ್ದಾಳೆ."
 
ಬಾತ್‍ರೂಮ್ ನಲ್ಲಿ ನನ್ನ ಮುಖ ಎಣ್ಣೆಯಿದ್ದೇ ಅರಳುತ್ತದೆ :-) ಸಪ್ಪೆ ಮೋರೆಯ ಬರೀ manager ಈಗ MANAGER ಆಗಿ ಕಾಣುತ್ತೇನೆ. ಮುಖದ ಎಣ್ಣೆಯನ್ನು ತೊಡೆದು, ಸೋಪ್‍ನಿಂದ ಚೆನ್ನಾಗಿ ತೊಳೆದು, ಮುಖದ ತುಂಬಾ ನಗುವಿನೊಂದಿಗೆ ಹೊರಬರುತ್ತೇನೆ. ಅಪ್ಪನ ಪಕ್ಕದಲ್ಲಿ ಕೂಡುತ್ತೇನೆ. 
 
ಹಿಡಿದಿಡಲಾಗದ ಅತ್ತ್ಯುತ್ಸಾಹದೊಂದಿಗೆ, ತಣ್ಣನೆಯ ಸ್ವರದಲ್ಲಿ ಹೇಳುತ್ತೇನೆ. "ನನಗೆ ಸಂಬಳ ೧ ಲಕ್ಷ ದಾಟಿತು ಅಪ್ಪ". ಅಪ್ಪ ಸಂತೋಷದಲ್ಲಿ ಹಿಗ್ಗಿ ಹೀರೆಕಾಯಿ ಆಗುತ್ತಾರೆ. ಕಣ್ಣಲ್ಲಿ ನೀರುಕ್ಕಿಸಿ ನನ್ನ ತಲೆ ನೇವರಿಸಿ "ದೇವರು ದೊಡ್ಡವನು, ಎಲ್ಲ ಒಳ್ಳೆದಾಗಲಮ್ಮ" ಎನ್ನುತ್ತಾರೆ. ಅವರ ಮಾತುಗಳು ನನ್ನ ಸುತ್ತಲೇ ಪರಿಭ್ರಮಿಸುತ್ತವೆ, ನನ್ನ ಸಾಧನೆಗಳು, ನನ್ನ ಕಷ್ಟಗಳು, ನನ್ನ ರೀತಿನೀತಿಗಳ ಗುಣಗಾನ ಪ್ರಾರಂಭವಾಗುತ್ತದೆ. ಎದುರಿನ ಕನ್ನಡಿಯಲ್ಲಿ ನನಗೆ  MANAGER ಕಾಣುತ್ತಾಳೆ. ಈ peer group ನಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಎದ್ದು ನಿಂತ ಅನುಭವವಾಗುತ್ತದೆ. ಅಪ್ಪನ ಹೆಮ್ಮೆಯ ಭಾವದಲ್ಲಿ ಅಸ್ತಿತ್ವ ಪಡೆದ ನಾನು, ಅವರ ಕಣ್ಣುಗಳಲ್ಲಿ ಹೆಚ್ಚು ಹೊಳಪಾಗಿಯೇ ಕಾಣುತ್ತೇನೆ.
Rating
No votes yet

Comments