ವೈದ್ಯನೊಬ್ಬನ ದುಃಸ್ವಪ್ನಗಳು !!
"ನಲವತ್ತು ವರ್ಷಗಳ ಅನುಭವ ಇರೋ ಸ್ಪೆಷಲಿಸ್ಟ್ ಡಾಕ್ಟರ್ ನೀವು ಅಂತಾ ನನ್ನ ಸ್ನೇಹಿತರು ಹೇಳಿದರು. ಅದಕ್ಕೇ ನನ್ನ ಮಗನ್ನ ನಿಮ್ಮ ಹತ್ತಿರ ಕರಕೊಂಡು ಬಂದಿದೀನಿ. ಇವನಿಗೇನಂಥಾ ದೊಡ್ಡ ಕಾಯಿಲೆ ಏನೂ ಇಲ್ಲ. ಆದರೆ ಸ್ವಲ್ಪ ಅರ್ಜೆಂಟ್ ಇದೆ. ಆದಕಾರಣ ನಿಮ್ಮ ಹತ್ತಿರ ಬಂದಿದೀನಿ. ಎರಡು ದಿನದಿಂದ ಇವನಿಗೆ ಭಾರೀ ನೆಗಡಿ ಆಗ್ತಾ ಇದೆ.ಮೂಗು ಸೋರಿ ಹೋಗ್ತಾ ಇದೆ. ನಿಮಿಷಕ್ಕೊಂದು ಸಲ ಸೀನ್ತಾ ಇರ್ತಾನೆ. ನಾಳೇನೇ ಇವನ ಲಗ್ನ ಇದೆ. ನಿಮ್ಮ ಫೀಸ್ ಬಗ್ಗೆ ಯೋಚನೆ ಮಾಡ್ಬೇಡಿ. ಮೊದಲೇ ನಿಮ್ಮ ಫೀಸ್ ಕೊಟ್ಬಿಡ್ತೀನಿ" ಎಂದರು ನಮ್ಮ ಬಡಾವಣೆಯ ಭಾರೀ ಕುಳವಾದ ಮಹಾಂತಯ್ಯ ನವರು, ನನ್ನ ಕನ್ಸಲ್ಟಿಂಗ್ ರೂಮ್ ನ ನನ್ನೆದುರಿನ ಆಸನದಲ್ಲಿ ಕುಳಿತುಕೊಳ್ಳುತ್ತಾ. ಅವರ ಪಕ್ಕದಲ್ಲಿ ಮರುದಿನ ಮದುವೆಯಾಗಲಿರುವ ಅವರ ಮಗ ಕುಳಿತಿದ್ದ. ಹಾಗೇ ಹೇಳುತ್ತಲೇ, ತಮ್ಮ ಚೆಕ್ ಬುಕ್ ತೆಗೆದು ಐದು ಲಕ್ಷ ರೂಪಾಯಿಗಳನ್ನು ನನ್ನ ಹೆಸರಿಗೆ ಬರೆದು ನನ್ನ ಕಡೆ ಚೆಕ್ ತಳ್ಳಿದರು.
ಈ ದಿನ ಬೆಳಿಗ್ಗೆ ಅದೆಂಥಾ ನರಿಯ ಮುಖ ನೋಡಿದೆನೋ ಎಂದು ಮನದಲ್ಲಿಯೇ ನಲಿಯುತ್ತಾ, ಅವರು ನೀಡಿದ ಚೆಕ್ಕನ್ನು ನನ್ನ ಜೇಬಿಗೆ ಇನ್ನೇನು ಇಳಿಬಿಡಬೇಕು, ಅಷ್ಟರಲ್ಲಿ ಅವರು ಮುಂದುವರೆದು ನುಡಿದದ್ದನ್ನು ಕೇಳಿ, ನನ್ನ ಕೈ ಹಾಗೆಯೇ ಮರಗಟ್ಟಿ ಹೋಯಿತು.
" ಆದರೆ ಒಂದು ಕಂಡಿಷನ್ ಇದೆ. ನಾಳೆ ಹೊತ್ತಿಗೆ ಅವನ ನೆಗಡಿ ಸಂಪೂರ್ಣ ಮಾಯವಾಗಿರ್ತದೆ ಅಂತ ಖಾತ್ರಿ ಕೊಡಬೇಕು. ಒಂದು ವೇಳೆ ಅವನೇನಾದರೂ ತಾಳಿ ಕಟ್ಟೋ ಸಮಯಕ್ಕೆ ಸರಿಯಾಗಿ ಅಪಶಕುನದ ಒಂಟಿ ಸೀನನ್ನೇನಾದರೂ ಸೀನಿದರೆ ನೀವು ಈ ಐದು ಲಕ್ಷಕ್ಕೆ ಇನ್ನೂ ಐದು ಲಕ್ಷ ಸೇರಿಸಿ ನನಗೆ ಕೊಡಬೇಕು" ಎಂದರು ಮಹಾಂತಯ್ಯನವರು!
ಅವರು ನೀಡಿದ ಚೆಕ್ಕನ್ನು ಮತ್ತೆ ಅವರೆಡೆಗೆ ತಳ್ಳುತ್ತಾ,
"ಕ್ಷಮಿಸಿ, ನಮ್ಮ ವೈದ್ಯಕೀಯ ನೀತಿ ಸಂಹಿತೆಯ ಪ್ರಕಾರ , ಯಾವುದೇ ಕಾಯಿಲೆಯ ಚಿಕಿತ್ಸೆಗೆ ಖಾತ್ರಿ ಕೊಡುವಂತಿಲ್ಲ" ಎಂದು ಪ್ರಸಂಗಾವಧಾನದಿಂದ ಹೊಳೆದ ನೆಪವೊಂದನ್ನು ಸಮರ್ಥಕವಾಗಿ ಬಳಸಿಕೊಂಡು ಬಚಾವಾದೆ.
ಗಾಢವಾದ ನಿದ್ದೆಯಿಂದ ತಟ್ಟನೆ ಎಚ್ಚರವಾಗಿ, ಇದು ಕೇವಲ ಕನಸು ಎಂಬ ಅರಿವಾಗಿ ಸಮಾಧಾನದ ನಿಟ್ಟುಸಿರುಬಿಟ್ಟೆ.
ನನಗೆ ಬಿದ್ದದ್ದು ಕನಸೆಂಬ ಅರಿವಾದರೂ ಇದು ಆ ದಿನವೆಲ್ಲಾ ನನ್ನ ತಲೆ ತಿನ್ನಲಾರಂಭಿಸಿತು. ಒಂದು ವೇಳೆ ನಿಜಕ್ಕೂ ಯಾವ ರೋಗಿಯಾದರೂ ನನಗೆ ಹೀಗೆ ಸವಾಲೆಸೆದರೆ ಹೇಗೆ ಎಂದು ಯೋಚಿಸಲಾರಂಭಿಸಿದೆ.
ಮೇಲಿನ ಪ್ರಸಂಗದಲ್ಲಿ ಎರಡು ಸತ್ಯಗಳಿವೆ. ವೈದ್ಯಕೀಯ ವಿಜ್ಞಾನ ಅದೆಷ್ಟೇ ಮುಂದುವರೆದಿದ್ದರೂ ಕೇವಲ ನೆಗಡಿಯಂತಹ ಜಾಡ್ಯವನ್ನೂ ಖಾತ್ರಿಯಾಗಿ ಗುಣಪಡಿಸಲಾರದಂಥ ಸ್ಥಿತಿಯಲ್ಲಿರುವುದು. ಎರಡನೆಯದಾಗಿ, ನಾನು ನೆಪವಾಗಿ ನೀಡಿದಂತೆ , ವೈದ್ಯಕೀಯ ನೀತಿಸಂಹಿತೆಯ ಪ್ರಕಾರ, ನೆಗಡಿಯಂತ ಸಾಮಾನ್ಯ ಕಾಯಿಲೆಗೂ ಖಾತ್ರಿ ನೀಡುವುದು ಅನುಚಿತವೆನಿಸುತ್ತದೆ. ಬೇರೆ ಎಲ್ಲಾ ವ್ಯವಹಾರಗಳಲ್ಲಿ ಖಾತ್ರಿ ನೀಡಿ ಬಳಕೆದಾರರ ನಂಬಿಕೆಯನ್ನು ಗಳಿಸಿಕೊಳ್ಳುವ ಪ್ರವೃತ್ತಿಯಿರುವಾಗ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಖಾತ್ರಿ ಏಕೆ ಬೇಡ ? ವೈದ್ಯರು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದೇ ? ಖಂಡಿತಾ ಅಲ್ಲ. ನಾನು ಹೇಳಿದ ಮೊದಲ ಸತ್ಯವೇ ಇದಕ್ಕೆ ಉತ್ತರ. ಅರ್ಥಾತ್, ವೈದ್ಯಕೀಯ ಕ್ಷೇತ್ರ ವೈದ್ಯಕೀಯ ಉಪಚಾರದಲ್ಲಿ ಖಾತ್ರಿ ನೀಡುವಷ್ಟರ ಮಟ್ಟಿನ ಪರಿಪೂರ್ಣತೆ ಗಳಿಸಿಲ್ಲ ಎಂಬುದು.
ಈ ದುಃಸ್ವಪ್ನದ ಪ್ರಭಾವದಿಂದ ಹೊರಬರುವ ಮೊದಲೇ ಇನ್ನೊಂದು ದುಃಸ್ವಪ್ನ ನನಗೆ ಕಾಣಬೇಕೇ ? ಈ ಎರಡನೆಯ ಸ್ವಪ್ನದಲ್ಲಿ ಮತ್ತೆ ನನ್ನ ಪರೀಕ್ಷಾ ಕೊಠಡಿಯಲ್ಲಿ ಕುಳಿತಿದ್ದೇನೆ. ನನ್ನೆದುರು ಒಬ್ಬ ಐ.ಟಿ. ಉದ್ಯೋಗದಲ್ಲಿರುವ ತರುಣನೊಬ್ಬ ಕುಳಿತಿದ್ದಾನೆ. ತನ್ನ ಯಾವುದೋ ಸಮಸ್ಯೆ ನನ್ನ ಮುಂದೆ ಹೇಳಿಕೊಂಡಿದ್ದಾನೆ. ಅವನಿಗೆ ಉತ್ತರ ಕೊಡುವ ಮುನ್ನವೇ, ಅವನೇ ಮುಂದುವರಿದು,
" ಡಾಕ್ಟರ್, ನಿಮ್ಮಿಂದ ಸಲಹೆ ಪಡೆಯುವ ಮೊದಲು ನಿಮ್ಮ ಕಾರ್ಯಕುಶಲತೆಯ ಬಗ್ಗೆ ನನಗೆ ಮನದಟ್ಟಾಗಬೇಕು. ಆದ್ದರಿಂದ ಈ ಪ್ರಶ್ನೆ. ನೀವು ಇದುವರೆಗೂ ಚಿಕಿತ್ಸೆ ನೀಡಿದ ಸಾವಿರಾರು ರೋಗಿಗಳಲ್ಲಿ ನಿಮ್ಮ ಚಿಕಿತ್ಸೆ ಸಂಪೂರ್ಣ ಫಲಕಾರಿಯಾದ , ಭಾಗಶಃ ಫಲಕಾರಿಯಾದಂಥ ಮತ್ತು ನಿಷ್ಫಲವಾದಂಥ ಪ್ರಮಾಣವೆಷ್ಟು ? ಶೇಕಾಡಾವಾರು ಲೆಕ್ಕದಲ್ಲಿ ಹೇಳಬಲ್ಲಿರಾ ?" ಇಷ್ಟಕ್ಕೇ ನನಗೆ ದಿಗ್ಗನೆ ಎಚ್ಚರವಾಗಿ, ಮೈನಲ್ಲಿ ಬೆವರು ಹರಿಯಲಾರಂಭಿಸಿತ್ತು.
ಹಿಂದಿನ ಸಲದಂತೆಯೇ, ಈ ಬಾರಿಯೂ ಇದು ಸ್ವಪ್ನವೆಂದು ತಿಳಿದ ಬಳಿಕವೂ, ಅದೊಂದು ಬಗೆಯ ಅವ್ಯಕ್ತ ಭಯ ನನ್ನನ್ನು ಕಾಡಲಾರಂಭಿಸಿತು. ಒಂದು ವೇಳೆ ನಿಜಕ್ಕೂ ನನ್ನ ಮುಂದಿನ ರೋಗಿಯೊಬ್ಬರು ಇಂತಹುದೊಂದು ಪ್ರಶ್ನೆ ಕೇಳಿದರೆ ಏನು ಮಾಡುವುದು ಎಂದು ಯೋಚಿಸಲಾರಂಭಿಸಿದೆ.
ಮೊದಲನೆಯದಾಗಿ, ನನ್ನ ಮಟ್ಟಿಗೆ, ಅಂತಹ ಪ್ರಶ್ನೆಗೆ ನನ್ನ ಪ್ರಾಮಾಣಿಕ ಉತ್ತರವನ್ನು ಹುಡುಕಿದೆ. ನನ್ನ ಉತ್ತರ ಸರಿಸುಮಾರು ಹೀಗಿರಬಹುದು.
೧. ಸಂಪೂರ್ಣ ಗುಣಮಾಡಿದಂತಹ ಪ್ರಕರಣಗಳು................................................................೨೫%
೨. ಭಾಗಶಃ ಗುಣಮಾಡಿದ ಇಲ್ಲವೇ ಕಾಯಿಲೆಯನ್ನು ಹತೋಟಿಗೆ ತಂದಂತಹ ಪ್ರಕರಣಗಳು...........೫೦%
೩. ಏನೂ ಮಾಡಲಾಗದೆ ಕೈ ಚೆಲ್ಲಿ ಕುಳಿತಂತಹ ಪ್ರಕರಣಗಳು..................................................೨೫%
ರೋಗಿಯ ದೃಷ್ಟಿಯಿಂದ ಮೊದಲನೆಯ ಬಗೆಯ ಪ್ರಕರಣಗಳೇ ಮುಖ್ಯವಾದುವು. ಅದನ್ನೇ ಎಲ್ಲಾ ಕಾಯಿಲೆಯವರು ಬಯಸುವುದು. ಇದು ಕೇವಲ ಇಪ್ಪತ್ತೈದರಷ್ಟಿದ್ದರೂ, ಈ ಕ್ಷೇತ್ರದಲ್ಲಿ ಇದು ಕಳಪೆ ಸಾಧನೆಯೇನೂ ಅಲ್ಲ. ನನಗಿಂತಲೂ ಹೆಚ್ಚಿನ ಮಟ್ಟದಲ್ಲಿ ಖ್ಯಾತಿ ಗಳಿಸಿದ ವೈದ್ಯರ ಅಂಕಿಅಂಶಗಳು ಇದಕ್ಕಿಂತ ಬಹಳ ಭಿನ್ನವಾಗಿರಲಿಕ್ಕಿಲ್ಲವೆಂದು ಹೇಳಬಲ್ಲೆ. ಈ ಬಗೆಯಲ್ಲಿ ಇಪ್ಪತ್ತೈದರಷ್ಟಾದರೂ ಸಾಧ್ಯವಾಗಿರುವುದು ನಮ್ಮನ್ನು ಕಾಡುವ ನೂರಾರು ಬಗೆಯ ಕಾಯಿಲೆಗಳಲ್ಲಿ, ಕೇವಲ ಶೇಕಡಾ ಎರಡು ಅಥವಾ ಮೂರು ಬಗೆಯ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧಿಗಳು ಲಭ್ಯವಿರುವುದರಿಂದ. ಅವುಗಳಲ್ಲಿ ಪ್ರಮುಖವಾದುವು, ರೋಗಾಣುಗಳಿಂದ ಉಂಟಾಗುವ ಕಾಯಿಲೆಗಳು ಮತ್ತು ಪೌಷ್ಠಿಕಾಂಶಗಳ ಕೊರತೆಯಿಂದುಂಟಾಗುವ ಕಾಯಿಲೆಗಳು. ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಲ್ಲಂತಹ ಕಾಯಿಲೆಗಳನ್ನೂ ಈ ಗುಂಪಿನಲ್ಲಿ ಸೇರಿಸಬಹುದು. ಆದರೆ ಅತಿ ಸಾಮಾನ್ಯವಾಗಿ, ಅತಿ ಹೆಚ್ಚು ಸಂಖ್ಯೆಯಲ್ಲಿ ನಮ್ಮನ್ನು ಕಾಡುತ್ತಿರುವ, ನೆಗಡಿಯಂತಹ ಕಾಯಿಲೆಗಳನ್ನು ಮೊದಲು ಮಾಡಿ, ಡಯಾಬಿಟಿಸ್ (ಸಕ್ಕರೆ ಕಾಯಿಲೆ), ಅತಿರಕ್ತದೊತ್ತಡ, ಕ್ಯಾನ್ಸರ್ ಗಳಂತಹ ಕಾಯಿಲೆಗಳಿಗೆ ಕೇವಲ ಉಪಶಮನಕಾರಿ ಚಿಕಿತ್ಸೆಗಳು ಮಾತ್ರ ಲಭ್ಯವಿದೆ.
ಪ್ರತಿದಿನ, ಪತ್ರಿಕೆಗಳಲ್ಲಿ ವೈದ್ಯಕೀಯ ರಂಗದಲ್ಲಿ ಸಾಧಿಸಿದ ಯಾವುದಾದರೂ ಅದ್ಭುತ ಪ್ರಗತಿಯ ಬಗ್ಗೆ ಓದುತ್ತಲೇ ಇರುತ್ತೇವೆ. ಅದಾಗ್ಯೂ, ವಾಸ್ತವದಲ್ಲಿ ಇಷ್ಟು ಅಗಾಧ ಪ್ರಮಾಣದ ಅಪರಿಪೂರ್ಣತೆಯಿರುವುದಾದರೂ ಏಕೆ ? ಮಾನವ ದೇಹವನ್ನು, ಒಂದು ನೆಲೆಯಲ್ಲಿ, ಒಂದು ಯಂತ್ರಕ್ಕೆ ಹೋಲಿಸಬಹುದು (ಇದು ಮಾನವ ದೇಹಕ್ಕೊಂದೇ ಅಲ್ಲ. ಎಲ್ಲ ಜೀವರಾಶಿಗಳಿಗೂ ಅನ್ವಯವಾಗುತ್ತದೆ) ಆದರೆ, ಮಾನವ ಶರೀರದ ರಚನೆ ಮತ್ತು ಕಾರ್ಯವೈಖರಿಯನ್ನು ಅರಿತ ಯಾರಿಗಾದರೂ ಈ ಹೋಲಿಕೆ ಬಾಲಿಶವೆನಿಸಬಹುದು. ಮಾನವ ಶರೀರದ ಕಾರ್ಯವೈಖರಿಯನ್ನು ಒಂದು ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ತಂತ್ರಗಳನ್ನು ಬಳಸಿ ನಿರ್ಮಿಸಿದ ಒಂದು ಕಂಪ್ಯೂಟರ್ ನಿರ್ದೇಶಿತ ರೊಬೋಗೆ ಹೋಲಿಸಿದರೆ ಮಾನವ ಶರೀರದ ಸಾಫ್ಟ್ ವೇರ್ ಮಿದುಳು ಮತ್ತು ಇನ್ನುಳಿದ ಅಂಗಾಂಗಳು ಹಾರ್ಡ್ ವೇರ್ ಗಳ ಕಾರ್ಯ ನಿರ್ವಹಿಸುತ್ತವೆ. ಮಾನವ ಶರೀರ ಮತ್ತು ರೋಬೋಗಳ ಕಾರ್ಯಕ್ಷಮತೆಯನ್ನು ಹೋಲಿಸಿ ನೋಡಿದಾಗ, ಸಾಫ್ಟ್ ವೇರ್ ನ ವಿಭಾಗದಲ್ಲಿ ಮಾನವ ಶರೀರ ಖಂಡಿತವಾಗಿಯೂ ಮೇಲ್ಮಟ್ಟದ್ದು. ಇದನ್ನು ನನ್ನ ಮುಂದಿನ ಲೇಖನದಲ್ಲಿ ಪುಷ್ಟೀಕರಿಸುತ್ತೇನೆ. ಹಾರ್ಡ್ ವೇರ್ ವಿಭಾಗದಲ್ಲಿ ಮೇಲ್ನೋಟಕ್ಕೆ ರೋಬೋದ ಕಾರ್ಯಕ್ಷಮತೆ ಮಿಗಿಲಾದುದೆನಿಸಿದರೂ, ಕೂಲಂಕಷವಾಗಿ ಪರಿಶೀಲಿಸಿದಾಗ, ಇದರಲ್ಲಿಯೂ ಮಾನವ ಶರೀರವೇ ಮಿಗಿಲಾದುದೆಂದು ಕಾಣಬಹುದು. ಎಷ್ಟಾದರೂ ಈ ರೋಬೋದ ಜನಕ ಮಾನವನೇ ಅಲ್ಲವೇ ? ಇದನ್ನೂ ಕೂಡ ನನ್ನ ಮುಂದಿನ ಲೇಖನದಲ್ಲಿ ಪುಷ್ಟೀಕರಿಸುತ್ತೇನೆ.
*********************
Comments
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
In reply to ಉ: ವೈದ್ಯನೊಬ್ಬನ ದುಃಸ್ವಪ್ನಗಳು !! by pramods1729
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
In reply to ಉ: ವೈದ್ಯನೊಬ್ಬನ ದುಃಸ್ವಪ್ನಗಳು !! by ಗಣೇಶ
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
In reply to ಉ: ವೈದ್ಯನೊಬ್ಬನ ದುಃಸ್ವಪ್ನಗಳು !! by ಭಾಗ್ವತ
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!
In reply to ಉ: ವೈದ್ಯನೊಬ್ಬನ ದುಃಸ್ವಪ್ನಗಳು !! by partha1059
ಉ: ವೈದ್ಯನೊಬ್ಬನ ದುಃಸ್ವಪ್ನಗಳು !!