ಮತ್ತೆ ಬೋಂಡಾ ಜಾಮೂನು...

ಮತ್ತೆ ಬೋಂಡಾ ಜಾಮೂನು...

"ನೀನು ಮದ್ವೆ ಮಾಡ್ಕೊಳಲ್ವೇನೆ!?" ತಮ್ಮೆಲ್ಲ ಪ್ರಯತ್ನ ವಿಫಲವಾಗುತ್ತಿರುವ ವ್ಯಥೆಯಲ್ಲಿ ಅಮ್ಮ ಕೇಳುತ್ತಿದ್ದರು. ಮದುವೆಯಷ್ಟು mysterious ಸಂಗತಿ ಮತ್ತೊಂದಿದೆ ಅನ್ನಿಸೋಲ್ಲ ರೀ, ಹೀಗಾಗಿ ನನ್ನ ಬರವಣಿಗೆ ಎಲ್ಲ ಮದುವೆಯ ಸುತ್ತಲೇ ಯಾಕೆ ಸುತ್ತುತ್ತದೆ ಎಂಬ ಜನರ ಕಂಪ್ಲೇಂಟನ್ನು ಕಾಂಪ್ಲಿಮೆಂಟೆಂದುಕೊಂಡು ಮತ್ತೆ ಅದರ ಬಗ್ಗೆಯೇ ಬರೆಯಬೇಕೆನ್ನಿಸಿ ಬರೆಯುತ್ತಿದ್ದೇನೆ. ಮೊನ್ನೆ ಒಂದು ಲಗ್ನ ಪತ್ರಿಕೆಯಲ್ಲಿ "ಮದುವೆಯಿಂದ, ಮದುವೆಗಾಗಿ, ಮದುವೆಗೋಸ್ಕರವೇ ಜೀವನವಲ್ಲವೆ" ಎಂದೊಬ್ಬ ಮಹರಾಯ ಬರೆದುಕೊಂಡಿದ್ದ, ನೋಡಿ ಹೆದರಿಕೆಯಾಗಿ ನಗು ಬಂದಿತು. 'ಮದುವೆ' ಇಷ್ಟು ವರ್ಷಗಳಾದರೂ ತನ್ನ ಚಾರ್ಮ್ ಕಳೆದುಕೊಳ್ಳದೆ ಎಲ್ಲರಿಗೂ ಹೊಸದರಂತೇ ಹೇಗೆ ಕಾಣುತ್ತದೆ ಮತ್ತು ಎಲ್ಲರನ್ನು ಹೇಗೆ ತನ್ನೆಡೆಗೆ ಸೆಳೆಯುತ್ತದೆ ಎಂಬುದರ ಮೇಲೆ ದೊಡ್ಡದೊಂದು research ಮಾಡಿ ಥೀಸೀಸ್ ಬರೆಯಬೇಕು. ಮದುವೆಯಾಗಿ ಹತ್ತು ವರ್ಷಗಳಾಗಿ ಇಬ್ಬರು ಮಕ್ಕಳ ತಾಯಿಯಾಗಿ ೭೦+ ಕೆ.ಜಿ.ಗಳ ಪರ್ವತವಾಗಿ, ಗಂಡನಿಗೆ permanant ಕಿರಿಕಿರಿಯಾಗಿ, ನೋಡಿದ ತಕ್ಷಣ ಇವರ ಜೀವನದಲ್ಲಿ ಹೊಸತು ಇನ್ನೇನಾದರೂ ನಡೆಯಲಿಕ್ಕೆ ಸಾಧ್ಯವೇ ಎಂದೆನಿಸಿಬಿಡುವ ನನ್ನ ಸಂಬಂಧಿಕರೊಬ್ಬರಿದ್ದಾರೆ, ಅಮ್ಮನ ಹತ್ತಿರದ ಫ್ರೆಂಡು ಆಕೆ. ನಮ್ಮಮ್ಮನ ಕಣ್ಣಿಗೆ ಅವರದು ಸಂಪೂರ್ಣ ಜೀವನ, ಹುಟ್ಟಿದ್ದಕ್ಕೆ ಸಾರ್ಥಕತೆ. 'ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದ ಹುಡುಗಿ, ಗಂಡ ಮಕ್ಕಳ ಜೊತೆ ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ದಾಳೆ ನೋಡು' ಎಂದೆನ್ನುತ್ತಿರುತ್ತಾರೆ. ನನಗೂ ಈ ಉಪದೇಶದ ಫಲವಾಗಿ, ತಲೆಯಲ್ಲಿ ಎರೆಡೆರೆಡು ಸೈಟ್ ಗಳಾಗಿರುವ, ಗುಡಾಣ ಹೊಟ್ಟೆಯ (ಸ್ಸಾರಿ ಮತ್ತೊಮ್ಮೆ ಬರೆಯೋಲ್ಲ) ಗುಂಡಣ್ಣಗಳ ಫೋಟೋ ತಂದು ತೋರಿಸಿ ನಾನು ರೇಗುವಂತೆ ಮಾಡುತ್ತಾರೆ. ಗುಂಡಗಿರೋರೆಲ್ಲ ಮನುಷ್ಯರಲ್ಲೇನ್ರೀ? ಅಂತ ನೀವು ಕೇಳಬಹುದು. ಆದರೆ ಕಾಲೇಜು ಯವ್ವನದ ದಿನಗಳಲ್ಲಿ ಗರ್ಲ್ ಫ್ರೆಂಡ್ ಸಿಗದೆ, ಸಿಕ್ಕಿದರೂ ಆಕೆಯನ್ನು ಮದುವೆಯಾಗದೆ, ಜೀವನದಲ್ಲಿ ಜಿಗುಪ್ಸೆ ಬಂದು ಅಮ್ಮನ ಮಾತು ಕೇಳಿಬಿಡೋಣ ಎಂದುಕೊಂಡು ಅರೇಂಜ್ ಮ್ಯಾರೇಜ್ ಗೆ ಅಣಿಯಾಗಿರುವ ಇಂತಹ ಗಂಡುಗಳ ಮೇಲೆ ನನಗೆ ಕರುಣೆ ಉಕ್ಕಿದರೂ, ಇರುವುದು ಒಂದೇ ಜೀವನ, ಹಾಗು ಪುನರ್ಜನ್ಮದಲ್ಲಿ ನನಗೆ ನಂಬಿಕೆಯಿಲ್ಲದ ಕಾರಣ ನನ್ನ ಅಮೂಲ್ಯ ಜೀವನವನ್ನು ಇವರಲ್ಲೊಬ್ಬರ ಜೊತೆ ಎಕ್ಸ್ ಪರಿಮೆಂಟ್ ಗೆ ಒಳಪಡಿಸಲಿಕ್ಕೆ ನನಗೆ ಭಯವಾಗಿದೆ.

 

ನೀನಿರೋ ಚಂದಕ್ಕೆ ಇಂತಹ ಗಂಡುಗಳೇ ಸಿಗುವುದು ಅನ್ನೋ ಬೆದರಿಕೆಗಳು. ಕೂದಲು ಜಾಸ್ತಿ ಉದುರಿದರೆ, ಎರೆಡು ದಿನ ಸತತವಾಗಿ ಕೋಳಿ ಊಟ ಉಂಡರೆ, ಬಿಸಿಲಲ್ಲಿ ತಿರುಗಾಡಿ ಚರ್ಮ ಸ್ವಲ್ಪ ಕಪ್ಪಾದರೆ, ಅನ್ನ ಮಾಡಲಿಕ್ಕೆ ಹೋಗಿ ಕುಕ್ಕರ್ ಸಿಡಿಸಿದರೆ, ಇತ್ಯಾದಿ ಎಲ್ಲವೂ ನನ್ನಮ್ಮನಿಗೆ ನನ್ನ ಮದುವೆಯ ದೊಡ್ಡ ದೊಡ್ಡ ತಡೆಗಳಾಗಿ ಕಾಣುತ್ತವೆ. ಹುಡುಗರಿಗೆ ಈ ಕಷ್ಟವಿರುವುದಿಲ್ಲವೇನೋ? ಪಾಪ ಅವರಿಗೆ ಮದುವೆ ಮಾಡಿಕೊಳ್ಳಲು ಉತ್ಸಾಹವೇ. ಕಾರಣವೇನೇ ಇರಲಿ ಆದರೆ ಮದುವೆ ಆಗುವ ಹುಡುಗನಿಗೆ ಇಂಥವೇ ಬೆದರಿಕೆಗಳಿರುತ್ತವೆ ಅಲ್ವೇ? 'ಇನ್ನೇನು ಮಹರಾಯ ಹಳ್ಳಕ್ಕೆ ಬಿದ್ದಾಯ್ತು!', 'ಕುರಿ ಬಲಿಗೆ ರೆಡಿಯಾಗಿದೆ', 'ಅಮ್ಮಾವ್ರ ಗಂಡ ಆಗ್ತಿ ಇನ್ಮೇಲೆ ಕಂಗ್ರಾಟ್ಸ್!' ಎನ್ನುವ ನಮ್ಮ ಗೆಳೆಯರ ಗುಂಪಿನ ಕಾಲೆಳಿಯುವ ಕಮೆಂಟುಗಳಿಗೆ, 'ನನ್ನ ಮಕ್ಕಳ ಯಾರಾದರೂ ಒಬ್ಬರು, ಒಳ್ಳೇದಾಗ್ತಿದೆ, ರೊಮ್ಯಾಂಟಿಕ್ ಜೀವನಕ್ಕೆ ಕಾಲಿಡ್ತಿದೀಯ ಅಂತ ವಿಷ್ ಮಾಡ್ತೀರ ನೋಡಿ' ಎಂದು ಮದುವೆ ಆಗಲಿದ್ದ ಗೆಳೆಯ ವಿಷಾದಿಸುತ್ತಿದ್ದ.

 

ಅದಿರಲಿ ನಾನು ನನ್ನ ಬಗ್ಗೆ ಯೋಚಿಸಿ ಮದುವೆಯ ಬಗ್ಗೆ ನನ್ನ ನಿಜವಾದ ಅಭಿಪ್ರಾಯವೇನು ಎಂದು ಕೆದಕಿ ಬೆದಕಿ ಕೇಳಿಕೊಳ್ಳುತ್ತಿದ್ದೆ. ಒಂದೂವರೆ ದಿನದಷ್ಟು ಇತರರ ಸಂಭ್ರಮಕ್ಕೆ ಎರೆಡು ಮೂರು ತಿಂಗಳಿನಷ್ಟು ನನ್ನ ಸಮಯ ಹಾಳು ಮಾಡಿಕೊಂಡು, ತೀರದ ಸೀರೆ ಒಡವೆಗಳ ಸೆಲೆಕ್ಷನ್ಗಳ ಜಂಜಡದಲ್ಲಿ ಮುಳುಗಿ. ಈ ಓಲೆಗೆ ಈ ಸೀರೆ ಒಪ್ಪುತ್ತಾ ಎಂದೆಲ್ಲಾ ಸಿಲ್ಲಿ ಪ್ರಶ್ನೆಗಳಿಗೆ ಉತ್ತರಿಸಿಕೊಂಡು. ಅರಿಸಿನ ಮದರಂಗಿ ಡಿಸೈನ್ ಗಳು, ಅವರಿವರ ಮನೆ ಗುಟ್ಟುಗಳು, ಕೆಲಸಕ್ಕೆ ಬಾರದ ಗೆಳತಿಯರ ರೇಗಿಸುವಿಕೆಗಳಿಗೆಲ್ಲಾ ನಾಚುವಂತೆ ನಟಿಸುತ್ತಾ, ಭವಿಷ್ಯದ ಅತ್ತೆಯ ಮನೆಯ ಬಗ್ಗೆ ಹೆದರಿಕೊಳ್ಳುತ್ತಾ, ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪನ ಇದ್ದಬದ್ದ ದುಡ್ಡನ್ನೆಲ್ಲಾ ಖರ್ಚುಮಾಡಿಸಿ ಸಾಲ ಹೆಚ್ಚಿಸುವ ಸಂಭ್ರಮದ ಮದುವೆ ಬಗ್ಗೆ ಇವರಿಗೆಲ್ಲ ಏಕಷ್ಟು ಆತುರ ಅನಿಸುತ್ತದೆ. ಮದುವೆಯ ಬಗ್ಗೆ ಇಂತಹ ಪೂರ್ವಾಗ್ರಹವಿರುವ ನನಗೆ ಗಂಡು ಸಿಗುವ ಮಾತು ಹಾಗಿರಲಿ, ಹೀಗೆಲ್ಲಾ ಅಂದುಕೊಂಡಿರುವೆ ಎಂದು ನಮ್ಮಮ್ಮನಿಗೆ ಸುಳಿವು ಸಿಕ್ಕರೂ ನನಗೆ ನಾಳೆಯಿಂದ ಮನೆಯಲ್ಲಿ ಊಟ ದಕ್ಕುವುದು ದುಸ್ತರವಾಗಿಬಿಡುವುದು. ಗುಟ್ಟು ನಿಮ್ಮಲ್ಲೇ ಇರಲಿ.

 

ಇಷ್ಟೆಲ್ಲಾ ಪ್ರಗತಿಪರ ಯೋಚನೆಗಳಿಗಿಟ್ಟುಕೊಂಡಿರುವ ನಾನು ಮದುವೆ ಆಗದೆ ಉಳಿದರೆ ಮಾಡುವುದೇನು? ಎಂತಲೂ ಯೋಚನೆ ಮಾಡಬೇಕಾಗುತ್ತದೆ. ಆಗ ನನ್ನ ದಪ್ಪನೆ ತಲೆಗೆ ಹೊಳೆಯುವುದು, ಬಹುಶಃ ಇದೇ ಭಯದಿಂದ ಎಲ್ಲರೂ ಮದುವೆಯ ಮೊರೆ ಹೋಗುತ್ತಿರುವುದು ಎಂದು. 'ನನ್ನ ಗಂಡ ಡಾಕ್ಟರ್ರೂ' ಎಂದು ನನ್ನ ಗೆಳತಿ ಹೇಳುವಾಗ ಅವಳ ಕಣ್ಣಲ್ಲಿರುವ ಹೆಮ್ಮೆ ಅವಳೇ ನಿಜವಾಗಿ ಡಾಕ್ಟರಳಾಗಿದ್ದರೆ ಇರುತ್ತಿತ್ತೇ? ಎಂದುಕೊಳ್ಳುತ್ತಿದ್ದೆ. ಹೆಣ್ಣಿಗೊಂದು ಗಂಡು ಸೇರಿ ಹೇಗೋ ಏನೋ ಹೊಂದಿಕೊಂಡು ಬದುಕಿದ್ದರಲ್ಲವೇ ಪ್ರಪಂಚ? ಹಾಗಿದ್ದಿದ್ದಕ್ಕಲ್ಲವೇ ನಾನೂ ಇರುವುದು, ಎಂದೆಲ್ಲಾ ಮೂಲ ಉದ್ದೇಶಕ್ಕಿಣುಕಿದರೂ, ಅದೊಂದಕ್ಕೆ ಮದುವೆ ಎಂಬ ಜಂಬು ಸರ್ಕಸ್ ಮಾಡಲೇ ಬೇಕೆ ಎಂದೂ ಅನಿಸುತ್ತದೆ. ಯೋಚಿಸಿ ಯೋಚಿಸಿ ತಲೆಚಿಟ್ಟು ಹಿಡಿದು ಕಡೆಯಲ್ಲಿ ನನ್ನ ತಲೆಯಲ್ಲಿ ಕೂದಲ ಜೊತೆ ಉಳಿಯುವ ಪ್ರಶ್ನೆಯೊಂದೇ 'ಮದುವೆ ಬೇಕೆ?!' ಎಂದು.

 

ಅಂದಹಾಗೆ ಇಷ್ಟೆಲ್ಲಾ ತಲೆಯಲ್ಲಿ ಮೊಸರು ಕಡೆಯುತ್ತಿದ್ದರೂ ಅಮ್ಮನ ಒತ್ತಾಯಕ್ಕೆ ಮಣಿದಂತೆ ಮಾಡಿ ಈ ವಾರ ಮತ್ತೆ ಗಂಡು ನೋಡಲು ಒಪ್ಪಿದ್ದೇನೆ. ನಮ್ಮ ಮನೆಯಲ್ಲಿ ಈ ಭಾನುವಾರ ಬೋಂಡಾ ಜಾಮೂನು. ಬೋಂಡಾ ಜಾಮೂನು ಸಿಗುತ್ತದೆ ಎಂಬ ಆಸೆ ಅಲ್ಲದೇ ಇನ್ನೊಂದು ಹಾಸ್ಯಲೇಖನಕ್ಕೆ ಸ್ಪೂರ್ತಿ ಸಿಗಬಹುದೆಂಬ ಗಂಭೀರ ಉದ್ದೇಶಗಳಿಂದ ಗಂಡಿನ ಬರುವಿಕೆಗೆ ನನ್ನಮ್ಮನಷ್ಟೇ ನಾನೂ ಕಾತರಳಾಗಿದ್ದೇನೆ..
Rating
No votes yet

Comments