ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ
ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ.
ಭಾಜಾ ಬಜಂತ್ರಿಯೊಡನೆ ಆರಂಭ.
ರಾಜ ಮಹಾರಾಜರ ದಂಡಿನ ಆಗಮನ ಬಣ್ಣಗಳ ಮುಂದೆ ನಿದ್ರಿಸಲು.
ಆಳೆತ್ತರದ ಚಿತ್ರಗಳು ! ನೂರಾರು ಬಣ್ಣಗಳು.
ಕೋನ, ತ್ರಿಕೋನ, ಷಡ್ಜ, ಪಂಚಭುಜ !!
ಭುಜ ಕುಣಿಸಿ, ತುಟಿ ಬಿರುಕಿಸಿ, ಹುಬ್ಬೇರಿಸಿ ನೋಡಿದವರೆಷ್ಟೋ !
ಸೂರ್ಯನನು ಹಸಿರಾಗಿ, ಕಾಡನ್ನು ಕೆಂಪಾಗಿ
ಅಡ್ಡಡ್ಡ ಉದ್ದುದ್ದ ಗೀಟುಗಳ ನಡುವೆ ಬಳಿದು,
ಆಧುನಿಕವೆಂದಿಹರು ಕಲೆಯನ್ನು !
ಆಧುನಿಕ ಆಕೃತಿಗಳು, ಆಧುನಿಕ ಜನತೆ
ಆಧುನಿಕ ತುಂಡು ಬಟ್ಟೆಗಳಲಿ
ಆಧುನಿಕ ಭಂಗಿಗಳಲಿ ವೀಕ್ಷಿಸಿದರು !
ಬಣ್ಣಗಳ, ರೇಖೆಗಳ ಅರ್ಥೈಸಲಾರದೇ ತಿಣುಕುವವರಿಗೆ
ಕೆಂಪಾದ ನೆಲಹಾಸು, ತಂಪಾದ ತಿಳಿಗಾಳಿ,
ಒಂದಷ್ಟು ನ್ಯಾಯಕ್ಕೆ, ಧರ್ಮಕ್ಕೆ, ಪ್ರವೇಶಧನ ಪಡೆದ ತಪ್ಪಿಗೆ!!
ನಾಲ್ಕು ವಸಂತಗಳ ಕಂಡ ಪುಟ್ಟ ಮಗುವೊಂದು
ಎಲ್ಲ ಚಿತ್ರಗಳ ಮುಂದಿಂದಲೇ ಹೆಜ್ಜೆಯನಿಟ್ಟು ಸಾಗಿ
ತಲುಪಿತು ಮೂಲೆಯಲಿದ್ದ ಕೆಲಸದವನ ಬಳಿ!
ಇದ್ದಲಿನ ತುಂಡೊಂದ ಹಿಡಿದು
ಅವ ಗೀಚಿದ ಮಗುವಿನ ಚಿತ್ರವನು ಇಣುಕಿ ನೋಡಿತು.
ಬಣ್ಣವಿದೆ ಬರೀ ಕಪ್ಪು, ಮಧ್ಯ ಸ್ವಲ್ಪ ಬಿಳಿ
ಹುಬ್ಬಲ್ಲಿ ಕೂದಲ ಎಳೆಗಳು, ದೊಡ್ಡ ಕಣ್ಣುಗಳು,
ಕಣ್ರೆಪ್ಪೆ ಬಲು ಉದ್ದ, ತುಟಿಯಲಿ ಕಿರುನಗೆಯು
ಬೋಡುತಲೆ, ಚಿಕ್ಕ ಕಿವಿ, ಕಿವಿಯ ಪುಟ್ಟ ಹೊಳೆವ ಓಲೆ
ಬೊಚ್ಚು ಬಾಯಿ, ತುಟಿಯಂಚಿನ ಜೊಲ್ಲು
ದುಂಡಾದ ಕೆನ್ನೆಗಳು, ಕಪ್ಪು ಬಿಳುಪಲ್ಲೆ ತೋರಿದ ಕೆಂಪು
ಚಪ್ಪಾಳೆ ತಟ್ಟಿತು ಮಗು, ಅಪ್ಪನಾ ಕರೆಯಿತು
"ಅಪ್ಪ ನೋಡಿಲ್ಲಿ, ಪುಟ್ಟ ಪಾಪವಿದೆ ಇಲ್ಲಿ,
ಡುಮ್ಮಗಿದೆ ನನಗಿಂತ, ನಮ್ಮ ನೋಡಿ ನಗುತಿದೆ,
ಹಲ್ಲಿಲ್ಲ ಪಾಪಗೆ, ಎಂಜಲಿದೆ ಬಾಯಲ್ಲಿ,
ಮುದ್ದು ಪಾಪ ಇದು, ನನಗೆ ಬೇಕಿಲ್ಲಿ"
ಕೆಲಸದವ ಕೊಟ್ಟ ಮಗುವನ್ನು ಮಗುವಿಗೆ !
ಹೂಮುತ್ತು ದೊರಕಿತು ಕಲಾಕಾರನಿಗೆ!
ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ..
ಗೆದ್ದಿತ್ತು ಎರಡು ಸಾವಿರ ಜೊತೆ ಕಣ್ಣೋಟದ ಸಂಖ್ಯೆಯೊಂದಿಗೆ,
ಮನ ಖಾಲಿ, ತಲೆ ಖಾಲಿ,
ಕೊಂಡುಹೋದರು ಬಣ್ಣಗಳ ಭಾರೀ ಬೆಲೆಯ ತೇಗದ ಕಟ್ಟಿನ ಚೌಕಟ್ಟಿನೊಂದಿಗೆ.
ಚಿತ್ರಪ್ರದರ್ಶನ ಗೆದ್ದಿತ್ತು ಕಲಾಕಾರನ ನಿಟ್ಟುಸಿರೊಂದಿಗೆ
ತುಂಬಿದ ಜೇಬಿನೊಂದಿಗೆ !
ರಾಜಧಾನಿಯಲ್ಲಿ "ಒಂದೇ" ದಪ್ಪ ಕಾಗದದ ಇದ್ದಲಿನ ಚಿತ್ರ "ಪ್ರದರ್ಶನ"
ಗೆದ್ದಿತ್ತು??!!
ಕೆಲಸದವನ ಕಣ್ಣಲ್ಲಿ ಕಂಡ ಜಯಭೇರಿಯೊಂದಿಗೆ,
ಮನವನುಭವಿಸಿದ ಸಂತೃಪ್ತಿಯೊಂದಿಗೆ, ಹಣದ ಹಂಗಿಲ್ಲದ ಉಡುಗೊರೆಯೊಂದಿಗೆ!!
ಮಗುವಿನ ಮನವರಳಿಸಿದ ಸಾರ್ಥಕ್ಯದೊಂದಿಗೆ !
ಹೂಮುತ್ತ ಸವಿಯುಂಡ ನೆನಪಿನೊಂದಿಗೆ!