A5 - ನನ್ನ (ದುರಂತ) ಕಥೆ - ಭಾಗ ೨
ರಾತ್ರಿ ಸುಮಾರು ಹೊತ್ತು ಕುಬೇರನ ಬಗ್ಗೆಯೇ ಯೋಚನೆ ಮಾಡುತ್ತಾ ಹಾಗೆ ಮಲಗಿದ ಧೀರಜ್. ಬೆಳಿಗ್ಗೆ ಅಲಾರಂ ಸದ್ದಿಗೆ ಎಚ್ಚರವಾಗಿ ಎಂದಿನಂತೆ ತನ್ನ ಕಚೇರಿಗೆ ಹೋದ. ಅಲ್ಲಿ ಹೆಚ್ಚೇನೂ ಕೆಲಸವಿಲ್ಲದ್ದರಿಂದ ಹಾಗೆಯೇ ಕುಬೇರನ ಬಗ್ಗೆ ಯೋಚಿಸುತ್ತಾ ಕುಳಿತಿದ್ದ. ತಾನು ಕಳೆದ ಬಾರಿ ರಾಮಾಪುರ ಅರಣ್ಯಕ್ಕೆ ಚಾರಣಕ್ಕೆಂದು ಹೊರಟಾಗ ಅಲ್ಲಿ ಯಾರನ್ನು ಗೈಡ್ ಆಗಿ ಕರೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿರುವಾಗ ಸಿಕ್ಕವನೇ ಕುಬೇರ. ಚಿಕ್ಕಂದಿನಿಂದ ಕುಬೇರನಿಗೆ ಬಹಳ ಪರಿಚಯವಿದ್ದ ಜಾಗಗಳೆಂದರೆ ಆ ಅರಣ್ಯ ಹಾಗೆ ಸುತ್ತಮುತ್ತಲಿದ್ದ ಬೆಟ್ಟ ಗುಡ್ಡಗಳು. ವಾರಾಂತ್ಯಗಳಲ್ಲಿ ಅಲ್ಲಿ ಚಾರಣಕ್ಕೆಂದು ಬರುವ ಪ್ರವಾಸಿಗರ ಸಂಖ್ಯೆ ಸ್ವಲ್ಪ ಹೆಚ್ಚು. ಅಂಥಹ ಸಂದರ್ಭದಲ್ಲಿ ಕುಬೇರ ಗೈಡ್ ಆಗಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ. ಅಲ್ಲಿನ ಅರಣ್ಯ ಹಾಗೂ ಬೆಟ್ಟಗಳ ಇಂಚಿಂಚನ್ನೂ ತಿಳಿದುಕೊಂಡಿದ್ದ. ಆ ಅರಣ್ಯದಲ್ಲಿ ಹೆಚ್ಚಾಗಿ ಕಾಡುಪ್ರಾಣಿಗಳು ಇರದಿದ್ದರೂ ಅವಾಗವಾಗ ಕರಡಿ, ಕಾಡೆಮ್ಮೆಗಳು, ಜಿಂಕೆಗಳು ಕಾಣಸಿಗುತ್ತಿದ್ದವು. ವಾರಾಂತ್ಯದಲ್ಲಿ ಬರುತ್ತಿದ್ದ ಪ್ರವಾಸಿಗರನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಅರಣ್ಯದೊಳಗೆ ಕರೆದುಕೊಂಡು ಹೋಗಿ ಒಂದು ಸುತ್ತು ಹಾಕಿಸ್ಕೊಂಡು ವಾಪಸ್ ಕರೆದುಕೊಂಡು ಬಂದು ಅವರು ಎಷ್ಟು ಕೊಡುವರೋ ಅಷ್ಟನ್ನು ತೆಗೆದುಕೊಂಡು ತನಗೆ ಶಾಲೆಗೇ ಬೇಕಾದ ಪುಸ್ತಕಗಳಿಗೆ ಬಳಸಿಕೊಳ್ಳುತ್ತಿದ್ದ.
ಹಾಗೆಯೇ ಕಳೆದ ಬಾರಿ ಧೀರಜ್ ಅಲ್ಲಿಗೆ ಚಾರಣಕ್ಕೆಂದು ಬಂದಾಗ ಇವರ ತಂಡಕ್ಕೆ ಗೈಡ್ ಆಗಿ ಹೋಗಿ ಅವರ ಮೆಚ್ಚುಗೆಗೆ ಪ್ರಶಂಸೆಗೆ ಪಾತ್ರನಾಗಿದ್ದ ಕುಬೇರ. ಚಾರಣ ಮುಗಿಸಿಕೊಂಡು ಕೆಳಗೆ ಬಂದು ಎಲ್ಲರನ್ನೂ ತನ್ನ ಮನೆಯ ಬಳಿ ಕರೆದುಕೊಂಡು ಹೋಗಿ ಎಲ್ಲರಿಗೂ ಕುಡಿಯಲು ನೀರು ಕೊಟ್ಟು ಉಪಚಾರ ಮಾಡಿದ್ದ ಕುಬೇರ. ಕುಬೇರನ ಸರಳತನ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೇ ರೀತಿ ಅವನ ಬಡತನ ಕಂಡು ಮರುಗಿದ್ದ ಧೀರಜ್ ನ ತಂಡ ಎಲ್ಲರೂ ತಲಾ ಇಷ್ಟಿಷ್ಟು ಅಂತ ಹಾಕಿ ಅವನು ಅಷ್ಟೊಂದು ಹಣ ಬೇಡವೆಂದರೂ ಅವನ ಕೈಯಲ್ಲಿ ತುರುಕಿದರು. ಅಷ್ಟರಲ್ಲಿ ಧೀರಜ್ ನ ಟೇಬಲ್ ಮೇ ಅವನ ಸಹಾಯಕ ಕಾಫಿಯ ಕಪ್ಪನ್ನು ಇಟ್ಟದ್ದನ್ನು ಗಮನಿಸಿ ವಾಸ್ತವಕ್ಕೆ ಬಂದ ಧೀರಜ್.
ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಸ್ವಲ್ಪ ಹೊತ್ತು ವಿರಮಿಸಿ ನಂತರ ಮತ್ತೆ ಕುಬೇರನ ಡೈರಿಯನ್ನು ಕೈಗೆತ್ತಿಕೊಂಡ.
ನಾನು ಅಲ್ಲೇ ಸರಕಾರೀ ಕಾಲೇಜಿಗೆ ಸೇರಿಕೊಂಡೆ. ಇತ್ತ ಮನೆಯಲ್ಲಿ ಅಕ್ಕನಿಗೆ ಮದುವೆ ಯತ್ನಗಳು ನಡೆಯುತ್ತಿತ್ತು. ಸ್ವಲ್ಪ ದಿನದ ಹುಡುಕಾಟದ ನಂತರ ಅಲ್ಲೇ ಪಕ್ಕದ ಹಳ್ಳಿಯ ಹುಡುಗನ ಜೊತೆ ಮದುವೆ ನಿಶ್ಚಯವಾಯಿತು. ಆದರೆ ಮದುವೆ ಖರ್ಚಿಗೆ ಹಣ ಬೇಕಲ್ಲ ಏನು ಮಾಡುವುದು ನಮ್ಮಪ್ಪ ಹೆಸರಿಗೆ ಲಕ್ಷ್ಮಿಪತಿ ಆದರೂ ಕೈಯಲ್ಲಿ ಹಣವಿಲ್ಲ. ಒಳ್ಳೆಯ ಸಂಬಂಧ ಬೇರೆ ನಾವು ಅಷ್ಟು ಬಡವರಾದರೂ ಹುಡುಗ ನಮ್ಮ ಅಕ್ಕನನ್ನು ಇಷ್ಟಪಟ್ಟಿದ್ದ. ಅಕ್ಕನಿಗೂ ತುಂಬಾ ಇಷ್ಟವಿತ್ತು. ಸರಿ ಇನ್ನೇನು ಮಾಡುವುದು ಎಂದು ನಮ್ಮೂರ ಗೌಡ ಕಾಳೇಗೌಡನ ಬಳಿ ಐವತ್ತು ಸಾವಿರ ಸಾಲ ಮಾಡಿ ಸರಳವಾಗಿ ಅಕ್ಕನ ಮದುವೆ ಮಾಡಿ ಕಳುಹಿಸಿಕೊಟ್ಟೆವು. ಮದುವೆ ಆದ ಮೇಲೆ ನನ್ನಕ್ಕ ಸಂಪೂರ್ಣ ಬದಲಾಗಿಬಿಟ್ಟಳು. ಇಲ್ಲಿ ಬಡತನದಿಂದ ಬೇಸತ್ತಿದ್ದ ಅವಳು ಅಲ್ಲಿ ಸುಖ ಕಂಡ ತಕ್ಷಣ ನಮ್ಮನ್ನು ಮರೆತೇ ಬಿಟ್ಟಳು. ಒಮ್ಮೆ ಅವಳನ್ನು ನೋಡಲು ಹೋದ ನನ್ನನ್ನು ಅವಳು ನಡೆಸಿಕೊಂಡ ರೀತಿಯಿಂದ ಇನ್ನೆಂದು ಅವಳ ಕಡೆ ತಿರುಗಿ ನೋಡಬಾರದೆಂದು ನಿರ್ಧರಿಸಿಬಿಟ್ಟೆ.
ಇತ್ತ ಅಪ್ಪ ಸಹ ಅದೇ ಬೇಜಾರಿನಲ್ಲಿ ಹೊಲದ ಕಡೆ ಸರಿಯಾಗಿ ಗಮನ ಕೊಡದೆ ಆ ಬಾರಿಯ ಬೆಳೆ ಅಷ್ಟೇನೂ ಕೈಗೆ ಹತ್ತಲಿಲ್ಲ. ಕಾಳೇಗೌಡನ ಹತ್ತಿರ ಮಾಡಿದ್ದ ಸಾಲದ ಬಡ್ಡಿ ದಿನೇ ದಿನೇ ಹೆಚ್ಚುತ್ತಿತ್ತು. ಆಗಲೇ ಎರಡು ಮೂರು ಬಾರಿ ಮನೆಯ ಹತ್ತಿರ ಬಂದು ಎಚ್ಚರಿಸಿ ಹೋಗಿದ್ದ. ಇಂಥಹ ಸಮಯದಲ್ಲಿ ನನಗೇನು ಮಾಡಲು ದಿಕ್ಕೇ ತೋಚದೆ ಕಾಲೇಜ್ ಬಿಟ್ಟು ಕೆಲಸ ಸೇರಲು ನಿರ್ಧರಿಸಿದೆ. ಆದರೆ ಆ ವಯಸ್ಸಿನಲ್ಲಿ ಕೆಲಸ ಯಾರು ಕೊಡುತ್ತಾರೆ. ಸರಿ ಅಪ್ಪನ ಜೊತೆ ನಾನೂ ಹೊಲಕ್ಕೆ ಹೋಗಲು ನಿರ್ಧರಿಸಿದೆ. ಅಂದಿನಿಂದ ಪ್ರತಿದಿನ ಹೊಲವೇ ನನ್ನ ಮನೆಯಾಗಿ ಹೋಗಿತ್ತು. ಪಕ್ಕದ ಶುಗರ್ ಫ್ಯಾಕ್ಟರಿ ಇಂದ ಬರುತ್ತಿದ್ದ ಕಲ್ಮಶವೆಲ್ಲ ನದಿ ನೀರಿಗೆ ಸೇರಿ ನದಿ ನೀರು ಕಲುಶಿತವಾಗಿತ್ತು. ಆ ನದಿಯ ನೀರೆ ನಮ್ಮ ಹೊಲಗಳಿಗೆಲ್ಲ ಆಧಾರವಾಗಿದ್ದಿದ್ದು. ಆ ನದಿ ನೀರಿನಿಂದ ಬೆಳೆದ ಪೈರೆಲ್ಲ ನಾಶವಾಗಿ ಹೋಗುತ್ತಿತ್ತು. ಹಾಗಾಗಿ ದಿನೇ ದಿನೇ ಸಾಲದ ಹೊರೆ ಜಾಸ್ತಿಯಾಗಿತ್ತು.
ಇತ್ತ ಕಡೆ ರೈತರೆಲ್ಲ ಸೇರಿ ಆ ಶುಗರ್ ಫ್ಯಾಕ್ಟರಿ ಮುಚ್ಚಿಸಬೇಕು ಇಲ್ಲದಿದ್ದರೆ ನಮ್ಮ ಬದುಕು ಬೀದಿಗೆ ಬರುತ್ತದೆ ಎಂದು ಎಷ್ಟೋ ಬಾರಿ ಆ ಫ್ಯಾಕ್ಟರಿಯ ಮುಂದೆ ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ ಫ್ಯಾಕ್ಟರಿ ಪಾಲುದಾರಿಕೆಯಲ್ಲಿ ಮಂತ್ರಿ ಒಬ್ಬನ ಪಾಲು ಸಹ ಇತ್ತು. ಹೀಗಾಗಿ ರೈತರು ಎಷ್ಟೇ ಧರಣಿ, ಸತ್ಯಾಗ್ರಹಗಳು ಮಾಡಿದರೂ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತಿತ್ತು. ನನಗೂ ಕೆಲವೊಮ್ಮೆ ಇದೆಲ್ಲ ನೋಡಿ ಕೋಪ ಬರುತ್ತಿದ್ದರೂ ಏನೂ ಮಾಡಲಾಗದೆ ನಿಸ್ಸಹಾಯಕನಾಗಿ ಉಳಿದುಬಿಡುತ್ತಿದ್ದೆ.
ಸತತವಾಗಿ ಎರಡು ವರ್ಷ ಹೊಲದಲ್ಲಿ ದುಡಿದು ಬಂದ ಅಲ್ಪ ಸ್ವಲ್ಪ ಬೆಳೆಯಲ್ಲಿ ಮನೆಗೂ ಕೊಟ್ಟು ಕಾಳೇಗೌಡನಿಗೂ ಕೊಟ್ಟರೂ ಬಡ್ಡಿ ಅಸಲು ಎಲ್ಲ ಸೇರಿ ಇನ್ನ ಅರ್ಧದಷ್ಟು ಸಾಲ ಮಾತ್ರ ತೀರಿತ್ತು. ಆ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದೆವು. ಈ ಬಾರಿ ಬರುವ ಬೆಳೆಯಲ್ಲಿ ಕಾಳೇಗೌಡನ ಸಾಲ ಸಂಪೂರ್ಣವಾಗಿ ತೀರಿಸಿ ನೆಮ್ಮದಿ ಇಂದ ಇರಬಹುದು ಎಂದು ಏನೇನೋ ಕನಸು ಕಂಡಿದ್ದೆ. ಆದರೆ ಈ ಬಾರಿ ನಮಗೆ ಕ್ರಿಮಿಗಳಿಂದ ತೊಂದರೆ ಶುರುವಾಯಿತು.
ನಮ್ಮ ಹೊಲದ ಬೆಳೆಗಳಿಗೆ ಕ್ರಿಮಿಗಳ ಕಾಟ ಶುರುವಾಯಿತು. ಅಪ್ಪ ಮಾರುಕಟ್ಟೆಯಿಂದ ಕ್ರಿಮಿನಾಶಕ ಔಷಧ ತಂದ, ನಾನು ಅಪ್ಪ ಇಬ್ಬರೂ ಸೇರಿ ಹೊಲಕ್ಕೆಲ್ಲ ಸಿಂಪಡಿಸಿದೆವು . ಆದರೆ ಏನು ಪ್ರಯೋಜನವಾಗಲಿಲ್ಲ. ಆ ಕ್ರಿಮಿನಾಶಕ ನಕಲಿ ಆಗಿತ್ತು. ಅಪ್ಪ ಅಂಗಡಿಯವನ ಬಳಿ ಹೋಗಿ ಜಗಳವಾಡಿದ ಆದರೆ ಏನೂ ಪ್ರಯೋಜನವಾಗಲಿಲ್ಲ. ಅಂಗಡಿಯವನು "ಅಲ್ರೀಸ್ವಾಮಿ ನಾವೇನು ರುಚಿ ನೋಡಿ ಕೊಡಕ್ಕೆ ಆಗತ್ತಾ, ಸರ್ಕಾರದಿಂದ ಏನು ಬಂದಿರತ್ತೋ ಅದನ್ನೇ ಕೊಡೋದು" ಎಂದ. ಅಂಗಡಿಯವನ ಉತ್ತರದಿಂದ ಬೇಸತ್ತು ಮನೆಗೆ ಬಂದು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ಅಪ್ಪ ಪ್ರತಿದಿನ ಊಟದ ನಂತರ ಸ್ವಲ್ಪ ಹೊತ್ತು ಮಲಗುವ ಅಭ್ಯಾಸ ಮಾಡಿಕೊಂಡಿದ್ದ. ಆದರೆ ಅಂದು ಊಟವಾದ ಕೂಡಲೇ ನೀನು ಮನೆಯಲ್ಲಿರು ನಾನು ಸ್ವಲ್ಪ ಹೊಲದ ಕಡೆ ಹೋಗಿ ಬರುತ್ತೇನೆ ಎಂದು ಹೊರಟ. ನನಗೆ ಏಕೆಂದು ಅರ್ಥವಾಗಲಿಲ್ಲ. ಆದರೂ ಏನೂ ಕೇಳಲಿಲ್ಲ. ಅಪ್ಪ ಹೊಲಕ್ಕೆ ಹೋಗಿ ೨-೩ ಗಂಟೆಗಳಾಗುತ್ತಿತ್ತು ಇನ್ನೂ ಸುಳಿವಿರಲಿಲ್ಲ. ನನಗೇಕೋ ಸಣ್ಣ ಅನುಮಾನ ಶುರುವಾಯಿತು. ಅಮ್ಮನಿಗೆ ಹೊಲದ ಕಡೆ ಹೋಗಿ ಬರುವೆ ಎಂದು ಹೊಲದ ಬಳಿ ಬಂದಾಗ ಅಲ್ಲಿ ಹೊಲದ ಬದುವಿನಲ್ಲಿ ಅಪ್ಪ ಮಲಗಿರುವುದು ಕಂಡಿತು. ಇದೇಕೆ ಇಲ್ಲಿ ಮಲಗಿದ್ದಾನೆ ಎಂದು ಹತ್ತಿರ ಬಂದೆ ಪಕ್ಕದಲ್ಲಿ ಕ್ರಿಮಿನಾಶಕ ಔಷಧಿಯ ಖಾಲಿ ಡಬ್ಬ ಕಂಡು ಬಂತು. ಅಪ್ಪನ ಬಾಯಿಂದ ನೊರೆ ಹಾಗೂ ಮುಖ ಕಪ್ಪಿಟ್ಟಿರುವುದು ಕಂಡು ಅಪ್ಪ ಸತ್ತು ಬಹಳ ಹೊತ್ತಾಗಿದೆ ಎಂದು ಗೊತ್ತಾಯಿತು. "ಕ್ರಿಮಿಗಳ ಮೇಲೆ ಕೆಲಸ ಮಾಡದ ಕ್ರಿಮಿನಾಶಕ ನಮ್ಮಪ್ಪನ ಮೇಲೆ ಕೆಲಸ ಮಾಡಿತ್ತು". ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿ ಮುಂದಿನ ಕಾರ್ಯಗಳ ಸಿದ್ಧತೆ ನಡೆಸಿದ್ದೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಕಾಳೇಗೌಡ ನಾಳೆಯಿಂದ ನೀನು ಹೊಲದ ಕಡೆ ಹೋಗುವ ಹಾಗಿಲ್ಲ ಎಂದ. ನನಗೆ ಏಕೆಂದು ಗೊತ್ತಾಗಲಿಲ್ಲ. ಕಾಳೇಗೌಡ ತನ್ನ ಕೈಯಲ್ಲಿದ್ದ ಪತ್ರವನ್ನು ತೋರಿಸಿ ನಿಮ್ಮಪ್ಪ ಈ ಹೊಲವನ್ನು ನನ್ನ ಹೆಸರಿಗೆ ಬರೆದು ಕೊಟ್ಟಿದ್ದಾನೆ ಎಂದು ಪತ್ರವನ್ನು ತೋರಿಸಿದ. ಹಿಂದುಗಡೆ ಯಾರೋ ಹೇಳುತ್ತಿದ್ದರು. ಇನ್ನು ಎಷ್ಟು ಜನದ ಹತ್ತಿರ ಹೀಗೆ ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡು ಮೋಸ ಮಾಡುತ್ತಾನೋ ಎಂದು. ನನಗೆ ಏನೊಂದು ದಿಕ್ಕೇ ತೋಚಲಿಲ್ಲ. ಕಾಳೆಗೌಡನಿಗೆ ಹಾಗೆ ಆಗಲಿ ಎಂದು ಹೇಳಿ
ಎಲ್ಲರ ಮೇಲೂ ಕೋಪ ಉಕ್ಕಿ ಹರಿಯುತ್ತಿತ್ತು. ನದಿ ನೀರು ನಾಶ ಮಾಡಿದ ಶುಗರ್ ಫ್ಯಾಕ್ಟರಿ ಯ ಮೇಲೆ, ಶುಗರ್ ಫ್ಯಾಕ್ಟರಿ ಶುರು ಮಾಡಲು ಅನುಮತಿ ನೀಡಿದ ಮಂತ್ರಿಯ ಮೇಲೆ, ಕಳಪೆ ಕ್ರಿಮಿನಾಶಕ ಕೊಟ್ಟ ಅಂಗಡಿಯವನ ಮೇಲೆ, ಸರ್ಕಾರದ ಮೇಲೆ, ಮೋಸದಿಂದ ಹೊಲವನ್ನು ಕಬಳಿಸಿದ ಗೌಡನ ಮೇಲೆ ಎಲ್ಲರ ಮೇಲೂ ಕೋಪ ಆವರಿಸಿತ್ತು. ಏನು ಮಾಡುವುದು ಎಂದು ಆಲೋಚಿಸುತ್ತಿರುವಾಗ ತಟ್ಟನೆ ಏನೋ ಒಂದು ಹೊಳೆಯಿತು. ಸೀದಾ ಎದ್ದು ಹೊರಟೆ ಅರಣ್ಯಕ್ಕೆ. ಅಲ್ಲಿ ಹೋಗಿ ನಕ್ಸಲರ ಗುಂಪಿಗೆ ಸೇರಿಕೊಂಡೆ.
ಅಷ್ಟರಲ್ಲಿ ಮೇಲಿಂದ ಧೀರಜ್ ಮೇಲೆ ಜಿರಳೆ ಬಿದ್ದು ತನ್ಮತೆಯಿಂದ ಓದುತ್ತಿದ್ದವ ಎಚ್ಚೆತ್ತುಗೊಂಡು ಪುಸ್ತಕವನ್ನು ಮಡಚಿ ಮಲಗಿಕೊಂಡ.
ಮುಂದುವರಿಯುವುದು....
Comments
ಉ: A5 - ನನ್ನ (ದುರಂತ) ಕಥೆ - ಭಾಗ ೨
ಉ: A5 - ನನ್ನ (ದುರಂತ) ಕಥೆ - ಭಾಗ ೨
ಉ: A5 - ನನ್ನ (ದುರಂತ) ಕಥೆ - ಭಾಗ ೨
In reply to ಉ: A5 - ನನ್ನ (ದುರಂತ) ಕಥೆ - ಭಾಗ ೨ by Chikku123
ಉ: A5 - ನನ್ನ (ದುರಂತ) ಕಥೆ - ಭಾಗ ೨
In reply to ಉ: A5 - ನನ್ನ (ದುರಂತ) ಕಥೆ - ಭಾಗ ೨ by kamath_kumble
ಉ: A5 - ನನ್ನ (ದುರಂತ) ಕಥೆ - ಭಾಗ ೨
ಉ: A5 - ನನ್ನ (ದುರಂತ) ಕಥೆ - ಭಾಗ ೨
In reply to ಉ: A5 - ನನ್ನ (ದುರಂತ) ಕಥೆ - ಭಾಗ ೨ by pramods1729
ಉ: A5 - ನನ್ನ (ದುರಂತ) ಕಥೆ - ಭಾಗ ೨
In reply to ಉ: A5 - ನನ್ನ (ದುರಂತ) ಕಥೆ - ಭಾಗ ೨ by Jayanth Ramachar
ಉ: A5 - ನನ್ನ (ದುರಂತ) ಕಥೆ - ಭಾಗ ೨
In reply to ಉ: A5 - ನನ್ನ (ದುರಂತ) ಕಥೆ - ಭಾಗ ೨ by pramods1729
ಉ: A5 - ನನ್ನ (ದುರಂತ) ಕಥೆ - ಭಾಗ ೨