ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

 ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ.

ಜನಸಾಮಾನ್ಯರಾದ ನಾವು ಬದುಕುತ್ತಿರುವ ಹಲವಾರು ರೀತಿಗಳಲ್ಲಿ ಇಂತಹ ಆಣೆ ಪ್ರಮಾಣದ ಸಂಗತಿ ಮಾಮೂಲಿಯಾದುದು. ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಅಪನಂಬಿಕೆ ಉಂಟಾದರೆ, ಅಥವಾ ಬಗೆಹರಿಸಲಾಗದ ವ್ಯಾಜ್ಯ ಉಂಟಾಗಲು ಪ್ರಾರಂಭಿಸಿದರೆ ಕೊನೆಯದಾಗಿ ನಮ್ಮ ನಡಿಗೆ ದೇವರ ಕಡೆಗೆ ಎಂಬಂತೆ ಆಣೆಯ ಮೇಲೆ ಅವಲಂಬಿತರಾಗುತ್ತಾರೆ. ಇಷ್ಟೆ ಅಲ್ಲ ಪ್ರೇಮಿಗಳು ತಮ್ಮ ತಮ್ಮಲ್ಲೆ ನಂಬಿಕೆ ಬೆಳಸಲು ನನ್ನ ಆಣೆ, (ಐ ಸ್ವೇರ್) ಅಪ್ಪನ ಆಣೆ, ದೇವರ ಆಣೆ (ಸ್ವೇರ್ ಆನ ಗಾಡ್), ಹಾಗೂ ಪೋಷಕರುಗಳು ಪ್ರೇಮ ವಿವಾಹಗಳನ್ನು ವಿರೋಧಿಸುವಾಗಲೂ ನೀನು ಅವರನ್ನು ವಿವಾಹವಾದರೆ ನನ್ನ ಮೇಲೆ ಆಣೆ ಹಾಗೂ ಇನ್ನೂ ಹಲವಾರು ಸಂದರ್ಭಗಳಲ್ಲಿ ಇಂತಹ ಹೇಳಿಕೆಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಕೇಳುತ್ತಲೇ ಇರುತ್ತೇವೆ. ಹೀಗೆ ಆಣೆ ಮಾಡುವಾಗಲೂ ಸತ್ಯವನ್ನೇ ಹೇಳುತ್ತಾರೆ ಎಂಬ ನಂಬಿಕೆ ಏನೂ ಇಲ್ಲ, ಅದರಲ್ಲೂ ಸುಳ್ಳು ಹೇಳುವವರನ್ನೂ ನಾನು ನೋಡಿದ್ದೇನೆ. ಅದೇನೇ ಇರಲಿ ಜನರು ಬದುಕುವ ರೀತಿಯಲ್ಲಿ ಇದೊಂದು ಸಂಗತಿ ಸ್ವಾಭವಿಕವಾಗಿ ಹಾಸುಹೊಕ್ಕಾಗಿದೆ.

ವಿಚಿತ್ರವೆಂದರೆ, ಇಂತಹ ಆಣೆ ಪ್ರಮಾಣಗಳನ್ನು ಜನ ಸಾಮಾನ್ಯರು ಮಾಡಿದರೆ ತಪ್ಪಿಲ್ಲ, ಆದರೆ ರಾಜಕಾರಣಿಗಳು ಮಾಡಿದರೆ ಮಾತ್ರ ತಪ್ಪಾಗುತ್ತದೆ. ಅದಕ್ಕೂ ಹೆಚ್ಚಿನದಾಗಿ ಆಣೆ ಮಾಡುವ ಜನಸಾಮಾನ್ಯರ ಮಧ್ಯದಿಂದ ಬಂದತಂಹ ಲೇಖಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕೆಂಡಾಮಂಡಲವಾಗುತ್ತಾರೆ. ಏಕೆಂದರೆ ರಾಜಕಾರಣಿಗಳು ರಾಜ್ಯದ ಪ್ರತಿನಿಧಿಗಳಾಗಿ ಸಂವಿಧಾನಬದ್ದವಾಗಿ ಕಾರ್ಯನಿರ್ವಹಿಸುವಾಗ ತಮ್ಮ ವೈಯುಕ್ತಿಕ ಜೀವನದ ವಿಷಯಗಳನ್ನು ಬಿಟ್ಟುಬಿಡಬೇಕು ಎಂಬ ತೀವ್ರವಾದ ನಂಬಿಕೆ ಅದರ ಬಂದಿದೆ. ಈ ವಿರೋಧಿಸುವ ಅಥವಾ ಟೀಕಿಸುವ ಪರಿ ಕೇವಲ ಆಣೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಲ್ಲಿ ಎರಡು ಸಮಸ್ಯೆಗಳಿವೆ ಒಂದು ನೇಷನ್ ಸ್ಟೇಟ್ ಎಂಬ ಪರಿಕಲ್ಪನೆ ಸಮಸ್ಯೆಯಾದರೆ ಮತ್ತೊಂದು ಸೆಕ್ಯುಲರಿಂಸ ಸಮಸ್ಯೆ.

ನೇಷನ್ ಸ್ಟೇಟ್ ಸಮಸ್ಯೆಂದ ಪ್ರಾರಂಭಿಸುವ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ೧೬೪೮ರ ವೆಸ್ಟ್ ಫಾಲಿಯಾ ಒಪ್ಪಂದಿಂದ ಅಸ್ತಿತ್ವಕ್ಕೆ ಬಂದಂತಹ ನೇಷನ್ ಸ್ಟೇಟ್ ಎಂಬ ಕಲ್ಪನೆಯ ಮೂಲ ತಳಹದಿ ಆಯಾ ಪ್ರದೇಶದಲ್ಲಿರುವ ಜನಾಂಗಗಳ ಇಚ್ಚೆಯ ಆಧಾರದ ಮೇಲೆ ಸ್ಟೇಟ್ ಜಾರಿಗೆ ಬರಬೇಕು. ನೇಷನ್ ಎಂದರೆ ಜನಾಂಗ ಹಾಗೂ ಸ್ಟೇಟ್ ಎಂದರೆ ಆ ಜನಾಂಗಗಳು ಸೇರಿಕೊಂಡು ರೂಪಿಸಿಕೊಂಡಿರುವ ನಿಯಮಗಳ ಮೊತ್ತ. ಆನರ ಬೇಕುಬೇಡಗಳ ಆಧಾರದ ಮೇಲೆ ಅವರುಗಳೇ ಕೂಡಿಕೊಂಡು ಸ್ಥಾಪಿಸಿಕೊಂಡ ಸಂಸ್ಥೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಂದಂತದ್ದಾಗಿದೆ. ಇಂತಹ ವ್ಯವಸ್ಥೆಯನ್ನು ಯಥಾವತ್ತಾಗಿ ಅಳವಡಿಸಿಕೊಂಡ ನಾವು ಇಲ್ಲಿನ ಜನರ ಇಚ್ಚೆಯನ್ನು ಆ ಸಂಸ್ಥೆ ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಂಡಂತೆ ತೋರುವುದಿಲ್ಲ. ಇಲ್ಲಿ ಸ್ಟೇಟ್ ಎಂಬುದು ಜನರ ಇಚ್ಚೆಯನ್ನು ಪ್ರತಿನಿಧಿಸಬೇಕೆಂಬುದರ ಅರ್ಥ, ಜನರು ಹೇಗೆ ಬದುಕುತ್ತಿದ್ದಾರೋ ಅಂತಹ ಬದುಕನ್ನು ಪ್ರತಿನಿಧಿಸುವ ಹಾಗೂ ಅಂತಹ ಬದುಕನ್ನು ಮುಂದುವರೆಸಲು ಬೇಕಾದಂತಹ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಿಕೊಡುವ ಹೊಣೆಗಾರಿಗೆ ಸ್ಟೇಟ್‌ಗಿರುತ್ತದೆ. ಅದರಂತೆ ರಾಜಕಾರಣಿಗಳೂ ಸಹ ಜನಸಾಮಾನ್ಯರು ಬದುಕುತ್ತಿರುವ ರೀತಿಯಲ್ಲೇ ಬದುಕಲು ಸಾಧ್ಯ, ಏಕೆಂದರೆ ಅವರೂ ಜನಸಾಮಾನ್ಯರಾಗಿ ತಮ್ಮ ಜೀವನ ರೂಪಿಸಿಕೊಂಡವರು, ಅವರ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದ ಆಚಾರ ವಿಚಾರ, ಆಣೆ ಪ್ರಮಾಣಗಳನ್ನೆ ಅಲ್ಲಿಯೂ ಮುಂದುವರೆಸುತ್ತಿದ್ದಾರೆ, ಅದರಲ್ಲಿ ತಪ್ಪೇನಿದೆ? ನಾವು ಜೀವನ ನಡೆಸುತ್ತಿರುವ ವಿಧಾನವನ್ನೇ ಅಲ್ಲಿಯೂ ಅಳವಡಿಸಿಕೊಂಡಿದ್ದಾರೆ ಅಷ್ಟೆ.
ಆದರೆ ರಾಜಕಾರಣಿಗಳು ಆಣೆ ಮಾಡುವ ಪ್ರವೃತ್ತಿ ಘನಘೋರ ಸಂಗತಿಯಂತೆ ಬಹುತೇಕರಿಗೆ ಏಕೆ ಕಾಣುತ್ತಿದೆ ಎಂಬ ಪ್ರಶ್ನೆಯೂ ಏಳುತ್ತದೆ. ಅದೇಕೆ ಕೆಟ್ಟ ಪ್ರವೃತ್ತಿ ಎಂದು ಗೋಚರಿಸುತ್ತದೆ ಎಂದರೆ ನಮಗೆ ಗೊತ್ತಿರುವಂತೆಯೋ ಅಥವಾ ಗೊತ್ತಿಲ್ಲದಂತೆಯೋ ಸೆಕ್ಯುಲರಿಸಂ ಎಂಬ ಭೂತವನ್ನು ಮೈಮೇಲೆ ಎಳೆದುಕೊಂಡಿದ್ದೇವೆ. ಅದರ ಪ್ರಕಾರ ಜನರ ಖಾಸಗಿ ಆಚಾರ ವಿಚಾರ ನಂಬಿಕೆ ಎಲ್ಲವೂ ರಾಜ್ಯಾಂಗದ ಕಾರ್ಯದಲ್ಲಿ ನುಸುಳಬಾರದು. ಅದಕ್ಕೂ ಹೆಚ್ಚಿನದಾಗಿ ರಾಜಕಾರಣದಿಂದ ರಿಲಿಜನ್ ಹೊರಗುಳಿಯಬೇಕು. ಇದೇ ಇಲ್ಲಿನ ಮೂಲಭೂತ ಸಮಸ್ಯೆಯಾಗಿದೆ. ಅದೆಂದರೆ ಹಿಂದೂಸಂ ಎಂಬುದು ಅಸಲಿಗೆ ರಿಲಿಜನ್ನೇ ಅಲ್ಲ, ಹಾಗೂ ಹಿಂದೂಸಂ ಎಂಬ ಸಂಗತಿ ಅಸ್ತಿತ್ವದಲ್ಲಿಯೂ ಇಲ್ಲ. ರಿಲಿಜನ್ನೇ ಇರದ ಮೇಲೆ ರಾಜಕಾರಣದಿಂದ ಹೊರಗಿಡುವುದು ಏನನ್ನು? ಇಲ್ಲಿನ ಆಚಾರ ವಿಚಾರಗಳನ್ನು ರಿಲಿಜಸ್ ಆಚರಣೆಗಳು ಎಂದು ತಪ್ಪಾಗಿ ಭಾವಿಸಿರುವುದೇ ಆಣೆ ಮೇಲೆ ಕಂಡಕಾರಲು ಪ್ರಮುಖವಾದ ಕಾರಣವಾಗಿದೆ. ಸಂವಿಧಾನದಲ್ಲಿ ರಿಲಿಜಸ್ ಆಚರಣೆಗಳನ್ನು ರಾಜಕಾರಣದಲ್ಲಿ ಬಳಸಬಾರದು ಎಂಬ ವಿಧಿ ಇದೆಯೇ ಹೊರತು ಸಂಪ್ರದಾಯಗಳನ್ನು ಬಳಸಬಾರದು ಎಂಬ ನಿಯಮವಿಲ್ಲ. ಹಾಗಾಗಿ ಕಾನೂನಾತ್ಮಕವಾಗಿ ಆಣೆ ಮಾಡುವುದನ್ನು ವಿಮರ್ಶಿಸಲೂ ಸಾಧ್ಯವಿಲ್ಲ. ಹಿಂದೂಸಂ ಏಕೆ ಒಂದು ರಿಲಿಜನ್ ಅಲ್ಲ, ಹಾಗೂ ಅದೇಕೆ ರಿಲಿಜನ್ ಎಂಬ ಅರ್ಥದಲ್ಲಿ ಬಳಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇತ್ತೀಚೆಗೆ ಅಕ್ಷರ ಪ್ರಕಾಶನದಿಂದ ಹೊರಬಂದಿರುವ ಬಾಲಗಂಗಾಧರರವರ ಸ್ಮೃತಿ ವಿಸ್ಮೃತಿ ಮತ್ತು ಭಾರತೀಯ ಸಂಸ್ಕೃತಿ ಎಂಬ ಕೃತಿ ನೆರವಾಗಬಹುದು.

ಆಣೆ ಪ್ರಮಾಣಗಳನ್ನು ರಾಜ್ಯಾಂಗದಿಂದ ಹೊರಗಿಡಬೇಕೆಂದು ಪ್ರತಿಪಾದಿಸುವ ಚಿಂತಕರು ಈ ಮುಂದಿನ ಸಂಗತಿಯನ್ನು ಪರಿಶೀಲಿಸಬೇಕು: ಪ್ರಧಾನ ಮಂತ್ರಿಯಾದಿಯಾಗಿ, ಮುಖ್ಯಮಂತ್ರಿ, ಶಾಸಕರುಗಳು ಅಧಿಕಾರ ಪಡೆಯುವ ಮುನ್ನ ಪ್ರಮಾಣವಚನ ಸ್ವೀಕರಿಸುವುದು; ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಗೆ ಹಾಗೂ ಆರೋಪಿಗಳಿಗೆ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೆ ಏನೂ ಹೇಳುವುದಿಲ್ಲ ಎಂಬುದು, ಇವುಗಳು ರಾಜ್ಯಾಂಗದ ವ್ಯಾಪ್ತಿಯಲ್ಲೇ ಬರುವ ಸಂಗತಿಗಳಲ್ಲವೆ? ಅದೇಕೆ ತಪ್ಪಾಗಿ ಕಾಣುವುದಿಲ್ಲ? ರಾಜ್ಯಪಾಲರು ಹಾಗೂ ರಾಷ್ಟ್ರಾಧ್ಯಕ್ಷರು ಮಾಡಿಸುವ ಪ್ರಮಾಣವಚನಗಳು ದೇವರ ಮೇಲೆ ಅಲ್ಲದಿದ್ದರೂ ಅದು ಅಂತದ್ದೇ ಆಣೆಯ ಮತ್ತೊಂದು ಸ್ವರೂಪವಾಗಿದೆ. ಅದು ಆಣೆಯೇ ಅಲ್ಲವೆಂದು ಯಾರೂ ಸಾಬೀತುಪಡಿಸಲು ಸಾಧ್ಯವಿಲ್ಲ.

ಇಂತಹ ಸೆಕ್ಯಲರಿಸಂ ನೀತಿಯನ್ನು ಆಳವಾಗಿ ನಂಬಿಕೊಂಡಿರುವ ಯಾರಿಗಾದರೂ ಆಣೆ ಮಾಡುವುದು ತಪ್ಪು ಎಂದೆನಿಸುತ್ತದೆ. ಆದರೆ ಸತ್ಯವಾಗಿಯೂ ಸೆಕ್ಯುಲರ್ ವಾದಿಗಳಿಗೆ ಅದು ಏಕೆ ತಪ್ಪು ಎಂದು ಕೇಳಿದರೆ ಅದು ರಿಲಿಜಸ್ ಆಚರಣೆ, ಖಾಸಾಗಿ ಜೀವನದಲ್ಲಿ ಅವುಗಳನ್ನು ಪಾಲಿಸಬೇಕು, ಹಾಗಾಗಿ ಅದನ್ನು ಬಳಸಿಕೊಳ್ಳಬಾರದು ಎಂದು ಹೇಳುತ್ತಾರೆ. ಹಾಗೆಯೇ ಮುಂದುವರೆದು, ಅದೇಕೆ ರಿಲಿಜಸ್ ಆಚರಣೆ ಎಂದು ಕೇಳಿದರೆ ಆಗ ಕೇಳಿದವರ ಮೇಲೆ ರೇಗಲು ಪ್ರಾರಂಭಿಸುತ್ತಾರೆ. ಒಟ್ಟಿನಲ್ಲಿ ಬಿ.ಜೆ.ಪಿ ಯು ಜನಸಾಮಾನ್ಯರಲ್ಲಿರುವ ಆಚಾರ ವಿಚಾರಗಳನ್ನು ಹಾಗೂ ನಂಬಿಕೆಗಳನ್ನೇ ಅಸ್ತ್ರವಾಗಿರಿಸಿಕೊಂಡು ರಾಜಕಾರಣ ಮಾಡುತ್ತಿದೆ, ಅದೇಕೆ ತಪ್ಪು ಎಂದು ತೋರಿಸುವವರೆಗೂ ಅದು ಅರ್ಥವಾಗದ ಸಂಗತಿ. ನಾವು ಯಾವುದಾದರು ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೇವೆ ಎಂದು ಇಟ್ಟುಕೊಳ್ಳೋಣ, ಅಲ್ಲಿಯ ಮುಖ್ಯಸ್ಥರು ನಾವು ಮಾಡುವ ಆಚರಣೆಗಳನ್ನೆ ಅಲ್ಲಿ ಮಾಡುತ್ತಿದ್ದರೆ ಅವರ ಬಗ್ಗೆ ಯಾರಿಗಾದರೂ ಖುಷಿಯಾಗೇ ಆಗುತ್ತದೆ. ಅಂತೆಯೇ ಇಂದು ಬಿ.ಜೆ.ಪಿ. ಹೀಗೆ ಮಾಡುತ್ತಿರುವುದರಿಂದ ಲೇಖಕರುಗಳನ್ನು ಹೊರತು ಪಡಿಸಿ ಜನಸಾಮಾನ್ಯರಿಗೆ ಅದೊಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ನಿಜವಾಗಿಯೂ ಸೆಕ್ಯುಲರಿಸಂನ ಸುವಾರ್ತೆಗಳನ್ನು ಬದಿಗಿರಿಸಿ ಆಣೆ ಪ್ರಮಾಣದಲ್ಲಿ ತಪ್ಪೇನಿದೆ ಎಂದು ಎಲ್ಲರೂ ಆಲೋಚಿಸಬೇಕಾಗಿದೆ. ಇಲ್ಲಿ ಯಾವುದೇ ಪಕ್ಷವನ್ನಾಗಲೀ, ಅಥವಾ ಯಾವುದೇ ರಾಜಕೀಯ ತತ್ವವವನ್ನಾಗಲೀ ಸಮರ್ಥಿಸುವ ಅಥವಾ ವಿರೋಧಿಸುವ ಹುನ್ನಾರವಿಲ್ಲದೆ, ಸಮಸ್ಯೆಯನ್ನು ವಸ್ತುನಿಷ್ಠವಾಗಿ ಚರ್ಚಿಸುವ ಉದ್ದೇಶವನ್ನು ಹೊಂದಿದ್ದೇನೆ.

ಸಂತೋಷ್ ಕುಮಾರ್ ಪಿ.ಕೆ