ವೈದ್ಯನೊಬ್ಬನ ದುಃಸ್ವಪ್ನಗಳು.......೨
ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಔಷಧಿ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಮಾನವ ಶರೀರದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಿಳಿಯಬೇಕಿದೆ.
ಈ ಜಗತ್ತಿನಲ್ಲಿ ಮಾನವನಿಗೆ ಗೋಚರವಾಗುವ ಮತ್ತು ಅಗೋಚರವಾಗಿರುವ ಅನೇಕ ಶತ್ರುಗಳಿದ್ದಾರೆ. ಸುಲಭಕ್ಕೆ ಗೋಚರವಾಗುವ ಸೊಳ್ಳೆ, ತಿಗಣೆಗಳಿಂದ ಹಿಡಿದು ಕಾಡಿನ ಹಿಂಸ್ರಪಶುಗಳವರೆಗೂ ಅನೇಕಾನೇಕ ಶತ್ರುಗಳಿದ್ದಾರೆ. ಇವು ಕಣ್ಣಿಗೆ ಕಾಣುವುದರಿಂದ ಹೇಗೋ ಮಾಡಿ ನಾವು ಇವುಗಳ ಉಪಟಳದಿಂದ ಪಾರಾಗಬಹುದು. ಆದರೆ ನಮ್ಮ ಕಣ್ಣಿಗೆ ಕಾಣದಂಥ ಸೂಕ್ಷ್ಮ ವೈರಿಗಳು ಈ ಗೋಚರ ವೈರಿಗಳಿಗಿಂತಲೂ ಸಾವಿರಾರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವುಗಳ ಸೂಕ್ಷ್ಮತೆಯಲ್ಲಿಯೂ ವೈವಿಧ್ಯವಿದೆ. ನಮ್ಮ ಕರುಳುಗಳಲ್ಲಿರುವ ಕೆಲವು ಕ್ರಿಮಿಗಳನ್ನು ನೋಡಲು ಒಂದು ಸಾಮಾನ್ಯ ಭೂತಗನ್ನಡಿ ಸಾಕು.ಇವುಗಳಿಗಿಂತಲೂ ಸೂಕ್ಶ್ಮವಾದ ಅಮೀಬಾ, ಮಲೇರಿಯಾ ರೋಗಾಣುಗಳು, ಕ್ಷಯ , ನ್ಯೂಮೋನಿಯಾದಂತಹ ಕಾಯಿಲೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕಾಣಲು ಭೂತಗನ್ನಡಿ ಸಾಲದು. ೫೦೦ ರಿಂದ ೧೦೦೦ ಪಟ್ಟು ದೊಡ್ಡದಾಗಿ ತೋರಿಸಬಲ್ಲಂಥ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಇವುಗಳನ್ನು ನೋಡಬಹುದು. ಇವುಗಳಿಗಿಂತಲೂ ಸೂಕ್ಷ್ಮವಾದ ವೈರಸ್ ಗಳೆಂಬ ಸೂಕ್ಷ್ಮಾಣುಗಳನ್ನು ನೋಡಲು ಒಂದು ಲಕ್ಷಪಟ್ಟು ದೊಡ್ಡದು ಮಾಡಿ ತೋರಬಲ್ಲಂಥ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಯಂತ್ರವೇ ಬೇಕಾಗುತ್ತದೆ. ನಾವು ಉಸಿರಾಡುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ, ಸೇವಿಸುವ ಆಹಾರದಲ್ಲಿ ಈ ಸೂಕ್ಷ್ಮಾಣುಗಳು ಮಿಲಿಯಗಟ್ಟಲೆ ಸಂಖ್ಯೆಯಲ್ಲಿರುತ್ತವೆ.
ನೀವೇನೂ ಹೆದರಬೇಕಿಲ್ಲ. ಎಲ್ಲ ಸೂಕ್ಷ್ಮಾಣುಗಳೂ ನಮಗೆ ಕಾಯಿಲೆಯುಂಟು ಮಾಡುವುದಿಲ್ಲ. ಆದರೂ, ಈ ಎಲ್ಲ ಮಾರ್ಗಗಳಿಂದ ರೋಗಾಣುಗಳು (ರೋಗವನ್ನುಂಟು ಮಾಡುವ ಸೂಕ್ಷ್ಮಾಣುಗಳು ) ನಮ್ಮ ಮೇಲೆ ದಾಳಿ ಮಾಡಬಹುದು. ಪ್ರತಿದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಇವುಗಳ ದಾಳಿಯ ಸಾಧ್ಯತೆಯಿದ್ದೇ ಇರುತ್ತದೆ. ನಮ್ಮನ್ನು ಸದಾಕಾಲವೂ ಆವರಿಸಿರುವ ಈ ಅಸಂಖ್ಯಾತ ವೈರಿಗಳಿಂದ ನಾವು (ನಮ್ಮಲ್ಲಿ ಬಹುತೇಕ ಜನ) ಜೀವನಪರ್ಯಂತ ಬದುಕುಳಿಯುವುದು ಹೇಗೆ ಸಾಧ್ಯವಾಗಿದೆ ? ಕೆಲವರು ಶತಮಾನದ ಅವಧಿಯವರೆಗೂ ಜೀವಿಸಿರಲು ಸಾಧ್ಯವಾಗಿರುವುದು ಹೇಗೆ ?
ಈ ಎಲ್ಲ ವೈರಿಗಳಿಂದ ನಮ್ಮನ್ನು ಕಾಪಾಡಲು, ನಮಗೆ ರಕ್ಷಣೆ ನೀಡಲು ನಮ್ಮ ದೇಹದಲ್ಲಿ ಒಂದು ರಕ್ಷಣಾ ವ್ಯವಸ್ಥೆಯಿದೆ. ಇದಕ್ಕೆ ಇಮ್ಯೂನ್ ಸಿಸ್ಟಮ್ (immune system) ಎಂದು
ಕರೆಯುತ್ತಾರೆ.
ನೀವೊಂದು ಹೊಸ ಲ್ಯಾಪ್ ಟಾಪ್ ಕೊಳ್ಳುತ್ತಿದ್ದೀರೆಂದು ಭಾವಿಸಿ. ನೀವು ಕೊಳ್ಳುವಾಗಲೇ, ಆ ಲ್ಯಾಪ್ ಟಾಪ್ ನಲ್ಲಿ ಅನೇಕ ಪ್ರೋಗ್ರಾಮ್ ಗಳ ಜೊತೆಯಲ್ಲಿಯೇ ಆಂಟಿ ವೈರಸ್ (anti virus software) ಸಾಫ್ಟ್ ವೇರ್ ನ್ನು ಜೋಡಿಸಲಾಗಿರುತ್ತದೆ. ಇದೇ ಸಾಫ್ಟ್ ವೇರ್ ಯಾವಾಗಲೂ ಪರಿಣಾಮಕಾರಿಯಾಗಿರುವುದಿಲ್ಲ. ಆಗಾಗ್ಗ್ಯೆ ಈ ಸಾಫ್ಟ್ ವೇರ್ ನ್ನು ನವೀಕರಿಸುತ್ತಿರಬೆಕಾಗುತ್ತದೆ (update). ಆಗ ಮಾತ್ರ ನಿಮ್ಮ ಕಂಪ್ಯೂಟರ್ ಸುರಕ್ಷಿತವಾಗಿರುತ್ತದೆ. ಅದೇ ರೀತಿ, ನಾವು ಹುಟ್ಟುವಾಗಲೇ, ನಮ್ಮ ದೇಹದಲ್ಲಿ ಕೆಲವು ಮೂಲಭೂತ ರಕ್ಷಣಾ ವ್ಯವಸ್ಥೆಗಳಿರುತ್ತವೆ. ನಾವು ಬೆಳೆದು ದೊಡ್ಡವರಾದಂತೆ ಅದರ ನವೀಕರಣ ಸದಾ ನಡೆದೇ ಇರುತ್ತದೆ. ಹಾಗಾಗಿ, ಈ ರಕ್ಷಣಾ ವ್ಯವಸ್ಥೆ ನಮ್ಮನ್ನು ಈ ಅಸಂಖ್ಯಾತ ವೈರಿಗಳಿಂದ ನಮ್ಮನ್ನು ಸದಾಕಾಲವೂ ಕಾಪಾಡುತ್ತದೆ. ಆದರೂ, ಈ ರಕ್ಷಣಾ ವ್ಯವಸ್ಥೆಯಲ್ಲಿರುವ ಕೆಲವು ನ್ಯೂನತೆಗಳಿಂದಾಗಲೀ, ಅಥವಾ ಈ ರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ಬೇಧಿಸುವಷ್ಟು ಸಾಮರ್ಥ್ಯ ಪಡೆದಂತಹ ಕೆಲವು ಪ್ರಬಲ ರೋಗಾಣುಗಳ ದಾಳಿಯಿಂದಾಗಲೀ, ಒಮ್ಮೊಮ್ಮೆ ನಾವು ಕಾಯಿಲೆ ಹೊಂದುವ ಸಾಧ್ಯತೆಯಿರುತ್ತದೆ.
ಮಾನವ ಶರೀರದ ರಕ್ಷಣಾ ವ್ಯವಸ್ಥೆ ಈಗ ಪ್ರಚಲಿತವಿರುವ ಯಾವುದೇ ದೇಶದ ರಕ್ಷಣಾ ವ್ಯವಸ್ಥೆಯನ್ನೂ ನಾಚಿಸುವಂತಿದೆ. ಒಂದು ದೇಶ ತನ್ನನ್ನು ನೆರೆದೇಶಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಮತ್ತು ತನ್ನ ಆಂತರಿಕ ಭದ್ರತೆಯನ್ನು ಕಾಯ್ದುಕೊಳ್ಳಲು, ಈ ಬಗೆಯ ಕ್ರಮಗಳನ್ನು ಕೈಗೊಳ್ಳಬಹುದು.
೧. ದೇಶದ ಗಡಿಯುದ್ದಕ್ಕೂ ಬೇಲಿಯನ್ನು ಕಟ್ಟುವುದು.
೨. ಗಡಿ ಪ್ರದೇಶಗಳಲ್ಲಿ ಸೈನಿಕ ತುಕಡಿಗಳನ್ನು ಮತ್ತು ಪಹರೆ ಪಡೆಗಳನ್ನು ನೇಮಿಸುವುದು.
೩. ಗಡಿಯನ್ನು ಅತಿಕ್ರಮಿಸಲು ಯತ್ನಿಸುತ್ತಿರುವ ಇಲ್ಲವೇ ಅತಿಕ್ರಮಿಸಿ ಒಳಕ್ಕೆ ಬಂದ ಅತಿಕ್ರಮಣಕಾರರೊಡನೆ ಹೊಡೆದಾಡಿ ಅವರನ್ನು ಸಾಯಿಸುವುದು..
೪. ಅಥವಾ ಅಂತಹ ಅತಿಕ್ರಮಣಕಾರರನ್ನು ದೂರದಿಂದಲೇ ಗುರುತಿಸಿ, ಗುಂಡು ಹಾರಿಸಿ ಅವರನ್ನು ಕೊಲ್ಲುವುದು.
೫. ಸ್ವಯಂನಿರ್ದೇಶಿತ ಕ್ಷಿಪಣಿಗಳ ಮೂಲಕ ಆತಿಕ್ರಮಣಕಾರರ ಮೇಲೆ ದಾಳಿ ಮಾಡುವುದು.
೬. ಆಂತರಿಕ ಭದ್ರತೆಗಾಗಿ ಪೋಲೀಸ್ ಮತ್ತು ಗುಪ್ತಚರ ದಳಗಳನ್ನು ಬಳಸುವುದು.
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ನಮ್ಮ ದೇಹದಲ್ಲೂ ಇವೆಲ್ಲ ಕ್ರಮಗಳನ್ನು ಹೋಲುವ ರಕ್ಷಣಾ ವ್ಯವಸ್ಥೆಯಿದೆ.
೧. ನಮ್ಮ ದೇಹಕ್ಕೆ ಹೊದಿಸಿದ ಚರ್ಮ, ಜೀವಕೋಶಗಳ ಹಲವಾರು ಪದರುಗಳಿಂದ ರಚಿಸಲ್ಪಟ್ಟು, ಯಾವುದೇ ರೋಗಾಣುಗಳು ಚರ್ಮದ ಮೂಲಕ ನಮ್ಮ ದೇಹವನ್ನು ಪ್ರವೇಶಿಸದಂತೆ ತಡೆಗಟ್ಟುತ್ತವೆ, ಧೃಢವಾದ ಬೇಲಿಯ ತರಹ. ಒಂದು ವೇಳೆ ನಮ್ಮ ಚರ್ಮಕ್ಕೆ ಯಾವುದೇ ರೀತಿಯಿಂದ ಹಾನಿಯಾಗಿದ್ದರೆ (ಉದಾಹರಣೆಗೆ ಅಕಸ್ಮಾತ್ತಾಗಿ ಚಾಕುವಿನಿಂದ ಕುಯ್ದುಕೊಂಡಾಗ) ಹಾನಿಯಾದ ಚರ್ಮದ ಮೂಲಕ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸಿ ಇನ್ನೂ ಹೆಚ್ಚಿನ ಹಾನಿಯನ್ನುಂಟುಮಾಡಬಹುದು, ಹಾನಿಗೊಂಡ ಬೇಲಿಯ ಮೂಲಕ ಅತಿಕ್ರಮಣಕಾರರು ನುಗ್ಗುವಂತೆ).
೨. ನಾವು ಕುಡಿಯುವ ನೀರು ಮತ್ತು ಆಹಾರದಲ್ಲಿರುವ ರೋಗಾಣುಗಳನ್ನು, ನಮ್ಮ ಬಾಯಂಗಳವನ್ನು ಆವರಿಸಿರುವ ಲೋಳ್ಪರೆಯಲ್ಲಿರುವ (mucous membrane) ಮ್ಯಾಕ್ರೋಫಾಜ್ ಗಳು (macrophages) ನೀರು ಮತ್ತು ಆಹಾರದಲ್ಲಿರಬಹುದಾದ ರೋಗಾಣುಗಳ ಜೊತೆ ಹೋರಾಡಿ ಅವುಗಳನ್ನು ಸುತ್ತುವರಿದು, ಕ್ರಮೇಣ ಅವುಗಳನ್ನು ನುಂಗಿಹಾಕಿ ರೋಗಾಣುಗಳನ್ನು ಜೀರ್ಣಿಸಿಕೊಳ್ಳುತ್ತವೆ, ಅಗಸ್ತ್ಯ ಮುನಿಗಳು, ವಾತಾಪಿಯನ್ನು ತಿಂದ ಬಳಿಕ "ವಾತಾಪಿ, ಜೀರ್ಣೋ ಭವ" ಎಂದು ಜೀರ್ಣಿಸಿಕೊಂಡಂತೆ. ಒಂದು ವೇಳೆ ಯಾವುದೋ ಕಾರಣಕ್ಕಾಗಿ ಈ ಲೋಳ್ಪರೆಗೆ ಹಾನಿಯುಂಟಾಗಿದ್ದರೆ ಅದರ ಮೂಲಕವೂ ರೋಗಾಣುಗಳು ಪ್ರವೇಶಿಸಿ ನಮ್ಮ ದೇಹದಲ್ಲಿ ಅನಾರೋಗ್ಯವನ್ನುಂಟುಮಾಡಬಹುದು. ಕೇವಲ ಹಾನಿಯಾದ ಲೋಳ್ಪರೆಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿದರೆ ಸಾಲದು. ಗಡಿಗಳಲ್ಲಿ ಅಲ್ಲಲ್ಲಿ ಸೈನ್ಯದ ಔಟ್ ಪೋಸ್ಟ್ ಗಳಿರುವಂತೆ, ನಮ್ಮ ದೇಹದ ಅನೇಕ ಕಡೆ, ಲಿಂಫೋಸೈಟ್ (lymphocytes) ಗಳೆಂಬ ಜೀವಕಣಗಳ ಗುಂಪುಗಳಿರುತ್ತವೆ. ಲೋಳ್ಪರೆಯನ್ನು ದಾಟಿ ಬಂದ ರೋಗಾಣುಗಳನ್ನು ಈ ಲಿಂಫೋಸೈಟ್ ಗಳು ಹಿಡಿದು ಹಾಕಿ ಅವುಗಳನ್ನು ಕೊಲ್ಲುತ್ತವೆ. ನಮ್ಮ ಬಾಯಂಗಳದಲ್ಲಿರುವ ಟಾನ್ಸಿಲ್ (tonsils) ಗಳೆಂಬ ಗ್ರಂಥಿಗಳ ಹೆಸರನ್ನು ನೀವು ಕೇಳಿರಬಹುದು. ಈ ಗ್ರಂಥಿಗಳೂ ಕೂಡ ಲಿಂಫೋಸೈಟ್ ಗಳ ಒಂದು ಭಾರೀ ಸಮೂಹಗಳಾಗಿರುತ್ತವೆ. ಒಂದು ವೇಳೆ, ನಾವು ಕುಡಿಯುವ ನೀರಿನ ಮೂಲಕ ರೋಗಾಣುಗಳು ನೇರವಾಗಿ ಜಠರವನ್ನು ಪ್ರವೇಶಿಸಿದರೆ, ಜಠರರಸದ ಅತೀವ ಆಮ್ಲತೆಯನ್ನು(acid) ತಾಳಿಕೊಳ್ಳುವ ಶಕ್ತಿಯಿಲ್ಲದ ಬಹಳಷ್ಟು ರೊಗಾಣುಗಳು ನಾಶವಾಗುತ್ತವೆ. ಈ ಆಮ್ಲ ಸ್ನಾನದ ನಂತರವೂ ಬದುಕುಳಿದ ಕೆಲವು ರೋಗಾಣುಗಳು ನಮ್ಮ ಸಣ್ಣ ಕರುಳನ್ನು ಪ್ರವೇಶಿಸಿದರೆ, ಅವುಗಳಿಗೆ ಈಗ ಇನ್ನೊಂದು ಬಗೆಯ ಸ್ನಾನ ಕಾದಿರುತ್ತದೆ. ಸಣ್ಣ ಕರುಳಿನ ರಸ ಆಮ್ಲತೆಗೆ ವಿರುದ್ಧವಾಗಿ ತೀವ್ರ ಕ್ಷಾರವಾಗಿರುತ್ತದೆ (alkaline). ಜಠರದ ಅತಿ ಆಮ್ಲತೆ ಮತ್ತು ಸಣ್ಣ ಕರುಳಿನ ಅತಿ ಕ್ಷಾರತೆಗಳೆರಿಂದಲೂ ಪಾರಾಗುವ ರೋಗಾಣುಗಳು ಹೆಚ್ಚಿಲ್ಲ.
೩. ಹಾಗೆ ಪಾರಾಗಿ, ಸಣ್ಣ ಕರುಳಿನ ಒಳ ಮೈಯನ್ನು ಆವರಿಸಿರುವ ಲೋಳ್ಪರೆಯನ್ನು ಬೇಧಿಸಿಕೊಂಡು ಬಂದ ರೋಗಾಣುಗಳು ಮತ್ತೊಮ್ಮೆ ಸಣ್ಣ ಕರುಳಿನ ಗೋಡೆಯಲ್ಲಿರುವ ಲಿಂಫೋಸೈಟ್ ಗಳ ಸಮೂಹಗಳನ್ನು ಎದುರಿಸಬೇಕಾಗುತ್ತೆದೆ. ಅವುಗಳಿಂದಲೂ ಪಾರಾಗಿ ರಕ್ತಪ್ರವಾಹದಲ್ಲಿ ಸೇರಿಕೊಂಡರೆ, ರಕ್ತದಲ್ಲಿರುವ ಬಿಳೀ ರಕ್ತಕಣಗಳು ಈ ರೋಗಾಣುಗಳನ್ನು ಗುರುತಿಸಿ, ಅವುಗಳನ್ನು ಸುತ್ತುವರೆದು ಸ್ವಾಹಾಮಾಡುತ್ತವೆ. ಅವುಗಳನ್ನು ಸ್ವಾಹಾ ಮಾಡುವುದಲ್ಲದೇ ಆ ರೋಗಾಣುಗಳ ಮೇಲಿರುವ "ಗುರುತಿನ ಫಲಕ" ವನ್ನೂ (identity badge) ನೆನಪಿನಲ್ಲಿಟ್ಟುಕೊಳ್ಳುತ್ತವೆ, ಸೆರೆ ಸಿಕ್ಕ ಸೈನಿಕರ ಗುರುತಿನ ವಿವರಗಳನ್ನು ದಾಖಲಿಸಿಕೊಳ್ಳುವಂತೆ. ಹೀಗೆ ದೊರಕಿದ "ಗುರುತಿನ ಫಲಕ" ದ ಆಧಾರದ ಮೇಲೆ, ಅವುಗಳನ್ನು ನಿಷ್ಕ್ರಿಯಗೊಳಿಸುವಂತಹ ಪ್ರತ್ಯಾಸ್ತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತವೆ. ಇವಕ್ಕೆ ಆಂಟಿಬಾಡೀಸ್ (antibodies) ಎನ್ನುತ್ತಾರೆ. ಮುಂದೊಮ್ಮ ಇದೇ ಜಾತಿಗೆ ಸೇರಿದ ರೋಗಾಣಗಳು ಮತ್ತೊಮ್ಮೆ ನಮ್ಮ ದೇಹವನ್ನು ಪ್ರವೇಶಿಸಿದರೆ, ಈ ಆಂಟಿಬಾಡೀಸ್ , ಸ್ವಯಂ ನಿರ್ದೇಶಿತ ಕ್ಷಿಪಣಿಗಳಂತೆ ಅವುಗಳ ಮೇಲೆರಗಿ ಅವುಗಳನ್ನು ನಾಶಪಡಿಸುತ್ತವೆ.
ಒಂದು ಜಾತಿಯ ರೋಗಾಣುಗಳ ವಿರುದ್ಧ ತಯಾರಿಸಲ್ಪಟ್ಟ ಆಂಟಿಬಾಡೀಸ್ ಕೇವಲ ಆ ಜಾತಿಯ ರೋಗಾಣುಗಳ ಮೇಲೆ ಮಾತ್ರ ಎರಗಬಲ್ಲವು. ಉದಾಹರಣೆಗೆ, ನೂಮೋನಿಯಾ ಉಂಟುಮಾಡುವ ನ್ಯೂಮೋಕಾಕೈ ಎಂಬ ಬ್ಯಾಕ್ಟೀರಿಯಾಗಳ ವಿರುದ್ಧ ತಯಾರಾದ ಆಂಟಿಬಾಡೀಸ್ ಟೈಫಾಯ್ಡ್ ಕಾಯಿಲೆಯುಂಟುಮಾಡುವ ಸ್ಯಾಲ್ಮೋನೆಲ್ಲಾ ಎಂಬ ರೋಗಾಣುಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು.
೪. ಇಷ್ಟಲ್ಲದೇ ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ "ಗುರುತಿನ ಚೀಟಿ" ಯಿರುತ್ತದೆ. ನಗರದಲ್ಲಿ ಗಸ್ತು ತಿರುಗುವ ಪೋಲೀಸರು, ಗುಮಾನಿ ಬಂದ ಅಪರಿಚಿತರನ್ನು ಅವರ ಗುರುತಿನ ಚೀಟಿ ತೋರಿಸುವಂತೆ ಕೋರಿ, ಅವರ ಬಳಿ ಖಚಿತ ಗುರುತಿನ ಚೀಟಿಯಿದ್ದರೆ ಅವರನ್ನು ಅವರ ಪಾಡಿಗೆ ಬಿಟ್ಟು, ಅವರ ಬಳಿ ಅಂತಹ ಗುರುತಿನ ಚೀಟಿಯಿರದಿದ್ದರೆ ಇನ್ನೂ ಹೆಚ್ಚಿನ ವಿಚಾರಣೆಗೊಳಪಡಿಸುವಂತೆ, ನಮ್ಮ ದೇಹದಲ್ಲಿ ಗಸ್ತು ತಿರುಗುತ್ತಿರುವ ವ್ಯಾಂಡರಿಂಗ್ ಮ್ಯಾಕ್ರೋಫೇಜಸ್ (wandereing macrophages)ಎಂಬ ಜೀವಕಣಗಳು, ನಮ್ಮ ದೇಹದ ಎಲ್ಲಾ ಜೀವಕೋಶಗಳ ಗುರುತಿನ ಚೀಟಿಗಳ ಮೇಲೆ ನಿಗಾ ಇಟ್ಟಿರುತ್ತವೆ. ಯಾವುದೇ ಕಾರಣದಿಂದ ಯಾವುದಾದರೂ ಜೀವಕೋಶದ ಗುರುತಿನ ಚೀಟಿ ಅಸ್ಪಷ್ಟವಾಗಿದ್ದರೆ ಅಂತಹ ಜೀವಕೋಶದ ಮೇಲೆ ಆಕ್ರಮಣ ಮಾಡಿ ಅದನ್ನು ನಾಶಪಡಿಸುತ್ತವೆ (ಆ ಜೀವ ಕೋಶ ಅದೇ ದೇಹದ ಒಂದು ಭಾಗವಾಗಿದ್ದರೂ !). ನಮ್ಮ ಪೌರ ವ್ಯವಸ್ಥೆಯಲ್ಲಿ, ಗುರುತಿನ ಚೀಟಿ ಕಳೆದುಕೊಂಡರೆ, ಅತಿ ಹೆಚ್ಚಿನ ಶಿಕ್ಷೆಯೆಂದರೆ, ದಂಡ ತೆರಬೇಕಾಗುವುದು ಅಥವಾ ಕೆಲವು ಸಂದರ್ಭಗಳಲ್ಲಿ ಜೈಲುವಾಸವಾಗಬಹುದು. ಆದರೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಬಹಳ ಕಟ್ಟುನಿಟ್ಟಿನದು. ಗುರುತಿನ ಚೀಟಿ ಕಳೆದುಕೊಂಡ ಜೀವಕೋಶಕ್ಕೆ ಮರಣದಂಡನೆಯೇ ಶಿಕ್ಷೆ !
ದೇಶದ ರಕ್ಷಣಾ ವ್ಯವಸ್ಥೆಯನ್ನು ಕಾಪಾಡಲು, ಪೋಲೀಸ್, ಸೈನಿಕರು ಮತ್ತು ಕಮ್ಯಾಂಡೋಗಳು ಎಂಬ ಬಗೆಬಗೆಯ ಸಿಪಾಯಿಗಳಿರುವಂತೆ, ನಮ್ಮ ದೇಹದಲ್ಲಿಯೂ ಅನೇಕ ಬಗೆಯ ರಕ್ಷಣಾ ಕಾರ್ಯಗಳಿಗಾಗಿಯೇ ನಿರ್ದೇಶಿತರಾದ ವಿವಿಧ ಬಗೆಯ ಜೀವಕಣಾಸಮೂಹಗಳಿವೆ .
ಇದು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಒಂದು ಸ್ಥೂಲ ಪರಿಚಯ ಮಾತ್ರ . ಈ ವಿಷಯದ ಅಧ್ಯಯನವೇ "ಇಮ್ಯುನಾಲಜಿ" (immunology) ಎಂಬ ವೈದ್ಯಕೀಯ ಶಾಸ್ತ್ರ.