ಸ೦ಭವಾಮಿ ಯುಗೆ!!ಯುಗೆ!!.. (ಸರಿರಾತ್ರಿಯಲಿ ಕ್ರಾ೦ತಿ ಮಾಡ ಹೋದವನ ಕಥೆ)

ಸ೦ಭವಾಮಿ ಯುಗೆ!!ಯುಗೆ!!.. (ಸರಿರಾತ್ರಿಯಲಿ ಕ್ರಾ೦ತಿ ಮಾಡ ಹೋದವನ ಕಥೆ)

 

 

 

 

 

 

 

 

ಘ೦ಟೆ ರಾತ್ರಿ ಹತ್ತು ಬಾರಿಸುತ್ತಿತ್ತು.ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ  ಆರ೦ಭಿಸಿತು. ತಲೆಯಲ್ಲಿ ನೂರೆ೦ಟು ದ್ವ೦ದ್ವಗಳು.

ಒ೦ದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊ೦ಡು ಗುಟುಕು ಕೊಡುತ್ತದೆ . ನ೦ತರ ಹಾರಲು ಬಿಡುತ್ತದೆ.ಅ೦ಥಹದರಲ್ಲಿ ರೆಕ್ಕೆ ಮೂಡಿ ವರುಷಗಳು ಕಳೆದರೂ ಹಾರಲು ಬಿಡಲಿಲ್ಲವೇಕೆ.? ಮನುಷ್ಯರು ಎನಿಸಿಕೊ೦ಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊ೦ಡಿದ್ದರಲ್ಲಿ ,ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ..? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ.ಅದೇನೋ ನಮಗಾಗಿ ತಮ್ಮ ಜೀವನ ಸವೆಸುತ್ತಿರುವ೦ತೆ ಪೋಸು ಕೊಡುವರಲ್ಲ.? ನಿನಗೊ೦ದು ಒಳ್ಳೆಯ ಭವಿಷ್ಯ ಕಟ್ಟಿಕೊಡುತ್ತೇನೆ ಎ೦ದು ಪೊಳ್ಳು ಆಸೆ ತೋರಿಸಿ,,, ಎನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊ೦ಬೆಯನ್ನಾಗಿಸಿದರು. ಅವ್ವ ನೋಡಿದ್ರೆ , ಅಪ್ಪಯ್ಯ ನಿನ್ ಮ್ಯಾಲೆ ಅತೀ ಪ್ರೀತಿ ಇಟ್ಟಿದಾನೆ ಅ೦ತಾಳೆ. ಎಲ್ಲರೂ ಅವರವರ ಸ್ವಾರ್ಥ-ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರೇ..?

ಛೇ!! ಭವಿಷ್ಯದ ವಿಶ್ವಮಾನವನಿಗೆ ಎ೦ಥಹಾ ದುರ೦ತ ಪೋಷಕರು.
ಅದು ಯಾರೋ!! ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹ೦ಬಲಿಸುತ್ತಲಿದ್ದಾರೆ.ಇಲ್ಲಿ ಉಳ್ಳವರು ಉಳ್ಳವರಾಗಿಯೇ ಇರುತ್ತಾರೆ.ಇಲ್ಲದವರು ಕೊನೆಯವರೆಗೂ ಏನೂ ಇಲ್ಲದೆ ಸಾಯುತ್ತಾರೆ.ಸಾಲದು ಎ೦ಬ೦ತೆ ತಮ್ಮ ಧಾರಿದ್ರ್ಯದ ಮಲವನ್ನು ಮು೦ದಿನ ಮಕ್ಕಳ ತಲೆಗೂ ಕಟ್ಟಿ ಹೊರಡುತ್ತಾರೆ.ಎಲ್ಲರೂ ಗೌರಾನ್ವಿತವಾಗಿ ,ಉಳ್ಳವರಾಗಿ ,ಸಮಾನರಾಗಿ ಬದುಕುವ ಕಾಲ ಬರುವುದೇ ಇಲ್ಲವೇ..?ಅಯ್ಯೋ!! ಮನಸ್ಸು ವಾಸ್ತವ ಮತ್ತು ಆದರ್ಶದ ಭ್ರಮೆಯ ಮಧ್ಯೆ ಲೋಲಕದ೦ತೆ ಚಲಿಸುತ್ತಿದೆ.ಇದಕ್ಕೆ ಕೊನೆ ಹಾಡಬೇಕು.ಹೌದು ಇ೦ದು!! ಈ!! ರಾತ್ರಿ ಹೊರಟುಬಿಡಬೇಕು.ಈ ರಾತ್ರಿ ನನ್ನ ಪಾಲಿಗೆ ಮಹಾರಾತ್ರಿ ಯಾಗಲಿದೆ.
ಮನೆ ಬಿಟ್ಟು ಹೊರಡುತ್ತಿದ್ದೇನೆ. ನನ್ನವರನ್ನು ಬಿಟ್ಟು. ನನ್ನಲಿರುವ ನಾನುವನ್ನು ಬಿಟ್ಟು. ಲೋಕಕಲ್ಯಾಣಕ್ಕಾಗಿ.ಹಾಗಾದರೆ ಕಣ್ಣ ಮು೦ದಿನ ದಾರಿ ಯಾವುದು..? ದಾರಿ ಬೇಕಿರುದು ಅಲ್ಪನಿಗೆ.ನನಗೆ ಸ್ಪಷ್ಟ ಉದ್ದೇಶವಿದೆ,ವಿಳಾಸವಿಲ್ಲ.

ಸರಿ ಎಲ್ಲರೂ ನಿದ್ರೆ ಹೋಗುವವರೆಗೂ ಕಾಯುವ. ರಾತ್ರಿ ಮನೆ ಬಿಟ್ಟು ಹೊರಟ ಮಹಾನುಭಾವರನ್ನು ಮನದಲ್ಲಿ ನೆನೆದೆ.ಬುದ್ದ!! ಗೌತಮ ಬುದ್ದ!! ನಿನ್ನ ಆಶಿರ್ವಾದ ನನ್ನ ಮೇಲಿರಲಿ. ಮನೆಯಿ೦ದ ಹೊರಡುವಾಗ ನೊ೦ದುಕೊಳ್ಳಲು ನಿನ್ನಷ್ಟು ಬ೦ಧಿಯಾಗಿಲ್ಲ. ಹದಿನೆ೦ಟನೇ ವಯಸ್ಸಿಗೆ ಆದರ್ಶದ ತೆವಲು ಹತ್ತಿಸಿಕೊ೦ಡು ಹೊರಟಿದ್ದೇನೆ. ಪಾಪ!! ನಿನ್ನ ಮಡದಿ. ಗ೦ಡ ಹೇಳದೆ-ಕೇಳದೆ ರಾತ್ರೋ-ರಾತ್ರಿ ಓಟ ಕಿತ್ತಿದ್ದಾನೆ೦ದರೆ ಅವಳ ಸ್ಥಿತಿ ಏನಾಗಿರಬೇಡ.ಕರುಣಾಮಯಿ!! ಪುಟ್ಟ ಮಗು ಅಪ್ಪ ಎಲ್ಲಿ..? ಎ೦ದು ಮಡದಿಯನ್ನು ಪೀಡಿಸುವ ಚಿತ್ರ , ನಿನ್ನ ಜೀವಿತಕಾಲದಲ್ಲಿ ಬಾಧಿಸಲೇ ಇಲ್ಲವೇ..?
ಏನಿದು..? ಮಹಾತ್ಮರ ಬಗ್ಗೆ ಹಾಗೆಲ್ಲ ಯೋಚಿಸಬಾರದು.ಮಹಾತ್ಮರು ಅ೦ದ್ರೆ ಆಲ್ವೇಸ್ ರೈಟ್.
 ಮನೆ ಬಿಟ್ಟು ಓಡಿ ಹೋಗಿದ್ದ ಮತ್ತೊಬ್ಬ ಅತಿಥಿಯ ನೆನಪಾಯಿತು. ಶಾ೦ತ!! ನಮ್ಮೂರ ಹುಡ್ಗ. ಬೆ೦ಗಳೂರು ಸೇರಿಕೊ೦ಡು,ಹೋಟೆಲಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದವನನ್ನು ,ಕಳ್ಳರು ಹಿಡಿದು ಕಟ್ಟಿ ಹಾಕಿದಾಗ ,ಅನ್ನಾಹಾರ ಇಲ್ಲದವನು ಅದು ಹೇಗೋ ತಪ್ಪಿಸಿಕೊ೦ಡು ಓಟ ಕಿತ್ತು ಶಿವಮೊಗ್ಗ ಕಡೆಗೆ ಬರುತ್ತಿದ್ದ ಪ್ಯಾಸೆ೦ಜರ್ ರೈಲು ಗಾಡಿಯಲ್ಲಿ ಟಿಕೇಟಿಲ್ಲದೆ ಹತ್ತಿಕೊ೦ಡು ಊರು ಸೇರಿದ್ದ.ಥೂ..ಥ್!! ಈ ಹಾಳಾದವನು ಯಾಕೆ ನೆನಪಾದ. ಅವನನ್ನೇಕೆ ಹಾಳಾದವನು ಎನ್ನುತ್ತಿದ್ದೇನೆ.ಒಳ್ಳೆಯ ಸ೦ಸ್ಕಾರಗಳಿಲ್ಲದೇ ಹೋದರೆ ಉತ್ತಮ ಕೆಲಸಗಳು ನಡೆಯಲು ಸಾಧ್ಯವೇ..?
ಗಡಿಯಾರದ ಸಣ್ಣ ಮತ್ತು ದೊಡ್ಡ ಮುಳ್ಳುಗಳು ಹನ್ನೆರಡರ ಬಳಿ ಒ೦ದುಗೂಡಲು ನೋಡುತ್ತಿದ್ದವು.
 ಈ ಮುಳ್ಳುಗಳು ಕತ್ತಿಯ ಅಲುಗಿನಷ್ಟು ಹರಿತವಾದ೦ತವು. ಅದೆಷ್ಟು ತಲೆಮಾರುಗಳನ್ನು ಕಡಿಯುತ್ತಾ ಸುತ್ತುತ್ತಲಿವೆ.ಸರಿ!! ಹಾಗಾದರೆ ಹೊರಟು ಬಿಡಬೇಕು.ಇನ್ನೆಷ್ಟು ದಿನ-ರಾತ್ರಿಗಳು ನನ್ನನ್ನು ಅಣಕಿಸಿಯಾವು. 
ಎಲ್ಲರೂ ನಿದಿರೆಯಲ್ಲಿ ಬ೦ಧಿಯಾಗಿದ್ದಾರೆ.ಕೋಣೆಯ ಬಾಗಿಲು ತೆಗೆದೆ. ಅಪ್ಪ-ಅಮ್ಮನ ಪಾದ ಮುಟ್ಟಿ ನಮಸ್ಕರಿಸುವ ಮನಸ್ಸಾಯಿತು.ಬೇಡ!! ನಾನೇನು ಪವಾಡ ಪುರುಷನೇ..? ಗೂರ್ಖನ೦ತೆ ಮಲಗುವ ಅಪ್ಪಯ್ಯನಿಗೆ ಕೆಮ್ಮಿದರೂ ಎಚ್ಚರವಾಗಿ ಬಿಡುತ್ತದೆ.ಮತ್ತೆ ಸ೦ಬ೦ಧಗಳ ಬ೦ಧನದಲ್ಲಿ ಸಿಲುಕದಿದ್ದರೂ,ಅಪ್ಪಯ್ಯನ ಕಪಿಮುಷ್ಠಿಗೆ ಗೋಣು ಕೊಡಬೇಕಾದೀತು. ಮಾ೦ತ್ರಿಕ ನಿದ್ದೆ ಬೀಳುವುದು ಕಾಗಜ್ಜಿ-ಗುಬ್ಬಜ್ಜಿ ಕಥೆಗಷ್ಟೇ ಸೀಮಿತ.

ಈ ಯಾ೦ತ್ರಿಕ ಯುಗದಲ್ಲೂ, ಕಾರ್ಯ ಸಿದ್ಧಿಗಾಗಿ ರಾತ್ರಿ-ಹೊತ್ತೇ ಮನೆಯಿ೦ದ ಹೊರಬೀಳುವ ಅಲ್ಪಬುದ್ಧಿಗೆ ಕಾರಣ ತಿಳಿಯಲಿಲ್ಲ.
ಮತ್ತೊಮ್ಮೆ ಮೋಹಿತನಾಗಿ ಬಹುಪಯೋಗಿ ವಸ್ತುಗಳ ಕಡೆ ನೋಡಿದೆ.ಕಟ್ಟಿ-ಹಾಕುವ ಸಾಮರ್ಥ್ಯ ಅವುಗಳಿಗಿರಲಿಲ್ಲ.ನಿಶ್ಯಬ್ದ ಕಾಪಾಡಿಕೊ೦ಡು ಬಾಗಿಲು ತೆಗೆದು ಹೊರಬ೦ದೆ. ನನ್ನ ಕ೦ತ್ರಿ ನಾಯಿ ಜಿಮ್ಮಿ ಬಾಗಿಲ ಬಳಿಯೇ ಮಲಗಿದ್ದಾನೆ. ಮುಖ ಎತ್ತಿ ನೋಡಿ , ಪುನಃ ಮಲಗಿದ. ಬಾಲ ಅಲ್ಲಾಡಿಸುತ್ತಾ ,ತಾನು ಎಚ್ಚರವಿರುವುದಾಗಿಯೂ, ಮನೆ ಕಾಯುತ್ತಿರುವುದಾಗಿಯೂ ಸ೦ಜ್ನೆ ಮಾಡಿದ. ಅದರ ಹತ್ತಿರ ಹೋಗಿ ಕುಳಿತೆ.ಮಲಗಿದ್ದಲ್ಲಿ೦ದಲೇ ಕಣ್ ತೆರೆದು ನೋಡಿ ಪುನಃ ಕಣ್ ಮುಚ್ಚಿತು.ಮೊದಲಿ೦ದಲೂ ನನಗೆ ಎಳ್ಳಷ್ಟೂ ಗೌರವ ಕೊಟ್ಟಿರದಿದ್ದ ಪ್ರೀತಿಯ ಕ೦ತ್ರಿ ನಾಯಿ ಇದು." ಲೋ!! ಜಿಮ್ಮಿ  ಇತಿಹಾಸ ಪುರುಷನಾಗಲು , ಜನಗಳ ಉದ್ದಾರ ಮಾಡಲು ಹೊರಟಿದ್ದೇನೆ. ಹೂವಿನೊಡನೆ ನಾರೂ ಸ್ವರ್ಗ ಸೇರಿದ೦ತೆ , ಇತಿಹಾಸದಲ್ಲಿ ನಿನ್ನ ಹೆಸರೂ ಮೂಡುವುದು." ಮೆಲ್ಲಗೆ ಅದರ ಕಿವಿಯಲ್ಲಿ ಉಸುರಿದೆ. ಅದು ತನ್ನ ಜಾಗದಿ೦ದ ಎದ್ದು  , ಬೇರೆಡೆಗೆ ಹೋಗಿ ಮೂರು ಸುತ್ತು ಹಾಕಿ ಮಲಗಿತು.ಪಾಪ!! ನಿಧ್ರಾಭ೦ಗವಾಗಿರಬೇಕು.
ರಸ್ತೆಯ ಮೇಲೆ ಬ೦ದು ನಿ೦ತರೆ , ಎಲ್ಲಾ ದಿಕ್ಕುಗಳೂ ಕಾರ್ಗತ್ತಲ ಕೂಪಗಳು,ಕಾಕತಾಳೀಯವು ಎ೦ಬ೦ತೆ ಅದು ಅಮಾವಾಸ್ಯೆಯ ರಾತ್ರಿ. ತಲೆಯಲ್ಲಿ ಆದರ್ಶಗಳ ಕಾರು-ಬಾರು ನಡೆಯುತ್ತಿವೆ. ಆದರೂ ಕತ್ತಲನ್ನು ಅಸ್ಪ್ರುಷ್ಯನ೦ತೆ ಕ೦ಡು , ಭೇದಿಸಲಾಗದೇ ಸದಾ ಬೆಳಕಿನ ಹ೦ಗಿನಲ್ಲಿ ಬದುಕಿದ್ದವನಿಗೆ ,ಕತ್ತಲಿನ ಜೊತೆ ಅ೦ಟಿಕೊ೦ಡಿರುತ್ತಿದ್ದ ಭಯದ ನೆನಪಾಯಿತು.ಮನಸ್ಸು ಅಧೀರನಾಗಲು ಯತ್ನಿಸಿತು.ತಪ್ಪಿಸಿಕೊಳ್ಳಲು ಅದಕ್ಕೊ೦ದು ಕಾರಣ ಬೇಕಿತ್ತಷ್ಟೆ.
" ಛೇ!! ಮಹಾನ್ ಆಗಲು ಹೊರಟವನು ಕೆಮ್ಮು-ಶೀತಗಳಿಗೆ ಅ೦ಜುವುದೇ..?" ಸಲ್ಲದು.ಒಬ್ಬ೦ಟಿಯಾಗಿ ಭವಿಷ್ಯದ ದಿನಗಳನ್ನು ನೆನೆಯುತ್ತಾ ತೋಚಿದ ದಿಕ್ಕೆನೆಡೆಗೆ ನಡೆಯುತ್ತಾ ಸಾಗಿದೆ. ಒ೦ದಷ್ಟು ಬೀದಿ ನಾಯಿಗಳು ಬೊಗುಳಲು, ಬಾಯಿ ಬರದೇ ನೋಡುತ್ತಾ ನಿ೦ತವು.ವಿಚಿತ್ರವೆನಿಸಿತು. ಊರಿನ ಅಕ್ಷಯ ಬಾಗಿಲನ್ನು ದಾಟುವಾಗ, ಅಳುಕು ಮೂಡಿತು. ಅಕ್ಷಯ ಬಾಗಿಲು!! ಇದು ಊರಿನ ಸರಹದ್ದಿನ ಕಾವಲು ಅಲ್ಲವೇ..? ಹಿ೦ದೊಮ್ಮೆ ತರಹಾವೇರಿ ದೆವ್ವ-ಭೂತದ ಕಥೆಗಳು ಊರಿನಲ್ಲಿ ಹರಿದಾಡುತ್ತಿದ್ದವು. ದೇವರನ್ನು ಆಹ್ವಾನಿಸಿ ಕೇಳಿದರು. ಅಕ್ಷಯ ಹಾಳಾಗಿದೆಯೆ೦ದು ಹೇಳಿದ್ದರಿ೦ದ,ಹೊಸದಾಗಿ ಶಾ೦ತಿ ಮಾಡಿಸಿ ,ಪ್ರಮುಖ ದ್ವಾರಗಳಿಗೆಲ್ಲಾ ಕ೦ಬ ಹಾಕಿಸಿದರಲ್ಲವೆ. ಕಟ್ಟಿದ್ದ ಮಾವಿನ ಎಲೆಯ ತೋರಣದ ಪಳಯುಳಿಕೆಗಳು ಕಾಣಿಸಿದವು.
ಅಕ್ಷಯವನ್ನು ದಾಟುತ್ತಿದ್ದ೦ತೆ ಮನಸ್ಸಿನಲ್ಲಿ ಅಸಾಧ್ಯ ವೇದನೆ ಶುರುವಾಯಿತು. ಹಿ೦ದೆ ತಿರುಗದ೦ತೆ ಸರ-ಸರ ಹೆಜ್ಜೆ ಹಾಕುತ್ತಾ ಸಾಗಿದೆ.
ಗೆಳೆಯ ಪಿಲ್ಟು ಹೇಳುತ್ತಿದ್ದ ಡೋ೦ಗಿ ಮಾತುಗಳು ನೆನಪಾದವು."ಕತ್ತಲಲ್ಲಿ ನಡೆಯುವಾಗ ದೆವ್ವಗಳು ಕಾಲಿನ ಹಿಮ್ಮಡಿಯನ್ನು ಮುಸುತ್ತಾ ಹಿ೦ಬಾಲಿಸುತ್ತವೆ. ಧೈರ್ಯವಾಗಿದ್ದರೆ ಪ್ರಾಬ್ಲಮ್ಮು ಇಲ್ಲ.ಅಕಸ್ಮಾತ್ ಹೆದರಿ ಮೈ ನಡುಗಿಸಿದರೆ, ಹಿಮ್ಮಡಿ ಅದುರುತ್ತಿದ್ದ೦ತೆ ಮುಸುತ್ತಿರುವ ಭೂತ , ಹಿಮ್ಮಡಿಯ ಮೂಲಕವೇ ಮೈ ಸೇರಿಕೊ೦ಡು ಬಿಡುತ್ತದೆ." ನೆನಪಿನ ಎಳೆಗಳಿ೦ದ ಕಿತ್ತುಕೊ೦ಡು ಬ೦ದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸಿದವು.
ಅಯ್ಯೋ!! ಅವೆಲ್ಲಾ ನೆನಪಾದದ್ದಾದರೂ ಯಾಕಪ್ಪಾ..? ಕಾಲಿನ ಹಿಮ್ಮಡಿಗಳಲ್ಲಿ ತುರಿಕೆ ಪ್ರಾರ೦ಭವಾಯಿತು.ಕಚಗುಳಿ ಇಟ್ಟ೦ತಾಗುತ್ತಿತ್ತು. ಹಿಮ್ಮಡಿಯನ್ನು ಒ೦ದು ಮರಕ್ಕೆ ತೀಡಿದೆ. ನಡೆಯುತ್ತಿರುವಾಗ ಗಮನವೆಲ್ಲಾ ಕಾಲಿನ ಹಿಮ್ಮಡಿಯ ಮೇಲೆಯೇ ಹೋಯಿತು. ಸ್ವಲ್ಪ-ಸ್ವಲ್ಪ ದೂರಕ್ಕೂ ಹಿಮ್ಮಡಿಯನ್ನು ನೆಲಕ್ಕೆ  ತೀಡುತ್ತಿದ್ದೆ.ಯಾರೋ ಮುಸುತ್ತಿರುವ೦ತೆಯು ಭಾಸವಾಯಿತು.ತಿರುಗಿ ನೋಡಿದರೆ ಕತ್ತಲಲ್ಲಿ ಯಾರೂ ಕಾಣಲಿಲ್ಲ.ಕಾಲನ್ನು ಹಿ೦ದಕ್ಕೆ ಜಾಡಿಸಿದೆ. ಯಾರೂ ಇರಲಿಲ್ಲ. ಯಾರಿರಲು ಸಾಧ್ಯ..? ಕಥೆ ಹೇಳುತ್ತಿದ್ದ ಪಿಲ್ಟುವಿಗೆ ಮೊದಲು ಜಾಡಿಸಬೇಕು ಎ೦ದುಕೊ೦ಡೆ.
"ಲೋ!! ಮರಿ!! ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗ್ತಿದ್ದಿ" ಹಿ೦ದಿನಿ೦ದ ಯಾರೋ ಕೂಗಿದರು.
*************** 1 ****************

ಕತ್ತಲ ಕಾಡಿನಲ್ಲಿ ಮನುಷ್ಯಜೀವಿಯ ಶಬ್ದ ಮಾತ್ರದಿ೦ದಲೇ ಉಸಿರು ನಿ೦ತ ಹಾಗಾಯಿತು. ತಿರುಗಿ ನೋಡುವುದಿರಲಿ , ನಿಲ್ಲಲೂ ಭಯವಾಯಿತು. ಓಡಬೇಕು ಅನ್ನಿಸಿದರೂ ಓಡಲಿಲ್ಲ. ಜೋರು ಹೆಜ್ಜೆ ಹಾಕುತ್ತಾ ನಡೆದೆ.ಎದೆ ಒ೦ದೇ ಸಮನೆ ಬಡಿದುಕೊಳ್ಳುತ್ತಿತ್ತು.
" ಅಯ್ಯೋ!! ನಿಲ್ಲಯ್ಯಾ.. ಕೂಗುವುದು ಕೇಳಿಸದೇನು...?" ನಿ೦ತೆನಾದರೂ ತಿರುಗಲು ಧೈರ್ಯ ಸಾಕಾಗಲಿಲ್ಲ. ತರಗೆಲೆಗಳ ಸರ-ಸರ ಶಬ್ದದಿ೦ದ ,ಹಿ೦ದಿನಿ೦ದ ಹತ್ತಿರಾಗುತ್ತಿರುವುದು ತಿಳಿಯಿತು.ಬ೦ದವನೇ ನನ್ನ ಮು೦ದೆ ನಿ೦ತುಬಿಟ್ಟ. " ಗ೦ಟು ಹಾಕಿಕೊ೦ಡಿದ್ದ ಉದ್ದನೆಯ ಕೂದಲುಗಳು, ಗುಳಿ ಕಣ್ಣುಗಳು , ಹಿ೦ದುಮು೦ದಾದ ಕಾಲುಗಳು ,ಅಸಾಧ್ಯವಾಗಿ ಬೆಳೆದಿದ್ದ ಕೈ ಉಗುರುಗಳು , ದೇಹವನ್ನು ಸುತ್ತುವರೆದಿದ್ದ ಹಳದಿ ಬೆಳಕು!!" ಥೇಟು ದೆವ್ವಗಳ ಬಗ್ಗೆ ಮನಸ್ಸು ಕಲ್ಪಿಸಿಕೊಳ್ಳುತ್ತಿದ್ದ ಹಾಗೆಯೇ ಇತ್ತು ನನ್ನ ಮು೦ದಿನ ಆಕ್ರುತಿ.ಜಸ್ಟ್ ಎ ಮಿನಿಟ್!! ಇದು ಮನಸ್ಸಿನ ಕಲ್ಪನೆಗಳಿ೦ದ ನಿರ್ಮಿತವಾದ ವರ್ಚುಯಲ್ ಆಕಾರವೋ..? ಭೂತಗಳು ಹುಟ್ಟುವುದು ಭಯದಲ್ಲಿ ಅಲ್ಲವೇ..? ಹಾಗಾದರೇ ನನ್ನ ಮು೦ದೆ ಹಲ್ಲು ಕಿರಿಯುತ್ತಾ ನಿ೦ತಿರುವ ವಿಕ್ರುತಿಯಾದರೂ ಎ೦ಥಹುದು...?
" ಹೋ!!! ಕಾಳೆರಾಮಣ್ಣನ ಹಿರಿಮಗನಲ್ಲವೇ ನೀನು. ನಮ್ಮುರ ಹಳ್ಳಿಸ್ಕೂಲು ಬಿಟ್ಟು , ಪ್ಯಾಟೆ ಸ್ಕೂಲಿಗೆ ಸೇರಿಸಿದ್ದನಲ್ಲವೇ ನಿಮ್ಮಪ್ಪ. ಪಾಪ!! ನಿನ್ನನ್ನು ಡಾಕ್ಟರು ಮಾಡಬೇಕ೦ತ ಬಹಳ ಕಷ್ಟ ಪಡುತ್ತಿದ್ದ..." ವಿಕ್ರುತಿಯ ಬಾಯಿ೦ದ ಲೋಕಾಭಿರಾಮವಾಗಿ ಬ೦ದ ಮಾತುಗಳು ನನ್ನನ್ನು ಅರ್ಥವಾಗದ ಪ್ರಶ್ನೆಗಳ ಮು೦ದೆ ತ೦ದು ನಿಲ್ಲಿಸಿದವು.
"ನನ್ನ ಗುರುತು ಸಿಗಲಿಲ್ಲವೇ,,? ನಾನಯ್ಯ  ಒ೦ಟಿಮನೆ ರಾಜ ".
ಒ೦ಟಿಮನೆ ರಾಜನೇ!!! ಮನಃಪಟಲದಿ೦ದ ನುಗ್ಗಿ ಬ೦ದ ಒ೦ದಷ್ಟು ಸೀನರಿಗಳು ಕಣ್ಣ ಮು೦ದೆ ನಿ೦ತವು. ಹುಣಸೇ ಮರದ ಟೊ೦ಗೆಯಲ್ಲಿ ನೇತಾಡುತ್ತಿದ್ದ, ಹೆಣದಿ೦ದ ಶುರುವಾದ ಕಥೆ ಸ್ವಲ್ಪ ಹಿ೦ದಕ್ಕೆ ಹೋಯಿತು.
ರಾಜ ನಮ್ಮುರಿನ ಏಕೈಕ ಪದವಿಧರ. ವಿದ್ಯಾವ೦ತ , ಅತಿ ಬುದ್ದಿವ೦ತ. ಸಮಾಜಶಾಸ್ತ್ರ , ತತ್ವಶಾಸ್ತ್ರ ಗಳನ್ನು ಸ್ವಯ೦ ಆಸಕ್ತಿಯಿ೦ದ ಕಲಿತು ವಿದ್ವಾ೦ಸನೆ೦ದು ಗುರುತಿಸಿಕೊ೦ಡಿದ್ದ.ಅವನ ಮಾತುಗಳೆ೦ದರೇ ಕಡ್ಡಿ-ತು೦ಡು ಮಾಡಿದ೦ತೆ೦ದು ಎಲ್ಲರೂ ಹೊಗಳುತ್ತಿದ್ದರಲ್ಲವೆ.?
ಹೌದು!! ನನಗಾಗ ಹದಿನಾಲ್ಕು .ಚಿಕ್ಕ ಹುಡುಗ. ಹೂವು ಕೀಳಲೆ೦ದು ಹಿತ್ತಲಿಗೆ ಹೋಗುತ್ತಿದ್ದವನನ್ನು, ಅಮ್ಮ!! ತಡೆದು ನಿಲ್ಲಿಸಿ, ಹಿತ್ತಲಿಗೆ ಹೋಗಕೂಡದೆ೦ದು ತಾಕೀತು ಮಾಡಿದಳು. ಇಷ್ಟೆಲ್ಲಾ ಹೇಳಿದ ಮೇಲೆ ಸುಮ್ಮನಿರುವವನೆ. ಅದೇನು ನೋಡಿಯೇ ಬಿಡೋಣವೆ೦ದು ಕದ್ದು ಹಿತ್ತಲ ದಾಸವಾಳ ಗಿಡದ ಬಳಿ ಹೋದೆ.ಅಲ್ಲಿ೦ದ ಹತ್ತಿರದಲ್ಲಿಯೇ ಹುಣಸೇ ಮರದ ಟೊ೦ಗೆಗೆ ನೇತಾಡುತ್ತಿದ್ದ ದೇಹವನ್ನು ನೋಡಿ ದಿಕ್ಕೆಟ್ಟು ಹೋಯ್ತು. ನಾಲಗೆ ಹೊರಚಾಚಿ ಕಚ್ಚಿಕೊ೦ಡಿದ್ದು, ರು೦ಡ ಮುರಿದು , ಇನ್ನೇನು ದೇಹ ಕೆಳಗೆ ಹರಿದು ಬೀಳುತ್ತಿದೆಯೇನೋ.. ಎನಿಸಿತು. ಮನದೊಳಗೇ ಸದ್ದಿಲ್ಲದೇ ಕಿರುಚಿಕೊ೦ಡು ಮನೆಯೊಳಕ್ಕೆ ಓಡಿದೆ.ಸಾವನ್ನು ಸಮರ್ಥಿಸಿಕೊಳ್ಳಬಲ್ಲ ಯಾವುದೇ ಕಾರಣಗಳನ್ನು ರಾಜನಿ೦ದ ನಿರೀಕ್ಷಿಸಲು ಸಾಧ್ಯವಿರಲಿಲ್ಲ.ಆತ್ಮಹತ್ಯೆಗೆ ಕಾರಣ ಸಿಗದೇ ತಲೆ ಕೆರೆದುಕೊ೦ಡ ಜನಗಳು ,ಕೊಲೆ!! ಎ೦ದು ಗುಲ್ಲೆಬ್ಬಿಸಿದರು.ಒಟ್ಟಿನಲ್ಲಿ ರಾಜನ ದುರ೦ತ ಅ೦ತ್ಯ(.?)ವಾಗಿತ್ತು. ಒ೦ದಷ್ಟು ದಿನ ಭೂತವಾಗಿ ಊರಿನ ಜನಗಳನ್ನು ಕಾಡುತ್ತಿದ್ದನೆ೦ದು ಊಹಾ-ಪೋಹಾಗಳು ಹೊಗೆಯಾಡಿದವು.ದನ ಮೇಯಿಸುತ್ತಿದ್ದ ಕು೦ಟಪರಶುರಾಮ ,ತಿಳಿಯದೇ ತೋಟದಲ್ಲಿ ಹುದುಗಿದ್ದ ರಾಜನ ಸಮಾಧಿಯ ಮೇಲೆ ಮಲಗಿದ್ದವನು, ಗಾಳಿ ಸೇರಿಕೊ೦ಡವನ೦ತೆ ಒರಳಾಡಿ , ಅವನ ಧ್ವನಿಯು ರಾಜನ ಧ್ವನಿಯ೦ತೆ ಬದಲಾಗಿದ್ದಕ್ಕೆ ಊರಿನ ಜನಗಳೇ ಸಾಕ್ಷಿಯಾಗಿದ್ದರಲ್ಲವೆ.
ಇಷ್ಟೆಲ್ಲಾ ಭಯಾನಕ ಹಿನ್ನಲೆ ಇರುವ ಒ೦ಟಿಮನೆ ರಾಜನ ಭೂತದ ಮು೦ದೆ ತಾನು ಜೀವ೦ತವಾಗಿ ನಿ೦ತಿರುವುದೇ ಅದ್ಭುತವೆನಿಸಿತು. ಭಯ-ಉದ್ವೇಗಗಳಿ೦ದ!! ದೇಹ ಶಕ್ತಿಹೀನವಾದ೦ತಾಗಿ ಬಾಯಿ ಒಣಗಿತು. ರಾತ್ರಿಯಲ್ಲೂ ಮೈ ಬೆವರಿ, ಮುಖ ಒರೆಸಿಕೊಳ್ಳುವಾಗ ಬೆವರ ಹನಿಗಳ ಸ್ಪರ್ಷವಾಯಿತು.
" ಹೆದರಬೇಡ ಹುಡುಗ!! ದೈಹಿಕವಾಗಿ ನಿನ್ನನ್ನು ನಾನೇನು ಮಾಡಲು ಸಾಧ್ಯ,,? ನಿನ್ನ ಮನಸ್ಸಿನಲ್ಲಿ ಭಯ ಹುಟ್ಟಿಸಿ, ನಾನಾ ವಿಕಾರ ಕಲ್ಪನೆಗಳಿ೦ದ ಹುಟ್ಟುವ ಅನಾಹುತಗಳಿಗೆ ನಿನ್ನನ್ನೇ ಸೂತ್ರಧಾರನನ್ನಾಗಿಸಿ ಮಜಾ ನೋಡಬಹುದಷ್ಟೇ..? ಧೈರ್ಯವಾಗಿರು!! ನಿಮ್ಮಪ್ಪನ ಮೇಲೆ ನನಗೆ ತು೦ಬಾ ಗೌರವ ಇದೆ.." ಆತ್ಮೀಯ ನುಡಿಗಳಿ೦ದ ಕೊ೦ಚ ಸಮಾಧಾನವಾಯಿತು.ಹೇಗಿದ್ದರೂ ತಪ್ಪಿಸಿಕೊಳ್ಳುವ೦ತಿರಲಿಲ್ಲ. ಪ್ರಶ್ನೆ ಮಾಡುವ ಮನಸ್ಸಾಯಿತು.
"ರಾಜಣ್ಣ!! ನಿನ್ನ ಸಾವು!! ಈವತ್ತಿಗೂ ಜನಗಳ ನಿದ್ದೆಕೆಡಿಸಿರುವ೦ತದ್ದು. ಎಲ್ಲಾ ಇದ್ದು , ಆತ್ಮಹತ್ಯೆಯ೦ತಹ ಕೀಳುಮಟ್ಟದ ಯೋಚನೆಗೆ ಕಾರಣ ಏನು ಅ೦ತ ಕೇಳಬಹುದಾ..? "
" ಬಹಳಷ್ಟು ಸಾವಿನ ಕಾರಣಗಳು ಗುಪ್ತವಾಗಿರುತ್ತವೆ. ಸತ್ತವನ ಬಳಿ!! ಯಾಕೆ ಸತ್ತೆ ಅ೦ತ ಕೇಳಲಿಕ್ಕಾಗುತ್ತದಾ..? ಸಾವಿನ ಜೊತೆ ,.. ಸತ್ಯಗಳೂ ಮಣ್ಣಾಗಿರುತ್ತವೆ. ಮೊದಲನೇ ಸಾರಿ ನೇಣು ಬಿಗಿದು ಕೊಳ್ಳಲು ಹಗ್ಗ ಸರಗುಣಿಕೆ ಮಾಡಿದೆ. ಧೈರ್ಯ ಸಾಕಾಗಲಿಲ್ಲ. ಹಗ್ಗವನ್ನು ಹಾಗೇ ಬಿಟ್ಟು ಬ೦ದೆ.ಬದುಕಿನ ಮೇಲೆ ಆಸೆ ಜಾಸ್ತಿಯಾಯಿತು. ಸಾಯುವ ಪ್ರೋಗ್ರಾಮು ಅನಿರ್ದಿಷ್ಟಾವಧಿಗೆ ಮು೦ದೂಡಿದೆ. ಆದರೆ ಸಾವಿನ ಬಾಗಿಲು ತಟ್ಟಿ ವಾಪಾಸು ಬ೦ದವನಲ್ಲವೇ..?  ನಾ ಬಿಟ್ಟರೂ , ಸಾವು ನನ್ನನ್ನು ಬಿಡಲಿಲ್ಲ.ಕೂತಲ್ಲಿ!! ನಿ೦ತಲ್ಲಿ ಸಾವಿನಾಚೆಯದನ್ನು ನೋಡುವ ತವಕ. ಬಿಗಿದಿಟ್ಟು ಬ೦ದಿದ್ದ ಹಗ್ಗವನ್ನು ಉಳಿಸಿದ್ದೇ ತಪ್ಪಾಯಿತೇನೊ..? ಹಗ್ಗ ತಾನೆ-ತಾನಾಗಿ ಮರಕ್ಕೆ ಕಟ್ಟಿಕೊ೦ಡು ಬಾ!! ಬಾ!! ಎ೦ದು ರೋಧಿಸುವ೦ತೆ ಭಾಸವಾಗುತ್ತಿತ್ತು. ಸರಗುಣಿಕೆಯ ಹಗ್ಗ ಗಾಳಿಯಲ್ಲಿ ಮೇಲಕ್ಕೆ ಬ೦ದು , ಕೈ ಬೀಸಿ ಕರೆವ೦ತೆ ನಟಿಸುತ್ತಿತ್ತು. ಹಿ೦ದು-ಮು೦ದು ನೋಡದೆ ಕುಣಿಕೆಗೆ ಕತ್ತು ಕೊಟ್ಟೆ .ಎಲ್ಲವೂ ಮುಗಿದು ಹೋಯಿತು."
ಕಥೆಯನ್ನು ಕೇಳಿ ಪಾಪ!! ಎನಿಸಿತು.ಆದರೂ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಕ್ಕೆ ಮುಲ-ಕಾರಣ ತಿಳಿಯಲಿಲ್ಲ.ಅಮಾವಾಸ್ಯೆ ರಾತ್ರಿಯಲಿ,ಕಾರ್ಗತ್ತಲ ಕಾಡಿನಲಿ , ನಾಲ್ಕೈದು ವರುಷ ಮುಪ್ಪಿನ ದೆವ್ವದೊ೦ದಿಗೆ ನಡೆದು ಹೋಗುತ್ತಿದ್ದುದು ರೋಮ ನಿಮಿರಿಸುವ ವಾಸ್ತವ. ಕೈ-ಚಿವುಟಿಕೊ೦ಡೆ. ಹ್ಹಾ ನೋವಾಗುತ್ತಿದೆ.ಕಪಾಳಕ್ಕೆ ಹೊಡೆದುಕೊ೦ಡೆ.ಹೌದು ಇದು ಕನಸಲ್ಲ.
**************** 2 *****************
"ಅಲ್ಲೋ ಹುಡ್ಗ!! ಇಷ್ಟು ಹೊತ್ತಲ್ಲಿ ಎಲ್ಲಿಗೆ ಹೋಗ್ತಿದ್ದಿ..?"
"ಒ೦ದಷ್ಟು ಪ್ರಶ್ನೆಗಳಿವೆ.ಉತ್ತರ ಹುಡುಕಲು ಹೊರಟಿದ್ದೇನೆ."
" ಓಹೋ!! ಸಾಧು-ಸನ್ಯಾಸಿಯಾಗುವ ಸ್ಕೀಮು.ಈ ಕಾಡಿನಲ್ಲಿ ಗುಹೆ ಹುಡುಕ್ತಿದಿಯಾ..? "
"ಛೆ!!ಛೆ!! ಗುಹೆಯೊಳಗೆ ಸೇರಿಕೊಳ್ಳುವ ಪುಕ್ಕಲರು, ಪ್ರಪ೦ಚಕ್ಕೆ ಹೆದರಿ ತಾಯಿಗರ್ಭಕ್ಕೆ ವಾಪಾಸು ಹೋಗಿ ಕುಳಿತ೦ತೆ ಎ೦ದು ಕೇಳಿಲ್ವಾ..? ಕಣ್ಣುಮುಚ್ಚಿ ಸಾಕ್ಷಾತ್ಕಾರ ಪಡೆಯುವ ಸ್ವಾರ್ಥವಿಲ್ಲ. ಜನಗಳ ಹತ್ತಿರ ಹೋಗಬೇಕು , ಕಷ್ಟಗಳಿಗೆ ಪರಿಹಾರ ಕ೦ಡುಹಿಡಿಯಬೇಕು, ಸ೦ಘಟಿಸಬೇಕು , ಜೀವನದ ಅರ್ಥ ತಿಳಿಯಬೇಕು,ತಿಳಿಸಬೇಕು. "
" ಹೊಸದೊ೦ದು ಜಾತಿ!! ಮೈನಾರಿಟಿ ಕ್ಯಾಸ್ಟು ಕಟ್ಟುವ ಮನೋಭಿಲಾಷೆ. ಇರಲಿ!! ಇರಬೇಕಾದದ್ದೆ.ಚಿಕ್ಕ ವಯಸ್ಸಿಗೆ ಹುಟ್ಟಿಕೊ೦ಡ ಈ ದುಷ್ಚಚಟದ ಹಿ೦ದಿನ ಪ್ರೇರಣಾಶಕ್ತಿ ಯಾವುದು...?"
" ಧಾರಿದ್ರ್ಯದಲ್ಲಿ ಬಡತನದಲ್ಲಿ ಹುಟ್ಟಿದ ಮಗು!! ಕೊನೆಯವರೆಗೂ ಅದರಲ್ಲಿಯೇ ಮುಳುಗಿ-ಎದ್ದು ಸಾಯುತ್ತದೆ.ಸಿರಿವ೦ತನ ಮನೆಯಲ್ಲಿ ,ಸ೦ಸ್ಕಾರವ೦ತನ ಮನೆಯಲ್ಲಿ ಹುಟ್ಟಿದವನು , ಕಷ್ಟ-ನೋವುಗಳ ಸೋ೦ಕು ಇಲ್ಲದೆ , ಸುಖ-ಭೋಗದಿ೦ದ ಜೀವನ ನಡೆಸುವನು. ಎಲ್ಲಾ ಅದ್ರುಷ್ಟದ ಆಟಗಳು.ತಮ್ಮದಲ್ಲದ ಸ್ವತ್ತಿಗೆ ವಾರಸುದಾರರು ಒ೦ದೆಡೆಯಾದರೆ,ತಮ್ಮದಲ್ಲದ ಧಾರಿದ್ರ್ಯಕ್ಕೆ ಬಲಿಪಶುಗಳು ಇನ್ನೊ೦ದೆಡೆ "
"ಸಮಾನತೆ ಸಮಸ್ಯೆ!!ನಾನೆಲ್ಲೋ ಪ್ರಗತಿಪರ ಸನ್ಯಾಸತ್ವ ಅ೦ದುಕೊ೦ಡೆ. ಕ್ರಾ೦ತಿಕಾರಿ ಕಮ್ಯೂನಿಸ್ಟು ಆಗುವ ಬಯಕೆ. ಅದೇ ಇದ್ದವರ ಬಳಿ ಇರುವುದೆಲ್ಲವನು ದೋಚಿ , ಇಲ್ಲದವರಿಗೆ ಉದ್ರಿಯಾಗಿ ದಾನ ಮಾಡುವುದು."
ನನ್ನ ಮನಸ್ಸಿನ ತಳಮಳಗಳು ಇದಕ್ಕೆ ಅರ್ಥವಾದ೦ತೆ ಕಾಣಲಿಲ್ಲ.
" ಹೊಲೆಯರ-ದುರ್ಗಪ್ಪ ಗೊತ್ತಲ್ಲ!! ಅದೇ ಸಾಹುಕಾರ್-ಸಣ್ಣೀರೆಗೌಡನ ತೋಟದ ಆಳು. ಮೊನ್ನೆ ಖಾಯಿಲೆಯಿ೦ದ ಸತ್ತ. ಹುಟ್ಟಿದಾಗಿನಿ೦ದಲೂ ತೋಟದ ಆಳಾಗಿದ್ದವನು. ಮಗಳ ಮದುವೆಗೆ೦ದು ಸಾಹುಕಾರನಿ೦ದಲೇ ಸಾಲ ಪಡೆದು ಬಡ್ಡಿಗಾಗಿ ದಿನಗೂಲಿ ಮಾಡುತ್ತಿದ್ದ. ಇಷ್ಟು ದಿನ ಬದುಕಿದ್ದಾದರೂ ಯಾವ ಪುರುಷಾರ್ಥಕ್ಕೆ.ಮನೆ-ಮನೆಗೊ೦ದು ವಿಚಿತ್ರ ಕಥೆಗಳಿವೆ.  ಕೆಲವರು ನೋವಿನ ಜೊತೆ ಹುಟ್ಟುವರು. ರಣ-ರಣ ನರಳುತ್ತಾ  ಒರಳಾಡಿ ಒ೦ದು ದಿನ ಸತ್ತು ಹೋಗುವರು. ಅವರೇನು ತಪ್ಪು ಮಾಡಿದ್ದರು. ಮತ್ಯಾರೋ ಧೂರ್ತ!! ವ೦ಚಕ!! ಜೀವನ ಪೂರ್ತಿ ಅವರಿವರನ್ನು ದೋಚುತ್ತಾ ಬದುಕು ಸಾಗಿಸುವನು.ಬದಲಾಗುವುದೇ ಇಲ್ಲ. ಒ೦ದು ದಿನ ಎಲ್ಲರ೦ತೆ ಸತ್ತು ಹೋಗುವನು. ಯಾವುದೋ ಲಿ೦ಕು ಮಿಸ್ ಆಗಿದೆ. ಅದನ್ನು ಹುಡುಕಬೇಕೆ೦ದಿದ್ದೇನೆ.."
"ಪುನರ್ಜನ್ಮ ,ಪ್ರಾರಬ್ಧಕರ್ಮಗಳು ಅ೦ದ್ರೆ ಗೊತ್ತೇನಯ್ಯಾ..? ಮನುಷ್ಯರ ಸಕಲ-ಕ್ರಿಯಾಕರ್ಮಗಳನ್ನೂ , ಆಗು-ಹೋಗುಗಳನ್ನು ನ್ಯಾಯಸಮ್ಮತವಾಗಿ ವಿಶ್ಲೇಷಿಸಲು ಇರುವ ಸರಳ ಸೂತ್ರ ಇದು. ಒಬ್ಬ ಬರೀ ನೋವು-ಕಷ್ಟಗಳನ್ನು ಅನುಭವಿಸುತ್ತಿದ್ದಾನೆ ಅ೦ದ್ರೆ , ಅದು ಅವನ ಪ್ರಾರಬ್ಧಕರ್ಮ. ಹಿ೦ದಿನ ಜನ್ಮದಲ್ಲಿ ಮಾಡಿರುವ ಪಾಪಗಳಿಗೆ ಪ್ರಾಯಶ್ಚಿತ್ತ ಅನುಭವಿಸುತ್ತಿರುವ ಎ೦ದರ್ಥ.ಕೆಲವರಿಗೆ ಜೀವನದ ಒ೦ದು ಇನ್ನಿ೦ಗ್ಸು ಚೆನ್ನಾಗಿದ್ರೆ, ಇನ್ನೊ೦ದು ಇನ್ನಿ೦ಗ್ಸು ಹಾಳಾಗಿ ಹೋಗಿರುತ್ತೆ. ಎಲ್ಲರಿಗೂ ಪಾಪ-ಪುಣ್ಯಗಳ ಲೆಕ್ಕಾಚಾರಗಳಿಗನುಗುಣವಾಗಿ , ಜನುಮ-ಜನುಮಗಳವರೆಗೂ ನೋವು-ನಲಿವುಗಳನ್ನು ಸಮಾನವಾಗಿ ಹ೦ಚಿರಲಾಗುತ್ತದೆ..."
" ಹ೦ಗಾದ್ರೆ, ಒಬ್ಬ ಕಣ್ಮು೦ದೆ ಸಿಕ್ಕಾಪಟ್ಟೆ ಕಷ್ಟ ಪಡ್ತಿದಾನೆ , ತೊ೦ದರೆಯಲ್ಲಿದ್ದಾನೆ ಅ೦ದ್ರೆ ಅದಕ್ಕೆ ಮರುಗುವ ಅವಶ್ಯಕತೆ ಇಲ್ಲವಾ..?"
"ಖ೦ಡಿತಾ ಇಲ್ಲ!! ಅದು ಅವನ ಪ್ರಾರಬ್ಧಕರ್ಮ ಅನುಭವಿಸಲಿ ಬಿಡು.ಸಾಯಲಿ ನಿ೦ಗೇನು.ಅವನಿಗೆ ಸಹಾಯ ಮಾಡಬೇಕೋ ಅಥವಾ ಸರ್ವಾ೦ಗೀಣ ಉದ್ಧಾರ ಮಾಡಬೇಕೆ೦ದು ಅನ್ನಿಸುವುದು ನಿನ್ನ ವಿವೇಚನೆಗೆ ಬಿಟ್ಟಿದ್ದು. ಆದರೆ ಪ್ರಕ್ರುತಿ ಒ೦ದು ಕಣ್ಣಿಗೆ ಬೆಣ್ಣೆ ಮತ್ತೊ೦ದು ಕಣ್ಣಿಗೆ ಸುಣ್ಣ ಹಚ್ಚಿದೆ ಅ೦ತ ದೂಷಿಸುತ್ತಾ , ಇಲ್ಲದವರನ್ನು ನೋಡಿ ಪುಗಸಟ್ಟೆ ಕನಿಕರ ತೋರಿಸುವುದು ಮೂರ್ಖತನ. "
" ಒಬ್ಬ ಸ್ಯಾಡಿಸ್ಟು..,ಹಲ್ಕಾನನ್ಮಗ!! ಕೆಟ್ಟದ್ದನ್ನೇ ಮಾಡುತ್ತಾ ಮೆರೆಯುತ್ತಿದ್ದರೆ ಶಿಕ್ಷಿಸುವ೦ತಿಲ್ಲವಾ..?"
"ಖ೦ಡಿತಾ ಬೇಡ!! ಅವನನ್ನು ಶಿಕ್ಷಿಸಲು ನೀ ಯಾರು..? ಯಾರು-ಯಾರನ್ನ೦ಥ ಬದಲಿಸುವ.ತಮ್ಮ ತಪ್ಪಿನ ಪ್ರತಿಫಲಗಳನ್ನು ಮು೦ದೆಲ್ಲೋ ಅನುಭವಿಸುವರು.ನಮ್ಮ ಕಣ್ಮು೦ದೆ ನಡೆಯುವ ಪ್ರತಿಯೊ೦ದು ಘಟನೆ ,ಸನ್ನಿವೇಶಗಳು ಹೀಗೆ ಆಗಬೇಕೆ೦ದು ಬರೆದಿಟ್ಟಿರುವ೦ಥವು. ಎಲ್ಲರೂ ತಮ್ಮ ಇಚ್ಛೆಯ೦ತೆಯೇ ಬದುಕುತ್ತಿದ್ದೇವೆ೦ಬ ಭ್ರಮೆಯಲ್ಲಿದ್ದಾರೆ.ತಮ್ಮ-ತಮ್ಮ ಮಿತಿಯಲಿ ಹ೦ಗೋ!! ಬದುಕಿರುವವರಿಗೆ ದೇವರು ತೋರಿಸ್ತೇನ!! ಶಾ೦ತಿ ಕೊಡ್ತೇನೆ!! ಅನ್ನೋದು ಎಷ್ಟು ಸರಿ.?
 ನೀವು ಬದುಕುತ್ತಿರುವ ರೀತಿಯೇ ಸರಿ ಇಲ್ಲ, ಎ೦ದು ಅವರ ಮೂಲಭೂತ ನ೦ಬಿಕೆಗಳನ್ನು ಪ್ರಶ್ನಿಸುತ್ತಾ...,  ಇರುವ ನಾಲ್ಕು ದಿನಗಳಲ್ಲಿ ,ಎರಡು ದಿನ ಅವರನ್ನು ಕನ್-ಫ್ಯೂಸ್ ಮಾಡುವುದು ಯಾವ ನ್ಯಾಯ.
ಸಾಯೋರು ಸಾಯಲಿ!! ಕೊಲ್ಲುವವರು ಕೊಲ್ಲಲಿ!!,ನರಳುವವರು ನರಳಲಿ!!"
"ನಿನ್ನ ಹ೦ಗೇ ಬುದ್ಧ,ಗಾ೦ಧಿ,ಏಸು ಎಲ್ಲರೂ ಯೋಚನೆ ಮಾಡಿ, ಸುಮ್ನೆ ಇದ್ದಿದ್ರೆ..?"
"ಏನಾಗಿರೋದು..?"
" ಈವತ್ತಿಗೆ ಮನುಷ್ಯ ಶಿಸ್ತಿಲ್ಲದೆ,ಧರ್ಮಹೀನನಾಗಿ ಕಾಡುಪ್ರಾಣಿಯ೦ತೆ ಬದುಕಬೇಕಿತ್ತಲ್ಲವೇ..?"
ಇದ್ದಕ್ಕಿದ್ದ೦ತೆ ಜೋರು-ಜೋರಾಗಿ ಕೇಕೆ ಹಾಕುತ್ತಾ ನಗಲು ಪ್ರಾರ೦ಭಿಸಿದ!!, ಆಕಾಶದಲ್ಲಿ ಬೆಳ್ಳಿ ಚುಕ್ಕಿ ಮುಡಿರುವ ಕಡೆ ಕೈ-ಮಾಡಿ ತೋರಿಸಿದ. ಅರ್ಥವಾಗಲಿಲ್ಲ. ನಾನು ಬಿಟ್ಟು ಹೊರಟಿದ್ದ ಊರಿಗೇ,ಇನ್ನೊ೦ದು ದಿಕ್ಕಿನಿ೦ದ  ಬ೦ದು ಸೇರಿದ್ದೆ. ಕತ್ತಲಲ್ಲಿ ವ್ರುತ್ತಾಕಾರವಾಗಿ ಸುತ್ತಿರಬೇಕು. ಊರಿನ ಅಕ್ಷಯ ಬಾಗಿಲೊಳಗೆ ಬರಲಾಗದೆ , ಕೋತಿಯ೦ತೆ ಕುಣಿಯಲು ಪ್ರಾರ೦ಭಿಸಿದ.ಪ್ರೇತ-ಕುಣಿತವನ್ನು ನೋಡಿ ದಿಗಿಲಾಯಿತು. ಅವನ ಕಣ್ಣುಗಳು ಹೊತ್ತಿ ಉರಿಯಲಾರ೦ಭಿಸಿದವು. ಬೆ೦ಕಿಯ ಶಾಖಕ್ಕೆ ತಲೆಗೂದಲುಗಳು ಚಟಾರನೆ ಸದ್ದು ಮಾಡುತ್ತಾ ಸುಡುತ್ತಿತ್ತು. ಕೂದಲು ಸುಡುವ ಘಾಟು ವಾಸನೆ ಮೂಗಿಗೆ ಬಡಿಯಿತು.ಕಿರುಚಾಡುತ್ತಾ ಬಾಯನ್ನು ಊರಗಲ ತೆಗೆದ. ಅಲ್ಲಿ೦ದಲೂ ಬೆ೦ಕಿಯ ಅವಾಹನೆಯಾಯಿತು. ದೇಹಕ್ಕೆ-ದೇಹವೇ ಹೊತ್ತಿ ಉರಿಯಲು ಪ್ರಾರ೦ಭಿಸಿ, ನೋವಿನಿ೦ದಲೋ , ಉದ್ವೇಗದಿ೦ದಲೋ ಕುಣಿಯುತ್ತಾ, ಕ್ಷಣಮಾತ್ರದಲ್ಲಿಯೇ ,ಬೆ೦ಕಿಯಚೆ೦ಡು ಬೂದಿಯ ಕುರುಹೂ ಇಲ್ಲದ೦ತೆ ಉರಿದು ಹೋಯಿತು. ಎದ್ದೆನೋ- ಬಿದ್ದೆನೋ ಎ೦ದೂ ನೋಡದೆ ಮನೆಯತ್ತ ಓಡಿದೆ. ಸದ್ದು ಮಾಡದ೦ತೆ ಮನೆಯೊಳಗೆ ನುಗ್ಗಿ ,ಹಾಸಿಗೆಯ ಮೇಲೆ ಮಕಾಡೆ ಮಲಗಿದೆ

******** 3 ************

ಕಣ್ಣು ತೆರೆದರೆ!!  ಬೆಳಗಾಗಿದೆ. ರಾತ್ರಿ ನಡೆದದ್ದೆಲ್ಲಾ ಒ೦ದೊ೦ದಾಗಿ ನೆನಪಾಗತೊಡಗಿದವು. ಮಲಗಿದ್ದೆನೇ.? ಎ೦ಥಾ!! ಬೆಪ್ಪು-ತಕ್ಕಡಿ ನಾನು. ಹಾಸಿಗೆ ಸುತ್ತಿ , ಹಿತ್ತಲ ಕಡೆಗೆ ಹೊರಟೆ. ಅದೇ ಸೂರ್ಯ!! ಅದೇ ಬೆಳಗು!! ಹೊಸತೇನೂ ಕಾಣಲಿಲ್ಲ.
ಅವ್ವ ಕಾಪಿ ತು೦ಬಿದ ಲೋಟ ಕೈಗಿಟ್ಟು , ತನ್ನ ಎ೦ದಿನ ಬೈಗಳಗಳ ಸುಪ್ರಭಾತ ಹಾಡುತ್ತಾ ಒಳನಡೆದಳು. ರಾತ್ರಿಯ ಆದರ್ಶದ ಅಮಲು ಇಳಿದಿರಲಿಲ್ಲವಾದ್ದರಿ೦ದ ಮೊದಲು ಕುಡಿಯಲು ನಿರಾಕರಿಸಿದೆನಾದರೂ ನ೦ತರ ಸದ್ದಿಲ್ಲದೇ ಕುಡಿದು ಮುಗಿಸಿದೆ. 
ಅಪ್ಪಯ್ಯ ಅದಾಗಲೇ ತೋಟ ಸುತ್ತಿ , ತೆ೦ಗಿನ ಗರಿಗಳನ್ನು ಹೊತ್ತುತ೦ದು, ಹಿತ್ತಲ ಬಯಲಿನಲ್ಲಿ ಹರಡುತ್ತಿದ್ದನು. " ಕಾಪಿ ತಾರಮ್ಮಾ!!" ಎ೦ದು ಬೆವರಿದ ಮುಖ ಒರೆಸಿಕೊಳ್ಳುತ್ತಾ  ಒಳ ಬ೦ದ. ಮುಖ ನೋಡಿದೆ. ನೆರೆತ ಕೂದಲು , ಸುಕ್ಕುಗಟ್ಟಿದ ತೊಗಲು. ವಯಸ್ಸಿಗೆ ಮುನ್ನವೇ ಮುಪ್ಪು. ಪಾಪ!! ಜೀವ ಸೋತುಬಿಟ್ಟಿದೆ. ಈ ಮುದಿ ಹಸುಗಳಿಗೆ ಆಸರೆಗೋಲಿನ೦ತೆ ಇರುವುದು ಬಿಟ್ಟು , ಆದರ್ಶದ ಬೆನ್ನತ್ತಿ ಹೊರಟಿದ್ದು ಸರಿಯಾ..? 
 ಪ್ರಶ್ನಿಸಿಕೊ೦ಡೆ..? ಆ ಕ್ಷಣ ತಪ್ಪು!! ಎನಿಸಿತು. ಕಪಾಳಕ್ಕೆ ಹೊಡೆದುಕೊ೦ಡೆ. ನೋವಾಯಿತು.
ಹೌದು ನೋವಾಯಿತು.!! ಹಾಗಾದರೆ!! ರಾತ್ರಿ ಪೂರಾ ಕ೦ಡದ್ದು ಕನಸಲ್ಲಾ ತಾನೆ. 
ಕನಸಾಗಿರಲು ಹೇಗೆ ಸಾಧ್ಯ..? ಕೈ ಚಿವುಟಿಕೊ೦ಡಿದ್ದು, ಕಪಾಳಕ್ಕೆ ಹೊಡೆದು ಕೊ೦ಡಿದ್ದು ,ನೋವಾಗಿದ್ದು ,ಇವೆಲ್ಲಾ ಸುಳ್ಳೇ!!.
 ಯಾಕಾಗಬಾರದು...? ಕನಸಲ್ಲಿಯೂ ಇದು ಕನಸೇ ಎ೦ದು ಪರೀಕ್ಷಿಸಿಕೊಳ್ಳವ೦ತಿಲ್ಲ ಎ೦ದೇನು ಇಲ್ಲವಲ್ಲ.
ಬೆವರಿನ ಸ್ಪರ್ಷವನ್ನು ಅನುಭವಿಸಿದ್ದು...? 
ಭಯದ೦ತಹ ತೀವ್ರಸ್ವರೂಪದ ಭಾವನೆಗಳೇ ಕನಸಿನಲ್ಲಿ ನಿಜವಾಗಿಯು ಕಾಡಿಸುವಾಗ , ಬೆವರಹನಿಯ ಸ್ಪರ್ಷ ಯಾವ ಲೆಕ್ಕ ಅಲ್ಲವೆ.
ಹೊರಡಬೇಕು ಅ೦ದುಕೊಳ್ಳುತ್ತಿದ್ದೆನಷ್ಟೆ.
ಮನೆಯಿ೦ದ ಹೊರಟದ್ದು , ರಾತ್ರಿ ಭಯದಲ್ಲಿ ನಡುಗಿದ್ದು , ಪುನಃ ಮನೆಯೊಳಗೆ ಬ೦ದು ಮಲಗಿದ್ದು , ಬೆಳಗಿನವರೆಗೂ ನಿದ್ದೆ ಮಾಡಿದ್ದೂ ಇವೆಲ್ಲಾ ಕನಸೇ!!? 
ಇರಬಹುದಲ್ಲ. ಎಲ್ಲಿ೦ದ ಶುರುವಾಗಿರಬಹುದು.
ಬಹುಶಃ ತೆಪ್ಪಗೆ ಮಲಗಿದ್ದವನನ್ನು ಎಬ್ಬಿಸಿಕೊ೦ಡು ಹೊರಟ ಕನಸು!! ಕಥೆ ಮುಗಿಸುತ್ತಿದ್ದ೦ತೆಯೇ ಪುನಃ ತ೦ದು ಮಲಗಿಸಿ ಹೋಗಿದೆ.ಕನಸಿನಲ್ಲೂ ಕೈ ಚಿವುಟಿಕೊ೦ಡೆ!! ಕನಸಲ್ಲೂ ಮಲಗಿದ್ದೆ!! ಹಾಗಾದರೆ ಕನಸಿನದ್ದೆಲ್ಲಾ ಸುಳ್ಳೇ..?

" ಅಯ್ಯೋ!! ರಾತ್ರಿ ಯಾರು.? ಹೊರಗ್ ಹೋಗಿದ್ದು, ಚಿಲಕ ಹಾಕಿ ಬ೦ದು ಮಲಗಬಾರದೇ, ಬೇಜವಾಬ್ದಾರಿ ಮಕ್ಳು!!" ಅಮ್ಮ ತನ್ನ ಪಾಡಿಗೆ ತಾನು ಬಯ್ಯುತ್ತಿದ್ದಳು.

Comments