ನಲಿವಿನ ಇರುಳು

ನಲಿವಿನ ಇರುಳು

ಗಲ್ಲಕ್ಕೆ ಗಲ್ಲ ಹಚ್ಚಿ ನಲುಮೆದುಂಬಿದ ಮಾತುಗಳಲಿ
ಮೆಲ್ಲ ಮೆಲ್ಲನೆ ದನಿಯ ಸವಿಯ ತಲ್ಲೀನತೆಯಲಿ
ಅಪ್ಪುಗೆಯ ಬಿಗಿಯಲ್ಲಿ ಸಂತಸಿಪ ತೋಳ್ಗಳಲಿ
ಗೊತ್ತಿರದೇ ಉರುಳಿತಿರುಳು ಅದೆಂಥ ನಲಿವಿನಲಿ!
 
ಸಂಸ್ಕೃತ ಮೂಲ ( ಭವಭೂತಿಯ ಉತ್ತರರಾಮಚರಿತದಿಂದ)
 
ಕಿಮಪಿ ಕಿಮಪಿ ಮಂದಂ ಮಂದಮಾಸಕ್ತಿ ಯೋಗಾತ್
ಅವಿರಲಿತ ಕಪೋಲಮ್ ಜಲ್ಪತೋರಕ್ರಮೇಣ |
ಅಶಿಥಿಲ ಪರಿರಂಭ ವ್ಯಾಪೃತೇಕೈಕದೋಷ್ಣೋಃ
ಅವಿದಿತ ಗತಯಾಮಾ ರಾತ್ರಿರೇವ ವ್ಯರಂಸ್ತೀತ್ ||
 
 ಕೊ: ಈ ಪದ್ಯವು ಭವಭೂತಿಯ ಉತ್ತರ ರಾಮಚರಿತ ನಾಟಕದ್ದು. ರಾಮನು ಸೀತೆಗೆ ತಾವು ವನವಾಸದಲ್ಲಿ ಕಳೆದ ನಲಿವಿನ ರಾತ್ರಿಗಳ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಬರುತ್ತದೆ.

ಕೊ.ಕೊ: ಇದರ ನಾಲ್ಕನೇ ಸಾಲಿಗೆ "ಅವಿದಿತ ಗತಯಾಮಾ ರಾತ್ರಿರೇವಂ ವ್ಯರಂಸ್ತೀತ್" ಎಂಬ ಇನ್ನೊಂದು ಪಾಠಾಂತರವೂ ಇದೆಯಂತೆ.

ಕೊ.ಕೊ.ಕೊ: ಈ ಪದ್ಯಕ್ಕೆ ಎರಡು ಪಾಠಾಂತರಗಳು ಇರುವ ಹಿನ್ನೆಲೆಯಲ್ಲೇ ಇರಬೇಕು, ಒಂದು ಒಳ್ಳೆ ಕುತೂಹಲಕಾರಿಯಾದ ಕಥೆಯನ್ನೇ ಕಟ್ಟಿಬಿಟ್ಟಿದ್ದಾರೆ ನಮ್ಮ ಹಿಂದಿನವರು. ಭವಭೂತಿಯೂ, ಕಾಳಿದಾಸನೂ ಬೇರೆ ಬೇರೆ ಕಾಲದಲ್ಲಿದ್ದವರು ಅನ್ನುವುದು ಚರಿತ್ರೆಯನ್ನು ನೋಡಿದರೆ ತಿಳಿಯುತ್ತದೆ. ಆದರ ಈ ಕಥೆಯನ್ನು ಕೇಳುವಾಗ ಆ ವಿಷಯವನ್ನು ಸ್ವಲ್ಪ ಬದಿಗೊತ್ತಿಬಿಡಿ.

ಭವಭೂತಿ, ಕಾಳಿದಾಸ ಇಬ್ಬರೂ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ನವಮಣಿಗಳಲ್ಲಿ ಇಬ್ಬರು. ಭವಭೂತಿಗೆ ಕಾಳಿದಾಸನ ಹತ್ತಿರ ಹೊಗಳಿಸಿಕೊಳ್ಳಬೇಕೆಂಬ ಆಸೆ. ಹಾಗಾಗಿ, ಉತ್ತರ ರಾಮಚರಿತವನ್ನು ಬರೆದ ನಂತರ ಮೊತ್ತ ಮೊದಲು ಕಾಳಿದಾಸನ ಮುಂದೇ ಓದಿದನಂತೆ. ಅವನು ಓದಿದಾಗ ಈ ಪದ್ಯದ ಕಡೆಯ ಸಾಲು "ಅವಿದಿತ ಗತಯಾಮಾ ರಾತ್ರಿರೇವಂ ವ್ಯರಂಸ್ತೀತ್" ಎಂದೇ ಆಗಿತ್ತು. ಇಡೀ ನಾಟಕ ಮುಗಿಸಿದಮೇಲೆ, ಕಾಳಿದಾಸ ಈ ನಾಟಕದಲ್ಲಿ "ಬಿಂದು" ಮಾತ್ರ ದೋಷವಿದೆ - ಅದಿಲ್ಲದಿದ್ದರೆ ಇದು ಪರಿಪೂರ್ಣವಾಗುತ್ತಿತ್ತು ಎಂದನಂತೆ. ಭವಭೂತಿ ಏನು? ಬೆರಳು ತೋರಿದರೆ ಹಸ್ತ ನುಂಗುವಂತಹವನು. ಅವನು ಕೂಡಲೆ, ಕಾಳಿದಾಸ ಮಾರ್ಮಿಕವಾಗಿ ನುಡಿದದ್ದು ಏನೆಂದು ಅರಿತು ಒಂದು ಬಿಂದುವನ್ನು ಅಳಿಸಿ ನಾಲ್ಕನೇ ಸಾಲನ್ನು "ಅವಿದಿತ ಗತಯಾಮಾ ರಾತ್ರಿರೇವ ವ್ಯರಂಸ್ತೀತ್" ಎಂದು ಬದಲಾಯಿಸಿ, ತನ್ನ ನಾಟಕವನ್ನು ಪರಿಪೂರ್ಣಗೊಳಿಸಿದನಂತೆ.

ಸಂಸ್ಕೃತವನ್ನು ದೇವನಾಗರಿಯಲ್ಲಿ ಬರೆಯುವಾಗ ಅನುಸ್ವಾರವನ್ನು "ಬಿಂದು" ಎಂದರೆ ಒಂದು ಚುಕ್ಕೆಯಿಂದ ಸೂಚಿಸಬೇಕು. ಭವಭೂತಿಯು ಮೊದಲು ಬರೆದಿದ್ದ ಸಾಲು "ರಾತ್ರಿರೇವಂ" ಅಂದರೆ, ರಾತ್ರಿಯು ಹೀಗೆ (ಈ ಮೊದಲು ಹೇಳಿದ ರೀತಿ) ಕಳೆಯಿತು ಎಂದಿದ್ದರೆ, ಬಿಂದುವನ್ನು ತೆಗೆದು ಹಾಕಿದ ನಂತರ "ರಾತ್ರಿರೇವ", ಅಂದರೆ ರಾತ್ರಿಯೇ (ತನ್ನಿಂತಾನೆ) ಕಳೆದುಹೋಯಿತು ಎಂದು ಪದ್ಯಕ್ಕೆ ಒಂದು ಹೊಸತೇ ಹೊಳಹನ್ನು ಮೂಡಿಸುತ್ತದೆ.

ಈ "ಬಿಂದು ಮಾತ್ರ" ವ್ಯತ್ಯಾಸದ ಕಥೆ ಬಹುಶಃ ದೇವನಾಗರಿ ಲಿಪಿಯ ಬಳಕೆ ಇರುವಲ್ಲಿ ಬಂದಿರುವುದಾದರೆ, ಆಂಧ್ರದೇಶದಲ್ಲಿ ಇದಕ್ಕೇ ಇನ್ನೊಂದು ಬದಲಾವಣೆಯೊಂದಿಗೆ, ಕಾಳಿದಾಸ ಭವಭೂತಿಗಳನ್ನ ತೆಲುಗು ಲಿಪಿ ಬಲ್ಲವರನ್ನಾಗಿಸಿ ಬಿಟ್ಟಿದ್ದಾರೆ ಕೆಲವರು - ನಮ್ಮಲ್ಲಿ "ರಾಮ" ನಾಮ ಹೇಳಲು ಬರದ ವಾಲ್ಮೀಕಿಗೆ ನಾರದನು "ಮರ-ಮರ-ಮರ-" ಎಂದು ಜಪಿಸಿ, ಅದರಿಂದ ರಾಮನಾಮವನ್ನು ಅವನ ಬಾಯಲ್ಲಿ ತರಿಸಿದ ಎಂಬ ಕಥೆಯಿಂದ, ವಾಲ್ಮೀಕಿಯನ್ನೂ ಕನ್ನಡಿಗನನ್ನಾಗಿಸಿಲ್ಲವೇ, ಹಾಗೇ. ಕಥೆಯ ಈ ಆವೃತ್ತಿಯೂ ಸೊಗಸಾಗಿದೆ. ಇದರಲ್ಲಿ ಕಾಳಿದಾಸನಿಗೂ, ಭವಭೂತಿಗೂ ಎದುರು ಮುಖಾಮುಖಿಯಿಲ್ಲ. ಭವಭೂತಿಯ ಶಿಷ್ಯನೋ, ಸೇವಕನೋ ನಾಟಕವನ್ನು ಕಾಳಿದಾಸನ ಮನೆಗೆ ಹೋಗಿ ಅವನ ಮುಂದೆ ಓದಿ ಮರಳಿ, ಭವಭೂತಿಯ ಬಳಿ ಮರಳುತ್ತಾನೆ. ಕಾಳಿದಾಸ ಏನೆಂದು ಹೇಳಿಕಳಿರಬಹುದೆಂಬ ಕುತೂಹಲದಿಂದ ಭವಭೂತಿ ಕೇಳಿದರೆ, ಏನೂ ಹೇಳಲಿಲ್ಲ ಅನ್ನುವುದು ಶಿಷ್ಯನ ಉತ್ತರ. ಭವಭೂತಿಗೆ ನಿರಾಶೆಯೇ ಆಯಿತು. ಏನೂ ಹೇಳಲಿಲ್ಲವೇ, ಒಮ್ಮೆಯೂ ಏನೂ ಮಾತಾಡಲಿಲ್ಲವೇ? ಎಂದು ಕೇಳಲು, ಶಿಷ್ಯ "ವೀಳೆಯ ಹಾಕಿಕೊಳ್ಳುತ್ತಿದ್ದಾಗ, ಸ್ವಲ್ಪ ಸುಣ್ಣ ಹೆಚ್ಚಾಯಿತೇನೋ ಅಂದರು" ಅಷ್ಟೇ ಅಂದನಂತೆ.

ಭವಭೂತಿಗೆ ತಕ್ಷಣ ಏನಾಯಿತೆಂದು ತಿಳಿಯಿತು. ತೆಲುಗಿನಲ್ಲಿ ಸುಣ್ಣಕ್ಕೆ "ಸುನ್ನ" ಎನ್ನುವರು. ಹಾಗೇ, ಅನುಸ್ವಾರವನ್ನು ಸೂಚಿಸುವ ಸೊನ್ನೆಗೂ "ಸುನ್ನ" ಅಂತಲೇ ಅನ್ನುವರು. ಅಂದರೆ, ಕಾಳಿದಾಸ ತೆಲುಗಿನಲ್ಲೇ ಮಾತಾಡಿರಬೇಕಲ್ಲ :-) . ಇರಲಿ, ಒಂದು ಸೊನ್ನೆ ಹೆಚ್ಚಾಯಿತೆಂದು ತಿಳಿದ ಭವಭೂತಿ ಈ ಸಾಲನ್ನು ತಿದ್ದಿ "ರಾತ್ರಿರೇವ ವ್ಯರಂಸ್ತೀತ್" ಎಂದು ಬದಲಾಯಿಸಿದನಂತೆ!

ಅನುವಾದಕ್ಕಿಂತ, ಕೊಸರುಗಳೇ ಹೆಚ್ಚಾದರೂ, ಆಸಕ್ತಿ ಮೂಡಿಸುವ ವಿಚಾರವಾದ್ದರಿಂದ ಬರೆದೆ!
Rating
No votes yet

Comments