A5 - ನನ್ನ (ದುರಂತ) ಕಥೆ - ಕೊನೆಯ ಭಾಗ .

A5 - ನನ್ನ (ದುರಂತ) ಕಥೆ - ಕೊನೆಯ ಭಾಗ .

 ಮರುದಿನ ಧೀರಜ್ ತನ್ನ ಕಛೇರಿಗೆ ಹೋದಾಗ ತನ್ನ ಟೇಬಲ್ಲಿನ ಮೇಲೆ ಮೊನ್ನೆ ನಡೆದ ಕಾರ್ಯಾಚರಣೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇತ್ತು.ಎಲ್ಲವನ್ನೂ ಪರಿಶೀಲಿಸಿ ಕೊನೆಯಲ್ಲಿ ಕುಬೇರನ ರಿಪೋರ್ಟ್ ನೋಡುತ್ತಿದ್ದವನಿಗೆ ಆಶ್ಚರ್ಯವಾಯಿತು. ಗುಂಡೇಟಿನಿಂದ ಸಾಯುವ ಮೊದಲೇ ಆತನ ಮೈಯಲ್ಲಿ ವಿಷ ಇತ್ತೆಂದು ಓದಿ ಕುತೂಹಲ ತಾಳಲಾರದೆ ಕೂಡಲೇ ಮನೆಗೆ ಬಂದು ಡೈರಿಯನ್ನು ಕೈಗೆತ್ತಿಕೊಂಡ.
ಚಿಕ್ಕಂದಿನಿಂದ ಆ ಬೆಟ್ಟಗುಡ್ಡಗಳು ಹಾಗೂ ಅರಣ್ಯದ ಪರಿಚಯವಿದ್ದ ನನಗೆ ನಕ್ಸಲರ ಅಡಗುತಾಣಗಳು ಎಲ್ಲಿದ್ದವೆಂದು ಗೊತ್ತಿತ್ತು. ಹೀಗಾಗಿ ಸೀದಾ ಅಲ್ಲಿಗೆ ಹೋದೆ. ಇದ್ದಕ್ಕಿದ್ದಂತೆ ಅಲ್ಲಿ ನನ್ನ ಕಂಡ ಇಬ್ಬರು ತಮ್ಮ ಬಂದೂಕುಗಳನ್ನು ನನ್ನೆಡೆಗೆ ಗುರಿಮಾಡಿ ಇನ್ನೇನು ಟ್ರಿಗರ್ ಒತ್ತಬೇಕು ಎನ್ನುವಷ್ಟರಲ್ಲಿ ಅವರ ಮುಖ್ಯಸ್ಥ ಒಬ್ಬ ಬಂದು ಅವರನ್ನು ತಡೆದು ನಿನ್ನನ್ನು ಎಲ್ಲೋ ನೋಡಿದ ನೆನಪು ಎಂದ. ಕೂಡಲೇ ನಾನು ನೀವು ಕಳೆದ ಬಾರಿ ರಾಮಾಪುರಕ್ಕೆ ಬಂದಾಗ ನಮ್ಮ ಮನೆಯಲ್ಲಿ ಒಂದು ರಾತ್ರಿ ಪೂರ್ತಿ ಇದ್ದು ಬೆಳಿಗ್ಗೆ ಹೋದರಲ್ಲ ಎಂದಾಗ ಅವನಿಗೆ ನೆನಪಿಗೆ ಬಂದು ಹೌದು ಆದರೆ ನೀನೇನು ಇಲ್ಲಿ? ಕಳೆದ ಬಾರಿ ನಾವು ನಿನ್ನ ಮನೆಯಲ್ಲಿ ಮಂತ್ರಿಯನ್ನು ಮುಗಿಸಲು ಪ್ಲಾನ್ ಮಾಡಿದ್ದನು ನೀನೆ ತಾನೇ ಪೊಲೀಸರಿಗೆ ತಿಳಿಸಿದ್ದು ಆದರಿಂದಲೇ ನಮ್ಮ ಪ್ಲಾನ್ ವಿಫಲವಾಯಿತು. ಮತ್ತೆ ಈಗೇಕೆ ಇಲ್ಲಿಗೆ ಬಂದೆ ಎಂದು ನನ್ನನ್ನು ಕೇಳುತ್ತಿರಲು ಗಂಟೆಗಳಿಂದ ನನ್ನೊಡಲಲ್ಲಿ ಅಡಗಿದ್ದ ಕಣ್ಣೀರು ಧಾರಾಕಾರವಾಗಿ ಸುರಿಯಿತು. ಅವರಿಗೆ ಇಂತಹುದೆಲ್ಲ ಹೊಸತೇನಲ್ಲ. ಅವರು ನನ್ನನ್ನು ಸಂಶಯದಿಂದಲೇ ನೋಡುತ್ತಿದ್ದರು. ಸುತ್ತಮುತ್ತ ಮೂರ್ನಾಲ್ಕು ಜನ ನನ್ನೊಂದಿಗೆ ಬೇರೆ ಯಾರಾದರೂ ಬಂದಿದ್ದಾರ ಎಂದು ನೋಡುತ್ತಿದ್ದರು. ನನ್ನೊಡನೆ ಬೇರೆ ಯಾರು ಬಂದಿಲ್ಲವೆಂದು ಖಚಿತವಾದ ಮೇಲೆ ಏತಕ್ಕೆ ಇಲ್ಲಿ ಬಂದೆ ಎಂದು ಕೇಳಿದರು. ನಾನು ನಡೆದ ವಿಷಯವನ್ನೆಲ್ಲಾ ಅವರಿಗೆ ತಿಳಿಸಿ ನನ್ನನ್ನು ನಿಮ್ಮೊಡನೆ ಸೇರಿಸಿಕೊಳ್ಳಿ ನಾನೂ ನಿಮ್ಮ ಹೋರಾಟದಲ್ಲಿ ಭಾಗವಹಿಸುತ್ತೇನೆ. ಆ ಶುಗರ್ ಫ್ಯಾಕ್ಟರೀ ಮಾಲೀಕ, ಆ ಮಂತ್ರಿ, ಆ ಕ್ರಿಮಿನಾಶಕ ಅಂಗಡಿಯವ, ಆ ಸರ್ಕಾರ , ಆ ಕಾಳೇಗೌಡ ಎಲ್ಲರ ಮೇಲೂ ಸೇಡು ತೀರಿಸಿಕೊಳ್ಳಬೇಕು ಎಂದು ಭಾವುಕನಾಗಿ ಹೇಳುತ್ತಿದ್ದೆ.
ಅದೆಲ್ಲವನ್ನೂ ಕೇಳಿದ ಅವರೆಲ್ಲರೂ ಜೋರಾಗಿ ನಗಲು ಶುರು ಮಾಡಿದರು. ನಂತರ ನೋಡು ನಾವು ಹೋರಾಡುತ್ತಿರುವುದು ಸಮಾಜಕ್ಕೋಸ್ಕರ ನಿನ್ನದು ಕೇವಲ ವೈಯಕ್ತಿಕ ದ್ವೇಶ ಅದನ್ನು ನೀನೆ ಬಗೆಹರಿಸಿಕೊಳ್ಳಬೇಕು ಎಂದರು. ನಾನು ಅವರಿಗೆ ವಿವರಿಸಿ ಹೇಳಿದೆ ಯಾವುದು ವೈಯಕ್ತಿಕ ದ್ವೇಷ ನನ್ನಂತೆ ಎಷ್ಟೋ ರೈತರ
ಬೆಳೆಗಳು ಆ ಕಲುಷಿತ ನದಿ ನೀರಿನಿಂದ ಹಾಳಾಗುತ್ತಿದೆ ಅದಕ್ಕೆ ಕಾರಣವಾದ ಆ ಶುಗರ್ ಫ್ಯಾಕ್ಟರೀ ಮುಚ್ಚಿಸಬೇಕೆನ್ನುವುದು ವೈಯಕ್ತಿಕ ದ್ವೇಷ ಹೇಗಾಗುತ್ತದೆ? ಆ ಫ್ಯಾಕ್ಟರೀ ಗೆ ಬೆಂಬಲ ನೀಡುತ್ತಿರುವ ಮಂತ್ರಿಯ ವಿರುದ್ಧ ನನ್ನ ದ್ವೇಷ ವೈಯಕ್ತಿಕ ಹೇಗಾಗುತ್ತದೆ? ನಕಲಿ ಕ್ರಿಮಿನಾಶಕವನ್ನು ಸಪ್ಲೈ ಮಾಡುತ್ತಿರುವ  ಅಂಗಡಿಯವನ ವಿರುದ್ಧ ನನ್ನ ದ್ವೇಷ ವೈಯಕ್ತಿಕ ಹೇಗಾಗುತ್ತದೆ? ಜನರ ಆಸ್ತಿಗಳನ್ನು ಮೋಸವಾಗಿ ಕಬಳಿಸುತ್ತಿರುವ ಗೌಡನ ವಿರುದ್ಧ ನನ್ನ ದ್ವೇಷ ವೈಯಕ್ತಿಕ ಹೇಗಾಗುತ್ತದೆ? ನನ್ನಂತೆ ಬೇರೆಯವರು ಮೋಸ ಹೋಗಬಾರದೆಂಬ ನನ್ನ ಉದ್ದೇಶ ವೈಯಕ್ತಿಕ ದ್ವೇಷ ಹೇಗಾಗುತ್ತದೆ? ಇವೆಲ್ಲ ಹೋರಾಟಗಳು ನನ್ನೊಬ್ಬನಿಂದಲೇ ಸಾಧ್ಯವಿಲ್ಲವೆಂದೇ ನಿಮ್ಮ ಜೊತೆ ಸೇರಲು ಬಂದಿರುವುದು ಎಂದು ಪರಿಪರಿಯಾಗಿ ಅವರಿಗೆ ತಿಳಿಹೇಳಿದೆ. ಆ ಮುಖ್ಯಸ್ಥ ತನ್ನ ಸದಸ್ಯರೊಂದಿಗೆ ಬಹಳ ಹೊತ್ತು ಚರ್ಚಿಸಿ ನಂತರ ನನ್ನನ್ನು ಅವರ ತಂಡದಲ್ಲಿ ಸೇರಿಸಲು ಒಪ್ಪಿಕೊಂಡ. ತನ್ನ ತಂಡದ ಸದಸ್ಯರನ್ನೆಲ್ಲ ಕರೆದು ಪರಿಚಯ ಮಾಡಿಸಿದ. ಇವನು A2 ,A3 , A4 , A6 , A7  ಎಂದು ಪರಿಚಯಿಸಿದ. ತಾನು A1  ಎಂದು ಪರಿಚಯಿಸಿಕೊಂಡ. ನನಗೆ ಆಶ್ಚರ್ಯವಾಗಿi ನಿಮಗೆ ನಿಜ ಹೆಸರುಗಳಿಲ್ಲವೇ ಎಂದು ಕೇಳಿದ್ದಕ್ಕೆ ಎಲ್ಲರೂ ಸಣ್ಣಗೆ ನಕ್ಕರು. ನಂತರ ಆ ಮುಖ್ಯಸ್ಥ ನಿನ್ನ ಹೆಸರೇನೆಂದು ಕೇಳಿದ. ನಾನು ಕುಬೇರ ಎಂದೇ. ಅವರೆಲ್ಲರೂ ಇನ್ನೊಮ್ಮೆ ನಕ್ಕು ಇನ್ನು ಮುಂದೆ ನಿನ್ನ ಹೆಸರು A5  ಎಂದರು. ನಾನು ಮರು ಪ್ರಶ್ನಿಸದೆ ಸುಮ್ಮನೆ ಇದ್ದುಬಿಟ್ಟೆ.

ಅವರು ನನ್ನನ್ನು ತಂಡದೊಳಗೆ ಸೇರಿಸಿಕೊಂಡರೂ ನನ್ನನ್ನು ಪೂರ್ತಿಯಾಗಿ ನಂಬಿರಲಿಲ್ಲ. ಯಾವುದೇ ವಿಷಯಗಳನ್ನು ಚರ್ಚಿಸಬೇಕಾದರೂ ನನ್ನಿಂದ ದೂರ ಹೋಗಿ ಚರ್ಚಿಸುತ್ತಿದ್ದರು. ನನಗೆ ಅಲ್ಲಿ ಕೊಟ್ಟಿದ್ದ ಕೆಲಸ ಇಡೀ ತಂಡಕ್ಕೆ ಕಾಫಿ ತಿಂಡಿ ಮಾಡಿಕೊಡುವುದು. ದಿನೇ ದಿನೇ ಒಬ್ಬೊಬ್ಬರೇ ನನಗೆ ಹತ್ತಿರವಾಗುತ್ತಿದ್ದರು. ಪ್ರತಿಯೊಬ್ಬರ ಬಳಿಯೂ ನಾನು ನನ್ನ ದ್ವೇಷದ ವಿಷಯ ಎತ್ತಿದಾಗಲೂ ಸುಮ್ಮನೆ ನಕ್ಕು ಅದು ಅಷ್ಟು ಸುಲಭವಲ್ಲ ಎಲ್ಲದಕ್ಕೂ ಟೈಮ್ ಬರಬೇಕು ಅಲ್ಲಿವರೆಗೂ ಕಾಯಲೇಬೇಕು. ಆ ತಂಡದ ಸದಸ್ಯರೆಲ್ಲರದೂ ಒಂದೊಂದು ಕರುಣಾಜನಕ ಕಥೆಗಳು. ಎಲ್ಲರೂ ಈ ಸಮಾಜದಿಂದ ಒಂದಲ್ಲ ಒಂದು ರೀತಿ ಕಷ್ಟಕ್ಕೆ ಒಳಗಾದವರೇ. ಎಲ್ಲರೂ ವಿದ್ಯಾವಂತರು ಆಗಿದ್ದರು. ಸಮಾಜದಲ್ಲಿ ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಗುಂಪಿಗೆ ಸೇರಿದವರಾಗಿದ್ದವರು  . ಅದರಲ್ಲಿ ಬಹಳಷ್ಟು ಜನ ತಮ್ಮ ಗುರಿಯನ್ನು ತಲುಪಿದ್ದರೂ ಕೂಡ. ಕಳೆದ ಬಾರಿ ಪೋಲೀಸರ ನಡುವೆ ನಡೆದ ಕಾಳಗದಲ್ಲಿ ಸಂಘದ ಸದಸ್ಯ A5 ಸತ್ತಿದ್ದ ಕಾರಣಕ್ಕೆ ಆ ಹೆಸರು ನನಗೆ ಸಿಕ್ಕಿತೆಂದು ಗೊತ್ತಾಯಿತು. ತಂಡದಲ್ಲಿದ್ದ ಇಬ್ಬರು ಮಹಿಳಾ ಸದಸ್ಯರು ತಮ್ಮ ಮೇಲೆ ನಡೆದ ಅತ್ಯಾಚಾರಕ್ಕೆ ಸೇಡು ತೀರಿಸಿಕೊಳ್ಳಲು ಈ ಗುಂಪನ್ನು ಸೇರಿದಾಗಿ ತಿಳಿಸಿದರು. ತಂಡದ ಇನ್ನೊಬ್ಬ ಸದಸ್ಯ ಊರಿನಲ್ಲಿ ಇರುವುದಾಗಿ ವಾರಕ್ಕೊಮ್ಮೆ ಅವನು ಬಂದು ಅಗತ್ಯ ವಸ್ತುಗಳು, ಹಾಗೂ ವಿಶೇಷ ಮಾಹಿತಿಗಳನ್ನು ಕೊಟ್ಟು ಹೋಗುತ್ತಿದ್ದ.

 


ಹಾಗೆ ಹಲವಾರು ದಿನಗಳು ಕಳೆದ ಮೇಲೆ ನಾನೂ ತಂಡದಲ್ಲಿ ನಂಬಿಕಸ್ಥ ವ್ಯಕ್ತಿಯೇ ಆಗಿ ಹೋಗಿದ್ದೆ. ಈಗ ಏನೇ ಚರ್ಚಿಸಿದರೂ ಅದರಲ್ಲಿ ನಾನು ಭಾಗವಹಿಸುತ್ತಿದ್ದೆ. ಒಮ್ಮೆ ಊರಿನಿಂದ ಬಂದ ಸದಸ್ಯ ತಂದ ಅಂದಿನ ದಿನಪತ್ರಿಕೆಯನ್ನು ಓದಿ ನನಗೆ ಬಂದ ಕೋಪ ಅಷ್ಟಿಷ್ಟಲ್ಲ. ಅದರಲ್ಲಿದ್ದ ಸುದ್ದಿ ನಕಲಿ ಕ್ರಿಮಿನಾಶಕ ಬಳಸಿ ರಾಮಾಪುರ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿನ ಬಹುಪಾಲು ರೈತರ ಬೆಳೆಗಳು ಸಂಪೂರ್ಣ ನಾಶ. ಇಬ್ಬರು ರೈತರ ಆತ್ಮಹತ್ಯೆ. ಆ ಸುದ್ದಿಯನ್ನು ಓದಿ ನನ್ನೊಡನೆ ಇತರ ಸದಸ್ಯರಿಗೂ ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ಆಲೋಚಿಸಿ ಅಂದು ರಾತ್ರಿಯೆ ಅದಕ್ಕೊಂದು ತಂತ್ರ ರೂಪಿಸಿದೆವು. ಅಂದು ರಾತ್ರಿ ಅಲ್ಲಿಂದ ಹೊರಟ ನಮ್ಮ ತಂಡ ಸೀದಾ ಕ್ರಿಮಿನಾಶಕ ಸಂಗ್ರಹಿಸುವ ಗೋದಾಮಿಗೆ ಬಂದು ಆ ಇಡೀ ಗೋದಾಮಿಗೆ ಬೆಂಕಿ ಹಚ್ಚಿಬಿಟ್ಟೆವು. ಅದು ನಾನು ಆ ತಂಡ ಸೇರಿದ ಮೇಲೆ ಮಾಡಿದ ಮೊದಲ ಕಾರ್ಯಾಚರಣೆ.

ನಂತರದ ಕಾರ್ಯಾಚರಣೆ ಕಾಳೇಗೌಡನ ಅಕ್ರಮ ಆಸ್ತಿಯನ್ನು ನಾಶಪಡಿಸುವುದು. ಅದೂ ಸಹ ಯಶಸ್ವಿಯಾಗಿ ಮುಗಿಸಿದ್ದೆವು. ಈ ಎರಡೂ ಕಾರ್ಯಾಚರಣೆಯ ಹಿಂದೆ ನಮ್ಮ ತಂಡದ ಕೈವಾಡ ಇದೆ ಎಂದು ಅರಿತ ಪೊಲೀಸರು ಎರಡು ಬಾರಿ ನಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದರು. ಆದರೆ ಆ ಅರಣ್ಯದ ಇಂಚಿಂಚೂ ಅರಿತಿದ್ದ ನನಗೆ ನನ್ನ ತಂಡವನ್ನು ಆ ದಾಳಿಯಿಂದ ರಕ್ಷಿಸುವುದು ಅಷ್ಟು ಕಷ್ಟವಾಗಲಿಲ್ಲ. ಸುಮಾರು ಮೂರು ಬಾರಿ ಬೇರೆ ಬೇರೆ ತಾಣಗಳಲ್ಲಿ ತಂಗಿದ್ದೆವು. ಅಂದು ರಾತ್ರಿ ಊರಿನಿಂದ ಬಂದ ಸದಸ್ಯ ಒಂದು ಮಾಹಿತಿ ತಂದಿದ್ದ. ಇನ್ನು ಹದಿನೈದು ದಿನದಲ್ಲಿ ರಾಮಾಪುರದ ಶುಗರ್ ಫ್ಯಾಕ್ಟರಿ ಯ ಇನ್ನೊಂದು  ಘಟಕ ಉದ್ಘಾಟನೆ ಆಗುತ್ತಿದೆ ಎಂದು ಅದರ ಉದ್ಘಾಟನೆಗೆ ಮಂತ್ರಿಗಳು ಬರುತ್ತಿದ್ದಾರೆಂದು ಹೇಳಿದ. ಕೂಡಲೇ A1 ಎಲ್ಲ ಸದಸ್ಯರನ್ನು ಒಂದುಗೂಡಿಸಿ ಕಳೆದ ಬಾರಿ ಮಂತ್ರಿ ಮೇಲಿನ ನಮ್ಮ ದಾಳಿ ವಿಫಲವಾಯಿತು. ಆದರೆ ಈ ಬಾರಿ ಹಾಗಾಗಬಾರದು. ಈ ಬಾರಿ ಆ ಮಂತ್ರಿಯನ್ನು ಮುಗಿಸಲೇಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿದ್ದರು . ಆಗ ನನಗೆ ಯಾಕೆ ಹಾಗೆ ಅನಿಸಿತೋ ಗೊತ್ತಿಲ್ಲ ಮಧ್ಯದಲ್ಲಿ ಬಾಯಿ ಹಾಕಿ ನೋಡಿ ಬೇಕಾದರೆ ಆ ಫ್ಯಾಕ್ಟರಿಗೆ ಏನಾದರೂ ಹಾನಿ ಮಾಡೋಣ ಆದರೆ ಒಂದು ಪ್ರಾಣ ತೆಗೆಯುವುದು ಬೇಡ. ಸಮಾಜಕ್ಕೆ ಒಳ್ಳೆಯದನ್ನು ಮಾಡೋಣ ಆದರೆ ಒಂದು ಪ್ರಾಣ ತೆಗೆಯುವ ಕೆಲಸ ಬೇಡ ಎಂದೆ.

ನನ್ನ ಮಾತಿನಿಂದ ಸಿಟ್ಟಿಗೆದ್ದ A1 ಇಲ್ಲಿ ನಿನ್ನ ಅಪ್ಪಣೆ ಯಾರಿಗೂ ಬೇಕಿಲ್ಲ. ಸುಮ್ಮನೆ ಹೇಳಿದ ಹಾಗೆ ಮಾಡು ಎಂದ. ನಾನು ಮತ್ತೊಮ್ಮೆ ನನಗ್ಯಾಕೋ ಈ ಕೆಲಸ ಮಾಡಲು ಮನಸ್ಸಾಗುತ್ತಿಲ್ಲ ಎಂದೆ. ಆದರೆ ಅಲ್ಲಿ ನನ್ನ ಇಷ್ಟ ಕಷ್ಟಗಳು ಯಾರಿಗೂ ಬೇಕಿರಲಿಲ್ಲ. ಆ ದಿನ ಬಂದೆ ಬಂತು. ಆ ಮಂತ್ರಿ ಬರುವ ದಿನಕ್ಕೆ ಎರಡು ದಿನ ಮುಂಚೆ ನಮ್ಮ ಕಾರ್ಯಾಚರಣೆ ನಡೆಸಬೇಕಿತ್ತು. ಕಳೆದ ಬಾರಿ ನಡೆದ ಕಾಳಗದಿಂದ ಈ ಬಾರಿ ಪೊಲೀಸರು ತುಸು ಹೆಚ್ಚೇ ಜಾಗರೂಕತೆ ವಹಿಸಿದ್ದರು. ಮಾರನೆ ದಿನ ರಾತ್ರಿ ಕೆಲಸ ಶುರುಮಾಡಬೇಕು ಆದರೆ ನನ್ನ ಮನಸ್ಸು ಗೊಂದಲದ ಗೂಡಾಗಿತ್ತು. ಎಲ್ಲ ಸದಸ್ಯರೂ ಸಿದ್ಧರಾಗುತ್ತಿದ್ದಾರೆ ನನಗೆ ಅವರಿಗೆ ಎದುರು ಮಾತಾಡಲೂ ಇಷ್ಟವಿಲ್ಲದೆ ಏನು ಮಾಡುವುದೆಂದು ತಲೆ ಕೆಟ್ಟು ಹೋಗಿತ್ತು. ಒಂದು ಜೀವಕ್ಕೆ ಪ್ರಾಣ ಕೊಡುವ ಶಕ್ತಿ ಇಲ್ಲದಿದ್ದ ಮೇಲೆ ಪ್ರಾಣ ತೆಗೆಯುವ ಯಾವ ಅರ್ಹತೆಯೂ ನಮಗಿಲ್ಲ. ನನಗೆ ಏನು ಮಾಡಲು ತೋಚದೆ ಇದಕ್ಕಿದ್ದಂತೆ ಒಂದು ನಿರ್ಧಾರ ಮಾಡಿದೆ.  ಮೊದಲು ಈ ಡೈರಿಯನ್ನು ಬರೆಯಲು ಶುರುಮಾಡಬೇಕಾದರೆ ಮುನ್ನುಡಿ ಬರೆಯದೇ ಆ ಪುಟಖಾಲಿ ಬಿಟ್ಟಿದ್ದೆ. ಈಗ ಅದನ್ನು ಬರೆದು ಮುಗಿಸಿದ್ದೇನೆ. ಇದು ನನ್ನ ಕೊನೆಯ ಕ್ಷಣ, ನಾನು ಸೈನೈಡ್ ಸೇವಿಸಿ ಈ ಜಗತ್ತಿನಿಂದ ವಿದಾಯ ಹೇಳಲು ನಿರ್ಧರಿಸಿದ್ದೇನೆ.

 


ನಂತರದ ಪುಟಗಳೆಲ್ಲ ಖಾಲಿ ಖಾಲಿ. ಧೀರಜ್ಗೆ ಗೊತ್ತಾಗಿಹೋಯಿತು ನಾವು ಅವರ ಅಡಗುತಾಣದ ಮೇಲೆ ಅಟಾಕ್ ಮಾಡುವ ಕೆಲವೇ ಸಮಯದ ಮುಂಚೆ ಅಷ್ಟೇ ಕುಬೇರ ವಿಷ ಸೇವಿಸಿದ್ದಾನೆ. ಧೀರಜ್ ಗೆ ಅರಿವಿಲ್ಲದೇ ತನ್ನ ಕಣ್ಣಿನಿಂದ ಹನಿಯೊಂದು ಉದುರಿತ್ತು

Comments