ಚಿತ್ರ ತಿದ್ದಲಾಗುವ ಕ್ಯಾಮರಾ

ಚಿತ್ರ ತಿದ್ದಲಾಗುವ ಕ್ಯಾಮರಾ

ಚಿತ್ರ ತಿದ್ದಲಾಗುವ ಕ್ಯಾಮರಾ
ಚಿತ್ರ ತೆಗೆಯುವಾಗ,ನಮಗೆ ಬೇಕಾದ ವಸ್ತುವಿನ ಮೇಲೆ ಕ್ಯಾಮರಾ ಲೆನ್ಸನ್ನು ಕೇಂದ್ರೀಕರಿಸುವುದು ಸಮಯ ತೆಗೆದುಕೊಳ್ಳುವ ಕಾರ್ಯ.ಅದೂ ಅಭ್ಯಾಸ ಇಲ್ಲದವರಿಗೆ ಆ ಕೆಲಸ ತಲೆನೋವೇ.ಎಷ್ಟೋ ಸಲ ವಸ್ತುವಿನ ಮೇಲೆ ಕೇಂದ್ರೀಕರಿಸುವ ವೇಳೆ ದೃಶ್ಯವೇ ಬದಲಾಗಿರುತ್ತದೆ.ಈಗ ಬಂದಿರುವ ಹೊಸ ಕ್ಯಾಮರಾದಲ್ಲಿ ವಸ್ತುವು ಚೌಕಟ್ಟಿನೊಳಗಿದೆ ಎಂದು ನೋಡಿಕೊಂಡರಾಯಿತು.ಕೇಂದ್ರೀಕರಿಸುವ ಕೆಲಸವನ್ನು ಆಮೇಲೆಯೂ ಮಾಡಲು ಬರುತ್ತದೆ.ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಪಿ ಎಚ್ ಡಿ ಪದವೀಧರ ರೆನ್ ತನ್ನ ಪ್ರಬಂಧದಲ್ಲಿ ಮಂಡಿಸಿದ ತರ್ಕವನ್ನು ಈ ಕ್ಯಾಮರಾದಲ್ಲಿ ಅಳವಡಿಸಿ,ಕ್ಯಾಮರಾದಲ್ಲಿ ಈ ಸೌಕರ್ಯವನ್ನು ನೀಡಿದ್ದಾರೆ.ಲೈಟ್ರೋ ಎನ್ನುವ ಹೆಸರಿನ ಕಂಪೆನಿಯು ಕ್ಯಾಮರಾ ತಯಾರಿಸಿದೆ.ಕ್ಯಾಮರಾಗಳಲ್ಲಿ ಹಲವು ಹೊಸ ಸೌಕರ್ಯಗಳಿದ್ದರೂ,ಈ ನಮೂನೆಯ ಸವಲತ್ತು ಇರುವ ಏಕೈಕ ಕ್ಯಾಮರಾ ಇದೆನ್ನುವುದು ನಿಸ್ಸಂಶಯ.ಎಲ್ಲಾ ಕೋನಗಳಿಂದ ಬರುವ ಬೆಳಕಿನ ಮೂಲಗಳನ್ನು ಚಿತ್ರದಲ್ಲಿ ಉಳಿಸಿಕೊಂಡು ಚಿತ್ರ ಮೂಡುವ ಕಾರಣ, ಈ ರೀತಿ ಮಾಡಲು ಸಾಧ್ಯವಾಗುತ್ತದೆ.
------------------------------
ಸ್ನೇಪ್‌ಡೀಲ್:ಊರಿನ ಹೆಸರು

 

snapdeal.com ಎನ್ನುವುದು ಅಂತರ್ಜಾಲತಾಣವೆನ್ನುವುದು ಸ್ಪಷ್ಟ.ನಿಮ್ಮ ನಿಮ್ಮ ಊರಿನ ಅಂಗಡಿಗಳಲ್ಲಿ ಸಿಗುವ ಕಡಿತದ ಮಾರಾಟದ ಬಗ್ಗೆ ಮಾಹಿತಿ ನೀಡುವ ಸೇವೆ ಒದಗಿಸುವ ತಾಣವಿದು.ಕುಣಾಲ್ ಬೇಹ್ಲ್ ಎನ್ನುವ ತರುಣ,ತನ್ನ ಪದವಿಯನ್ನು ಅಮೆರಿಕಾದಲ್ಲಿ ಪಡೆದು ಭಾರತಕ್ಕೆ ಹಿಂದಿರುಗಿದ ನಂತರ ಈ ತಾಣವನ್ನು ಆರಂಭಿಸಿ,ವ್ಯವಹಾರಕ್ಕಿಳಿದಿದ್ದಾರೆ.ದೆಹಲಿಯ ಸಮೀಪದ ಕುಗ್ರಾಮವೊಂದಾದ ಶಿವನಗರ ಈತನ ಊರು.ತನ್ನ ಊರಿನ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಅವರು ಸುಮಾರು ಹದಿನೈದು ಬೋರ್‌ವೆಲ್‌ಗಳಿಗೆ ಕೈಪಂಪ್‌ಗಳನ್ನು ಅಳವಡಿಸಿಕೊಟ್ಟಿದ್ದರು.ಊರಿನ ಜನರಿಗೆ ತಮಗೆ ಅನುಕೂಲ ಕಲ್ಪಿಸಿದ ಬೇಹ್ಲ್ ಮಹಾಶಯನಿಗೆ ಕೃತಜ್ಞತೆ ಸಲ್ಲಿಸಬೇಕೆನಿಸಿತು.ಹಾಗಾಗಿ ಅವರು ತಮ್ಮ ಊರಿಗೆ ಶಿವನಗರ ಎಂಬುದರ ಬದಲಿಗೆ, ಹೊಸಹೆಸರು ಸ್ನಾಪ್‌ಡೀಲ್‌ಡಾಟ್‌ಕಾಂ ನಗರ ಎಂದೇ ಹೆಸರಿಡುವ ನಿರ್ಧಾರಕ್ಕೆ ಬಂದರು.ಅಂತರ್ಜಾಲತಾಣದ ಹೆಸರು ಹೊತ್ತಿರುವ ಹಳ್ಳಿ ಬಹುಶ: ಇದೊಂದೇ ಆಗಿರಬಹುದು,ಅಲ್ಲವೇ?


-----------------------------------


ಮೋಸದ ತಂತ್ರಾಂಶ

ಕಂಪ್ಯೂಟರಿಗೆ ಭದ್ರತೆ ಒದಗಿಸುವ ತಂತ್ರಾಂಶ ತಮ್ಮದೆಂದು ಸುಳ್ಳು ಸುಳ್ಳೇ ಭರವಸೆ ಕೊಟ್ಟು,ನೂರನಲುವತ್ತೊಂಭತ್ತು ಡಾಲರು ವಸೂಲಿ ಮಾಡಿ,ತಂತ್ರಾಂಶವನ್ನು ಮಾರುವ ಮೋಸದ ದಂಧೆ ಈಗ ಬಯಲಾಗಿದೆ.ಅಮೇರಿಕಾದ ಎಫ್ ಬಿ ಐ, ಅಪರಾಧಿಗಳ ಹಿಂದೆ ಬಿದ್ದಿದೆ.ಸುಮಾರು ಒಂದು ದಶಲಕ್ಷ ಜನರನ್ನು ಈ ರೀತಿ ಮೂರ್ಖರಾಗಿಸಲು,ಈ ಮೋಸಗಾರರಿಗೆ ಸಾಧ್ಯವಾಗಿದೆ.ಇಂತಹುದ್ದೆ ಇನ್ನೊಂದು ಮೋಸಗಾರರ ಜಾಲ,ಕಂಪ್ಯೂಟರ್ ರಿಪೇರಿ ಮಾಡುವವರಂತೆ ಜನರ ಕಂಪ್ಯೂಟರ್‌ ಬಳಸಲು ಅವಕಾಶ ಪಡೆದು,ಆ ವೇಳೆ ಯಾವುದೋ ತಂತ್ರಾಂಶ ಅಳವಡಿಸುತ್ತಿತ್ತು.ನಂತರ ಬಳಕೆದಾರರು ಕಂಪ್ಯೂಟರ್ ಬಳಸುವಾಗಲೆಲ್ಲಾ ಅವರಿಗೆ ಹಣ ಪಾವತಿಗೆ ಒತ್ತಾಯ ಮಾಡುವ ಪಾಪ್-ಅಪ್ ಜಾಹೀರಾತು ಮೂಡುತ್ತಿತ್ತು.ಒಂದು ವೇಳೆ ಅವರು ಹಣಪಾವತಿಸದಿದ್ದರೆ,ಅವರ ಕಂಪ್ಯೂಟರಿಗೆ ವೈರಸ್ ದಾಳಿ ಆಗಿರುವಂತೆ ಭ್ರಮೆ ಮೂಡಿಸಲು ಮೋಸಗಾರರಿಗೆ ಸಾಧ್ಯವಾಗುತ್ತಿತ್ತು!


------------------------------------


ಕುರಾನ್ ಓದುವ ಪೆನ್

 

ರಂಜಾನ್ ಸಮಯದಲ್ಲಿ ಕುರಾನ್ ಪಠಣ ಮಾಡಲು ಸಹಾಯ ಮಾಡುವ ಪೆನ್ ಒಂದು ಲಭ್ಯವಿದೆ.ಅರೇಬಿಯಾ ಭಾಷೆಯ ಕುರಾನ್ ಪುಸ್ತಕದಲ್ಲಿ ಪೆನ್‌ನ್ನು ಚಲಿಸಿದಂತೆ,ಅಲ್ಲಿರುವ ವಾಕ್ಯವನ್ನು ಪೆನ್ ಉಚ್ಚರಿಸುತ್ತದೆ.ಹೆಸರಾಂತ ಕುರಾನ್ ಪಠಣಕಾರರ ಧ್ವನಿಯಲ್ಲಿ ಪಠಣ ಕೇಳಬಹುದು.ಯಾವ ಪಠಣಕಾರನ ಧ್ವನಿ ಬೇಕೋ ಅದನ್ನೂ ಆಯ್ಕೆ ಮಾಡಿಕೊಳ್ಳಬಹುದು.ಇಂಗ್ಲೀಷ್,ಜರ್ಮನ್,ಉರ್ದು,ಫ್ರೆಂಚ್,ಪರ್ಶಿಯನ್ ಭಾಷೆಯಲ್ಲಿಯೂ ಕೇಳುವ ಆಯ್ಕೆ ಸಿಗುತ್ತದೆ.ನಾಲ್ಕು ಸಾವಿರ ಬೆಲೆಯ ಈ ಪೆನ್,ಅದಕ್ಕಾಗಿಯೇ ವಿಶೇಷ ಶಾಯಿಯಲ್ಲಿ ಮುದ್ರಿಸಿದ ಪುಸ್ತಕದ ಜತೆ ಮಾತ್ರಾ ಕೆಲಸ ಮಾಡುತ್ತದೆ.ಅಂದ ಹಾಗೆ ಈ ಪೆನ್ ಚೈನಾದ ಉತ್ಪನ್ನವಾಗಿದೆ.ಹಿಮಾಲಯ ಪುಸ್ತಕದಂಗಡಿಗಳಲ್ಲಿದು ಬಿಸಿದೋಸೆ ತೆರನೆ ಮಾರಾಟವಾಗುತ್ತಿದೆಯಂತೆ.


---------------------------------


ಅಂತರ್ಜಾಲತಾಣ ಹೆಸರು:ವೈವಿಧ್ಯ ಸಾಧ್ಯ

ಅಂತರ್ಜಾಲತಾಣಗಳಿಗೆ ಡಾಟ್‌ಕಾಂ,ಡಾಟ್‌ನೆಟ್ ಎಂಬಂತಹ ನಿಗದಿತ ಶಬ್ದಗಳಿಗೇ ಸೀಮಿತಗೊಳಿಸುವ ಅಗತ್ಯ ಇನ್ನು ಹೆಚ್ಚು ಸಮಯವಿರದು.ನಿಮಗೆ ಬೇಕಾದ ಶಬ್ದದಿಂದ ತಾಣದ ಹೆಸರನ್ನು ಕೊನೆಗೊಳಿಸುವ ಅವಕಾಶ ನೀಡಲು,ತಾಣಗಳ ಹೆಸರಿನ ಪರವಾನಿಗೆ ನೀಡುವ ಸಂಸ್ಥೆ ನಿರ್ಧರಿಸಿದೆ.ಈ ಅವಕಾಶ ಪಡೆಯಲು ಎರಡುಲಕ್ಷ ಡಾಲರು ಖರ್ಚು ಬರುತ್ತದೆ.ಮಾತ್ರವಲ್ಲದೆ,ಅವಕಾಶ ಪಡೆಯಲು ಬಹುಪುಟದ ದಾಖಲೆಯನ್ನು ತುಂಬಿಸುವ ಅಗತ್ಯವೂ ಇದೆ.ಈ ಅವಕಾಶ ಪಡೆದವರು ಕಂಪೆನಿ ಹೆಸರು,ಬ್ರಾಂಡ್ ಹೆಸರಿನಿಂದ ಅಂತ್ಯವಾಗುವ ಅಂತರ್ಜಾಲತಾಣಗಳನ್ನು ಆರಂಭಿಸಬಹುದು.ಡಾಟ್‌ಐಪ್ಯಾಡ್,ಡಾಟ್‌ಆಪಲ್ ಮುಂತಾದ ತಾಣಗಳು ಆರಂಭವಾಗುವುದು ಖಂಡಿತ.ಹಾಗೆಯೇ ಹಲವರು ಸೇರಿ ಡಾಟ್‌ಸ್ಪೋರ್ಟ್ಸ್ ಎಂಬ ಹೆಸರಿನಿಂದ ಅಂತ್ಯವಾಗುವ ತಾಣಗಳನ್ನು ಕ್ರೀಡೆಗೆ ಸಂಬಂಧಿಸಿ  ಆರಂಭಿಸಬಹುದು.


-----------------------------------------------------------------


ಗೂಗಲ್ ಅನುವಾದಕ:ಕನ್ನಡದಲ್ಲೂ

ಇತರ ಭಾಷೆಗಳಲ್ಲಿರುವ ವಾಕ್ಯಗಳನ್ನುಕನ್ನಡಕ್ಕೆ ಅನುವಾದಿಸುವ ಸೇವೆಯನ್ನು ಗೂಗಲ್ ನೀಡಲಾರಂಬಿಸಿದೆ. ಕನ್ನಡವೂ ಸೇರಿ,ಕೆಲವು ಭಾರತೀಯ ಭಾಷೆಗಳಲ್ಲಿ ಸೇವೆಯೀಗ ಲಭ್ಯ.ಗೂಗಲ್ ಅನುವಾದಕ ಈಗಾಗಲೇ ಜನಪ್ರಿಯವಾಗಿದೆ.ಈ ಸೇವೆಯಲ್ಲಿ ಒಳಗೊಂದಿರುವ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿರುವುದು ಗೂಗಲ್ ಹೆಗ್ಗಳಿಕೆ.ವಾಕ್ಯವನ್ನು ಅಂತರ್ಜಾಲತಾಣದಿಂದ ನಕಲು ಮಾಡಿ ನೀಡಬಹುದು,ಇಲ್ಲವೇ ಟೈಪಿಸಬಹುದು.ವಾಕ್ಯವನ್ನು ಓದುವ ರೀತಿಯ ಸಹಾಯವೂ ಸಿಗುವುದು ಈ ಸೇವೆಯ ವೈಶಿಷ್ಟ್ಯ.ಇಂಗ್ಲೀಷಿನಂತಹ ಭಾಷೆಗಳಲ್ಲಿ ಇರುವ ವಾಕ್ಯವನ್ನು ಓದಿ ಕೇಳಿಸುವ ಸವಲತ್ತೂ ಇಲ್ಲಿದೆ.


----------------------------------


ತುಷಾರ:ವಾರ್ಷಿಕ  ಚಂದಾ ಗೆಲ್ಲಿ!

ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.


*FOSS ಎಂದರೇನು?


*ಉದಯವಾಣಿ ಇ-ಪತ್ರಿಕೆ ತಾಣವು ಬಳಕೆದಾರ ಸ್ನೇಹಿಯಾಗುವತ್ತ ತೆಗೆದುಕೊಂಡಿರುವ ಹೆಜ್ಜೆಯೇನು?


(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS37 ನಮೂದಿಸಿ.)


ಕಳೆದ ವಾರದ ಬಹುಮಾನಿತ ಉತ್ತರ:


*ಬಿಟ್‌ಟೊರೆಂಟ್ ಅಂದರೆ ಅಂತರ್ಜಾಲದಲ್ಲಿ ಶೀಘ್ರವಾಗಿ ಕಡತ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆ.


*ಇತ್ತೀಚೆಗೆ ಇದರ ಬಗ್ಗೆ ಬಂದ ಸುದ್ದಿಯೇಂದರೆ,ಈ ಸೇವೆಯ ಮೂಲಕ ಕಾಪಿರೈಟ್ ಉಲ್ಲಂಘಿಸಿ ಕಡತಗಳ ವಿನಿಮಯ ಮಾಡಿಕೊಂಡ ಐವತ್ತು ಸಾವಿರಕ್ಕೂ ಹೆಚ್ಚು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಯಿತು.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಗಣೇಶ್ ಕಾಮತ್,ಪಡುಬೆಳ್ಳೆ,ಕುಂಜಾರುಗಿರಿ.ಅಭಿನಂದನೆಗಳು.



Udayavani

*ಅಶೋಕ್‌ಕುಮಾರ್ ಎ