ನನ್ನ ಬಾಲ್ಯ ಹಾಗೂ ರಾಘವೇಂದ್ರ ಸ್ವಾಮಿಗಳ ಪವಾಡ

ನನ್ನ ಬಾಲ್ಯ ಹಾಗೂ ರಾಘವೇಂದ್ರ ಸ್ವಾಮಿಗಳ ಪವಾಡ

ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಗ್ರಾಮದಲ್ಲಿ. ಆಗೆಲ್ಲ ಹೆರಿಗೆಗಳು ಮನೆಗಳಲ್ಲಿ ಇದ್ದ ಹಿರಿಯ ಮಹಿಳೆಯರೇ ಮಾಡುತ್ತಿದ್ದರು. ಹಾಗೆಯೇ ನನ್ನ ತಾಯಿಯ ಹೆರಿಗೆಯೂ ನಮ್ಮ  ಹಳ್ಳಿ ಮನೆಯ ಅಡಿಗೆಮನೆಯಲ್ಲಿ ವಾರದ ರಜಾ ದಿನವಾದ ಭಾನುವಾರ ಆಯಿತು. ನಮ್ಮ ತಾಯಿಯ ಗರ್ಭದಲ್ಲಿ ಜನಿಸಿದ ಮೊದಲ ಮಗು ನಾನು. ಗಂಡು ಮಗು ಹುಟ್ಟಿತು ಎನ್ನುವ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ಹುಟ್ಟುತ್ತಲೇ ನನ್ನ ಕಾಲಿನ ಪಾದಗಳೆರಡೂ ಒಳಗೆ ತಿರುಚಿಕೊಂಡಿದ್ದವು. ಮೊದಲ ಮಗುವಾಗಿ ಹುಟ್ಟಿದ ನನಗೆ ಈ ರೀತಿ ಆಗಿರುವುದು ಕಂಡು ನನ್ನ ತಂದೆ ತಾಯಿ ಬಹಳಷ್ಟು ನೊಂದುಕೊಂಡರು. ಆದರೆ ಏನೂ ಮಾಡಲೂ ಆಗುವುದಿಲ್ಲವಲ್ಲ. ಆಗ ಮುಳಬಾಗಿಲಿನಲ್ಲಿ ಸುಸಜ್ಜಿತ ಆಸ್ಪತ್ರೆಗಳಿರಲಿಲ್ಲ. ಇದ್ದ ಆಸ್ಪತ್ರೆಯೊಂದರಲ್ಲಿ ತೋರಿಸಿದಕ್ಕೆ ಅವರೂ ಸಹ ಇದನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದುಬಿಟ್ಟರು. ಹಾಗೆಯೇ ಎರಡು ಮೂರು ತಿಂಗಳು ಕಳೆದವು.
ನಂತರ ಯಾರೋ ಹೇಳಿದ ಮಾತಿಗೆ ಕೋಲಾರದಲ್ಲಿ ಒಂದು ಆಸ್ಪತ್ರೆ ಇದೆ ಅಲ್ಲಿ ತೋರಿಸಿ ಎಂದರು. ನಮ್ಮ ತಾಯಿ ಬಾಣಂತಿ ಎಲ್ಲೂ ಓಡಾಡುವ ಹಾಗಿಲ್ಲ. ತಂದೆಯವರಿಗೆ ನಮ್ಮ ತಾಯಿಯವರನ್ನು ನೋಡಿಕೊಳ್ಳುವುದು ಹಾಗೆಯೇ ಕೆಲಸಕ್ಕೆ ಹೋಗುವುದು ಹೀಗಿರುವಾಗ ಕೋಲಾರಕ್ಕೆ ಹೇಗೆ ಹೋಗುವುದು. ಅದೂ ಅಲ್ಲದೇ ಆಗಿದ್ದ ಆರ್ಥಿಕ ಪರಿಸ್ಥಿತಿ ದೊಡ್ಡ ಆಸ್ಪತ್ರೆ ಎಷ್ಟು ಖರ್ಚು ಆಗುವುದೋ ಏನೋ ಎಂಬ ಆತಂಕ. ಹಾಗೂ ಹೀಗೂ ಸಾಲ ಮಾಡಿ ಹತ್ತು ಸಾವಿರ ಹೊಂದಿಸಿದರು. ಇನ್ನು ನನ್ನನ್ನು ಅಷ್ಟು ದೂರ ಕರೆದೊಯ್ಯುವುದು, ಆಗ ನಮ್ಮ ಸಹಾಯಕ್ಕೆ ಬಂದವರು ನನ್ನ ದೊಡ್ಡಮ್ಮ(ಈಗ ಅವರಿಲ್ಲ) ನನ್ನನ್ನು ಕೋಲಾರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ಆಸ್ಪತ್ರೆಯಲ್ಲಿ ನನ್ನ ಎರಡೂ ಕಾಲುಗಳಿಗೆ ಒಂದೊಂದು ಕಾಲಿಗೆ ೩ k .g  ಯಂತೆ ಒಟ್ಟು ಆರು ಕೆ.ಜಿ ಯಷ್ಟು ಸಿಮೆಂಟ್ ಕಟ್ಟನ್ನು ಹಾಕಿದ್ದರು. ಸುಮಾರು ಒಂದು ತಿಂಗಳು ನನ್ನನ್ನು ಮುಳಬಾಗಿಲಿನಿಂದ ಕೋಲಾರದವರೆಗೆ ನನ್ನ ದೊಡ್ಡಮ್ಮನವರು ನನ್ನನ್ನು ಆ ಭಾರದ ಕಟ್ಟಿನೊಂದಿಗೆ ತಮ್ಮ ಕೈಯಲ್ಲಿ ಹೊತ್ತು ಹೋಗುತ್ತಿದ್ದರು. ನಂತರ ಆ ಕಟ್ಟನ್ನು ತೆಗೆದರು ಆದರೆ ಆ ಕಟ್ಟಿನಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದರಿಂದ ಇನ್ನು ನನ್ನ ಕಾಲಿನ ಸ್ಥಿತಿ ಇಷ್ಟೇ ಎಂದು ಸುಮ್ಮನಾಗಿಬಿಟ್ಟರು. ನಂತರ ಅಲ್ಲಿಂದ ನಮ್ಮ ವಾಸ ಬೆಂಗಳೂರಿಗೆ ಬಂದಿತು. ಇಲ್ಲಿ ಯಾರೋ ಪರಿಚಯಸ್ಥರೊಬ್ಬರು ಹೇಳಿದ ಮಾಹಿತಿ ಮೇರೆಗೆ ಒಬ್ಬ ಆಯುರ್ವೇದ ವೈದ್ಯನೊಬ್ಬನನ್ನು ಭೇಟಿ ಮಾಡಿ ನನ್ನ ಕಾಲಿನ ಸಮಸ್ಯೆಗೆ ಪರಿಹಾರಕೇಳಿದಾಗಆತಯಾವುದೋ ಒಂದು ಎಣ್ಣೆಯನ್ನು ಕೊಟ್ಟು ಮೂರು ಸಾವಿರ ತೆಗೆದುಕೊಂಡ. ಆದರೆ ಅದರಿಂದಲೂ ಯಾವುದೇ ಉಪಯೋಗವಾಗಲಿಲ್ಲ. ಇನ್ನು ನನ್ನ ಕಾಲಿಗೆ ಹೆಚ್ಚು ಖರ್ಚು ಮಾಡುವಷ್ಟು ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಕೊನೆಗೆ ನಮ್ಮ ತಾಯಿಯವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಹರಕೆ ಹೊತ್ತುಕೊಂಡರು. ಸ್ವಾಮಿ ನನ್ನ ಮಗನ ಕಾಲನ್ನು ಹೇಗಾದರೂ ಸರಿಪಡಿಸಿ ನಡೆಯುವಂತಾಗಲಿ. ಮಂತ್ರಾಲಕ್ಕೆ ಬಂದು ಸೇವೆ ಮಾಡುವೆ ಎಂದು. ಅದೇನು ಪವಾಡವೊ ಹರಸಿಕೊಂಡ ಹದಿನೈದು ಇಪ್ಪತ್ತು ದಿನದೊಳಗೆ ನನ್ನ ಪಾದಗಳು ಮುಂದಕ್ಕೆ ಬಂದು ನಾನು ನಡೆಯುವಂತಾದೆ. ಯಾವ ವೈದ್ಯರಿಂದಲೂ ಆಗದ ಕೆಲಸ ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ್ದರು. (ಕಳೆದ ಬಾರಿ ನಡೆದ ವಾಕ್ಪಥ ಗೋಷ್ಟಿಯಲ್ಲಿ ಇದನ್ನು ಹೇಳಿದ್ದೆ)
(ನನ್ನ ಮದುವೆಯ ವಿಷಯದಲ್ಲೂ ರಾಯರ ಕೃಪೆ ಇದೆ ಎಂದು ನಂಬುತ್ತೇನೆ. ಏಕೆಂದರೆ ನನಗೆ ಹುಡುಗಿ ಹುಡುಕಲು ಶುರು ಮಾಡಿ ಒಂದೂವರೆ ವರ್ಷವಾದರೂ ಯಾವುದೇ ಸಂಬಂಧಗಳು ಆಗಿರಲಿಲ್ಲ. ಕೊನೆಗೆ ರಾಯರೇ ಅನುಗ್ರಹಿಸಿ ಮಂತ್ರಾಲಯದ ಹುಡುಗಿಯೇ ನನ್ನ ಮಡದಿಯಾಗಿ ಬಂದಳು.)
ಚಿತ್ರ ಕೃಪೆ : ಅಂತರ್ಜಾಲ
Rating
No votes yet

Comments