ಜ್ಯೋತಿಷೋರ್ಮಾ ತಮರ್ಗಮಯ
ಸುಮಾರು ಹದಿನಾಲ್ಕು ಮುಕ್ಕಾಲು ವರ್ಷ ಜೈಲಿನಲ್ಲಿದ್ದು ಈಗ ತಾನೇ ಬಿಡುಗಡೆಯಾಗಿ ಸರಳುಗಳಿಲ್ಲದ ಹೊಸ ಜಗತ್ತನ್ನು ಪ್ರವೇಶಿಸಿದ ಖುಷಿ , ಸೋಫಾದ ಎಡಗೈ ಮೇಲೆ ಕಾಲಿಟ್ಟು ಆರಾಮದಿಂದ ತೆಳ್ಳಗಿನ ಟಿವಿಯಲ್ಲಿ ಸದ್ಯದ ಧಾರಾವಾಹಿ ನೋಡುತ್ತಿರುವಾಗ ಹೇಳದೇ ಕೇಳದೇ ಕರೆಂಟು ಹೋಗಿದ್ದರಿಂದ ಆಗಿದ್ದು ಭವತ್ಪ್ರಭುವಿಗೆ.. ಈ ಭವತ್ಪ್ರಭುವಿನ ಹೆಸರೇ ಸೂಚಿಸುವಂತೆ ಅವನದ್ದು ಸ್ವಲ್ಪ ಹಳೆಯ ಜನಾಂಗ.. ಸುಮಾರು ಐವತ್ತೆರಡು ವಯಸ್ಸಿರಬಹುದು. ಅವನ ಬಣ್ಣ , ದೇಹರಚನೆ, ತಲೆಗೂದಲು ಇತ್ಯಾದಿಗಳ ವಿವರವನ್ನು ಈ ಕಥೆ ಯಾಕೆ ಹೇಳುವುದಿಲ್ಲ ಎಂದರೆ ’ಬೇಕಾಗಿದ್ದಾರೆ’ ಎಂದು ಪತ್ರಿಕೆಗಳಲ್ಲಿ ಪ್ರಿಂಟ್ ಹಾಕಿಸುವ ಯಾವ ಪ್ರಮೇಯವೂ ಇಲ್ಲ. ಭವತ್ಪ್ರಭುವಿನ್ನೂ ಕಳೆದು ಹೋಗಿಲ್ಲ. ಮತ್ತು ಅವನು ಯಾರಿಗೂ ಬೇಕಾಗಿಲ್ಲ. ಅವನೇ ಬರೆದು ಕೊಳ್ಳುವಂತೆ ಅವನೊಬ್ಬ ಭ್ರಮಾಜೀವಿ. ತಾನಾಯಿತು ತನ್ನ ಕಥೆಯಾಯಿತು ಎಂದು ಒಂದು ಬದಿಗೆ ಇದ್ದು ಬಿಡುವ ವ್ಯಕ್ತಿ. ಹ್ಮಂ.. ಬರೆದುಕೊಂಡಿದ್ದಾನೆ ಎಂದಾಗ ನೆನಪಾಯಿತು. ಭವತ್ಪ್ರಭು ತನ್ನ ಡೈರಿಯನ್ನು ಬಿಟ್ಟು ಬೇರೆ ಏನನ್ನೊ ಬರೆದಿಲ್ಲ. ಹೆಚ್ಚೆಚ್ಚು ಎಂದರೆ ಸುಧಾದಲ್ಲಿ ಪದಬಂಧ ತುಂಬಿರಬಹುದು ಅಷ್ಟೇ. ಅವನಿಗೆ ಓದುವಾಗ ಮಾತ್ರ ಕನ್ನಡಕ ಬೇಕಾಗುತ್ತದೆ. ಸಮೀಪವೋ ದೂರದ್ದೋ ದೃಷ್ಟಿ ದೋಷವಿದೆ ಅಂತ ಕಾಣುತ್ತದೆ. ಮತ್ತು ಅವನಿಗೆ ಜನರು ಏಕವಚನದಲ್ಲಿ ಕರೆದರೆ ಬೇಸರವಾಗುವುದಿಲ್ಲ.
ಇದಕ್ಕೂ ಮೊದಲು ಕರೆಂಟ್ ಇತ್ತು.. ಫ್ಯಾನ್ ಹಾಕಿಕೊಂಡು ಅದರ ಕರಕರವೋ ಗರಗರವೋ ಸದ್ದಿಗೆ ಗಮನ ಕೊಡದೇ ಭವತ್ಪ್ರಭು ಅವನ ಮನಸ್ಸಿಗೆ ಬಂದ ಹಾಡು ಗುನುಗುತ್ತಾ ಟಿವಿ ನೋಡುತ್ತಿದ್ದ.. ಫಟ್ ಎಂದು ಕರೆಂಟು ಹೋಯಿತು.. ಫ್ಯಾನು ನಿಧಾನವಾಗಿ ತಿರುಗುತ್ತಾ ನಿಲ್ಲುವ ಹಂತಕ್ಕೆ ಬರುತ್ತಿತ್ತು. ಕೊಂಯ್ ಎಂದು ಶಬ್ಧ ಮಾಡಿ ನಿಂತಿತು. ಆಗ ಅವನಿಗೆ ಅರಿವಿಗೆ ಬರತೊಡಗಿತ್ತು ಕರೆಂಟು ಹೋಗಿದೆ ಎಂದು. ಅವನ ಗುನುಗಿನ ಹಾಡಿಗೆ ಧಾಟಿ ತಪ್ಪಿದಂತಾಯಿತು. ಓಹೋ ಎಂದು ಅಚೀಚೆ ನೋಡುತ್ತಾ ಹಾಡು ನಿಲ್ಲಿಸಿದ. ನೀರವ ಮೌನ. ಮತ್ತೆ ಹಾಡು ಪ್ರಾರಂಭಿಸಲು ಯತ್ನಿಸಿದರೆ ಆ ಲಯ ಅಥವಾ ಏಕತಾನತೆ ಅವನಿಗೆ ಬರಲೇ ಇಲ್ಲ.. ಕರೆಂಟ್ ಇದ್ದಾಗ ಅಥವಾ ಆ ಫ್ಯಾನಿನ ಗರಗರದ ನಡುವೆ ಬಂದ ಆಲಾಪ ಇದು ಇಲ್ಲದಿರುವಾಗ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಥಟ್ಟನೆ ಭವತ್ಪ್ರಭುವಿನ ಚಿತ್ತಕ್ಕೆ ಮೂಡಿತು. ಭ್ರಮಾಜೀವಿ ಎಂದು ಮೊದಲೇ ಬರೆದ ಕಾರಣ ಇದರಲ್ಲಿ ಜಾಸ್ತಿ ಆಶ್ಚರ್ಯ ಇಲ್ಲದಿದ್ದರೂ ಕುತೂಹಲ ಮಾತ್ರ ಅವನಿಗೆ ಅವನ ಮೇಲೇ ಮೂಡಿತು. ಆ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ. ತಾನು ತಿಳಿದಿದ್ದ ಫ್ಯಾನು ಕೇವಲ ಗಾಳಿ ಪಂಕವಲ್ಲ.. ಅದು ಬೇರೇನೋ ಇದೆ ಎಂದು ಉತ್ತರದ ಹತ್ತಿರದ ಸಮಾಧಾನ ರೂಪವನ್ನು ಭ್ರಮಿಸಿಕೊಂಡ.
ಹೀಗೆ ಕರೆಂಟು ಹೋಗಿದ್ದೇ ತಡ.. ಭವತ್ಪ್ರಭು ಕವಿಯಾಗುತ್ತಾನೆ.. ನಿಧಾನವಾಗಿ ಎದ್ದು ಒಂದು ಕೈಯಲ್ಲಿ ಸುತ್ತಿದ್ದ ಲುಂಗಿಯ ಗಂಟನ್ನು ಹಿಡಿದು,ಇನ್ನೊಂದು ಕೈಯಲ್ಲಿ ಗೋಡೆಯನ್ನು ಬಳಚುತ್ತಾ ಅಡುಗೆ ಮನೆಗೆ ಹೋಗಿ ಮೇಣದ ಬತ್ತಿಯನ್ನು ತಂದ. ತನ್ನ ಮಲಗುವ ಕೋಣೆಯ ಟೇಬಲ್ಲಿನ ತುದಿಗೆ ಮೇಣದ ಬತ್ತಿಯನ್ನು ಅಂಟಿಸಿಕೊಂಡು ಅದರ ಜ್ವಾಲೆ ಕರಗಿಸುವ ಎತ್ತರವನ್ನು ಅಳೆಯುತ್ತಾ ಕುರ್ಚಿಯ ಮೇಲೆ ಕುಳಿತ. ಕೂರುವಾಗ ಕುರ್ಚಿಯನ್ನು ಎಳೆದದ್ದರಿಂದ ಬ್ರೋಂ ಎಂದು ಕುರ್ಚಿಯ ಕಾಲು ಅರಚಿತು. ಭವತ್ಪ್ರಭುವಿಗೆ ಅದು ಭಯ ತಂದಿರಬೇಕು. ಒಂದು ಸಲ ಸುತ್ತಲೂ ನೋಡಿ, ಮತ್ತೆ ಮೇಣದ ಬತ್ತಿಯನ್ನೇ ದಿಟ್ಟಿಸುತ್ತಾ ಕುಳಿತ. ಈಗ ಅವನಿಗೆ ಒಂಥರಾ ನೆಮ್ಮದಿ. ಜಂಜಾಟಗಳ ಹಿಡಿತದಿಂದ ತಪ್ಪಿಸಿಕೊಂಡ ಸ್ವರ್ಗ ಸುಖ, ಮುಕ್ತತೆಯ ಅನುಭವ..
ಮೇಜಿನ ಡ್ರಾಯರ್ನಲ್ಲಿ ಇಂಗ್ಲಿಷ್ ಪೇಪರಿನ ಬಾಯಿಂಡ್ ಹಾಕಿದ್ದ ಎಲ್ಲೈಸಿ ಡೈರಿಯೊಂದನ್ನು ತೆಗೆದು ಕುಳಿತಾಗ ಭವತ್ಪ್ರಭು ಥೇಟ್ ದಾರ್ಶನಿಕನಂತೆ ಕಾಣುತ್ತಿದ್ದ.. ಅದೇ ಅದೇ ಅವನ ಡೈರಿ.. ಹೀಗೆ ಕರೆಂಟು ಹೋದಾಗೆಲ್ಲಾ ಮೇಣದ ಬತ್ತಿ ಹಚ್ಚಿಟ್ಟು ಅದು ಕರಗುವವರೆಗೂ ಕಾಯುತ್ತಾ, ಅದು ಆರಿದ ಮೇಲೆ ತೆಗೆದು ಕೂರುವುದು ಇದೇ ಡೈರಿಯನ್ನು. ಅದು ಕತ್ತಲ ಪುಸ್ತಕ. ಅಂದರೆ ಕತ್ತಲೆಯಲ್ಲಿ ಮಾತ್ರ ಅದನ್ನು ಉಪಯೋಗಿಸುತ್ತಾನೆ ಭವತ್ಪ್ರಭು. ಉಪಯೋಗ ಅಂದರೆ ಬರೆಯುವುದು ಮಾತ್ರ.. ಈವರೆಗೆ ಬರೆದಿದ್ದನ್ನು ಒಮ್ಮೆಯೂ ಓದಿಲ್ಲ.. ಯಾರಿಗೂ ಓದಲೂ ಕೊಟ್ಟಿಲ್ಲ.. ಏಕೆಂದರೆ ಅದು ಹೊರಗೆ ಬರುವುದೇ ಕತ್ತಲೆಯಲ್ಲಿ.. ಆ ಡೈರಿಗೊಂದು ಬುಕ್ ಮಾರ್ಕಿಗೆಂದು ಹಳದೀ ಬಣ್ಣದ ಒಂದು ದಾರವಿದೆ. ಆ ಕತ್ತಲಲ್ಲಿ ಅದರ ಹಳದಿ ಬಣ್ಣ ಭವತ್ಪ್ರಭುವಿಗೆ ಯಾವ ಸಹಾಯ ಮಾಡದಿದ್ದರೂ ಅದನ್ನು ಅವನು ಬಹಳವಾಗಿ ಉಪಯೋಗಿಸುತ್ತಾನೆ. ಡೈರಿಯಲ್ಲಿ ಎಲ್ಲಿಯವರೆಗೆ ಬರೆದಿತ್ತು ಎಂಬುದನ್ನು ಅದು ಸದಾ ಸೂಚಿಸುವಂತೆ ಪ್ರತಿ ಬರಹದ ನಂತರ ಅದನ್ನು ಆ ಪುಟಕ್ಕೆ ಇಟ್ಟು ಮುಚ್ಚಿಡುತ್ತಾನೆ. ಅವನು ಕತ್ತಲೆಯಲ್ಲಿ ಮಾತ್ರ ಈ ಡೈರಿಯನ್ನು ಬರೆಯುವುದರಿಂದ ಆ ಬುಕ್ ಮಾರ್ಕ್ ಇಲ್ಲದೇ ಹೋದರೆ ಅವನಿಗೆ ಎಲ್ಲಿಂದ ಬರೆಯಬೇಕು ಎಂಬುದು ಗೊತ್ತಾಗುವುದಿಲ್ಲ. ಮತ್ತು ಇದೇ ಕಾರಣಕ್ಕೆ ಅವನು ಪ್ರತಿಸಲ ಹೊಸ ಪುಟದಿಂದಲೇ ಅದರಲ್ಲೂ ಎಡ ಮಗ್ಗುಲಲ್ಲೇ ಬರೆಯಲು ಆರಂಭಿಸುತ್ತಾನೆ. ಈಗ ಸದ್ಯಕ್ಕೆ ಮೇಣದ ಬತ್ತಿ ಆರುವುದನ್ನೇ ಕಾಯುತ್ತಿದ್ದಾನೆ..
ಮೇಣದ ಬತ್ತಿಯೆಂದ ಮೇಲೆ ಅದು ನಿಧಾನವಾಗಿಯೇ ಕರಗುತ್ತದೆ. ಭವತ್ಪ್ರಭುವಿಗೆ ಆ ಕುರಿತಾಗಿ ಏನೂ ಬೇಸರವಿಲ್ಲ.. ಈ ಮೇಣದ ಬತ್ತಿ ಕರಗುವುದರ ಒಳಗೇ ಕರೆಂಟು ಏನಾದರೂ ಬಂದು ಬಿಟ್ಟರೆ ಆ ದಿನ ಆತ ಡೈರಿ ಬರೆಯುವುದಿಲ್ಲ. ಹೀಗಾಗಿ ಅವನ ಡೈರಿಯನ್ನು ಯಾರಾದರೂ ಓದಿದರೆ ಯಾವ್ಯಾವ ದಿನ ಕರೆಂಟು ಮೇಣದ ಬತ್ತಿ ಕರಗುವುದರ ಒಳಗೇ ತಿರುಗಿ ಬಂದಿತ್ತು ಎನ್ನುವುದು ಬಹಳ ಬೇಗ ಗೊತ್ತಾಗುತ್ತದೆ. ಒಂದು ದೀಪದ ಹುಳು ಜ್ವಾಲೆಯ ಬಳಿಬಂದು ಕಮಾನಿನಂತೆ ಸುತ್ತಲೂ ಜಿಗಿದು ಮೈ ಸುಟ್ಟುಕೊಂಡು ನೆಲಕ್ಕೆ ಬಿತ್ತು. ಭವತ್ಪ್ರಭುವಿಗೆ ಮಜ. ಅದರ ರೆಕ್ಕೆಯನ್ನು ನಿಧಾನವಾಗಿ ಎತ್ತಿ ದೀಪದ ಮೇಲೆ ಬೀಳಿಸಿದ. ಫರ್ ಎಂದು ಇಡಿಯಾಗಿ ಸುಟ್ಟು ಅದು ಮಾಯವಾಗಿ ಹೋಯಿತು.. ಅವನಿಗೆ ಇನ್ನೂ ಮಜ ಬಂತು. ಇನ್ನೊಂದು ಹುಳುವಿಗಾಗಿ ಹುಡುಕಿದ.. ಸಿಗಲಿಲ್ಲ.. ಕೈಯಲ್ಲಿ ಹಿಡಿದಿದ್ದ ಪೆನ್ನಿನ ತುದಿಯನ್ನು ಬೆಂಕಿಗೆ ತಾಗಿಸಿದ. ತಾಗಿಸಿದ ವೇಗದಲ್ಲೇ ಹಿಂದಕ್ಕೆ ಎಳೆದು ತುದಿಯನ್ನು ಮುಟ್ಟಿದ. ಮಾತ್ರವೇ ಬಿಸಿ ತಾಗಿದ ಅದು ಬೆಚ್ಚನೆಯ ಹಿತವನ್ನು ಕೊಟ್ಟಿತು. ಭವತ್ಪ್ರಭುವಿಗೆ ಮತ್ತೆ ಮಜ. ಮತ್ತೆ ಬೆಂಕಿಗೆ ಹಿಡಿದ,, ಈ ಸಲ ಜಾಸ್ತಿ ಬಿಸಿಯಾಗಿರಬಹುದು ಅನಿಸುತ್ತದೆ.. ಕೈಯಲ್ಲಿ ಮುಟ್ಟಲೇ ಇಲ್ಲ.. ಮೊನೆ ಹೋಗಿರಲೂಬಹುದೆಂದು ಟೇಬಲ್ ಲ್ಯಾಂಪಿನ ಕೆಳಗಿದ್ದ ಹಳೇ ನ್ಯೂಸ್ ಪೇಪರಿನ ಅಂಚಿಗೆ ಗೀಚಿದ.. ಒಂದೆರಡು ಬಾರಿ ಗರಗರ ಎಂದು ಶಬ್ದ ಮಾಡಿ ಬರೆಯಿತು.. ಅಬ್ಬ ಏನೂ ಆಗಿಲ್ಲ ಎಂಬ ಸಮಾಧಾನದೊಂದಿಗೆ ಪೆನ್ನಿಗೆ ಮುಚ್ಚಳ ಹಾಕಿ ಪಕ್ಕಕ್ಕೆ ಎಸೆದ.
ಭವತ್ಪ್ರಭುವಿನ ವಯಸ್ಸು ಈಗ ಐವತ್ತೆರಡು ಅಂದರೆ ಸುಮಾರು ಇಪ್ಪತ್ತಾ ಎರಡು ವರ್ಷಗಳ ಹಿಂದೆ, ಅವರ ಮನೆಯ ಲ್ಯಾಂಡ್ ಲೈನಿಗೆ ಒಂದು ಕರೆ ಬಂತು. ’ನಿಮಗೆ ಗಂಡು ಮಗು ಆಗಿದೆ.. ನಿಮ್ಮತ್ತೆಯವರು ನಿಮಗೆ ತಿಳಿಸಿ ಅಂತ ಈ ನಂಬರ್ ಕೊಟ್ರು.. ಬೇಗ ಬರ್ಬೇಕಂತೆ’ ಅಂತ ಯಾರೋ ಹೇಳಿ ಫೋನಿಟ್ಟರು.. ಡೇಟ್ ಕೊಟ್ಟಿದ್ದಕ್ಕಿಂತ ಎರಡು ದಿನ ಮುಂಚೆಯೇ ಆಯಿತಲ್ಲ ಎಂದುಕೊಳ್ಳುತ್ತಾ ಆಸ್ಪತ್ರೆ ತಲುಪಿದಾಗ ಸುಮಾರು ಆರು ಗಂಟೆ ಸಂಜೆ.. ಒಂಥರಾ ಉದ್ವೇಗದಲ್ಲಿ ’ಗಂಡಸರು’ ಎಂದು ಬರೆದಿದ್ದ ಶೌಚಾಲಯಕ್ಕೆ ಧಾವಿಸಿ, ಅದೇ ಉದ್ವೇಗದಲ್ಲಿ ಹೊರಬಂದು ಮೂರನೇ ಮಹಡಿ ಮೆಟ್ಟಿಲು ಹತ್ತತೊಡಗಿದ. ಕಡು ನೀಲಿ ಕರ್ಟನ್ ಹಿಂದೆ ಮಲಗಿದ್ದ ಹೆಂಡತಿ ಮತ್ತು ಮಗುವನ್ನು ಒಂದೇ ಸಲ ನೋಡಿ, ಮಗನನ್ನು ಎತ್ತಿಕೊಂಡ.. ಕಾಕತಾಳೀಯವಾಗಿ ಥಟ್ಟನೆ ಕರೆಂಟು ಹೋಯಿತು. ಆಸ್ಪತ್ರೆ ಹಳೆಯದಾಗಿದ್ದರಿಂದಲೋ ಅಥವಾ ಇವರ ರೂಮು ಹತ್ತಾರು ರೂಮುಗಳ ಮಧ್ಯೆ ಇದ್ದುದರಿಂದಲೋ ಜಾಸ್ತಿ ಬೆಳಕಿರಲಿಲ್ಲ.. ಕರೆಂಟು ಬರುವವರೆಗೆ ಊ ಊ ಹಿ ಹಿ ಎಂಬ ವಿಚಿತ್ರ ಧ್ವನಿಗಳನ್ನು ಹೊರಡಿಸುತ್ತಾ ಮಗನನ್ನು ಕೈಯೆಂಬ ತೊಟ್ಟಿಲಲ್ಲೇ ತೂಗತೊಡಗಿದ..ಒಂದೈದು ನಿಮಿಷಗಳಾದ ಮೇಲೆ ಜನರೇಟರ್ರೋ ಅಥವಾ ನಿಜವಾಗಿ ಕರೆಂಟು ಬಂತೋ, ರೂಮಿನ ದೀಪ ಹತ್ತಿಕೊಂಡಿತು. ಮಗುವನ್ನು ಹೆಂಡತಿಯ ಕೈಯಲ್ಲಿಟ್ಟು ಮೆಚ್ಚುಗೆಯ ನೋಟ ಬೀರಿದ. ಮಗುವನ್ನು ಎತ್ತಿಕೊಂಡ ಹೆಂಡತಿ ಕಿಟಾರನೆ ಕಿರುಚುತ್ತಾ ಅಳತೊಡಗಿದಳು.. ಮಗು ಸತ್ತು ಹೋಗಿತ್ತು..
ಮೇಣದ ಬತ್ತಿ ಆರಿದ್ದೇ ತಡ ಭವತ್ಪ್ರಭು ಎಲ್ಲಿಲ್ಲದ ಉತ್ಸಾಹ ತುಂಬಿಕೊಂಡು ಡೈರಿಯನ್ನು ತೆಗೆದ. ಅದರ ಬಿಳಿಹಾಳೆಗಳಿಗೆ ಕಣ್ಣು ಹೊಂದಿಸಿಕೊಂಡು ಪುಟದ ಆರಂಭವನ್ನಷ್ಟೇ ಗುರುತು ಮಾಡಿಕೊಂಡ. ಅವತ್ತಿನ ಡೇಟ್ ಹಾಕಿ ಬರೆದ. - ನಾನು ಬೆಳಕಿನಿಂದ ಕತ್ತಲೆಯೆಡೆಗೆ ಹೋಗುತ್ತೇನೆ. ಬೆಳಕು ಎಲ್ಲವನ್ನೂ ತೋರಿಸುತ್ತದೆ. ಇವತ್ತು ಶನಿವಾರ. ಉಪ್ಪಿಟ್ಟು ತಿನ್ನುವಾಗ ಕಲ್ಲು ಸಿಕ್ಕಿದ್ದರಿಂದ ಹೊಟೆಲ್ ನವನಿಗೆ ಉಗಿದಿದ್ದೇನೆ ( ಮೂರು ರೂಪಾಯಿ ಕಡಿಮೆ ಕೊಟ್ಟಿದ್ದೇನೆ ]. ದೀಪದ ಹುಳುವನ್ನು ಕೊಂದೆ. ಮತ್ತು ಇನ್ನೊಂದಕ್ಕಾಗಿ ಹುಡುಕುತ್ತಿದ್ದೇನೆ. ಕತ್ತಲೆ ನಮಗೆ ಬೇಕಾಗಿದ್ದನ್ನು ಭ್ರಮಿಸಲು ಅವಕಾಶ ಕೊಡುತ್ತದೆ. ಅದಾಗಿ ಇದು ಹೀಗೆ ಎಂದು ಹೇಳುವುದಿಲ್ಲ. ಹೀಗಾಗಿ ಕತ್ತಲೆಯಲ್ಲಿ ನಾನು ಉತ್ಸುಕನಾಗುತ್ತೇನೆ ಅನಿಸುತ್ತದೆ. ನಾನು ಭ್ರಮಾಜೀವಿ. ನಾನು ಯಾರಿಗೂ ಬೇಕಾದವನಲ್ಲ. ಇನ್ನು ಹತ್ತು ನಿಮಿಷಗಳಲ್ಲಿ ಕರೆಂಟು ಬರದಿದ್ದರೆ ಮತ್ತೆ ಬರೆಯುತ್ತೇನೆ. - ಈ ರೀತಿ ಬರೆದು ಗುರುತಿಗೆ ಪೆನ್ನಿನ ತುದಿಯನ್ನು ಕೊನೆಯ ಪೂರ್ಣವಿರಾಮದಲ್ಲೇ ಇಟ್ಟು ಹತ್ತು ನಿಮಿಷಗಳವರೆಗೆ ಕಾಯುತ್ತಾ ಕುಳಿತ.
ಇದನ್ನೆಲ್ಲಾ ಗಮನಿಸಿದಾಗ ಮೊದಲ ಕೆಲ ಸಾಲುಗಳಲ್ಲಿರುವ ಭವತ್ಪ್ರಭುವಿನ ವಿವರಣೆ ಸತ್ಯ ಅನಿಸುತ್ತದೆ. ಅವನು ಹುಚ್ಚ ಅಂತಲೂ ಕೆಲವರಿಗೆ ಅನಿಸದ್ದುಂಟು. ಅವನ ಹೆಂಡತಿ ಸತ್ತು ಸುಮಾರು ಹತ್ತು ವರ್ಷಗಳಾಗಿದೆ. ’ಅವಳನ್ನೂ ಭವತ್ಪ್ರಭುವೇ ಕೊಂದಿದ್ದು’ ಎಂದು ಕೋರ್ಟ್ನಲ್ಲಿ ಅವನ ಅತ್ತೆ ಅರ್ಥಾತ್ ಅವನ ಹೆಂಡತಿಯ ತಾಯಿ ಅಳುತ್ತಾ ಹೇಳಿದಾಗ ಜಡ್ಜ್ ಸಾಹೇಬರು ’ಅವಳನ್ನೂ ಅಂದರೆ ಇನ್ಯಾರ್ಯಾರನ್ನು ಕೊಂದಿದ್ದಾನೆ ಇವ?’ ಅಂತ ಕೇಳಿದ್ದರಂತೆ. ಆಗ ಏನೂ ಉತ್ತರಕೊಡದೆ ಇದ್ದುದರಿಂದ ಆ ಕೇಸು ಅಲ್ಲಿಗೆ ಮುಚ್ಚಿಹೋಗಿತ್ತು.. ಆವತ್ತಿನಿಂದ ಅವರ ಮನೆಗೆ ಯಾರೂ ಬಂದಿಲ್ಲ. ಮೊದಲೆಲ್ಲಾ ಅವನ ಹೆಂಡತಿಯನ್ನು ಮಾತನಾಡಿಸಲು ಬರುತ್ತಿದ್ದ ನೆರೆಹೊರೆಯವರು ಇತ್ತೀಚಿಗೆ ತಿರುಪತಿ, ಹರಿದ್ವಾರ,ಕಾಶೀ ಯಾತ್ರೆ ಇತ್ಯಾದಿಗಳಲಿ ಭಯಂಕರ ಕಾಲ ವ್ಯಯಿಸುತ್ತಿದುದರಿಂದ ಭವತ್ಪ್ರಭುವನ್ನು ಆ ಭವತ್ಪ್ರಭು ಚೆನ್ನಾಗೇ ಇಟ್ಟಿದ್ದಾನೆ ಎಂದು ಭ್ರಮಿಸಿ ಇತ್ತ ಕಡೆ ತಲೆಯೇ ಹಾಕಲಿಲ್ಲ. ಹತ್ತು ನಿಮಿಷವಾಯಿತು.
ಮತ್ತೆ ಬರೆದ - ’ನಾಳೆ ಇದೇ ಸಮಯಕ್ಕೆ ಕರೆಂಟು ಹೋಗುತ್ತದೆ ಎಂದ ಪೇಪರಿನಲ್ಲಿ ಬಂದಿದೆ. ಸರೋಜಾದೇವಿಯವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ. ನಾನು ಮತ್ತು ಇತರರು ಸ್ವಾರ್ಥಿಗಳು. ಉದಾಹರಣೆಗೆ, ನನಗೆ ಬೇರೆ ಯಾರೂ ಬೇಕಾಗಿಲ್ಲ ಮತ್ತು ನಾನೂ ಯಾರಿಗೂ ಬೇಕಾಗಿಲ್ಲ. ಹೀಗಾಗಿ ನಾನೂ ಸ್ವಾರ್ಥಿ, ಇತರರೂ ಸ್ವಾರ್ಥಿಗಳು. ಈ ಬೆಳಕು ಎಲ್ಲರನ್ನೂ ತೋರಿಸುತ್ತದೆ. ಹೀಗಾಗಿ ಬೆಳಕನ್ನು ನಾನು ದ್ವೇಷಿಸುತ್ತೇನೆ. ಮತ್ತು ಆ ದ್ವೇಷದಿಂದಲೇ ಕತ್ತಲೆಯನ್ನು ಪ್ರೀತಿಸುತ್ತೇನೆ. ಕತ್ತಲೆ ಎಂದರೆ ಕರ್ರಗಿಲ್ಲ. ಅದು ಬೆಳ್ಳಗಿದೆ. ಕತ್ತಲೆಯ ಮೇಲೆ ಬೆಳಕು ಚೆಲ್ಲಿದಾಗ ನಮಗೆ ನಾವು ಕಾಣುತ್ತೇವೆ. ಬಿಸಿಲಲ್ಲಿ ನಮ್ಮ ಎಡಕ್ಕೋ ಬಲಕ್ಕೋ ಇರುವ ನೆರಳು ಕತ್ತಲೆಯಲ್ಲಿ ಜೀವ ಬಂದು ನಮ್ಮೊಳಗೇ ಹುದುಗಿಕೊಂಡು ಒಂದಾದಂತೆ. ಇವತ್ತಿಗೆ ಇಷ್ಟೇ ಸಾಕು. ಕರೆಂಟು ಬಂದ ಮೇಲೆ, ಈ ವಾರದ ಪದಬಂಧ ತುಂಬಬೇಕು. .’
ದೂರದಲ್ಲಿ ಮೂಲೆಯಲ್ಲಿ ಎರಡು ಜಿರಲೆ ಮರಿಗಳು ಗುಸುಗುಸು ಮಾಡಿದಂತೆ ಕಂಡಿತು. ಅದನ್ನೇ ನೋಡುತ್ತಾ ಕುಳಿತ ಭವತ್ಪ್ರಭುವಿಗೆ ಕಣ್ಣು ನೋವು ಬಂದಂತೆ ಆಯಿತು. ಆದರೂ ಮೀಸೆಯಾಡಿಸುತ್ತಾ ಪುಟಪುಟನೆ ಓಡಾಡುವ ಜಿರಲೆಗಳು ಈಗ ಸುಂದರವಾಗಿ ಕಾಣುತ್ತಿದ್ದವು. ಏನೋ ಕತ್ತಲ ಸಂಭ್ರಮದಲ್ಲಿ ಆಚೀಚಿಗೆ ಜಿಗಿದಾಡುವ ಅವುಗಳು ಕರೆಂಟು ಬಂದರೆ ಅಷ್ಟು ಚೆನ್ನಾಗಿ ಕಾಣುವುದಿಲ್ಲ ಎಂದುಕೊಂಡ. ಭವತ್ಪ್ರಭುವಿನ ಕೈಯಳತೆಷ್ಟು ದೂರವಿದ್ದರೂ ಉದಾಸೀನತೆಯಿಂದ ಅವುಗಳನ್ನು ಹೊಡೆಯಲಿಲ್ಲ. ಕರೆಂಟೇನಾದರೂ ಇದ್ದಿದ್ದರೆ ಅವು ಇಷ್ಟೊತ್ತಿಗಾಗಲೇ ಸತ್ತು ಹೋಗಿರುತ್ತಿದ್ದವು. ಗಡಿಯಾರ ಒಂಭತ್ತಾದದ್ದನ್ನು ರೇಡಿಯಂನಲ್ಲಿ ಮಿಂಚಿಸಿತು. ’ಮುಕ್ತ ಮುಕ್ತ’ ನೆನಪಾಯಿತು. ಕರೆಂಟು ಬಂದ ತಕ್ಷಣ ಟಿ.ವಿ. ಹಚ್ಚಬಹುದು ಎಂದು ರಿಮೋಟು ಹುಡುಕುತ್ತಾ ಹಾಲಿಗೆ ಬಂದ. ಸೋಫಾದ ಅಂಚಿನಲ್ಲೆಲ್ಲೋ ಬಿದ್ದಿದ್ದ ರಿಮೋಟಿಗಾಗಿ ಕೈಹಾಕಿ, ಅಲ್ಲಿರುವುದು ರಿಮೋಟು ಹೌದೆಂದು ಖಾತ್ರಿಪಡಿಸಿಕೊಂಡ. ಅಷ್ಟರಲ್ಲಿ ಕರೆಂಟು ಬಂತು. ಟಿ.ವಿ. ಹಚ್ಚಿ ಮೊದಲಿನ ಆಸನ ಆಸಕ್ತಿಗಳನ್ನೇ ಇಟ್ಟುಕೊಂಡು ಕೂತ ಭವತ್ಪ್ರಭುವಿಗೆ ಆ ವಾರವಿಡೀ ಮತ್ತೆಂದೂ ಜಿರಲೆಗಳಾಗಲೀ, ದೀಪದ ಹುಳುಗಳಾಗಲೀ, ಫ್ಯಾನಾಗಲೀ, ಆಲಾಪವಾಗಲೀ ಮತ್ತೆ ಭೇಟಿಯಾಗಲೇ ಇಲ್ಲ.
ಅಂದರೆ..
Comments
ಉ: ಜ್ಯೋತ್ಯೋರ್ಮಾ ತಮಸಂಗಮಯ
In reply to ಉ: ಜ್ಯೋತ್ಯೋರ್ಮಾ ತಮಸಂಗಮಯ by ಸುಮ ನಾಡಿಗ್
ಉ: ಜ್ಯೋತ್ಯೋರ್ಮಾ ತಮಸಂಗಮಯ
ಉ: ಜ್ಯೋತಿಷೋರ್ಮಾ ತಮರ್ಗಮಯ
In reply to ಉ: ಜ್ಯೋತಿಷೋರ್ಮಾ ತಮರ್ಗಮಯ by kavinagaraj
ಉ: ಜ್ಯೋತಿಷೋರ್ಮಾ ತಮರ್ಗಮಯ