ಕಥೆ:ಭೂಮಿಯ ಕಡೆಯ ದಿನ
"ಬೆಳಗ್ಗೆ ಹತ್ತಕ್ಕೆ ಮೀಟಿಂಗ್ ಇದೆ ಸಂಜೆ ನೀವು ಮನೆಗೆ ಹೋಗುವದರಲ್ಲಿ ನಾನು ಹೇಳಿದ ಎಲ್ಲ ರಿಪೋರ್ಟ್ ಸಿದ್ದಪಡಿಸಿಯೆ ಹೋಗಬೇಕು, ಸ್ವಲ್ಪ ಎಚ್ಚರವಹಿಸಿ ಕಳೆದ ಬಾರಿಯಂತೆ ತಪ್ಪುಗಳಿಲ್ಲದಂತೆ ನೋಡಿಕೊಳ್ಳಿ" ಬಾಸ್ ಎಂಬ ಸ್ಯಾಡಿಷ್ಟನ ನುಡಿಗಳು.
"ಅಲ್ಲಿಗೆ ಎಲ್ಲ ನೆಗೆದು ಬಿತ್ತು" ಅಂದುಕೊಂಡೆ ಮನದಲ್ಲಿಯೆ, ಯಾವದಿನ ಮನೆಗೆ ಮುಂಚೆ ಹೋಗಬೇಕು ಅಂದುಕೊಳ್ಳುತ್ತಿವೊ ಆ ದಿನವೆ ಈ ದರಿದ್ರ ಬಾಸ್ ಗಳಿಗೆ ಮೀಟಿಂಗ್ ಬರುವುದು ತೀರ ಆಕಸ್ಮಿಕ ಏನಲ್ಲ ಅನ್ನಿಸಿತು. ಬಾಯಲ್ಲಿ ಏನು ಅನ್ನುವಂತಿಲ್ಲ. "ಆಗಲಿ" ಎಂದು ತಲೆಯಾಡಿಸಿ ಅವನು ಕೊಟ್ಟ ಸಮಸ್ತ ಆಸ್ತಿಯನ್ನು ಎರಡು ಕೈಯಲ್ಲಿ ಹಿಡಿಯುತ್ತ ನನ್ನ ಜಾಗಕ್ಕೆ ಬಂದು ಟೇಬಲ್ ಮೇಲೆ ಎಸೆದೆ.
ಬೆಳಗ್ಗೆ ಹೊರಡುವಾಗಲೆ ಪತ್ನಿ ನೆನಪಿಸಿದ್ದಳು, "ಈ ದಿನ ನಮ್ಮ ಮದುವೆಯಾದ ದಿನ ಸಂಜೆ ಸ್ವಲ್ಪ ಮುಂಚೆ ಮನೆಗೆ ಬಂದರೆ ದೇವಾಲಯಕ್ಕೆ ಹೋಗಿಬರಬಹುದು" ಎಂದು, ಅತಿ ಕನಿಷ್ಟ ಬೇಡಿಕೆ. ಹೇಗಾದರು ಕೆಲಸ ಮುಗಿಸಿ ಮನೆಗೆ ಹೋಗಿ ಅವಳೊಡನೆ ದೇವಾಲಯಕ್ಕೆ ಹೋಗಿಬರಬೇಕು ಅನ್ನಿಸಿತು. ಎಲ್ಲವನ್ನು ಹರಡಿ ಕುಳಿತುಕೊಂಡೆ, ಸಮಯ ಹೇಗೊ ಸರಿಯಿತೊ ತಿಳಿಯಲಿಲ್ಲ. ಸಂಜೆಯಾದಂತೆ ಎಲ್ಲರು ಎದ್ದು ಮನೆಗೆ ಹೋಗುತಿದ್ದರು. ಕೆಲವರು ನನ್ನತ್ತ ನೋಡುತ್ತ ನಗುತ್ತ ಹೋಗುತ್ತಿದ್ದರು. "ಸರ್ಕಾರಿ ಕೆಲಸ ಅಂದರೆ ಸ್ವರ್ಗ, ಸೋಮಾರಿಗಳ ಆಡೊಂಬಳ" ಅಂತೆಲ್ಲ ಪೇಪರಿನವರು ಮಾದ್ಯಮದವರು ಬಡುಕೊಳ್ತಾರೆ, ನನ್ನ ಪಾಲಿಗೆ ಏಕೊ ಇದು ಸದಾ ನರಕವೆ.
ಕೆಲಸದ ನಡುವೆ ಏಕೊ ತುಂಬಾ ಆಯಾಸ ಅನ್ನಿಸುತ್ತಿತ್ತು, ಹೊಟ್ಟೆಯಲ್ಲಿ ತೊಳಸಿದಂತೆ ಪದೆ ಪದೆ ಅನುಭವ. ಏಕೆ ಹೀಗೆ ಬಹುಷಃ ಮದ್ಯಾನದ ಊಟ ಸರಿಹೋಗಲಿಲ್ಲವ? ಅನ್ನಿಸಿತು. ಹೇಗೊ ನೀರು ಕುಡಿದು ಕೆಲಸ ಮುಂದುವರೆಸಿದೆ.ವಿಧ್ಯುತ್ ದೀಪದ ಬೆಳಕಲ್ಲಿ ಹಗಲೊ ರಾತ್ರಿಯೊ ಅರ್ಥವೆ ಆಗದು. ನಡುವೆ ವಾಚ್ ಮನ್ ಬಂದು "ನಾನು ಹೋಗ್ತೀನಿ" ಎಂದವನು ಏನೆನೊ ವದರಿದ ನನಗೆ ಕೇಳಿಸಿಕೊಳ್ಳುವಷ್ಟು ಸಹನೆಯಿಲ್ಲ. ನನಗಂತು ಕರ್ಮ ಅವನಾದರು ಮನೆಗೆ ಹೋಗಲಿ ಅನ್ನಿಸಿ, "ನೀನು ಹೋಗು ನಾನು ಬೀಗ ಹಾಕಿ ಹೋಗ್ತಿನಿ ನನ್ನ ಹತ್ತಿರ ಒಂದು ಕೀಲಿ ಇದೆಯಲ್ಲ" ಎಂದೆ, ಅವನು ಓಡಿದಂತೆ ಹೊರಟುಹೋದ. ಕೆಲಸವೆಲ್ಲ ಮುಗಿಸಿ ರಿಪೋರ್ಟ್ ಗಳನ್ನೆಲ ಬಾಸ್ ಟೇಬಲ್ ಮೇಲೆ ಜೋಡಿಸಿಟ್ಟು ಸಮಯ ನೋಡಿದೆ , ಆಗಲೆ ಏಳು ದಾಟಿತ್ತು. ಮನೆ ನೆನಪಿಗೆ ಬಂತು, ಸರಿ ಈಗಹೊರಟು ಎಂಟಕ್ಕೆ ಮನೆ ಸೇರಿದರು, ಹತ್ತಿರದ ಶ್ರೀರಾಘವೇಂದ್ರ ಮಠಕ್ಕೆ ಹೋಗಿಬರಬಹುದು ಅನ್ನಿಸಿಹೊರಗೆ ಬಂದು ಬೀಗ ತಗುಲಿಸಿ ನನ್ನಲ್ಲಿದ್ದ ಕೀಲಿಯಿಂದ ಬೀಗ ಹಾಕಿಹೊರಟೆ.
ಹೊರಬಂದರೆ ಮನಸೆಲ್ಲ ಹಗುರ ಅನ್ನಿಸಿತು, ಆಟೊ ಕಣ್ಣಿಗೆ ಬೀಳಬಹುದ ಅಂತ ಕಣ್ಣಾಡಿಸಿದೆ. ಕಾಣಲಿಲ್ಲ, ಸರಿ ಮುಖ್ಯರಸ್ತೆಗೆ ನಡೆದು ಹೋದರೆ ಸಿಗಬಹುದು ಅನ್ನಿಸಿ ನಡೆದು ಹೊರಟೆ. ಸುತ್ತಲು ನೋಡುವಾಗ ಎಂತದೊ ವಿಲಕ್ಷಣ ಅನ್ನಿಸಿತು. ಹೌದು ಜನಸಂಚಾರವೆ ಇಲ್ಲ ಪೂರ್ಣರಸ್ತೆಗೆ ನಾನೊಬ್ಬನೆ!. ಆದರೆ ಅದಲ್ಲ ಇನ್ನೇನೊ ಬದಲಾವಣೆ ಅನ್ನಿಸುತ್ತಿದೆ. ಇಷ್ಟು ಬೇಗ ಏಕೆ ರಸ್ತೆ ಖಾಲಿಯಾಗಿದೆ ಇನ್ನು ಸೂರ್ಯಮುಳುಗುವ ಸಮಯ ಅನ್ನಿಸಿತು
ಹೌದು! ಸೂರ್ಯಮುಳುಗುವ ಸಮಯ ! ಅದೆ ವಿಲಕ್ಷಣ
ಇದೇನು ಸಮಯ ರಾತ್ರಿ ಏಳುವರೆ ದಾಟಿದೆ ಇನ್ನು ಸೂರ್ಯನಿದ್ದಾನೆ. ಅದು ಮುಳುಗುವ ಸೂರ್ಯನಂತಿರದೆ ಮದ್ಯಾನ ಮೂರುಗಂಟೆ ಸಮಯದಲ್ಲಿರುವಷ್ಟು ಎತ್ತರದಲ್ಲಿ, ಆದರೆ ಅದು ಸಹಜವಾಗಿರದೆ ಎಲ್ಲೊ ದೂರದಲ್ಲಿರುವಂತೆ. ಗಾತ್ರದಲ್ಲಿ ತೀರ ಸಣ್ಣದಾಗಿ ಕೆಂಪಗೆ ಕಾಣುತ್ತಿದ್ದಾನೆ ಹೇಗೆ ಸಾದ್ಯ?. ಅರೆ ಸೂರ್ಯ ಇನ್ನು ಮುಳುಗಲಿಲ್ಲ ಏಕೆ. ಭಯ ಅನ್ನಿಸಿತು. ಅದಕ್ಕೆ ರಸ್ತೆ ಖಾಲಿಖಾಲಿ . ನನಗೆ ಏಕೆಂದು ತಿಳಿಯಲಿಲ್ಲ. ನಾನು ಕೆಲಸದಲ್ಲಿ ಮುಳುಗಿ ಹೊರಗಿನದು ಮರೆತುಬಿಟ್ಟಿದ್ದೀನಿ, ಬಹುಷಃ ವಾಚ್ ಮನ್ ಹೇಳಿದ್ದು ಇದೆ ಇರಬೇಕು. ನಾನು ಕೇಳಿಸಿಕೊಳ್ಳಲಿಲ್ಲ ಅನ್ನಿಸುತ್ತೆ,ಆ ವಾಚ್ಮನ್ ಆಡುವ ಕನ್ನಡದ ಮೂಲ ಯಾವುದು ಎನ್ನುವುದು ನನಗೆ ಇನ್ನು ಅರ್ಥವಾಗಿಲ್ಲ.
ಹೇಗಾದರು ಬೇಗ ಮುಖ್ಯರಸ್ತೆ ತಲುಪಬೇಕೆಂದು ಬೇಗ ಬೇಗ ಹೆಜ್ಜೆ ಹಾಕಿದೆ. ಏಕೊ ಒಮ್ಮೆ ನೆಲನಡುಗಿತು ಅನ್ನಿಸಿತು. ಎಂತದೊ ಭಯ ಎಲ್ಲಿ ಹೋಗಲಿ. ನೆನೆಪಿಗೆ ಬಂದಿತು, ಬಲಪಕ್ಕದ ಕ್ರಾಸ್ ನಲ್ಲಿ ಹೋದರೆ ನನ್ನ ಸ್ನೇಹಿತ ಸತ್ಯನ ಮನೆಯಿದೆ, ಮಾತಾಡಿದರೆ ಸ್ವಲ್ಪ ವಿಷಯ ತಿಳಿಯಬಹುದು ದೈರ್ಯವು ಬರಬಹುದು.ಅತ್ತ ತಿರುಗಿ ನಡೆದು ಬಾಗಿಲು ತಟ್ಟಿದೆ.
ಒಳಗೆ ಟೀವಿಯ ಶಬ್ದ, ಒಂದೆರಡು ಕ್ಷಣ ಬಾಗಿಲು ತೆರೆಯಿತು, ನನ್ನನ್ನು ನೋಡಿ "ಬಾ ಒಳಗೆ ಏಕೆ ಇನ್ನು ಮನೆಗೆ ಹೋಗಿರಲಿಲ್ವ?" ಎನ್ನುತ್ತ ಹೊರಟ ನಾನು ಹಿಂಬಾಲಿಸುತ್ತ ,
"ಇಲ್ಲ ಈಗಷ್ಟೆ ಹೊರಟೆ, ಹೊರಗೆ ಬಂದರೆ ಎಂತದೊ ವಿಚಿತ್ರ ಅನ್ನಿಸಿತು ಅದಕ್ಕೆ ನಿನ್ನ ವಿಚಾರಿಸಿದರೆ ತಿಳಿಯಬಹುದು ಅಂತ ಬಂದೆ" ಎಂದೆ.
"ಕುಳಿತಿಕೊ" ಅಂದವನು " ಕಾಫಿ ಆಗಬಹುದಾ ಕುಡಿಯುತ್ತೀಯ?" ಅಂದ. ನನಗು ಏನಾದರು ಕುಡಿಯಲೆ ಬೇಕಿನಿಸಿತು, ಆಗಲಿ ಆಂತ ತಲೆ ಆಡಿಸಿದೆ. ಅವನ ಪತ್ನಿ ರಮ್ಯ ಎದ್ದು ಒಳಗೆ ಹೊರಟರು ಕಾಫಿ ತರಲು, ಇಬ್ಬರ ಮುಖದಲ್ಲು ಎಂತದೊ ಆತಂಕ.
"ಇದೇನೊ ವಿಚಿತ್ರ ಸೂರ್ಯನೆ ಮುಳುಗಿಲ್ಲ ಅನ್ನಿಸ್ತಿದೆ, ರಾತ್ರಿ ಆಗೇ ಇಲ್ಲ ಏಳೂವರೆ ಆದ್ರು, ಅಲ್ಲದೆ ಭೂಮಿ ನಡುಗಿದಂತಾಯ್ತು" ಎಂದೆ. ಅವನು ನನ್ನನ್ನೆ ನೋಡುತ್ತ "ಏಳು ವರೆಯಾ? ಗಡಿಯಾರ ನೋಡಿಕೊ ಪ್ರಪಂಚದ ಗಡಿಯಾರಗಳೆಲ್ಲ ನಿಂತು ತುಂಬಾ ಹೊತ್ತಾಯ್ತು, ನಿನಗೆ ವಿಷಯ ತಿಳಿದಿಲ್ಲ ಅನ್ನಿಸುತ್ತ್ತೆಅಲ್ಲಿ ನೋಡು" ಅನ್ನುತ್ತ ಟೀವಿ ಕಡೆ ಕೈ ತೋರಿಸಿದ.
ಅತ್ತ ತಿರುಗಿದೆ, ಮೇಲೆ ಕೆಳಗೆ 'breaking news" ಎಂದು ಹಾದು ಹೋಗುತ್ತಿತ್ತು, ಎಂತೆಂತದೊ "ಡೂಮ್ಸ್ ಡೆ" "ಇಂದೆ ಭೂಮಿಯ ಕಡೆ ದಿನವಾ?" "ಮತ್ತೆ ಹಗಲಿಲ್ಲ" "ಕಡೆಯ ರಾತ್ರಿ" "ಸೂರ್ಯನಿಂದ ದೂರ ದೂರ ಪಯಣ" ಇತ್ಯಾದಿ. ಯಾರೊ ಮೂವರು ಕುಳಿತು ಎಂತದೊ ಸಂಭಾಷಣೆ ನಡೆಸಿದ್ದರು , ಕೇಳಿಸಿಕೊಂಡೆ ಒಬ್ಬಾತ ಹೇಳುತ್ತಿದ್ದ
" ಈಗ ನಾವು ಎಷ್ಟು ದೂರದಲ್ಲಿದ್ದೀವಿ ತಿಳಿಯುತ್ತಿಲ್ಲ , ನಾವು ವಿಮಾನದಲ್ಲಿ ಹಾರಿದರಾಗಲಿ ಹಡಗಿನಲ್ಲಿ ಹೋದರಾಗಲಿ , ಯಾವುದೆ ದಾರಿಯಲ್ಲಿ, ಯಾರು ಉಳಿಯುವುದು ಅಸಂಭವ, ಈಗಾಗಲೆ ಕೋಟಿ ಕೋಟಿ ಜನ ಸತ್ತಿರಬಹುದು" , ಮತ್ತೊಬ್ಬ ಹಿರಿಯ " ನಾವು ಅಷ್ಟೊಂದು ಪ್ಯಾನಿಕ್ ಆಗುವ ಅಗತ್ಯವಿಲ್ಲ, ಉಳಿದ ದಾರಿಗಳ ಬಗ್ಗೆ ಚಿಂತಿಸಬಹುದು, ಯಾವುದಕ್ಕು ಸಮಯ ಅಮೂಲ್ಯ" ಎಂದೇನೊ ಹೇಳುತ್ತಿದ್ದ.
ನನಗೆ ಅರ್ಥವಾಗಲಿಲ್ಲ, ಅವನ ಪತ್ನಿ ರಮ್ಯ ಕಾಫಿ ತಂದರು ನಾನು ಅದನ್ನು ಪಡೆದು ತುಟಿಗೆ ಸೋಕಿಸಿದೆ. ತನ್ನ ಗಂಡನಿಗು ಒಂದು ಕೊಟ್ಟು ತಾನು ಒಂದು ಕಪ್ ಹಿಡಿದು ಕುಳಿತಳು "
ಸತ್ಯ ಕಾಫಿ ಕುಡಿಯುತ್ತ ಹೇಳಿದ " ಸಂಜೆ ಐದುವರೆ ಆರರ ನಡುವೆ ಒಮ್ಮೆ ಭೂಮಿ ನಡುಗಿದಂತಾಯ್ತು, ಎಲ್ಲರು ಭೂಕಂಪ ಎಂದು ತಿಳಿದರು. ಆದರೆ ನಂತರ ಸೂರ್ಯನ ಚಲನೆ ನಿಂತತಾಯ್ತು, ಅವನ ಪಶ್ಚಿಮಕ್ಕೆ ಚಲಿಸುವ ಬದಲು ದಕ್ಷಿಣದತ್ತ ಸ್ಥಿರವಾಗಿ ನಿಂತಿರುವಂತೆ ಕಾಣುತ್ತಿದ್ದ. ಆದರೆ ಗಾತ್ರದಲ್ಲಿ ನಿದಾನವಾಗಿ ಕುಗ್ಗುತ್ತ ಹೋದ. ಒಂದೆ ಗಂಟೆಯಲ್ಲಿ ಸೂರ್ಯನ ಗಾತ್ರ ತೀವ್ರವಾಗಿ ಕುಸಿದಿತ್ತು. ಟೀವಿಯ ಸುದ್ದಿಯಂತೆ , ಭೂಮಿ ಸೂರ್ಯನ ಸುತ್ತ ಸುತ್ತುವ ತನ್ನ ಪಥದಿಂದ ಆಚೆ ಸರಿದಿದೆ, ಮತ್ತು ಯಾವುದೊ ದಿಕ್ಕಿಗೆ ನಿದಾನವಾಗಿ ಚಲಿಸುತ್ತಿದೆ. ಮೊದಲಲ್ಲಿ ಏನು ಭಯವಿಲ್ಲ ಭೂಮಿ ಮುಂದಿನ ಪಥದಲ್ಲಿ ಸ್ಥಿರವಾಗಬಹುದು, ವರ್ಷ ದಿನದಲ್ಲಿ ಸ್ವಲ್ಪ ವೆತ್ಯಾಸವಾಗಬಹುದು ಎಂದು ಹೇಳುತ್ತಿದ್ದವರು , ಈಗ ಯಾರು ಏನು ಹೇಳಲು ಸಿದ್ದವಿಲ್ಲ, ವಿಶಾಲ ವಿಶ್ವದಲ್ಲಿ ನಾವು ಯಾವು ದಿಕ್ಕಿಗೆ ಚಲಿಸುತ್ತಿದ್ದೇವೆ, ಯಾವದಾದರು ಬೇರೆ ಗ್ರಹ ಅಡ್ಡಬರಬಹುದಾ ಏನು ತಿಳಿಯದು" ಎಂದು ನಿಲ್ಲಿಸಿದ.
ಮತ್ತೆ ನಾನು ಕೇಳಿದೆ " ಸರಿ ಆದರೆ ಬೇರೆ ದೇಶಗಳು ಅಂದರೆ ಅಮೇರಿಕ, ಯುರೋಪಿಯನ್ಸ್, ರಷಿಯಾದವರು ಏನು ಹೇಳುತ್ತಿದ್ದಾರೆ?" ಅಂತ ಪ್ರಶ್ನಿಸಿದೆ.
ಅವನು ಪೇಲವವಾಗಿ ನಕ್ಕ "ತಿಳಿಯದು ಸದ್ಯಕ್ಕೆ ಹೇಳುತ್ತಿರುವಂತೆ ಬೇರೆ ಯಾವ ದೇಶಗಳ ಜೊತೆ ಸಂಪರ್ಕ ಸಾದ್ಯವಾಗುತ್ತಿಲ್ಲ. ಅವೆಲ್ಲ ಸಂಪೂರ್ಣ ನಾಶವಾಗಿರಬಹುದು. ಟೀವಿಯ ಚಾನಲ್ ಗಳು ಅಷ್ಟೆ ಇಲ್ಲಿಯ ಒಂದೆರಡು ಚಾನಲ್ ಹೊರತುಪಡಿಸಿ ಉಳಿದೆಲ್ಲ ಸ್ತಬ್ದ , ಇದರ ಅಂತ್ಯ ಹೇಗೊ ಯಾರಿಗು ತಿಳಿಯದು"
ಅವನು ಮತ್ತೆ ಹೇಳಿದ " ಅಷ್ಟೆ ಅಲ್ಲ ಭೂಮಿಯು ಯಾವುದೊ ದಿಕ್ಕಿಗೆ ಅಕಾಶದಲ್ಲಿ ಚಲಿಸುತ್ತಿರುವಂತೆ ಭೂಮಿಯ ಮೇಲಿನ ಗಾಳಿ ನಿದಾನವಾಗಿ ಸೋರಿ ವಿಶ್ವದ ಅಂತರಿಕ್ಷವನ್ನು ಸೇರುತ್ತಿದೆ, ಸಮುದ್ರದಲ್ಲಿ ನೀರು ಬಹುಮಟ್ಟಿಗೆ ಖಾಲಿಯಾಗಿ ಭೂಮಿಯ ಒಳಗಿನ ಬಿರುಕಿಗೆ ನುಗ್ಗಿದೆ, ಏನೇನೊ ಸುದ್ದಿಗಳು ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಏನು ತಿಳಿಯುತ್ತಿಲ್ಲ" ಎಂದ.
ನನಗೆ ಇದ್ದಕಿದ್ದಂತೆ ಮನೆ ನೆನಪಿಗೆ ಬಂತು ಮನೆಯಲ್ಲಿ ಪತ್ನಿ ಒಬ್ಬಳೆ ಇರುತ್ತಾಳೆ. ಎಷ್ಟು ಹೆದರಿದ್ದಾಳು ಹೇಗಾದರು ಬೇಗ ಮನೆ ಸೇರಬೇಕೆನಿಸಿತು.ಎದ್ದು ಹೊರಟೆ. "ಈಗ ಎಲ್ಲಿಗೆ ಹೋಗ್ತಿಯೊ" ಅಂದ ಸತ್ಯ,
"ಇಲ್ಲಪ್ಪ ಮನೆಯಲ್ಲಿ ಒಬ್ಬಳೆ ಇದ್ದಾಳೆ ಜೊತೆಗೆ ಹೋಗೋಣ ಅನ್ನಿಸ್ತಿದೆ" ಎಂದೆ. ಸ್ವಲ ಯೋಚಿಸಿ "ಅದು ಸರಿಯೆ ನೀನು ನನ್ನ ಸ್ಕೂಟರ್ ನಲ್ಲಿ ಹೊರಡು ನಂತರ ನೋಡೋಣ" ಎಂದ. ನಾನು ಸರಿ ಎಂದುಕೊಂಡು ಅವನ ಸ್ಕೂಟರ ಏರಿ "ಸರಿ ಬರ್ತೀನಪ್ಪ" ಎಂದೆ (ಬರ್ತೀನಿ! ನನಗೆ ಏಕೊ ಅನುಮಾನ ಅನ್ನಿಸಿತು|)
ಕತ್ತಲು ಅಲ್ಲ ಬೆಳಕು ಅಲ್ಲ ಅನ್ನುವ ವಾತವರಣ. ಆಕಾಶದತ್ತ ನೋಡಿದೆ. ಸದಾ ನೀಲಿಯಾಗಿದ್ದ ಆಕಾಶ ತಿಳಿಕೆಂಪು ವರ್ಣದಿಂದ ಕೂಡಿತ್ತು. ಕೆಳಗು ಅದೇ ಬಣ್ಣ ಹರಡಿತ್ತು. ಮುಖ್ಯರಸ್ತೆಗೆ ಬಂದವನ್ನು ಇದ್ದಕಿದ್ದಂತೆ ಗಾಡಿ ನಿಲ್ಲಿಸಿದೆ. ಅಲ್ಲಿ ಮುಖ್ಯರಸ್ತೆಯಲ್ಲಿ ಹಾದು ಹೋಗಿದ್ದ ಮೆಟ್ರೋ ರೈಲು ದಾರಿ ಸಂಪೂರ್ಣ ಕುಸಿದುಬಿದ್ದಿತ್ತು. ಅಲ್ಲದೆ ಅಲ್ಲಿಯವರೆಗು ರಸ್ತೆಯಲ್ಲಿ ನಾನೊಬ್ಬನೆ ಇದ್ದೆ, ಈಗ ಎದುರಿಗೆ ಸಾವಿರಾರು ಜನ ನೆರೆದಿದ್ದಾರೆ. ನಾನು ಮುಖ್ಯರಸ್ತೆಯನ್ನು ಅಡ್ಡಹಾಯ್ದು ಮುಂದೆ ಹೋಗುವದಾದರು ಹೇಗೆ. ಕೆಳಗಿಳಿದು ಒಬ್ಬನನ್ನು ಕೇಳಿದೆ " ಏನು ಇಷ್ಟೊಂದು ಜನ ಎಂತದು ಗಲಾಟೆಯ?" ಎಂದು. ಅದಕ್ಕವನು "ಗಲಾಟೆ ಎಲ್ಲಿ ಬಂತು, ಯಾರು ಮುಖ್ಯ ರಸ್ತೆಯನ್ನು ದಾಟಿ ಆಕಡೆ ಹೋಗುವ ಹಾಗೆಯೆ ಇಲ್ಲ, ಭೂಕಂಪನದಿಂದ ನೆಲ ಬಿರುಕು ಬಿಟ್ಟಿದೆ, ಅದರ ಉದ್ದ ಎಷ್ಟು ಮೈಲಿಯೊ ತಿಳಿಯುತ್ತಿಲ್ಲ ನಾನು ಸುಮಾರು ಎರಡು ಗಂಟೆಯಿಂದ ಪ್ರಯತ್ನಿಸಿದೆ ಆಕಡೆ ಹೋಗಲು ಆಗುತ್ತಿಲ್ಲ" ಅಂದ.
ನಾನು " ಸರಿ ಬನ್ನಿ ನಾನು ಬರುತ್ತೇನೆ ಜೊತೆಯಲ್ಲಿ ನೋಡೋಣ" ಎನ್ನುತ್ತ ಅವನ ಜೊತೆಗೆ ಹೊರಟೆ. ಪಕ್ಕದಲ್ಲಿ ಉದ್ದಕ್ಕೆ ಮಲಗಿದ್ದ ಬಿರುಕನ್ನು ನೋಡುತ್ತ ನಡೆಯುತ್ತಿದ್ದೆವು. ಬಿರುಕೆಂದರೆ ಚಿಕ್ಕದಾಗೇನು ಕಾಣಲಿಲ್ಲ ಸುಮಾರು ಎಂಬತ್ತು ಅಡಿಗಳಿಂದ ಇನ್ನೂರು ಮುನ್ನೂರು ಅಡಿಗಳವರೆಗು ಅಗಲವಿದ್ದ ಅದರ ಉದ್ದ ಎಷ್ಟು ದೂರವೊ ತಿಳಿಯದು. ಸ್ವಲ್ಪ ಹತ್ತಿರ ಹೋಗಿ ಬಗ್ಗಿ ನೋಡಿದೆ. ಅರ್ಥವೆ ಆಗದಷ್ಟು ಆಳ , ಕಾರ್ಗತ್ತಲೆ ಒಳಗಿನಿಂದ ಎಂತದೊ ಹೊಗೆ ಬರುತ್ತಿತ್ತು. ಸ್ವಲ್ಪ ದೂರ ನಡೆದಂತೆ, ಮುಂದೆ ಬಿರುಕಿನ ಪಕ್ಕದ ಭೃಹದಾಕಾರದ ಮರವೊಂದು ಆ ಕಡೆಗೆ ಕುಸಿದಿತ್ತು. ಕೆಲವರು ಅದನ್ನು ಹತ್ತಿ ಮರದ ಕೊಂಬೆಗಳ ನಡುವೆ ಹೋಗುತ್ತಿದ್ದರು. ಅವರು ಇನ್ನೊಂದು ತುದಿಗೆ ಹೋಗುತ್ತಿದ್ದಾರೆ ಅಥವ ಬಿರುಕಿಗೆ ಬೀಳುತ್ತಿದ್ದಾರೆ ತಿಳಿಯುತ್ತಿಲ್ಲ.
ನಾನು ಹೇಗೊ ಮಾಡಿ ಮರ ಏರಿದೆ ನನ್ನ ಹಿಂದೆ ಅವನು, ನಾನು ಕೊಂಬೆಗಳನ್ನು ದಾಟುತ್ತ ತುದಿ ತಲುಪಿ ನಿಂತು ನೋಡಿದೆ, ಆ ಕಡೆಯ ದಡ ಸುಮಾರು ಹತ್ತರಿಂದ ಹನ್ನೆರಡು ಅಡಿ ಇರಬಹುದಾ ಅನ್ನಿಸಿತು, ಸ್ವಲ್ಪಹೆಚ್ಚು ಸ್ವಲ್ಪ ಕಡಿಮೆ. ನಾನು ಹೇಳಿದೆ " ನೋಡಿ , ಹೇಗಾದರು ಸರಿ ಆ ಕಡೆಗೆ ಹಾರಿಬಿಡ್ತೇನೆ , ಹಿಂದೆ ನೀವು ಹಾರಿ" ಎಂದೆ. ಅವನು ಹೆದರಿದವನಂತೆ " ಬೇಡ ಇವರೆ, ಬಿರುಕು ತುಂಬಾ ಅಗಲ ಇದೆ ನಾವು ಕೆಳಗೆ ಬಿದ್ದು ಸಾಯ್ತೀವಿ ಅಷ್ಟೆ" ಎಂದ. ನಾನು "ನಾವು ಇಲ್ಲಿದ್ದರು ಸಾಯೋದೆ, ನಾನಂತು ಹಾರುತ್ತೀನಿ " ಎಂದವನೆ, "ಹನುಮ ಕಾಲಿಗೆ ಶಕ್ತಿ ಕೊಡಪ್ಪ" ಎಂದು ನೆನೆಯುತ್ತ ಎಲ್ಲ ಬಲವನ್ನು ಕಾಲಿಗೆ ತುಂಬುತ್ತ ಹಾರಿಬಿಟ್ಟೆ. ಮುಂದಿನ ಕಾಲು ನೆಲಕ್ಕೆ ತಗಲಿತು, ಕೈಯನ್ನು ಮುಂದೆ ಚಾಚುತ್ತ ಮುಂದಕ್ಕೆ ಬಿದ್ದೆ. ಅಲ್ಲಿಗೆ ಕೊರಕಲಿನ ಅಚೆ ದಡ ತಲುಪಿದ್ದೆ. ಎದ್ದು ನಿಂತು ಮಣ್ಣು ಒರಸಿಕೊಳ್ಳುತ್ತ ಹಿಂದಕ್ಕೆ ತಿರುಗಿ " ನಾನು ಬಂದಾಯ್ತು, ನೀವು ಈಗ ಪ್ರಯತ್ನಿಸಿ" ಎಂದು ಜೋರಾಗಿ ಕೂಗಿದೆ. ಆ ಕಡೆಯ ವ್ಯಕ್ತಿ ಹೆದರಿದ " ನನಗೆ ದೈರ್ಯಬರುತ್ತಿಲ್ಲ , ನೀವು ಹೊರಡಿ ನಾನು ಹಿಂದೆ ಹೋಗುತ್ತೇನೆ " ಅಂತ ಅವನು ಕಿರುಚಿದ. ನಾನು ಸರಿ ಅಂತ ಅಲ್ಲಿಂದ ಹೊರಟು ಹೇಗೊ ನಮ್ಮ ಮನೆಯತ್ತ ಹೋಗುವ ರಸ್ತೆ ತಲುಪಿದೆ, ಪುಣ್ಯ ಯಾರೊ ಆಟೋದವನೊಬ್ಬ ಬಂದ, ಕೈಹಿಡಿದರೆ ನಿಲ್ಲಿಸಿದ. ನಮ್ಮ ಮನೆ ವಿಳಾಸ ತಿಳಿಸುತ್ತ, "ಅಲ್ಲಿಗೆ ಬಿಡುತ್ತೀರ" ಅಂತ ಕೇಳಿ ಆಟೋ ಹತ್ತಿ ಕುಳಿತೆ.
ಆಟೋದಲ್ಲಿ ಅಷ್ಟು ವೇಗವಾಗಿ ಹೋಗಲು ಸಾದ್ಯ ಎಂದು ನಾನು ನಂಬಲು ಸಾದ್ಯವೆ ಇಲ್ಲದಂತೆ ಓಡಿಸುತ್ತಿದ್ದ. ನಾನು ದಾರಿಯಲ್ಲಿ "ನಾಳೆ ಬೆಳಗ್ಗೆ ಹೊತ್ತಿಗೆ ಏನಾಗಿರಬಹುದು" ಎಂದೆ. ಅವನು ನನ್ನತ್ತ ತಿರುಗಿ " ನಾಳೆ ಬೆಳಗ್ಗೆಯೆ? ಸಾರ್ ಸೂರ್ಯನಿಲ್ಲ ಅನ್ನುವಾಗ ಇನ್ನು ಬೆಳಗ್ಗೆಯು ಇಲ್ಲ ರಾತ್ರಿಯು ಇಲ್ಲ "statusco" ಈಗಿರುವ ಸ್ಥಿಥಿಯೆ ಶಾಶ್ವತ" ಎಂದ. ಅವನು ರಾತ್ರಿ ಎನ್ನುವಾಗ ನೆನಪಿಗೆ ಬಂದಿತು "ಸೂರ್ಯ ದೂರವಾದ ಸರಿ ಆದರೆ ಚಂದ್ರನಿರಬೇಕಾಗಿತ್ತಲ್ಲ ಇಂದು ಹುಣ್ಣಿಮೆ ಇರಬೇಕಲ್ಲವೆ ಏಕೆ ಬೆಳಕಿಲ್ಲ" ಎಂದೆ.
ಅವನು ನನ್ನ ಮುಖವನ್ನು ಕರುಣೆಯಿಂದ ದಿಟ್ಟಿಸಿದ " ಸಾರ್ ಸೂರ್ಯನಿಲ್ಲ ಅಂದರೆ ಚಂದ್ರನಿಂದ ನಮಗೆ ಯಾವ ಉಪಯೋಗವು ಇಲ್ಲ ಸಾರ್ ಬೆಳಕಿರಲ್ಲ " ಅಂದ.
"ಹೌದಲ್ಲವೆ ಸೂರ್ಯನಿಲ್ಲ ಅಂದರೆ ಚಂದ್ರನಿಂದ ನಮಗೆ ಯಾವ ಉಪಯೋಗವು ಇಲ್ಲ , ನಿಜ" ಅನ್ನಿಸಿತು.
ಹೇಗೊ ಮನೆಯ ಸಮೀಪ ತಲುಪಿ ಕೆಳಗಿಳಿದು, ಹಣ ತೆಗೆಯಲು ಹೋದೆ ಜೇಬಿನಿಂದ, ಅವನು "ಬೇಡ ಸಾರ್ ಇನ್ನು ಮುಂದೆ ದುಡ್ಡಿನಿಂದ ಯಾವ ಉಪಯೋಗವು ಇಲ್ಲ, ಅಲ್ಲದೆ ಆಟೊ ಸಹ ನನ್ನದಲ್ಲ ಯಾವುದೊ ದಾರಿಯಲ್ಲಿ ನಿಂತಿತ್ತು, ನಾನು ಹತ್ತಿ ಓಡಿಸಿಕೊಂಡು ಬಂದೆ" ಎನ್ನುತ್ತ ಜೋರಾಗಿ ನಕ್ಕ. ನಾನು ನಗುತ್ತ ಸರಿ ಎನ್ನುತ್ತ ಕೈಬೀಸಿ ಮನೆಗೆ ಹೊರಟು ತಲುಪಿದೆ. ಮನೆಯ ಹತ್ತಿರ ಸ್ಮಶಾನ ಶಾಂತಿ.ಬಾಗಿಲು ತಟ್ಟಿದರೆ ಒಳಗಿನಿಂದ ಹೆದರುತ್ತಲೆ ಬಂದು ಬಾಗಿಲು ತೆರೆದಳು ನನ್ನ ಪತ್ನಿ.
"ಕಡೆಗು ಬಂದಿರಾ? ನೀವು ಬರುವುದಿಲ್ಲ ಅಂತ ಮಾಡಿದ್ದೆ" ಎನ್ನುತ್ತ ಒಳನಡೆದಳು, ನಾನು "ಇದೇಕೆ ಹೀಗಿದ್ದಿ ಟೀವಿಯಾದರು ಹಾಕಿಕೊಳ್ಳಬಾರದಿತ್ತೆ" ಎಂದೆ. ಅದಕ್ಕವಳು "ಹಾಕಿದ್ದೆ ಆದರೆ ಒಬ್ಬಳೆ ನೋಡಲು ಭಯವಾಯಿತು, ಆರಿಸಿದೆ" ಎಂದಳು. ನಾನು " ಸರಿ ಸ್ವಲ್ಪ ಕಾಫಿಯಾದರು ಕೊಡು ಏಕೊ ತುಂಬಾ ಸುಸ್ತು ಅನ್ನಿಸುತ್ತಿದೆ " ಎನ್ನುತ್ತ , ಟೀವಿ ಆನ್ ಮಾಡುತ್ತ ಸೋಪದಮೇಲೆ ಕುಳಿತೆ. ಅವಳು ಕಾಫಿ ಮಾಡಿ ತರಲು ಒಳಗೆ ಹೋದಳು. ಟೀವಿಯತ್ತ ನೋಡಿದೆ ಯಥಾ ಪ್ರಕಾರ breaking news ಗಳು, "ಕಪ್ಪುರಂದ್ರದತ್ತ ಭೂಮಿಯ ಪಯಣವೆ?" , "ಭೂಮಿಯ ಅಂತ್ಯದ ಕ್ಷಣಗಣನೆ ಪ್ರಾರಂಬ" ಇತ್ಯಾದಿ.
ಅಲ್ಲಿ ಯಾರೊ ಒಬ್ಬನೆ ಪೇಲವನಾಗಿ ಕುಳಿತು ಹೇಳುತ್ತಿದ್ದ " ಭೂಮಿ ಯಾವುದೊ ಕಪ್ಪುರಂದ್ರದತ್ತ ನುಗ್ಗುತ್ತಿದೆ ಅಂತ ಈಗ ಡೃಡಪಟ್ಟಿದೆ. ಪ್ರತಿಕ್ಷಣಕ್ಕು ಅದರ ವೇಗ ಊಹೆಗು ನಿಲುಕದಂತೆ ಹೆಚ್ಚುತ್ತಿದೆ, ಅಲ್ಲದೆ ಅದರ ಸ್ವಂತ ಪರಿಭ್ರಮಣವು ಈಗ ಪೂರ್ತಿಯಾಗಿ ಕಡಿಮೆಯಾಗುತ್ತಿದೆ..." ಏನನ್ನೊ ಹೇಳುತ್ತಿರುವಂತೆ , ಇದ್ದಕಿದ್ದಂತೆ ಟೀವಿಯ ಪ್ರಸಾರನಿಂತು ಪೂರ್ಣ ಪರದೆಯನ್ನು ಕೆಂಪು ಬಣ್ಣ ತುಂಬಿಕೊಂಡಿತು. ಒಂದೆ ಕ್ಷಣ ವಿಧ್ಯುತ್ ಹೋಗಿ ಟೀವಿಯು ಆರಿ, ಒಳಗೆಲ್ಲ ಅಗಾದ ಕತ್ತಲೆ ತುಂಬಿತು.
ಒಳಗೆ ಹೋಗಿದ್ದ ಪತ್ನಿ ಹೇಗೊ ಹೊರಬಂದವಳು ನನ್ನ ಪಕ್ಕವೆ ಕುಸಿದು ಕುಳಿತಳು. ನಾನು ಏನಾಯಿತು ಅನ್ನುತ್ತಿರುವಂತೆ ಸೋಫಾದಮೇಲೆ ಒರಗಿದಳು. ನನಗೆ ತಿಳಿಯುತ್ತಿದೆ ಇದು ಗಾಳಿ ಇಲ್ಲದರ ಪರಿಣಾಮ. ನನಗೂ ಹೊಟ್ಟೆಯಲ್ಲಿ ಎಂತದೊ ಸಂಕಟ. ಕಣ್ಣು ಮಂಜು ಮಂಜಾಗುತಿದೆ. ಜ್ಞಾನತಪ್ಪುತ್ತಿರುವುದೊ ಅಥವ ನಿದ್ದೆಯೊ ಎಂದು ಅರಿಯಲಾರದ ಸ್ಥಿಥಿಗೆ ಜಾರುತ್ತಿದ್ದೆ. ಎಂದದೊ ಛಿದ್ರ ಛಿದ್ರ ನೆನಪುಗಳು.
.....
.....
"ಬಾಸ್ ಗೆ ಅಂತ ಮಾಡಿಟ್ಟ ರಿಪೋರ್ಟ್ ನಲ್ಲಿ ಏನು ತಪ್ಪಿರಲಾರದು, ಬೆಳಗ್ಗೆ ಮೀಟಿಂಗ್ ಮಾಡಿ ಸಾಯಲಿ ...."
......
"ಅಲ್ಲ ಈದಿನ ಮದುವೆಯ ದಿನ ಅಂದಿದ್ದಳು , ಸ್ವಲ್ಪ ಮುಂಚೆ ಬಂದಿದ್ದರೆ ದೇವಾಲಯಕ್ಕೆ ಹೋಗಿ ಬರಬಹುದಿತ್ತಲ್ಲ..."
........
.....
....
"ಅಲ್ಲ ಈ ಕಪ್ಪುರಂದ್ರ ಅಂದರೆ ಹೇಗಿದ್ದೀತು? ನಾನು ಬದುಕಿದ್ದರೆ ಕಾಣಬಹುದ್ದಿತ್ತು"
....
....
...
...
...
ನನ್ನ ಮನಸ್ಸು ಸ್ತಬ್ದವಾಯಿತು...
ಚಿತ್ರ ಸೌಜನ್ಯ: ಅಂತರ್ಜಾಲದಿಂದ
http://niyatheresa.files.wordpress.com/2009/02/satellites_486092a1.jpg?w=500&h=299
Comments
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by Chikku123
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by krishnarajb
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by darshi
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by kavinagaraj
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by venkatb83
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by sathishnasa
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by ಗಣೇಶ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by partha1059
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by santhosh_87
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by manju787
ಉ: ಕಥೆ:ಭೂಮಿಯ ಕಡೆಯ ದಿನ
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by prasannakulkarni
ಉ: ಕಥೆ:ಭೂಮಿಯ ಕಡೆಯ ದಿನ
In reply to ಉ: ಕಥೆ:ಭೂಮಿಯ ಕಡೆಯ ದಿನ by partha1059
ಉ: ಕಥೆ:ಭೂಮಿಯ ಕಡೆಯ ದಿನ