ಮೂರನೆಯ ಶಕ್ತಿ

ಮೂರನೆಯ ಶಕ್ತಿ

ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ ಮಾರಿ ಅಂತ ನಮ್ಮ ಪೂರ್ವಜರು ಹೆಣ್ಣಿನ ಸಹವಾಸ ಮಾಡಿ ಸೋತು ಸುಣ್ಣವಾದಾಗ ಕಂಡುಕೊಂಡಾಗಿದೆ ಈ ಹಸಿ ಸತ್ಯವನ್ನು. ದೇವರು ಸೃಷ್ಟಿಸುವಾಗ ಒಂದೇ ಸಮಯದಲ್ಲಿ, ಸರಿಸಮನಾಗಿ ಪುರುಷನೊಂದಿಗೆ ಸ್ತ್ರೀಯನ್ನೂ ಸೃಷ್ಟಿಸಿದ. ಇಬ್ಬರಿಗೂ ಅವವರದೇ ಆದ ಜವಾಬ್ದಾರಿ ಗಳನ್ನೂ ಕೊಟ್ಟು ಒಬ್ಬರನ್ನೊಬ್ಬರು ಆಸರೆಯಾಗಿ, ಒತ್ತಾಸೆಯಾಗಿ ಬದುಕುವ ಕಿವಿಮಾತನ್ನು ಹೇಳಿ ಭೂಲೋಕಕ್ಕೆ ಕಳಿಸಿದ. ಹೆಣ್ಣು ಗಂಡು ಜಾತಿಗಳಲಿ ಹೆಚ್ಚು ಕುಯುಕ್ತಿ ಪ್ರದರ್ಶಿಸುವ ಗಂಡು ಆಗಾಗ ಹೆಣ್ಣಿನ ಅಧಿಕಾರ ವ್ಯಾಪ್ತಿಯನ್ನು  ಎನ್ಕ್ರೋಚ್ (encroach) ಮಾಡಿ ತನ್ನ ವರ್ಚಸ್ಸನ್ನು ಹೆಚ್ಚು ಮಾಡಿ ಕೊಂಡಾಗೆಲ್ಲಾ ಹೆಣ್ಣು ಮುನಿದು ತಿರುಗೇಟು ಕೊಡುತ್ತಾಳೆ. ಹಾಗೆ ತಿರುಗೇಟು ತಿಂದಾಗ ಕಂಡು ಕೊಂಡ ಸತ್ಯ ಈ “ಹೆಣ್ಣು ಒಲಿದರೆ ವಯ್ಯಾರಿ, ಮುನಿದರೆ ಮಾರಿ” ಎನ್ನುವ ಕಟು ಸತ್ಯ.

ಹೆಣ್ಣು ಗಂಡಿನ ಪುರಾತನ ಜಂಜಾಟದ ಪುರಾಣ ಬಿಟ್ಟು ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರಾರು ಎನ್ನುವ ನಿಮ್ಮ ಪ್ರಶ್ನೆಗೆ ಅಡಗಿದೆ ಉತ್ತರ ನೀವು ಕನಸಿನಲ್ಲಿಯೂ ನೆನೆಸಿರದ, ಊಹಿಸಿರದ ಸ್ಥಳದಲ್ಲಿ.

ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರು ಬೇರಾರೂ ಅಲ್ಲ, ಪಾಕಿಸ್ತಾನದ ಹುಟ್ಟಿಗೆ “ಕಾರಣೀ ‘ಭೂತ’ ” ನಾದ ಮುಹಮ್ಮದ್ ಅಲಿ ಜಿನ್ನಾ. ಇದೇ ಮೂರನೇ ಶಕ್ತಿ ತನ್ನ ದೇಶದ ಪ್ರಧಾನಿಯಾಗಿ ಮತಾಂಧರ ಆಕ್ರಮಣಕ್ಕೆ ಸಿಕ್ಕು ಸತ್ತಾಗ ಈ ಮಾತನ್ನು ಹೇಳಿದ ಜಿನ್ನಾ ತನ್ನ ಸಮಾಧಿಯಲ್ಲಿ ನೋವಿನಿಂದ ಖಂಡಿತಾ ಹೊರಳಾಡಿರಬಹುದು.        

ಒಂದ್ನಿಮ್ಷ, ಹೋಗ್ಬೇಡಿ. ಮತ್ತೊಂದು ಶಕ್ತಿ ಇದೇರೀ. ಈ ಹೆಣ್ಣನ್ನು ಒಲಿಸಿಕೊಳ್ಳೋ ಗಲಾಟೆಯಲ್ಲಿ ಮರೆತೇ ಬಿಟ್ಟೆ. ಅದೇ ರೀ ಇಚ್ಛಾ ಶಕ್ತಿ. ಇದೊಂದಿದ್ದರೆ ಮೇಲೆ ಹೇಳಿದ ಮೂರೂ ಶಕ್ತಿಗಳೂ ನಮಗೆ ಶರಣು ಶರಣು ಎನ್ನುತ್ತವೆ.  

ಈಗ ಆದುವಲ್ಲ ಎಲ್ಲಾ ಶಕ್ತಿಗಳೂ ಸೇರಿ ಚತುರ್ಶಕ್ತಿ ಗಳು? ಈಗ ಬೇರಿನ್ನೇನು ಬೇಕು ಹೇಳಿ ಈ ಜಗತ್ತನ್ನು ಜಯಿಸಲು?
Rating
No votes yet