ಮಳೆಗಾಲ ಬಂದಾಗ
ಕವನ
ಪತ್ತನಾಜೆ ಕಳೆಯೆ ಮುಗಿಲು
ನಭವನೆಲ್ಲ ಕವಿಯಿತು
ಗುಡುಗುಡೆಂದು ಗುಡುಗು ಮೊರೆಯೆ
ನವಿಲು ಭರದಿ ಕುಣಿಯಿತು [೧]
ನಿನ್ನ ಗರ್ವವೆಲ್ಲ ನನ್ನ
ಅಂದ ನೋಡಿ ಮರೆಯೆಯಾ
ಎಂದು ಮಿಂಚು ನೀಡಿತಾಗ
ತನ್ನ ದೀರ್ಘ ಜಿಹ್ವೆಯ [೨]
ನಿನ್ನ ಅಂದವೇನು ಮಿಂಚೆ
ಕ್ಷಣವೆ ತಾನೆ ಇರುವುದು
ನನ್ನ ಬಲವ ನೋಡು ಎಂದು
ಸಿಡಿಲು ಸಿಡಿದು ಬಿದ್ದುದು [೩]
ನಿಮ್ಮ ಬಲವು ಉಗ್ರವಾಗಿ
ಜಗಕೆ ಕಷ್ಟ ಕೊಡುವುದು
ನನ್ನ ಬರವು ಎಲ್ಲ ಜನಕೆ
ಬಹಳ ಹರುಷ ತರುವುದು [೪]
ಎಂದು ಮಳೆಯು ಹೇಳಿ ಜಗದಿ
ಹನಿಗಳನ್ನು ಸುರಿಸಿತು
ಕೆರೆ ನದಿ ತೊರೆಗಳೆಲ್ಲ
ಉಕ್ಕಿಯುಕ್ಕಿ ಹರಿಯಿತು [೫]