ವೇದ ಗಣಿತ ನಿರೂಪಕ : ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಸ್ವಾಮಿಗಳು
ಆದಿ ಶಂಕರರಿಂದ ಪೂರ್ವ ಭಾರತದ ಪುರಿಯಲ್ಲಿ ಸ್ಥಾಪಿತವಾದ ಆಮ್ನಯ ಪೀಠವಾದ ಗೋವರ್ಧನ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಮಹಾರಾಜರ ಬಗ್ಗೆ ಸನಾತನ ವೇದ ವಿಜ್ಞಾನದ ಬಗ್ಗೆ ಆಸಕ್ತರೆಲ್ಲರೂ ತಿಳಿಯುವುದು ಉಚಿತ. ವೇದಗಳೆಂದರೆ ಅಗೆದಷ್ಟು ದೊರಕುವ ಚಿನ್ನದ ಗಣಿಯಂತೆ ಮನುಕುಲದ ಏಳಿಗೆಗೆ ಬೇಕಾದ ಎಲ್ಲಾ ಜ್ಞಾನಗಳ ಸಂಗ್ರಹವಾಗಿದೆ ಎಂದೇ ನಂಬಿದ್ದ ಮಹಾಪುರುಷರಿವರು. ಇಪ್ಪತ್ತನೇ ಶತಮಾನದಲ್ಲಿ ನಮ್ಮೆಲ್ಲರ ನಡುವೆ ಇಂತಹ ಮಹಾ ಮೇದಾವಿಗಳು ಬದುಕಿ ವೇದ ಗಣಿತವನ್ನು ಆಧುನಿಕ ಜಗತ್ತಿಗೆ ನೀಡಿದರೆಂಬುದೇ ನಮಗೆಲ್ಲಾ ಹೆಮ್ಮೆ.
ಶ್ರೀಗಳವರು ದಿನಾಂಕ ೧೪/೦೩/೧೮೮೪ರಂದು ಮದ್ರಾಸ್ ಪ್ರಾಂತ್ಯದ ತಿನ್ನಿವೇಲಿಯಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ವೆಂಕಟರಮಣ ಎಂದು. ಚಿಕ್ಕಂದಿನಲ್ಲೇ ವಿಶೇಷ ಬುದ್ದಿ ಶಕ್ತಿಯನ್ನು ಹೊಂದಿದ್ದರು. ೧೮೯೯ರಲ್ಲಿ ಮದ್ರಾಸ್ ವಿಶ್ವವಿಧ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಪಡೆದ ಇವರು ಎಲ್ಲರ ಗಮನ ಸೆಳೆದರು. ಇವರಲ್ಲಿದ್ದ ಅಪಾರವಾದ ಸಂಸ್ಕೃತ ಜ್ಞಾನ ಮತ್ತು ಬಾಷಣ ಕಲೆಯಲ್ಲಿದ್ದ ಪ್ರಾವೀಣ್ಯತೆಯನ್ನು ಗುರುತಿಸಿ ಮದ್ರಾಸ್ ಸಂಸ್ಕೃತ ಸಂಘದವರು ೧೮೯೯ರಲ್ಲಿ "ಸರಸ್ವತಿ" ಎಂಬ ಬಿರುದನ್ನು ನೀಡಿ ಗೌರವಿಸಿದರು. ಆಗಿನ್ನೂ ಇವರಿಗೆ ೧೬ ವರ್ಷ ವಯಸ್ಸು. ಇವರ ಸಂಸ್ಕೃತ ಗುರು ಶ್ರೀ ವೇದಂ ವೆಂಕಟರಾಯ ಶಾಸ್ತ್ರಿಯವರ ಬಗ್ಗೆ ಇವರಿಗಿದ್ದ ಪ್ರೀತಿ, ಗುರುಭಕ್ತಿಯೇ ಇವರ ಜ್ಞಾನಾರ್ಜನೆಗೆ ಕಾರಣವಾಯಿತು.
೧೯೦೩ರಲ್ಲಿ ಅಮೇರಿಕನ್ ಕಾಲೇಜ್ ಆಫ್ ಸೈನ್ಸ್, ರೊಚೆಸ್ಟರ್,ನ್ಯೂಯಾರ್ಕ್ ರವರ ಮುಂಬೈ ಕೇಂದ್ರದಿಂದ ಪರೀಕ್ಷೆ ಬರೆದು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು. ೧೯೦೪ರ ಹೊತ್ತಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸಿನಲ್ಲಿ ಏಳು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಮುಗಿಸಿದ್ದಲ್ಲದೆ, ಈ ಎಲ್ಲಾ ಪರೀಕ್ಷೆಗಳಲ್ಲು ಪ್ರಥಮ ಸ್ಥಾನ ಪಡೆದವರು ಇವರಾಗಿದ್ದರು. ವಿಜ್ಞಾನವಲ್ಲದೆ, ಸಂಸ್ಕೃತ, ತತ್ವಶಾಸ್ತ್ರ, ಇಂಗ್ಲೀಷ್, ಗಣಿತ ಮತ್ತು ಇತಿಹಾಸಗಳನ್ನೂ ಅಧ್ಯಯನ ಮಾಡಿದ್ದಾರೆ. ಅತ್ಯಂತ ಮೇದಾವಿಯಾಗಿದ್ದ ವೆಂಕಟರಮಣ ಸರಸ್ವತಿಯವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು. ಅವರ ಜ್ಞಾನದ ಹಸಿವಿನಿಂದಾಗಿ ಆದುನಿಕ ವೈಜ್ಞಾನಿಕ ಸಂಶೋದನೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದುದು ವಿದ್ಯಾರ್ಥಿದೆಸೆಯಿಂದ ಕೊನೆಯ ದಿನಗಳವರೆಗೂ ಅವರಿಗೊಂದು ಹವ್ಯಾಸವಾಗಿತ್ತು.
ವಿದ್ಯಾಭ್ಯಾಸ ಮುಗಿದ ನಂತರ ಹಿರಿಯ ಚೇತನ ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸನಾತನ ವೇದ ವಿಜ್ಞಾನದ ಬಗ್ಗೆ ಅತಿಯಾದ ಆಸಕ್ತಿಯಿಂದಾಗಿ ೧೯೦೮ರಲ್ಲಿ ಶೃಂಗೇರಿಯ ಶಾರದಾ ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳವರಲ್ಲಿಗೆ ಬಂದರು. ಆದರೆ ರಾಷ್ಟ್ರೀಯ ಶಿಕ್ಷಣ ಚಳುವಳಿಗಾರರ ಕರೆಗೆ ಮತ್ತೊಮ್ಮೆ ಓಗೊಟ್ಟು ಮುಂದಿನ ಮೂರು ವರ್ಷಗಳ ಕಾಲ ರಾಜಮಹೇಂದ್ರಿಯ ರಾಷ್ಟ್ರೀಯ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು.
ಅಥರ್ವ ವೇದದ ಪರಿಶಿಷ್ಠವೊಂದರಲ್ಲಿ ಹುದುಗಿ ಕುಳಿತಿದ್ದ ವೇದ ಗಣಿತವನ್ನು ಹೊರತೆಗೆಯ ಬೇಕೆಂಬುದು ಅವರ ಬಯಕೆಯಾಗಿತ್ತು. ಹಾಗೆಯೆ ೧೯೧೧ ನೇ ಇಸವಿಯಲ್ಲಿ ಮತ್ತೆ ಪುನಃ ಶೃಂಗೇರಿಗೆ ಬಂದು ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳವರ ದಿವ್ಯಾಶಿರ್ವಾದಗಳೊಂದಿಗೆ
ತನ್ನ ಅಂತರಂಗದಲ್ಲಿ ಸುಡುತ್ತಿದ್ದ ಜ್ಞಾನದ ಹಸಿವನ್ನು ತಣಿಸಿಕೊಳ್ಳಲು ನಿರಂತರ ಅದ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದಿನ ಎಂಟು ವರ್ಷಗಳಲ್ಲಿ ವೇದಾಂತವನ್ನು ಆಳವಾಗಿ ಅದ್ಯಯನ ಮಾಡಿದರು. ಶೃಂಗೇರಿಯ ಹತ್ತಿರದ ಅರಣ್ಯಗಳಲ್ಲಿ ದ್ಯಾನ, ಬ್ರಹ್ಮ ಸಾದನ, ಯೋಗ ಸಾದನ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಮಯದಲ್ಲಿ ಆದ್ಯಾತ್ಮಿಕವಾಗಿ ಆತ್ಮ ಜ್ಞಾನವನ್ನವರು ಪಡೆದುಕೊಂಡರು ಎಂದು ನಂಬಲಾಗಿದೆ. ಈ ಎಂಟು ವರ್ಷಗಳ ಕಾಲವು ಶೃಂಗೇರಿಯ ವೇದ ಪಾಠಶಾಲೆಯಲ್ಲಿ ಸಂಸ್ಕೃತ ಮತ್ತು ತತ್ವಶಾಸ್ತ್ರಗಳನ್ನು ಭೋದಿಸಿದರು. ಶ್ರೀ ಶಂಕರಾಚಾರ್ಯರ ತತ್ವಗಳನ್ನು ಪ್ರತಿಪಾದಿಸುವ ಉಪನ್ಯಾಸಗಳನ್ನು ದೇಶದ ಹಲವೆಡೆ ನೀಡಿದರು.
ಬಹಳ ವರ್ಷಗಳ ವೇದಾಂತದ ಆಳವಾದ ಅದ್ಯಯನದ ಫಲವಾಗಿ ವೆಂಕಟರಮಣ ಸರಸ್ವತಿಯವರು ಸನ್ಯಾಸದ ಕಡೆಗೆ ತಮ್ಮ ಒಲವನ್ನು ತೋರಿಸಿದರು. ವಾರಣಾಸಿಯ ಜಗದ್ಗುರು ಶಂಕರಾಚಾರ್ಯರ ಶ್ರೀ ತ್ರಿವಿಕ್ರಮ ತೀರ್ಥ ಸ್ವಾಮಿಗಳವರ ದಿವ್ಯಾಶಿರ್ವಾದಗಳೊಂದಿಗೆ ೪ನೇ ಜುಲೈ ೧೯೧೯ ರಂದು ಸಂನ್ಯಾಸ ದೀಕ್ಷೆಯನ್ನು ಪಡೆದರು. ನಂತರ ಇವರನ್ನು ಸ್ವಾಮಿ ಭಾರತಿ ಕೃಷ್ಣ ತೀರ್ಥರೆಂದು ಕರೆಯಲಾಯಿತು. ೧೯೨೧ರಲ್ಲಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಮೇಲೆ ಭಾರತದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಸನಾತನ ಧರ್ವದ ಸಾರವನ್ನು ಉಪನ್ಯಾಸಗಳ ಮೂಲಕ ತಿಳಿಸತೊಡಗಿದರು.
೧೯೨೫ರಲ್ಲಿ ಪುರಿಯ ಗೋವರ್ಧನ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ಮಧುಸೂದನ ತೀರ್ಥರವರು ಅನಾರೋಗ್ಯದಿಂದಾಗಿ ತಮ್ಮ ಮುಂದಿನವರಾಗಿ ಭಾರತೀ ಕೃಷ್ಣ ತೀರ್ಥರವರು ಬರಬೇಕೆಂದು ಬಯಸಿದರು. ನಂತರ ಪುರಿಯ ಗೋವರ್ಧನ ಪೀಠದ ಜಗದ್ಗುರುಗಳಾಗಿ ಮುಂದಿನ ಮುವತೈದು ವರ್ಷಗಳಕಾಲ ಜವಾಬ್ದಾರಿಯುತವಾರಿ ನಡೆಸಿಕೊಂಡು ಬಂದದ್ದಲ್ಲದೇ, ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ನೂರಾರು ಉಪನ್ಯಾಸಗಳನ್ನು ನೀಡಿದರು. ೧೯೫೩ರಲ್ಲಿ ನಾಗಪುರದಲ್ಲಿ ವಿಶ್ವ ಪುನರ್ನಿಮಾಣ ಸಂಘವನ್ನು ಸ್ಥಾಪಿಸಿದರು. ವೇದಾಂತದ ಪರಿಕಲ್ಪನೆ "ಪೂರ್ಣತ್ವ"ದಲ್ಲಿ ಅಪಾರ ಒಲವನ್ನು ಹೊಂದಿದ್ದ ಇವರು ವಿಶ್ವಶಾಂತಿಗಾಗಿ ಭಾರತೀಯ ವೇದಾಂತ ಮತ್ತು ಆದ್ಯಾತ್ಮ ಚಿಂತನೆಗಳನ್ನು ಪ್ರಪಂಚಕ್ಕೆಲ್ಲಾ ಪರಿಚಯಿಸುವ ದೃಷ್ಠಿಯಿಂದ ೧೯೫೮ರಲ್ಲಿ ಅಮೇರಿಕಾ ಪ್ರವಾಸ ಕೈಗೊಂಡರು. ಸಾಗರೊಲ್ಲಂಘನ ಮಾಡಿ ಭಾರತದಿಂದ ಹೊರಗೆ ಶಂಕರಾಚಾರ್ಯರೊಬ್ಬರು ಹೋದದ್ದು ಇದೇ ಮೊದಲಬಾರಿ. ಸುಮಾರು ಮೂರು ತಿಂಗಳು ಅಮೇರಿಕಾದಲ್ಲಿ ನೆಲಸಿ ಹಲವು ಆದ್ಯಾತ್ಮಿಕ ಉಪನ್ಯಾಸಗಳನ್ನು ನೀಡಿ, ವಿಶ್ವ ಪುನರ್ನಿಮಾಣ ಸಂಘದ ಶಾಖೆಯನ್ನು ಅಲ್ಲಿ ಆರಂಬಿಸಿದರು. ನಂತರ ಭಾರತಕ್ಕೆ ವಾಪಾಸಾಗುವ ಮಾರ್ಗದಲ್ಲಿ ಇಂಗ್ಲೇಂಡಿಗೂ ಬೇಟಿ ನೀಡಿ ಉಪನ್ಯಾಸಗಳನ್ನು ನೀಡಿದರು.
ಸುಮಾರು ಐದು ದಶಕಗಳ ಕಾಲ ಸತತ ಅದ್ಯಯನ, ಚಿಂತನ, ಸಮಾಜ ಸೇವೆ, ತಿರುಗಾಟಗಳಿಂದ ಬಳಲಿದ ಶ್ರೀಗಳವರು ೧೯೫೯ರ ನವೆಂಬರ್ ನಲ್ಲಿ ತೀವ್ರ ಅನಾರೋಗ್ಯ ಪೀಡಿತರಾದರು. ಉನ್ನತ ಮಟ್ಟದ ಔಷದೋಪಚಾರಗಳನ್ನು ನೀಡಿದರೂ ಸಹ ೧೯೬೦ ನೇ ಇಸವಿ ಫೆಬ್ರವರಿ ಎರಡನೇ ತಾರಿಖಿನಂದು ಮುಂಬೈಯಲ್ಲಿ ಶ್ರೀಗಳವರು ಮಹಾಸಮಾಧಿಯನ್ನು ಹೊಂದಿದರು.
ಹದಿನಾರು ಸಂಪುಟಗಳಲ್ಲಿ ವೇದ ಗಣಿತವನ್ನು ಸಂಗ್ರಹಿಸಿ ಬರೆಯಲಾಗಿತ್ತೆಂದು ಸ್ವಾಮಿಗಳು ಹೇಳಿಕೊಂಡಿದ್ದಾರೆ. ದುರದೃಷ್ಟ ವಶಾತ್ ಈ ಎಲ್ಲಾ ಸಂಪುಟಗಳ ಹಸ್ತಪ್ರತಿಗಳು ಪುರಿಯಲ್ಲಿ ಸ್ವಾಮಿಗಳವರ ಆಪ್ತ ಶಿಶ್ಯರೋರ್ವರ ಮನೆಯಲ್ಲಿರಿಸಿದ್ದಾಗ ೧೯೫೬ರಲ್ಲಿ ಬೆಂಕಿಗೆ ಆಹುತಿಯಾಯಿತೆಂದು ನಂಬಲಾಗಿದೆ. ಅವರ ಜೀವನದ ಕೊನೆಯ ಕೆಲ ದಿನಗಳಲ್ಲಿ ಕಣ್ಣಿನ ಕಾಯಿಲೆ ಕ್ಯಾಟರ್ಯಾಕ್ಟ್ ನಿಂದಾಗಿ ದೃಷ್ಠಿ ಮಂದವಾಗಿದ್ದರೂ ಸಹ ಸ್ವಾಮಿಗಳವರು ಅವರ ನೆನಪಿನಾಳದಿಂದ ಕೆದಕಿ ಕೇವಲ ಆರು
ವಾರಗಳಲ್ಲಿ ಒಂದು ಸಂಪುಟದ ಕರಡನ್ನು ರಚಿಸಿ ಆದುನಿಕ ಜಗತ್ತಿಗೆ ಕೊಟ್ಟು ಹೋಗಿದ್ದಾರೆ. ಈ ಕರಡನ್ನು ೧೯೬೫ರಲ್ಲಿ ವಾರಣಾಸಿಯಲ್ಲಿ "ವೇದಗಣಿತ"ವೆಂಬ ರೂಪದಲ್ಲಿ ಮೋತಿಲಾಲ್ ಬನಾರಸಿದಾಸ್ ಪುಸ್ತಕ ಪ್ರಕಾಶಕರಿಂದ ಪ್ರಕಟಿಸಲಾಯಿತು. ಈಗ ನಮಗೆ ಲಬ್ಯವಿರುವ ವೇದ ಗಣಿತದಲ್ಲಿ ಸ್ವಾಮಿಗಳವರು ಹದಿನಾರು ಸೂತ್ರಗಳನ್ನು ನಿರೂಪಿಸಿದ್ದಾರೆ. ಈ ಸೂತ್ರಗಳು ಅಂಕಗಣಿತದ ಕ್ಲಿಷ್ಟತೆಯನ್ನು ಕಡಿಮೆ ಮಾಡಲು ಬಳಸಿಕೊಳ್ಳಬಹುದಾಗಿದೆ. ಗಣಿತಕ್ಕೆ ಸಂಬಂಧಿಸಿದಂತೆ ಇನ್ನೂ ಅದೆಷ್ಟೋ ವಿಷಯಗಳನ್ನು ಅಥರ್ವ ವೇದದಿಂದ ಸ್ವಾಮಿಗಳು ಹೊರತೆಗೆದಿದ್ದರೂ ಸಹ ನಮಗೆ ಲಬ್ಯವಿದ್ದದ್ದು ಇಷ್ಟೆ.
[ಸಂಗ್ರಹ]
Comments
ಉ: ವೇದ ಗಣಿತ ನಿರೂಪಕ : ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಸ್ವಾಮಿಗಳು
ಉ: ವೇದ ಗಣಿತ ನಿರೂಪಕ : ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಸ್ವಾಮಿಗಳು