ದಾರ್ಶನಿಕ ಕವಿಯಾದವನಿಗೆ ಜಡವೆಂಬುದು ಇಲ್ಲವೇ ಇಲ್ಲ; ಚೇತನವೇ ಎಲ್ಲ. ಕಲ್ಲು ಮಣ್ಣು ಎಲ್ಲವೂ ಚೇತನವೇ. ಹಾಗೆ ನೋಡಿದರೆ ಮಣ್ಣು ಜೀವಚೈತನ್ಯದ ಅದಮ್ಯ ಚಿಲುಮೆಯೇ ಅಲ್ಲವೇ? ಕುವೆಂಪು ಅವರೂ ಈ ಸರ್ವಚೈತನ್ಯ ತತ್ವದ ಪ್ರತಿಪಾದಕರೇ ಆಗಿದ್ದಾರೆ. ಮನೆಯ ಹೂದೋಟದಲ್ಲಿ ಅರಳಿದ ಹೂವೊಂದರಲ್ಲಿ ಅವರು ಭಗವತಿಯ ಆವಿರ್ಭಾವವನ್ನು ಕಂಡು ಅನುಭವಿಸಬಲ್ಲರು. ಹುಲ್ಲು ಎಸಳನ್ನು ತೃಣಸುಂದರಿಯ ರೂಪದಲ್ಲಿ ಕಂಡು ಸಂತೋಷ ಪಡಬಲ್ಲರು. ಅವರಿಗೆ ಯಾವುದೂ ಜಡವಲ್ಲ. ಯಾವುದೂ ಅಮುಖ್ಯವಲ್ಲ. ಪ್ರತಿಯೊಂದರಲ್ಲೂ ಚೈತನ್ಯವನ್ನು ಕಾಣುವ, ಕಂಡು ಆನಂದಿಸುವ, ಆ ಆನಂದವನ್ನು ಇತರರೂ ಅನುಭವಿಸಬೇಕೆಂದು ಅದಕ್ಕೆ ವಾಗ್ರೂ(ಕಲಾ)ಪವನ್ನು ದಯಪಾಲಿಸುವ ಶಕ್ತಿ ಕುವೆಂಪು ಅವರಿಗೆ ಸಿದ್ದಿಸಿತ್ತು.
ಕುವೆಂಪು ಅವರಿಗೆ ಕಾರಿನ ಬಗ್ಗೆ ತುಂಬಾ ವ್ಯಾಮೋಹವಿತ್ತು. ಆಗ್ಗೆ ಮೈಸೂರಿನಲ್ಲಿ ಮೊದಲು ಕಾರು ಕೊಂಡ ಪ್ರೊಪೆಸರ್ ಇವರೇ ಆಗಿದ್ದರು. ಕುವೆಂಪು ಅವರ ಕಾರು ಮೈಸೂರಿನ ರಸ್ತೆಗಳಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡುತ್ತಿತ್ತು ಎಂಬುದನ್ನು ಶ್ರೀಮತಿ ತಾರಿಣಿ ಮತ್ತು ರಾಜೇಶ್ವರಿಯರಿಬ್ಬರೂ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಎಷ್ಟೋ ವೇಳೆ, ಹೊರ ಹೋಗಿದ್ದ ಸಂದರ್ಭದಲ್ಲಿ ಕುವೆಂಪು ಅವರು ಮನೆಯವರಿಗಾಗಿ ಕಾಯಬೇಕಾಗಿದ್ದಾಗ ಕಾರಿನಲ್ಲೇ ಕುಳಿತಿರುತ್ತಿದ್ದರಂತೆ ; ಕೆಲವೊಮ್ಮೆ ಓದುತ್ತಾ, ಕೆಲವೊಮ್ಮೆ ಸುತ್ತಲಿನ ದೃಶ್ಯಗಳನ್ನು ನೋಡುತ್ತಾ! ಒಮ್ಮೆ ಮಹಾರಾಜಾ ಕಾಲೇಜಿನಲ್ಲಿ ಪಾಠ ಮಾಡಲು ಬಂದಿದ್ದಾಗ ಮಕ್ಕಳಾದ ತೇಜಸ್ವಿ ಮತ್ತು ಚೈತ್ರರನ್ನು ಕಾರಿನಲ್ಲಿಯೇ ಬಿಟ್ಟು ತರಗತಿಗೆ ಬಿಟ್ಟು ಬಂದಿದ್ದನ್ನು, ಎರಡು ಗಂಟೆಗಳ ಕಾಲ ಮಕ್ಕಳು ಕಾರಿನೊಳಗೇ ಇದ್ದುದನ್ನು, ಅದಕ್ಕೆ ಪ್ರಭುಶಂಕರರು ಆಕ್ಷೇಪಿಸಿದ್ದನ್ನು, ಆಗ ಕುವೆಂಪು ಅವರು ’ಅವರು ತರಗತಿಗೆ ಬಂದಿದ್ದರೆ, ನಾನು ಇಂದು ಮಾಡಿದ ಪಾಠ (ಗೋವಿನ ಹಾಡು) ಕೇಳಿ ಅಣ್ಣ ಕಾಲೇಜಿನಲ್ಲಿ ನಾವು ಓದುವಂತಹ ಗೋವಿನ ಹಾಡು ಪದ್ಯವನ್ನೇ ಪಾಠ ಮಾಡುವುದು ಎಂದು ಆಡಿಕೊಳ್ಳುತ್ತಿದ್ದರು’ ಎಂದು ತಮಾಷೆ ಮಾಡಿದ್ದನ್ನು ಸ್ವತಃ ಪ್ರಭಶಂಕರ ಅವರೇ ದಾಖಲಿಸಿದ್ದಾರೆ. ಹೊಸ ಕಾರು (ಬಹುಶಃ ಇದು ಅವರು ಕೊಂಡ ಎರಡನೆಯ ಕಾರು - ಸ್ಟುಡಿಬೇಕರ್ ಕಮ್ಯಾಂಡರ್-ಇರಬಹುದು) ಬಂದ ಹೊಸದರಲ್ಲಿ ಆಗಾಗ ಹೋಗಿ ಅದನ್ನು ನೋಡುವ, ಮುಟ್ಟುವ, ಸಂತೋಷ ಪಡುವ ಕುವೆಂಪು ಅವರ ಚಿತ್ರಣವನ್ನು ಸ್ವಾರಸ್ಯಕರವಾಗಿ ಸರಸವಾಗಿ ತಾರಿಣಿಯವರು ದಾಖಲಿಸಿದ್ದಾರೆ. ಅದನ್ನು ತಾರಿಣಿಯವರ ಮಾತುಗಳಲ್ಲೇ ಕೇಳೋಣ.
”ದೊಡ್ಡ ಕಾರು ಹೊಸದಾಗಿ ಬಂದಿತ್ತು. ಷೆಡ್‌ನಲ್ಲಿ ನಿಲ್ಲಿಸಿದ್ದರು. ಆ ದಿನ ತಂದೆಯವರು ಆಗಾಗ್ಗೆ ಷೆಡ್‌ಗೆ ಹೋಗಿ ಕಾರು ನೋಡಿ ಬರುತ್ತಿದ್ದರು. ಕಾರಿನ ಮೇಲೆ ಬಿದ್ದಿದ್ದ ಧೂಳು ಒರೆಸುವುದು, ಒಳಗೆ ಕುಳಿತು ನೋಡುವುದು ಮಾಡುತ್ತಿದ್ದರು. ಸಣ್ಣ ಕಾರಿಗೂ ದೊಡ್ಡಕಾರಿಗೂ ಬಿಡುವುದರಲ್ಲಿ ಇರುವ ವ್ಯತ್ಯಾಸವನ್ನು ಮನನ ಮಾಡುತ್ತಿದ್ದರೋ ಏನೋ. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮ ಅದನ್ನೆಲ್ಲ ಗಮನಿಸುತ್ತಿದ್ದರು. ತಂದೆಯವರು ಒಳಗೆ ಬಂದಾಗ ’ಏನು ಅಷ್ಟೊಂದು ಸಂಭ್ರಮ. ಮತ್ತೆ ಮತ್ತೆ ಷೆಡ್‌ಗೆ ಹೋಗಿ ಬರುವುದು? ಹೋಗಿ ಕಾರು ಮುಟ್ಟಿ ಮುಟ್ಟಿ ನೋಡಿ ಬರುವಿರಾ?’ ಎಂದರು. ತಂದೆಯವರು ’ಹೌದು ಯಾವುದು ಹೊಸತು ಬಂದರೂ ಮತ್ತೆ ಮತ್ತೆ ನೋಡುವೆ. ಮುಟ್ಟಿಮುಟ್ಟಿ ನೋಡುವೆ. ನೀನೂ ಹೊಸದಾಗಿ ಬಂದಾಗ ಮಾಡುತ್ತಿರಲಿಲ್ಲವೇ? ನಿನಗೆ ಮಾತ್ರಾ ಎಂದು ತಿಳಿದೆಯಾ?’ ಎಂದು ತಮಾಷೆ ಮಾಡಿದರು. ಅಮ್ಮ ’ಸಾಕು ಸುಮ್ಮನಿರಿ ನಿಮ್ಮ ತಮಾಷೆ. ಹೋಗಿ ಮತ್ತೆಮತ್ತೆ ಮುಟ್ಟಿ ಸವರಿ ಬನ್ನಿ. ಯಾರು ಬೇಡ ಎನ್ನುವರು’ ಎಂದು ಹೇಳಿದರು. ಅಪ್ಪ ನಗುತ್ತಾ ಅವರ ರೂಮಿನ ಕಡೆ ಹೋದರು.”
ಕುವೆಂಪು ಅವರಿಗೆ ಹೊಸದರ ಬಗ್ಗೆ ಯಾವಾಗಲೂ ಅದಮ್ಯ ಕತೂಹಲ. ಹೊಸ ಸ್ಟ್ರಾಪನ್ನು ಹಾಕಿಸಿದ್ದ ವಾಚನ್ನು ಕಟ್ಟಿಕೊಂಡು ತರಗತಿಗೆ ಬಂದಿದ್ದ ಕುವೆಂಪು ಅವರು ಅಂದು ಆಗಾಗ ಕೈ ಮೇಲೆತ್ತಿ ವಾಚನ್ನು ನೋಡಿಕೊಳ್ಳುತ್ತಿದ್ದುದನ್ನು ಅವರ ಶಿಷ್ಯರೊಬ್ಬರು ದಾಖಲಿಸಿದ್ದಾರೆ.
ತಾರಿಣಿಯವರ ಚಿಕ್ಕಮ್ಮನ ಮಗ ಹಿಮಾಂಶು ಒಮ್ಮೆ ’ಏಕೆ ಈ ತಗಡಿನ ಚಕ್ರಕ್ಕೆ ಪೂಜೆ ಮಾಡುವಿರಿ ?’ ಎಂದು ಕುವೆಂಪು ಅವರಿಗೆ ಕೇಳಿದಾಗ ’ಎಲ್ಲದರಲ್ಲಿಯೂ ಭಗವಂತನ ಅಂಶ ಇರುತ್ತದೆ. ಅದನ್ನು ನೋಡುವ ದೃಷ್ಟಿ ಇರಬೇಕು. ಶಕ್ತಿರೂಪದಲ್ಲಿ ದೇವಿ ನಮ್ಮಲ್ಲಿಗೆ ಬಂದಿದ್ದಾಳೆ. ಅದಕ್ಕೇ ’ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ’ ಎಂದು ಹೇಳುವುದು ಅದರಲ್ಲಿಯೂ ಭಗವಂತನ ಅಂಶವನ್ನು ಕಾಣಬೇಕು’ ಎಂದು ವಿವರಿಸಿದ್ದರಂತೆ.
ಇಂತಹ ಕುವೆಂಪು ತನ್ನ ಮನೆಗೆ ಹೊಸ ಕಾರು ಬಂದಾಗ ಕವಿಯಾಗಿ ಅದನ್ನು ಹೇಗೆ ಕಂಡಿರಬಹುದು? ಎಂಬ ಕುತೂಹಲ ಸಹಜ ತಾನೆ? ಅದಕ್ಕೆ ಇಲ್ಲಿದೆ ಉತ್ತರ : ಚಕ್ರಚರಣೆಗೆ ಸ್ವಾಗತಂ!
೧೪.೧.೫೧ ಸಂಕ್ರಾಂತಿಯ ದಿನ ಭಾನುವಾರ ಹೊಸ ಕಾರು ಬಂದಾಗ ಬಯಸಿದ ಸ್ವಾಗತಪೂಜೆಯ ಸಂದರ್ಭದಲ್ಲಿ ಎಂಬ ಅಡಿಟಿಪ್ಪಣಿಯೊಂದಿಗೆ ’ಚಕ್ರಚರಣೆಗೆ ಸ್ವಾಗತಂ!’ ಎಂಬ ಕವಿತೆ ರಚಿತವಾಗಿದೆ. ಬಂದಿರುವುದು ಕಾರಾದರೂ ಅದು ಕವಿಗೆ ಶಕ್ತಿ ರೂಪದ ದೇವಿಯೇ ಆಗಿದೆ. ಮೊದಲ ಚರಣದಲ್ಲೇ ದೇವಿಗೆ ಸ್ವಾಗತವನ್ನು ಬಯಸುತ್ತಾರೆ.
ಸ್ವಾಗತಂ ಸುಸ್ವಾಗತಂ,
ಚಕ್ರಚರಣೆಗೆ ಸ್ವಾಗತಂ!
ಗೆಲ್ಗೆ ಕವಿ ಮನೋರಥಂ;
ಬಾಳ್ಗೆ ನಮ್ಮ ನವರಥಂ!
ಕಾರು ಕೊಳ್ಳಬೇಕೆಂಬುದು ಕವಿಯ ಮನೋರಥ. ಅದಕ್ಕೆ ಇಂದು ಸಂಕ್ರಾಂತಿಯ ದಿನ ಗೆಲುವಾಗಿದೆ. ಆ ಹೊಸ ಕಾರು - ನವರಥ - ಬಾಳಲಿ ಎಂದು ಸಂಕಲ್ಪಿಸಲಾಗಿದೆ. ಮುಂದಿನ ಚರಣಗಳಲ್ಲಿ ಕಾರನ್ನು ದೇವಿಯ ರೂಪದಲ್ಲಿ ಪರಿಭಾವಿಸಲಾಗಿದೆ.
ಬಂದಳಿಂದು ಮನೆಗೆ ಶಕ್ತಿ,
ನೂತ್ನ ಯಂತ್ರ ರೂಪಿಣಿ :
ಲೋಹಕಾಯೆ, ವೇಗತಂತ್ರೆ,
ಅಗ್ನಿ ತೈಲ ವಾಹಿನಿ !
ಚಿಕ್ಕ ಪದಗಳಲ್ಲಿ ಪಂಕ್ತಿಗಳಲ್ಲಿ ಯಂತ್ರರೂಪದಲ್ಲಿ ಮನೆಗೆ ಬಂದಿರುವ ಶಕ್ತಿ ಎಂದು ಕಾರನ್ನು ಕರೆದಿದ್ದಾರೆ. ಕಾರಿನ ಶರೀರ ಲೋಹದಿಂದ ಮಾಡಿದ್ದು ಎಂಬುದಕ್ಕೆ ಲೋಹಕಾಯೆ ಎಂಬ ಪದವನ್ನು ಟಂಕಿಸಿದ್ದಾರೆ. ವೇಗತಂತ್ರೆ ಎಂಬುದು ಅಷ್ಟೆ. ಪೆಟ್ರೋಲಿನಿಂದ ಉತ್ಪನ್ನವಾಗುವ ಬೆಂಕಿ(ಶಕ್ತಿ)ಯಿಂದ ಚಲಿಸುವಂತಹದ್ದು ಎಂಬುದನ್ನು ’ಅಗ್ನಿ ತೈಲ ವಾಹಿನಿ’ ಎಂಬ ಸಾಲು ಹಿಡಿದಿಟ್ಟಿದೆ.
ಆವ ದೇವಿ ರವಿಯ ಸುತ್ತ
ಭೋಗೋಲವ ತಿರುಗಿಸುತ್ತ
ತನ್ನ ರುಂದ್ರ ಲೀಲೆಯತ್ತ
ಸಾಗುತಿರುವಳೋ,
ಖನಿಜ ಸಸ್ಯ ಪ್ರಾಣಿವರ್ಗ
ಮನುಜ ದನುಜ ಸುರ ನಿಸರ್ಗ
ಯಂತ್ರ ತಂತ್ರ ಮಂತ್ರವಾಗಿ
ನಿಯಂತ್ರಿಸಿರುವಳೋ,
ಅವಳೆ ಇಂದು ಮನೆಗೆ ಬಂದು
ಇಂತು ನಮ್ಮ ಮುಂದೆ ನಿಂದು
ಹರಸುತಿಹಳು ಭಕ್ತಬಂಧು,
ಈ ವಾಹನ ವೇಷದಿ !
ಸೌರಮಂಡಲದಲ್ಲಿ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿವೆ. ಅವುಗಳನ್ನೆಲ್ಲಾ ನಿಯಂತ್ರಿಸುತ್ತಿರುವ ಶಕ್ತಿಯೇ ಖನಿಜ, ಸಸ್ಯ, ಪ್ರಾಣಿ, ಮನುಷ್ಯ, ರಾಜ್ಷಸ, ದೇವರು, ಪ್ರಕೃತಿ, ಯಂತ್ರ, ತಂತ್ರಜ್ಞಾನ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾಳೆ. ಆ ಶಕ್ತಿಯೇ ಇಂದು ಕಾರಿನ ವೇಷದಲ್ಲಿ ಬಂದು ನಮ್ಮನ್ನು ಹರಸುತ್ತಿದ್ದಾಳೆ ಎಂದು ಕವಿ ಹಾಡಿದ್ದಾರೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ 'ಯುಗಯುಗದಿ ಸಂಭವಿಪೆನೆಂಬ ಭಗವದ್ದಿವ್ಯಮಾ ವಚನಮೇಂ ನರರೂಪಮಾತ್ರಕ್ಕೆ ಮುಡಿಪೆ ಪೇಳ್? ನರಸಿಂಹ ಮತ್ಸ್ಯ ಕೂರ‍್ಮಾದಿ ಚರಮಾ ಲೇಲೆಗೇಂ ಪೊರತೆ ಈ ಕೃತಿರೂಪಮಾ ಭಗವದಾವಿರ್ಭಾವ ಬಹುರೂಪ ಸೂತ್ರತೆಗೆ?’ ಎಂದು ಕೃತಿ ರೂಪದಲ್ಲೂ ಭಗವಂತನ ಆವಿರ್ಭಾವವನ್ನು ಪರಿಭಾವಿಸುವ ಕವಿಹೃದಯಕ್ಕೆ ಉಪಕಾರಿಯಾಗಿ ಬಂದಿರುವ ಕಾರಿನ ರೂಪದಲ್ಲಿ ಶಕ್ತಿದೇವತೆಯನ್ನು ಕಾಣುವುದು ಸಹಜವಾಗಿಯೇ ಇದೆ.
ಭಗವತಿಯ ಸ್ವರೂಪವಾದ ಕಾರಿಗೆ ಕವಿ ಹೀಗೆ ನಮಸ್ಕರಿಸುತ್ತಾರೆ.
ನಮಸ್ಕರಿಸಿ ಸಮರ್ಪಿಪೆನ್,
ಚಕ್ರ ಚರಣೆ, ಜನನಿ, ಇದೆಕೊ
ತವ ಪವಿತ್ರ ಚತುಷ್ಪದಕೆ
ಪ್ರಾಕ್ ಮಂತ್ರ ಘೋಷದೀ
ವಾಕ್ ಪವಿತ್ರ ಪುಷ್ಪಮಂ !
ಎಂದು ಮಾತೆಂಬ ಪವಿತ್ರ ಪುಷ್ಪವನ್ನು ಅರ್ಪಿಸಿ ಪ್ರಾಚೀನವಾದ ಮಂತ್ರಗಳನ್ನು ಘೊಷಿಸುತ್ತಾರೆ. ಆ ಮಂತ್ರ ಹೀಗಿದೆ.
“ಓಂ
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ!
ಯಾದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥೀತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ!
ಚಿತಿರೂಪೇಣ ಯಾ ಕೃತ್ಸ್ನಮೇತದ್ ವ್ಯಾಪ್ಯಸ್ಥಿತಾ ಜಗತ್
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ!
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರೈಂಬಕೇ ಗೌರಿ ನಾರಾಯಣಿ ನಮಸ್ತು ತೇ!
ಸರ್ವಸ್ವರೂಪವೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ!”
ಓಂ ಶಾಂತಿಃ ಶಾಂತಿಃ ಶಾಂತಿಃ
ನನ್ನ ಮಾತು! : ಇಂದು (೨೯.೦೬.೨೦೧೧) ಈ ಕವಿತೆಯ ನೆನಪಾಗಲು, ಮತ್ತೆ ಓದಲು, ಅದರ ಬಗ್ಗೆ ಒಂದೆರಡು ಸಾಲು ಬರೆಯಲು ಕಾರಣ- ಇಂದು ನನ್ನ ಮನೆಗೂ ಚಕ್ರಚರಣೆಯ ಆಗಮನವಾಯಿತು. ನಾನು ಇಂದಿನಿಂದ ಚತುಷ್ಚಕ್ರಿಯಾದೆ! ಅಂದು ಕವಿಮನೋರಥಕ್ಕೆ ಗೆಲುವಾದಂತೆ ಇಂದು ನನ್ನ ಮನೋರಥಕ್ಕೂ ಗೆಲವುವಾಗಿದೆ. ಕವಿಯ ಆಶಯದಂತೆ ’ಬಾಳ್ಗೆ ನಮ್ಮ ನವರಥಂ’.
ಚಿತ್ರಕೃಪೆ: www.kuvempu.com
Comments
ಉ: ಚಕ್ರ ಚರಣೆಗೆ ಸ್ವಾಗತಂ! - ೯ : ಕವಿ ಕಾರು ಕೊಂಡದ್ದು