ನನ್ನ ಕವನ ಸಂಕಲನದ ಆನಂದ

ನನ್ನ ಕವನ ಸಂಕಲನದ ಆನಂದ

ಕವನ

 

                                                 

 

       ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು . ಎರಡು ವರ್ಷದಲ್ಲಿ ನಾ ಕಂಡ ಕನಸ್ಸನ್ನು ನನಸಾಗಿ ಮಾಡಿದ    " ನನ್ನೆದೆಯ ಬಡಿತ 

                                ಪ್ರೀತಿಯ ಉಸಿರು 

                                ಒಲುಮೆಯ ಜೀವ ಜೀವಾಳ 

                                ಸಂಗಾತಿ ಡಾ.ಸಿದ್ದು ಅವರಿಗೆ ಅರ್ಪಣೆ ಮಾಡಿದ ಕವನ ಸಂಕಲನವಿದು.ನನ್ನ ದಾಂಪತ್ಯ ಜೀವನದಿಂದ ಆಯ್ದ ಪ್ರೀತಿಯ ಹನಿಗಳನ್ನು ಪೋಣಿಸಿ ಸುಂದರ ಹಾರವನ್ನು ಧರಿಸಿ ಹಸೆಯ ಮೇಲಿರುವಾಗ ಮೌನದ ಮನದಲ್ಲಿ ಮೂಡಿದ ಕವಿತೆಗಳಿವು.ಅವು 'ಹಸೆಯ ಮೇಲಣ ಹಾಡು'.

      ವಿಜಾಪೂರದ ಬುದ್ಧಿಜೀವಿ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಹಸ್ತದಿಂದ ಲೋಕಾರ್ಪಣೆಗೊಂಡ ನನ್ನ ಕವನ ಸಂಕಲನ ಬಹಳ ಪುಣ್ಯಗಳಿಸಿತ್ತು. ಆ ದಿನದ ಮತ್ತೊಂದು ವಿಶೇಷವೆಂದರೆ ಕವಿಗೊಷ್ಟಿಯು ಆಯೋಜಿಸಲಾಗಿತ್ತು. ನಾನು ಜಸ್ಟ್ ಪಾಸ್ ಆಗಿ ಕವಯತ್ರಿ ಪದವಿ ತೆಗೆದುಕೊಳ್ಳುತ್ತಿದ್ದೆ ಆದರೆ ಅಲ್ಲಿ ಉಳಿದ ೧೧ ಕವಿಗಳು ತುಂಬಾ ಮೆಚ್ಚುಗೆ ಪಡೆದವರಾಗಿದ್ದರು.ಅವರ ಜೊತೆ ನನಗೆ ಕವನ ಓದಲು ತುಂಬಾ ಖುಷಿಯೇನಿಸಿತ್ತು.ಅದೇ ದಿನ ಕವಿ ಮತ್ತು ಲೇಖಕ ಕಲ್ಲೇಶ ಕುಂಬಾರ ಅವರ 'ಉರಿಯ ನಾಲಿಗೆಯ ಮೇಲೆ' ಕಥಾಸಂಕಲನ ಲೋಕಾರ್ಪಣೆಯಾಯಿತು. 

      ಕವನ ಬರೆಯುವ ಕಲೆ ತವರಿನಲ್ಲಿ ಮೊಳೆತದ್ದು,ಚಿಗುರಿದ್ದು ಸಪ್ತಪದಿಯಲ್ಲಿ, ಹೂತಿದ್ದು ನಮ್ಮ ದಾಂಪತ್ಯದ ಹಸೆಯಲ್ಲಿ.ನನ್ನ ಬದುಕನ್ನು ಒಪ್ಪಿ ಅಪ್ಪಿ ಎದೆಯಲ್ಲಿ ಕವಿತೆಯ ಒರತೆ ತೊಡಿದವರು ನನ್ನ ಸಂಗಾತಿ.ಅವರೇ ನನ್ನ ಬದುಕಿನ ಪ್ರೀತಿಯ ಪ್ರತೀಕ.

      ನನ್ನ ಗುರುಗಳಾದ ಡಾ.ವಿ.ಎಸ.ಮಾಳಿಯವರು ಹಾರೂಗೆರಿಯವರು.ನನ್ನ ಕವನ ಸಂಕಲನದ ಹಿಂದಿನ ಪುಟವನ್ನು ತಮ್ಮ ಮನಸ್ಸಿನ ಚೆಂದಾದ ಮಾತುಗಳಿಂದ ಅಲಂಕರಿಸಿದವರು. ಇವರು ಹೇಳಿದ್ದು- 'ಕವಿತೆಗಳೆಂದರೆ ಅಕ್ಷರಗಳಲ್ಲಿ ಸಂವೇದನೆಗಳ ಸಾಕ್ಷಾತ್ಕಾರ'. ಮದುವೆಯ ಹೊಸತರಲ್ಲಿ ಕ್ಷಣ ಕ್ಷಣಗಳೆಲ್ಲ ಸುಂದರ ಮತ್ತು ಮಧುರ.ಸಲ್ಲಾಪದ ಮುದ್ದು ಮುದ್ದು ಮಾತುಗಳು ಜೇನಿನಲ್ಲಿ ಅದ್ದಿ ಇಟ್ಟಂತೆ ಕೀರ್ತಿಯವರ ಕವಿತೆಗಳು ಜಾಮೂನಿನಂತೆ! ಮುದ್ದನನಂಥ ಗಂಡನಿಗೆ ಮನೋರಮೆಯಮ್ಥ ಹೆಂಡತಿ ಜತೆಯಾದಾಗ ಇಂಥದೊಂದು 'ದಾಂಪತ್ಯ ಕಾವ್ಯ'ಹುಟ್ಟಿಕೊಳ್ಳುತ್ತದೆ.

     ಈ ಸಂಕಲನ ಹೊರಬರಲು ಪ್ರೇರಣೆ ನೀಡಿದ ಎಲ್ಲ ಬ್ಲಾಗ ಸ್ನೇಹಿತ-ಸ್ನೇಹಿತೆಯರೆಲ್ಲರಿಗೂ ನನ್ನ ಪ್ರೀತಿಯ ಕೃತಜ್ನ್ಯತೆಗಳು.ನನ್ನ ಕವನಗಳಿಗೆ ನೀವು ನೀಡಿದ ವಿಶ್ವಾಸ,ಪ್ರೀತಿ, ಸಹಕಾರ ಮತ್ತು ಸ್ಪೂರ್ತಿಗೆ ನನ್ನ ಅನಂತ ಧನ್ಯವಾದಗಳು .ಕೊನೆಯದಾಗಿ ಈ ಕೀರ್ತಿಯ ಕನಸು ನನಸಾಗಿಸಲು ಸಹಕರಿಸಿ ಹರಸಿರಿ.

 

Comments