ವಕ್ತಾರ
ಕವನ
* * * ವಕ್ತಾರ * * *
ಪರಮ ಶಕ್ತಿಯ ಧೀ ಆಜ್ಞೆಗೆ, ಸೃಷ್ಟಿಪ್ರಜ್ಞೆಯ ಸೃಷ್ಟಿ ಸಜ್ಞೆಗೆ
ಮರ್ತ್ಯಲೋಕದ ಒಂದು ದೇಹದಿ, ದೇಹವೊಂದು ಚಿಗುರಿತು.
ನವ್ಯ ದೇಹದಿ ನನ್ನ ಪ್ರಜ್ಞೆಯು, ಚೈತ್ಯ ಜೊತೆಯಲಿ ಅರಳಿತು.
ನಾನು ಹುಟ್ಟಲು, ಜಗವ ತಟ್ಟಲು ಅರಿವಿದುದಯದ ದರ್ಶನ.
ಅಲ್ಲಿ ಪ್ರಶ್ನಿಸಿ, ಇಲ್ಲಿ ತರ್ಕಿಸಿ ನನಗೆ ಅನುಭವದಾಲಿಂಗನ.
ಕನಸ ದೋಣಿಗಳಲವು ಮುಳಗಲು, ಹಲವು ನನಸನು ಸೇರಿತು.
ಆಂತರಂಗದ ಮೋಡ ಮಥಿಸಿ ಭಾವವೃಷ್ಟಿಯು ಸುರಿಯಿತು.
ಗೆಲುವಿನಲ್ಲಿ, ನೋವ ಮಡಿಲಲಿ, ಮಂದಹಾಸವು ಮೂಡಿತು.
ಕಾರ್ಪಣ್ಯದಲ್ಲಿ, ಆನುಭೂತಿಯಲ್ಲಿ ಕಣ್-ಕಡಲು ಉಕ್ಕಿ ಹರಿಯಿತು.
ತಿಳಿದೆ ನಾನು ಮತಿಯು, ಚಿಂತನೆ ಕಡೆವ ಒಂದು ಅಕ್ಷಯ.
ಅದನೆ ವ್ಯಯಿಸಿ ರೂಪಿಸಬೇಕು ನನ್ನ ಬಾಳಿನ ಧ್ಯೇಯ.
ಅಂದು ಮೊಳೆತ ಬೀಜವಿಂದು ಬೆಳೆದು ವೃಕ್ಷವಾಗಿದೆ.
ವೃಕ್ಷ ವಕ್ಷದಿ ಅರಿವು, ತಿಳಿವು ಜ್ಞಾನದೀಪ್ತಿಯ ಬೆಳಗಿದೆ.
ಜೀವಕೋಟಿಯಲೊಂದು ಏಣಿಕೆಯು ನನ್ನ ಜೀವನ ಮೌಲ್ಯವು.
ಭಾವಕೋಟಿಯಲೊಂದು ಹನಿಯು ನನ್ನ ಭಾವ ಸಮುದ್ರವು.
ನನ್ನ ಭಾವವು, ನನ್ನ ಜೀವವು ನನಗೆ ಮಾತ್ರ ಹತ್ತಿರ.
ನನ್ನ ಆಂಕೆಗೆ ಸಿಗುವುದೊಂದೆ ನನ್ನ ಹೃನ್ಮನೋವ್ಯಾಪಾರ.
ನನ್ನ ಪ್ರಶ್ನೆಗೆ, ತಿಳಿಯದರ್ಥಕೆ ನಾನೆ ಕೊಡುವೆ ಉತ್ತರ.
ನನ್ನ ದರ್ಶನ, ನನ್ನ ಸಾಧನೆ ನಾನೆ ಅದರ ವಕ್ತಾರ.
- ಚಂದ್ರಹಾಸ ( ೫ - ಜುಲೈ - ೨೦೧೧ )