ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ


ರವಿಶಂಕರನಿಗೆ ಮಗಳೆಂದರೆ ಪ್ರಾಣ, ಅವಳೆ ಅವನ ಜೀವನದ ಒತ್ತಾಸೆ. ತಾನಂತು ಓದಲಾಗಲಿಲ್ಲ, ತನ್ನ ಮಗಳಾದರೂ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ, ಜೀವನದಲ್ಲಿ ಎತ್ತರಕ್ಕೇರಲಿ, ಎಂಬುದೆ ಆತನ ಜೀವನದ ಗುರಿ, ಹಾಗು ತುಡಿತ.

ಅದಕ್ಕೆ ತಕ್ಕಂತೆ ಮಗಳು ರಕ್ಷಿತಾ ಕೂಡ ಚೆನ್ನಾಗಿ ಓದುವ, ಓದುವ ಏನ್ಬಂತು ಈಗಿನ ಸ್ಪರ್ದಾತ್ಮಕ ಪ್ರಪಂಚಕ್ಕೆ ಸವಾಲೊಡ್ಡಿ ನಿಲ್ಲುವ ಹುಡುಗಿಯೆ. ಆಕೆಯ ಸ್ವಭಾವ ಸೌಮ್ಯ. ಕೇಳಿದ ಪ್ರಶ್ನೆಗೆ ಉತ್ತರ ಕೂಡ ಎಷ್ಟು ಬೇಕೊ ಅಷ್ಟೆ. ಜೊತೆಗೆ ಸಂಗೀತದಲ್ಲಿ ಕೂಡ ಉತ್ತಮ ಪ್ರೌಢಿಮೆ ಸಾದನೆಗೈದ ಮಗಳು. ರವಿ ಶಂಕರನಿಗೆ ಇದೂ ಕೂಡ ಮತ್ತೊಂದು ಹೆಮ್ಮೆಯ ವಿಷಯ. ಕಾರಣ ಅವನಿಗೆ ಬದಕಲು ಅಷ್ಟೋ ಇಷ್ಟೋ ಸಹಾಯ ಮಾಡಿರುವುದು ಸಂಗೀತ ಕೂಡ.

ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿಲ್ಲದ ರವಿಶಂಕರನಿಗೆ ಇರುವ ಸ್ವರ ಜ್ನಾನ ನಿಜಕ್ಕೂ ದೇವರು ಕೊಟ್ಟ ವರ. ಯಾರು ಏನೇ ಹಾಡಿದರೂ ಮುಂದೆ ಕೂತ ರವಿಶಂಕರ ಎರಡು ನಿಮಿಷದಲ್ಲಿ ಅದನ್ನು ತನ್ನ ಕೀಬೋರ್ಡಿನಲ್ಲಿ ನುಡಿಸಿ ಭೇಷ್ ಅನ್ನಿಸಿಕೊಂಡು ಬಿಡುತ್ತಿದ್ದ. ಅದನ್ನು ನೋಡಿದ ಎಷ್ಟೋ ಜನ ದೊಡ್ಡ ವಿದ್ವಾಂಸರೂ ದಂಗಾಗಿಬಿಡುತ್ತಿದ್ದರು. ಅಂಥಹ ಜಾಣ ಸಂಗೀತದ ಮಟ್ಟಿಗೆ.

ರವಿ ಕೆಲಸ ಮಾಡ್ತಾ ಇದ್ದದ್ದು ಸಿನಿಮಾ ಥಿಯೇಟರ್ನಲ್ಲಿ. ದಿನವೂ ನಡೆಯುವ ೩ ಷೋಗೆ ಬುಕ್ಕಿಂಗ್ ಟಿಕೇಟ್ ಕೊಡುವುದು. ಸೀನಿಯರ್ ಕೆಲಸಗಾರ ಅಂತ ಬಾಲ್ಕಾನಿ ಕ್ಲಾಸ್ಗೆ ಟಿಕೇಟ್ ಕೊಡುವ ಸ್ಥಾನ ಕೊಟ್ಟಿರುವುದೆ, ಮಾಲೀಕರು ಇವನಿಗೆ ತೋರುತ್ತಿರುವ ಗೌರವ, ಎಂಬುದೆ ಅವನ ಹೆಮ್ಮೆ.  - ಸಂಬಳ ಮಾತ್ರ ಎಷ್ಟು ಅಂತ ಕೇಳಬೇಡಿ.

ಇನ್ನು ರವಿಶಂಕರನ ಹೆಂಡತಿಯೂ ಅಷ್ಟೆ ಗಾಡಿಗೆ ಕಟ್ಟಿದ ಮತ್ತೊಂದು ಎತ್ತು. ಇದ್ದುದ್ದರಲಿ ಸರಿ ತೂಗಿಸಿಕೊಂಡು, ಕಡಿವಾಣ ಹಾಕಿಕೊಂಡು ನಡೆವ ನಡಿಗೆಯನ್ನು ಹೊಂದಿಕೊಂಡ ಹೆಣ್ಣು.

ಹೀಗಿರುವ ಸಂಸಾರಕ್ಕೆ ಅಂದು ಸಂಭ್ರಮದ ದಿನ. ಏಕೆಂದರೆ ರಕ್ಷಿತಾಳ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಹೊರಬರುವ ಕಾತರದ ದಿನ. ಬೆಳ್ಳಿಗ್ಗೆ ಎಂದಿಗಿಂತ ಮುಂಚಿತವಾಗಿ ಎದ್ದು ನಿತ್ಯ ಕಾರ್ಯಗಳನ್ನು ಮುಗಿಸಿ, ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಾಮೂಲಿನಂತೆ ಮಾರ್ನಿಂಗ್ ಷೋಗೆ ಟಿಕೇಟ್ ಹರಿಯಲು ಹೊರಟ ರವಿಶಂಕರ, ಥಿಯೇಟರ್ನಲ್ಲಿ ಬೆಳಗಿನ ಕೆಲಸ ಮುಗಿಸಿ ೧೧.೩೦ಕ್ಕೆ ಮನೆಕಡೆ ಹೊರಟ.

ಬೇಗ ಮನೆಗೆ ಹೋಗಿ ಊಟ ಮುಗಿಸಿ ೨.೩೦ರ ಒಳಗೆ ಥಿಯೇಟರ್ಗೆ ವಾಪಸ್ಸು ಬರಬೇಕು, ಆಮೇಲೆ ಮಾಲೀಕರ ಅಪ್ಪಣೆ ಪಡೆದು ಸ್ವಲ್ಪ ಮುಂಚೆ ಹೊರಟು ಆ ನಾರಾಯಣನ ಕಂಪ್ಯೂಟರ್ ಸೆಂಟರ್ ಬಳಿ ಹೋದ್ರೆ ಮಗಳ ರಿಸಲ್ಟ್ ಇಂಟರ್ನೆಟ್ ನಲ್ಲಿ ತಿಳಿಯಬಹುದು, ಅನ್ಕೊಂಡು ಮನೆ ಕಡೆ ವೇಗವಾಗಿ ಸೈಕಲ್ ತುಳಿತಾ ಇರುವಾಗ ಮೊಬೈಲ್ ರಿಂಗ್ ಆಗ್ತಾ ಇರೋದು ಕೇಳಿಸ್ತು. ಯಾರಪ್ಪ ಇದು ಅನ್ಕೊಂಡು ಸೈಕಲ್ ನಿಲ್ಸಿ, ಹೆಚ್ಚಾಗಿ ಇನ್ಕಮಿಂಗ್ ನೊ ಔಟ್ಗೋಯಿಂಗ್ ಮೊಬೈಲನ್ನು ಹೊರತೆಗೆದು ನೋಡಿದ ರವಿಶಂಕರನಿಗೆ ಮೊಬೈಲ್ ಪರದೆಯ ಮೇಲಿದ್ದ ಹೆಸರು ನೋಡಿ ಸಂತೋಷವಾಯ್ತು. ಕಾಲ್ ರಿಸೀವ್ ಮಾಡಿ - ‘ಏನಪ್ಪ ಮೋಹ್ನ ಚೆನ್ನಾಗಿದ್ಯಾ ಬಹಳ ಅಪರೂಪಕ್ಕೆ ಫೋನ್ ಮಾಡ್ಬಿಟ್ಟೆ ‘ -  ಅಂದ. ಆ ಕಡೆಯಿಂದ ಅವನ ಚಿಕ್ಕಮ್ಮನ ಮಗ ಮೋಹನ  - ‘ಏನಪ್ಪ ರವಿ, ಬೆಂಗ್ಳೂರ್ ಕಡೆ ಬರ್ಲೆ ಇಲ್ಲ ಎಲ್ಲಾ ಚೆನ್ನಗಿದಿರಾ?, ಅಂದಹಾಗೆ ಇವತ್ತು ನಿನ್ನ ಮಗಳ ರಿಸಲ್ಟ್ ಅಲ್ವೇನೊ ಏನಾಯ್ತು? ನೋಡು ನನ್ನ ಮಗಳು ೮೪% ತಗೊಂಡಿದಾಳೆ, ರಕ್ಷಿತಾದು ಎಷ್ಟು ‘ - ಅಂತ ಒಂದೇ ಉಸುರಿಗೆ ಕೇಳ್ದ. - ‘ಏನು ಆಗ್ಲೆ ರಿಸಲ್ಟ್ ಅನೌನ್ಸ್ ಆಯ್ತಾ ಇಲ್ಲೇನೂ ಗೊತ್ತೇ ಆಗಿಲ್ಲ, ಮತ್ತೆ ನಮ್ಮ ನಾರಾಯಣನಿಗೆ ಕೇಳಿದ್ರೆ ಏನಿದ್ರೂ ಎಲ್ಲ ೪ ಗಂಟೆ ಮೇಲೆ ಗೊತ್ತಾಗೋದು ಅಂದ‘ - ‘ಎಂಥದೂ ಇಲ್ಲ ಬೇಗ ನಿನ್ನ ಮಗಳ ರಿಜಿಸ್ಟರ್ ನಂಬರ್ ಹೇಳು ನಾನು ನಿಂಗೆ ವಾಪಸ್ಸು ಕರೆ ಮಾಡ್ತಿನಿ‘ - ಅಂದ ಆ ಕಡೆಯಿಂದ ಮೋಹನ. ಪ್ಯಾಕೇಟ್ ಡೈರಿನಲ್ಲಿ ಬರೆದುಕೊಂಡಿದ್ದ ನಂಬರನ್ನು ಓದಿ ಹೇಳಿದ ರವಿ. ಫೋನ್ ಕಟ್ ಆಯ್ತು.

ಬೇಗನೆ ಮನೆ ಸೇರಿದ ರವಿ ಬಾಗಿಲಲ್ಲೆ ಹೆಂಡತಿ, ಮಗಳನ್ನು ಕೂಗಿ ಕರೆದು, ರಿಜಿಸ್ಟರ್ ನಂಬರ್ ಸರಿ ಇದೆಯೆ ಎಂದು ಮತ್ತೊಮ್ಮೆ ಮಗಳೊಂದಿಗೆ ಖಾತ್ರಿ ಪಡಿಸಿಕೊಂಡ. ಈಗ ಮೂವರಿಗೂ ಚಡಪಡಿಕೆ ಕಾತರ. ಇಡಿ ವರ್ಷವೆಲ್ಲಾ ಕಷ್ಟ ಪಟ್ಟು ಓದಿದ ಮಗಳ ಶ್ರಮ, ಅದಕ್ಕೆ ಬೆಂಬಲವಾಗಿ ನಿಂತು ತಮ್ಮ ಕೈಲಾದ ಸಹಾಯ ಮಾಡಿದ ನಮ್ಮ ಆಸೆಯ ಚಿಗುರು ಏನಾಗುತ್ತದೊ ಎಂಬ ತವಕ. ವರ್ಷವೆಲ್ಲಾ ಇಲ್ಲದ ಉದ್ವೇಗ ಈ ೧೫ ನಿಮಿಷದಲ್ಲೆ ಕಳೆದೆವೇನೋ ಅನ್ನಿಸಿ ಬಿಟ್ಟಿತು ಮೂರೂ ಜನರಿಗೆ.

ಮೊಬೈಲ್ ರಿಂಗ್ ಆಯ್ತು. ಅವನೆ ಮೋಹ್ನ ಎಂದವನೆ - ‘ಹೇಳು ಮೋಹ್ನ ಏನಾರಾ ಗೊತ್ತಾಯ್ತಾ?‘ - ‘ಕಂಗ್ರಾಜುಲೇಷನ್ಸ್ ಕಣಯ್ಯ ರವಿ, ಊಟ ಯಾವಾಗ ಹಾಕಿಸ್ತಿ ಹೇಳು, ಅಲ್ಲಯ್ಯ ನಿನ್ನ ಮಗಳು ನನ್ನ ಮಗಳನ್ನು ಮೀರಿಸಿ ಬಿಟ್ಟಿದ್ದಾಳಲ್ಲಯ್ಯ ‘ - ಅಂದ ಮೋಹನ.
- ‘ಹೌದಾ ಹಾಗಾದ್ರೆ ಎಷ್ಟು ನಂಬರ್ ಬಂದಿದೆ ಅಂತಾನೂ ಗೊತ್ತಾಯ್ತಾ? ಏನಾಗಿದೆ ಹೇಳಪ್ಪ‘ - ರವಿಯ ಕಾತರ ನೋಡಿ, ಮೋಹ್ನ - ‘ ಇರಪ್ಪ ಆಗ್ಲೆ ಅಷ್ಟೊಂದು ಅರ್ಜೆಂಟಾ,  ಒಟ್ಟು ೯೫.೬% ಕಣಯ್ಯ ರವಿ, ನಿನ್ನಮಗ್ಳಿಗೆ ಫೋನ್ ಕೊಡು ಅವ್ಳಿಗೂ ಕಂಗ್ರಾಡ್ಸ್ ಹೇಳೋಣ‘-

ರವಿಯ ಸಂತೋಷಕ್ಕೆ ಪಾರವೇ ಇಲ್ಲ. ಮಗಳಿಗೆ ಪಾಠಕ್ಕೆ ಕಳುಹಿಸಲೂ ತನಗೆ ದೇವರು ಶಕ್ತಿ ಕೊಡಲಿಲ್ಲ, ಕೇವಲ ತನ್ನ ಸ್ವಂತ ಸಾಮರ್ಥ್ಯದಿಂದಲೆ ಈ ಮಟ್ಟಕ್ಕೆ ತೇರ್ಗಡೆಯಾಗಿದ್ದಾಳೆ, ಇನ್ನು ಪಾಠಕ್ಕೆ ಕಳುಹಿಸಿದ್ದರೆ ೧೦೦ ಕ್ಕೆ ೧೦೦ ತೆಗೆಯುತ್ತಿದ್ದಳೇನೊ ಅನ್ನಿಸಿದ ವೇದನೆ, ಸಂತೋಷ, ಮಿಶ್ರಿತವಾಗಿ ತೇವವಾಗಿದ್ದ ಕಣ್ಣಿನಿಂದ ತನ್ನ ಮಗಳನ್ನು ನೋಡಿದ ರವಿಶಂಕರ. ಹೊಳಪು ಕಂಗಳಿಂದ ತನ್ನನ್ನು ನೋಡಿ ಸಂತೋಷನಾ ಅಪ್ಪ ಅಂದ ಮಗಳನ್ನು ಹತ್ತಿರ ಕರೆದು ಹಣೆಗೆ ಮುತ್ತಿಟ್ಟು, ಚೆನ್ನಾಗಿರು ಮಗಳೆ ಅಂದ. ಸುತ್ತ ಮುತ್ತಲಿದ್ದ ಎಲ್ಲರಿಗೂ ವಿಷಯ ತಿಳಿದು ಸಂತೋಷ ಪಟ್ಟರು.

ಎರಡು ದಿನ ಕಳೆದ ಮೇಲೆ ಇನ್ನು ಮಗಳನ್ನು ಕಾಲೇಜಿಗೆ ಸೇರಿಸಬೇಕು, ಅದಕ್ಕೆ ದುಡ್ಡು ಹೊಂದಿಸಬೇಕೆಂಬ ಯೋಚನಾ ಲಹರಿಯಲಿ ಮಾಮೂಲಿ ಕೆಲಸಕ್ಕೆ ಸೈಕಲ್ ತುಳಿದು ಹೋಗುತ್ತಿದ್ದ ರವಿಯ ಪಕ್ಕದಲ್ಲೆ ಕಾರು ಬಂದು ನಿಂತಾಗ, ಯೋಚನೆಯಿಂದ ಹೊರಬಂದು, ಗಾಬರಿಯಿಂದ ಕೆಳಗಿಳಿದು ನೋಡಿದ, -‘ ಏನಣ್ಣ ರವಿ ನಂಮ್ಗೇನೂ ಪಾಲ್ಟಿ ಇಲ್ವೊ, ಮಗ್ಳು ಒಳ್ಳೆ ರಿಜಲ್ಟ್ ಮಾಡವ್ಳಂತೆ ‘ - ಪಾನ್ ಹಾಕಿ ಕರೆ ಕಟ್ಟಿದ್ದ ಹಲ್ಲುಗಳನ್ನು ತೋರಿಸಿ ಕೇಳ್ತಿದ್ದ ಗಂಗರಾಜು, ಎಂ ಎಲ್ ಎ ಬೋರಯ್ಯನ ಪಟ್ಟಶಿಷ್ಯ.
-‘ ಆಗುತ್ತೆ ಬಿಡು ಗಂಗರಾಜು, ಮನೆ ಹತ್ರ ಬಾ ಊಟ ಮಾಡುವಿಯಂತೆ ‘- ‘ ಅದಿರ್ಲಪ್ಪ ರವಣ್ಣ ಈಗ್ ನಾ ಬಂದಿದ್ದು, ನಮ್ಮ ಸಾಹೇಬ್ರು ಹೇಳ್ಕಳ್ಸವ್ರೆ, ನೀನು ಚಂಜೆ ಹಂಗೆ ಸಾಹೇಬ್ರ ಆಫ಼ೀಸ್ತವ ಬಾ ಅದೇನೊ ನಿಂಗೆ ಸಮ್ನಾನ ಮಾಡ್ತಾರಂತೆ ‘ - ಅಂದವನೆ ಬೇರೆ ಮಾತಿಗೆ ಅವಕಾಶ ಕೊಡದೆ ಹೊರ್ಟೇಬಿಟ್ಟ.

ನಡೆದದ್ದು ಏನು ಎಂದು ರವಿಶಂಕರನಿಗೆ ಅರ್ಥವಾಗುವುದರೊಳಗೆ ಕಾರು ರಸ್ತೆಯ ಕೊನೆ ಸೇರಿದ್ದಾಗಿತ್ತು. ಏನು ಸನ್ಮಾನ ಮಾಡ್ತಾರೆ ನಂಗೆ, ಅಂಥಹ ಸಾಧನೆ ನಂದೇನಪ್ಪ ಅಂತ ಯೋಚ್ನೆ ಮಾಡ್ತಾನೆ ಸಂಜೆವರ್ಗೂ ಕೆಲಸ ಮುಗಿಸಿ, ಸಂತೆಬೀದೀಲಿ ಇದ್ದ ಎಮ್ ಎಲ್ ಎ ಬೋರಯ್ಯನವರ ಆಫ಼ೀಸ್ ಬಳಿ ಬಂದ. ಬೇಕಾದಷ್ಟು ಜನ ಕೂತಿದ್ದಾರೆ. ರವಿಶಂಕರನೊ ಯಾವತ್ತೂ ರಾಜಕೀಯದ ಜನರ ಸವಹಾಸಕ್ಕೆ ಬಂದವನಲ್ಲ, ಇಂಥಹ ಸಂದರ್ಪಗಳಲ್ಲಿ ಪಾಲ್ಗೊಳ್ಳುವವನೂ ಅಲ್ಲ, ಆದರೆ ಇಂದು ಸಾಹೇಬರ ಪಟ್ಟಶಿಷ್ಯ ಹುಡುಕಿಕೊಂಡು ಬಂದು ಹೇಳಿರುವಾಗ ಬರದೆ ಸುಮ್ಮನಿರಲೂ ಆಗದು ಅಂದುಕೊಂಡು ಇಲ್ಲಿಗೆ ಬಂದು ಅತ್ತ ಇತ್ತ ನೋಡುತ್ತಿದ್ದ ರವಿಗೆ ಹಿಂದಿನಿಂದ ಯಾರೊ ಹೆಗಲ ಮೇಲೆ ಕೈ ಇಟ್ಟಾಗ, ತಿರುಗಿ ನೋಡಿದ ರವಿಯನ್ನು -‘ ಬಂದ್ಬುಟ್ಟಾ ರವಣ್ಣ, ಇಲ್ಲೇನ್ಮಾಡ್ತಿದ್ಯ ಒಳಿಕ್ಬಾ ಸಾಹೇಬ್ರು ಒಳ್ಗವ್ರೆ ‘ - ಅಂತ ಕರೆದೊಯ್ದ ಗಂಗರಾಜು.
ಸಾಹೇಬರ ಸುತ್ತ ಬಹಳ ಜನ ನಿಂತಿದ್ದರು, ರವಿ ಬೋರಯ್ಯನವರನ್ನು ನೋಡಿ ವಿನಯದಿಂದ ಕೈ ಮುಗಿದ. ತಲೆ ಅಲ್ಲಾಡಿಸಿದ ಸಾಹೇಬರು ಗಂಗರಾಜುವನ್ನು ಪ್ರಶ್ನಾರ್ಥಕವಾಗಿ ನೋಡಿದರು. -‘ ಅದೆ ಸಾ ನೀವು ಹೇಳ್ಕಳಿಸಿದ್ರಲ್ಲ, ಎಸೆಲ್ಸಿನಾಗೆ ಅದೇನೊ ಶಾದ್ನೆ ಮಾಡವ್ರೆ ಬೊಮಾನ ಕೊಡ್ಬೇಕು ಕರಿ ಅಂತ,  ಈ ರವಣ್ಣನ ಮಗ್ಳೆ, ನಮ್ಕಡೆ ಓಟು‘ - ಅಂದ -‘ ಓಹೋ ಗೊತ್ತಾಯ್ತು ಗೊತ್ತಾಯ್ತು, ನೋಡಿ ರವಿ ಈ ಸರ್ತಿ ನಿಮ್ಮ ಮಗಳು ಇಡಿ ನಮ್ಮ ತಾಲ್ಲೋಕಿಗೆ ಎರಡನೆ ಸ್ಥಾನ ಪಡೆದು, ಅದರಲ್ಲೂ ನಮ್ಮೂರಿನ ಹುಡುಗಿ ನಮ್ಗೆಲ್ಲಾ ಸಂತೋಷ, ತಂದಿದ್ದಾಳೆ. ಅದಕ್ಕೆ ಒಂದು ಸನ್ಮಾನ ಇಟ್ಕೊಂಡಿದಿವಿ. ನೀವು ನಿಮ್ಮ ಮಗಳನ್ನು ಕರ್ಕೊಂಡು ನಾಳೆ ಭಾನುವಾರ ಲಯನ್ಸ್ ಭವನದ ಹತ್ರ ಬನ್ನಿ ಅಲ್ಲಿ ಸನ್ಮಾನ ಮಾಡಿ ೨೫,೦೦೦ ಸಾವಿರ ರೂಪಾಯಿ ಬಹುಮಾನ ಕೊಡೋಣ ಅಂತ ತೀರ್ಮಾನ ಮಾಡಿದ್ದೀನಿ‘ - ಅಂದ ಸಾಹೇಬ್ರು ತಮ್ಮ ಸುತ್ತಲಿದ್ದ ಜನರನ್ನು ನಗು ಮುಖದಿಂದ ನೋಡಿದರು. ಸೇರಿದ್ದ ಜನರೆಲ್ಲಾ ಜೋರಾಗಿ ಕರತಾಡನ ಮಾಡಿದರು.

ಮನೆಯ ಕಡೆ ಹೊರಟ ರವಿಗೆ ಸ್ವರ್ಗ ಮೂರೇ ಗೇಣು. ಮಗಳು ಒಳ್ಳೆಯ ಅಂಕ ಗಳಿಸಿ ತೇರ್ಗಡೆಯಾದಳು. ಇಲ್ಲೆ ಸರ್ಕಾರಿ ಕಾಲೇಜಿಗೆ ಸೇರಿಸಬೇಕೆಂದು ಹಣಹೊಂಚಲು ಯೋಚಿಸುತ್ತಿದ್ದೆ, ಈಗ ನೋಡಿದರೆ ಎಮ್ ಎಲ್ ಏ ಕರೆದು ೨೫೦೦೦ ಕೊಡ್ತಿನಿ ಅಂದಿದ್ದಾರೆ. ಕಷ್ಟನೋ ಸುಖಾನೋ ಹ್ಯಾಗಾದ್ರೂ ಮಾಡಿ ಜಿಲ್ಲಾ ಕೇಂದ್ರದ ಕಾಲೇಜಿಗೆ ಸೇರಿಸಿದ್ರೆ ಮಗಳಿಗೂ ಓದೋಕ್ಕೆ ಅನುಕೂಲ ಆಗುತ್ತೆ ಅಂತ ಖುಷಿ ಪಟ್ಟ. ಮನೆಗೆ ಬಂದವನೆ ಇಬ್ಬರಿಗೂ ವಿಷಯ ತಿಳಿಸಿ ಸಿಹಿ ಸುದ್ದಿಯನ್ನು ಅವರೊಡನೆ ಹಂಚಿಕೊಂಡ.

ಭಾನುವಾರ ಸಾಹೇಬರು ಹೇಳಿದ ಸಮಯಕ್ಕೆ ಸಭೆ ನಡೆಯುವ ಸ್ಥಳಕ್ಕೆ ಮಗಳೊಡನೆ ಹಾಜರಾದ ರವಿ, ತಾನು ಬಂದಿರುವ ವಿಷಯವನ್ನು ಅಲ್ಲೇ ತುರಾತುರಿಯಲ್ಲಿ ಸಿದ್ದತೆ ಮಾಡುತ್ತಿದ್ದ ಗಂಗರಾಜುವಿಗೆ ತಿಳಿಸಿ, ವೇದಿಕೆಯ ಮುಂದಿದ್ದ ಆಸನದಲ್ಲಿ ಮಗಳನ್ನು ಪಕ್ಕದಲ್ಲಿ ಕೂಡಿಸಿಕೊಂಡು ಕುಳಿತ.

ಹೇಳಿದ ಸಮಯಕ್ಕೆ ೨ ಗಂಟೆ ತಡವಾಗಿ, ಮಾಮೂಲಿನಂತೆ ಪ್ರಾರಂಭವಾದ ಸಮಾರಂಭದಲ್ಲಿ ಸಾಹೇಬರದು ಎಂದಿನಂತೆ ರಾಜಕೀಯದ ಭಾಷಣ. ಅಷ್ಟರಲ್ಲಿ ಗಂಗರಾಜು ವೇದಿಕೆಯ ಹಿಂದಿನಿಂದ ಸನ್ನೆ ಮಾಡಿ ಇಲ್ಲಿ ಬಾ ಎಂದು ಕರೆದ.
-‘ ರವಣ್ಣ ಸಾಹೇಬ್ರು ಹೇಳಿದ್ರು, ಈಗ ನಿನ್ನ ಮತ್ತು ಮಗಳನ್ನು ಸ್ಟೇಜ್ಗೆ ಕರ್ದು ಬೋಮಾನ ಕೊಡ್ತಾರೆ, ಇಲ್ಲೇ ಇರು ರವಣ್ಣ, ಆದ್ರೆ ಒಂದು ಯಡವಟ್ಟಾಗ್ಬುಟ್ಟೈತೆ, ನಮ್ಮ ಸಾಹೇಬ್ರು ಚೆಕ್ ಮರ್ತ್ ಬಂದ್ಬುಟ್ಟವರಂತೆ, ಅದ್ಕೆ ಈಗ ವೇದ್ಕೆಗೆ ಕರ್ದಾಗ ನಿಂಗೆ ಖಾಲಿ ಕವರ್ ಕೊಡ್ತಾರೆ, ನೀನು ಅದ್ನ ಸುಮ್ಕೆ ಅಂಗೆ ಇಸ್ಕ್ಂಡ್ ಬಂದ್ಬಿಡು, ಆಮೇಕೆ ನಾಳೆ ಆಪೀಸ್ ತವಾ ಬಾ ನಾನು ಚೆಕ್ ಎತ್ತಿಟ್ಟಿರ್ತಿನಿ‘ - ಅಂದ. ಆ ಸಮಯದಲ್ಲಿ ರವಿಶಂಕರನಿಗೆ ಏನೂ ತೋಚದೆ ಆಯ್ತು ಅಂತ ತಲೆ ಅಲ್ಲಾಡಿಸಿದ.

ಮಾರ್ನೆ ದಿನ ಸಂಜೆ ಥಿಯೇಟರ್ ಕೆಲಸ ಮುಗಿಸಿ ಸೀದ ಎಂ ಎಲ್ ಏ ಆಫ಼ೀಸ್ ಬಳಿ ಹೋದ ರವಿಶಂಕರನಿಗೆ ಗಂಗರಾಜುವಿನ ವರ್ತನೆ ವಿಚಿತ್ರವ್ವಾಗಿ ತೋರಿತು. ಸುಮಾರು ಹೊತ್ತು ಕಾದು ನಿಂತರೂ ತನ್ನನ್ನು ಗಮನಿಸೇ ಇಲ್ಲವೇನೊ ಎಂಬಂತೆ ತನ್ನ ಮೋಬೈಲ್ನಲ್ಲಿ ಮಾತನಾಡುತ್ತಿದ್ದ ಗಂಗರಾಜು. ಸ್ವಲ್ಪ ಸಮಯ ಕಳೆದು, ಅವನ ಮೊಬೈಲ್ ಸಂಭಾಷಣೆ ಮುಗಿದ ಮೇಲೆ, ರವಿಯನ್ನು ನೋಡಿ ‘ ಎನ್ ರವಣ್ಣ ಇತ್ಲಾಕಡೆ ಬಂದೆ‘-ಅಂದ. ‘ ಅದೆ ಚೆಕ್ ಕೊಡಿಸ್ತಿನಿ ಅಂದಿದ್ಯಲ್ಲ ಗಂಗರಾಜು ‘ - ‘ ಚೆಕ್ಕಾ ? ಏನ್ ರವಣ್ಣ ನೀನೂ ತಮಾಸೆ ಮಾಡ್ತಿಯ. ಸಾಹೇಬ್ರು ಜನ್ಗೋಳ್ ಎದ್ರುಗೆ ಮಾತ್ಗೆ ಅಂಗಂದ್ರೆ ನೀನು ಅದ್ನೆ ಸೀರಿಯಸ್ಸಾ ತಗೋಂಡಿದ್ಯ. ತಗ ಮಗ್ಳುನ ಕರ್ಕೋಂಡೋಗಿ ಮಶಾಲ್ ದೋಸೆ ಕೊಡ್ಸು ಅದ್ಕೂ ಕುಶಿ ಆಯ್ತದೆ‘ - ಅಂತ ನೂರು ರುಪಾಯಿ ನೋಟನ್ನು ರವಿಮುಂದೆ ಹಿಡಿದು ಹಲ್ಲು ಕಿರಿದ. ಸ್ವಾಭಿಮಾನಿ ರವಿಶಂಕರನ ಮನಸ್ಸಿಗೆ ಆಘಾತವಾಯ್ತು. ತನ್ನನ್ನು ತಾನೆ ಸಂಭಾಳಿಸಿಕೊಂಡ ರವಿಶಂಕರ ಏನೂ ಮಾತನಾಡದೆ ಅಲ್ಲಿಂದ ಹೊರಟ.
 ‘ಇದ್ಯಾಕೆ ರವಣ್ಣ ಈ ಪಾಟಿ ಕೋಪ‘- ಅನ್ನುತ್ತಿದ್ದ ಗಂಗರಾಜುವಿನ ಕಡೆ ತಿರುಗಿ ಕೂಡ ನೋಡಲಿಲ್ಲ.....

ಒಂದು ಸತ್ಯ ಘಟನೆಯನ್ನು, ಅಲ್ಲಿ ಇಲ್ಲಿ ಹೆಸರು ಬದಲಿಸಿ ತಮ್ಮ ಮುಂದೆ ಇಟ್ಟಿದ್ದೇನೆ.
ತಮ್ಮ ಅಭಿಪ್ರಾಯ ಹಾಗೂ ಸಲಹೆಗೆ ಸ್ವಾಗತ

-ರಾಮಮೋಹನ        

 

Rating
No votes yet

Comments