ಬೇಕಿದೆ ಒಳ್ಳೆಯ ಕವನ
ಬೇಕಿದೆ ಒಳ್ಳೆಯ ಕವನ
ಒಳ್ಳೊಳ್ಳೆಯ ಕವನವು ಬೇಕು
ಇಂದೊಳ್ಳೆಯ ಕವನವು ಬೇಕು ||
ಉದ್ಯಾನದಲೇ ವಿಹರಿಸುವಂಥಹ
ಕವನದ ಸೆಲೆಯೇ ಸಾಕು
ಜನಮನ ಭಾವನೆಗೊಳ್ಳೇ ತನವನು
ನೀಡುವ ಕವನವು ಬೇಕು
ಸೋಪಜ್ಞತೆ ಬೆಲೆಗೊಳ್ಳಲಿ ಜಗದಲಿ
ಹಳಸಲು ಕಾವ್ಯವು ಬೇಕೇ ?
ತೊಳಲುವ ಜನಮನಕಾಸರೆ ನೀಡದ
ಸಾಹಿತ್ಯಕೆ ಬೆಲೆಯೇಕೆ ?
ಸ್ಥಾವರ ಜಂಗಮ ಬೇಧವ ಗುರ್ತಿಸಿ
ಚೇತನವರಳಿಸಿ ಕೊಂಡವರು
ವಚನ ಸಾರವನು ಎದುರಿನ ಜನರಿಗೆ
ಬೋಧಿಸಿದರು ಗುಣ ತನವನ್ನು
ಮಲಗಿದ ಜನರನು ಬಡಿದೆಬ್ಬಿಸುವ
ಕೆಲಸವ ಮಾಡಲಿ ಕವನ
ಸುತ್ತಲ ಸಮುದಾಯದ ಅಜ್ಞಾನವ
ತೊಲಗಿಸಲಿರಲಿ ಜತನ
ಇಂದಿದೆ ನೋಡಿರಿ ಪಕ್ಷ ಪಾತದಲಿ
ಮುಳುಗಿರುವಂಥಾ ಗುಂಪು
ಗುಂಪಿಗೆ ಬ್ರಷ್ಟಾಚಾರಿಯೇ ನೇತ
ಅವನಿಗೆ ಎಲ್ಲರ ನಂಟು
ಇಂಥಹ ಜನಮತ ಗಳಿಸಿದ ಜಾಣರ
ಬಣ್ಣವ ತೋರಲಿ ಸಾಹಿತ್ಯ
ಸತ್ಯಕೆ ಋತಕೆ ಮನ್ನಣೆ ನೀಡದ
ಕವಿಗಳಿಗೇತಕೆ ಆತಿಥ್ಯ
ಅಂತರಾಳದಲಿ ಸ್ವಚ್ಚ ನಿರಂತರ
ಭಾವನೆ ಸ್ಫುಟಗೊಳ್ಳುತಲಿರಲಿ
ಎಂತೇ ಆದರು ನಿತ್ಯನಿರಂತರ
ಕಾವ್ಯವು ಹೊರಹೊರ ಬರುತಿರಲಿ
ಅದುವೇ ಒಳ್ಳೆಯ ಕಾವ್ಯಕೆ ಸ್ನೇಹದ
ಸಾಥನು ನೀಡುವ ಸಾಮರ್ಥ್ಯ
ಬೇಕಿದೆ ಅಂತಹ ಒಳ್ಳೆಯ ಕವಿತೆಯು
ನಾಡಿಗೆ ದೊರೆತರೆ ಸಾರ್ಥಕ್ಯ
- ಸದಾನಂದ