ವಿದಾಯದ ವೇಳೆಯಲ್ಲಿ
ಕವನ
ವಿದಾಯದ ವೇಳೆಯಲ್ಲಿ
ಅಂತರವಿರಲಿ ತುಸು ದೂರ ನಿಲ್ಲು ಗೆಳತಿ
ಹತ್ತಿರವಾಗುವ ಮಾತುಗಳು ಬೇಡ ನಮಗಿನ್ನು
ಬಾಡಿದೆ ನಿನಗಾಗಿ ತಂದ ಕೊನೆಯ ಹೂವು
ಕ್ಷಮಿಸು ನನ್ನಲ್ಲೇನಿಲ್ಲ ಕೊಡಲು ನಿನಗಿನ್ನು
ಮಿತಿಯಿಲ್ಲದ ಒಲವನ್ನು ಹುಗಿಸುವ ಸಮಯ
ಕಾರಣಗಳು ನೂರಿದ್ದರು ಕಣ್ಣಲ್ಲಿಲ್ಲ ನೀರು
ವಿದಾಯದ ವೇಳೆಯಲ್ಲಿ ನೋಯಿಸದಿರು ಗೆಳೆಯ
ಪ್ರೀತಿಗು ಮೊದಲು ನಾವಿಬ್ಬರು ಸ್ನೇಹಿತರು
ದಿನಗಳೆಷ್ಟೇ ಕಳೆದರು ಮಾಸುವುದಿಲ್ಲ ನೆನಪುಗಳು
ಒಂಟಿಯಾಗಿ ಇರುವಾಗೆಲ್ಲ ಕಾಡುತ್ತವೆ ನೆನ್ನೆಗಳು
ಪಾಪಿ ನಾನು ಹೋಗುವುದಿಲ್ಲ ಪ್ರಾಣ ಈಗಲೆ
ಹಣೆಬರಹದಲ್ಲಿಲ್ಲ ನನ್ನಾತ್ಮಕೆ ನೆಮ್ಮದಿಯ ನಾಳೆ
ನಮ್ಮ ಬದುಕಿನ ಏರಿಳಿತಗಳು ವಿಧಿಲಿಖಿತವಲ್ಲ
ಕರ್ತೃ ನಾವುಗಳೆ ಹೊರತು ಪರಮಾತ್ಮನಲ್ಲ
ಮಾನವಗಣದಲ್ಲಿ ಪಾಪಿಗಳಲ್ಲದವರು ಯಾರಿಲ್ಲ
ಹಳಿಯದಿರು ಗೆಳೆಯ ನಿನಗಿಂತ ಉತ್ತಮರಾರಿಲ್ಲ
ನಾಟಕೀಯತೆಯ ಗಾಳಿಗೆ ಆರಿಹೋಗಿದೆ ಗೆಳತಿ
ನನ್ನೆದೆಯಲ್ಲಿ ಬೆಳಗಿದ್ದ ಅನುರಾಗದ ಹಣತೆ
ಮೌಢ್ಯಗಳ ಸಂಸ್ಕೃತಿಯ ಮೆಚ್ಚುವವರ ನಡುವೆ
ಪರಿವರ್ತನೆಯ ನಿರೀಕ್ಷೆಯಲಿ ಕೊರಗಿದೆ ಹೃದಯ
ಗಾಯವಾದ ಮನಸ್ಸಿಗೆ ಸಾಂತ್ವನವ ಕೊಡದಿದ್ದರು
ಹೊಸಬಾಳಿಗೆ ನಾಂದಿಯಾಗಲಿ ಗೆಳೆಯ ವಿಯೋಗ
ಭವಿಷ್ಯದ ಭರವಸೆಗಳೆದುರು ದಿನವಿದು ಕ್ಷಣಿಕ
ಭಾಷೆಕೊಡು ಪರಿತಪಿಸುವುದಿಲ್ಲವೆಂದು ನನಗೀಗ
ಆಗಸವ ಚುಂಬಿಸುವ ಕನಸುಗಳ ಬದಿಗೊತ್ತಿ
ನಿನ್ನೊಲವಿನ ವಿರಹಕೆ ಸೋಲುವ ಮರುಳನಲ್ಲ
ಕ್ಷಣಕಾಲ ಹೀಗೆ ಭಾವುಕನಾಗುವೆನೆ ಹೊರತು
ಕಾದಿರುವ ವಿಸ್ಮಯಗಳ ಸವಿಯದೆ ಬಿಡುವುದಿಲ್ಲ
ನೈಜ ಘಟನೆಗಳನ್ನಾಧರಿಸಿದ ಕಾಲ್ಪನಿಕ ಕವನ
- ಪ್ರಮೋದ್ ಗೌಡ