ಸವಾಲ್-ಸಲ್ಲಾಪ
ಇಂದಿನ ದಿನಗಳಲ್ಲಿ ಯಾರನ್ನೂ ಏನೂ ಪ್ರಶ್ನಿಸುವಂತಿಲ್ಲ ಎಂಬ ಹಿರಿಯರೊಬ್ಬರ ಉದ್ಗಾರ ನನ್ನನ್ನು ಜನರೇಕೆ ಪ್ರಶ್ನೆ ಕೇಳುತ್ತಾರೆ? ಎಂಬ ಸಂಶಯ ಕೂಪಕ್ಕೆ ದೂಡಿತು. ಛೇ! ಇದೆಂತಹ ಪ್ರಶ್ನೆ ಸ್ವಾಮಿ! ವಿಷಯವೊಂದು ಸರಿಯಾಗಿ ಅರ್ಥವಾಗದಿದ್ದರೆ ಪ್ರಶ್ನಿಸುತ್ತಾರೆ ಎಂದು ಒಂದೇ ಸಾಲಿನಲ್ಲಿ ಉತ್ತರಿಸಬೇಡಿ! ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನೋಡಿ. ಹತ್ತಾರು ಉತ್ತರಗಳು ನಿಮಗೇ ಹೊಳೆಯುವುದರ ಜೊತೆಗೆ, ನೂರಾರು ಪ್ರಶ್ನೆಗಳು ಮೂಡುತ್ತವೆ!!
ಕೆಲವರು ತಿಳಿದಿದ್ದರೂ ಪ್ರಶ್ನಿಸುತ್ತಾರೆ. ದೇವಸ್ಥಾನದಲ್ಲಿ ಗುರುತಿನವರು ಕಂಡ ಕೂಡಲೇ “ಓ! ದೇವಸ್ಥಾನಕ್ಕೆ ಬಂದಿರೇನು?” ಎಂದು ಕೇಳುತ್ತಾರೆ. ಇಲ್ಲಿ ಪ್ರಶ್ನೆ ಉಭಯ ಕುಶಲೋಪರಿಗೆ ಬರೆವ ಮುನ್ನುಡಿ! ಹೀಗೆ ಪ್ರಶ್ನಿಸುತ್ತಲೇ ಆರಂಭವಾಗುವ ಮಾತುಕತೆ, ಮುಕ್ತಾಯಗೊಳ್ಳುವುದೂ ಸರಿ! ನಾನಿನ್ನು ಬರಲೇ? ಎಂಬ ಪ್ರಶ್ನೆಯೊಂದಿಗೇ!!
ನನ್ನ ಸಂಬಂಧಿಕನೊಬ್ಬ ಪ್ರಶ್ನೆ ಬೇತಾಳ ! ಆತನಿಗೆ ನೀವೇನಾದರೂ ಮಾತಿಗೆ ಸಿಕ್ಕರೆ ಸಾಕು. ನಿಮ್ಮ ಉದ್ಯೋಗ, ಸಂಬಳ, ಸೈಟು-ಮನೆ, ವಾಹನ, ಹೆಂಡತಿ-ಮಕ್ಕಳು, ಮಕ್ಕಳಶಾಲೆ-ಅದರ ಶುಲ್ಕ....ಇತ್ಯಾದಿ ವೈಯಕ್ತಿಕ ವಿಷಯಗಳ ಬಗ್ಗೆ ಸತತವಾಗಿ ಪ್ರಶ್ನಿಸುತ್ತಲೇ ಹೋಗುತ್ತಾನೆ. ನಿಮಗೆ ಉತ್ತರಿಸುವುದೊಂದನ್ನು ಬಿಟ್ಟು ಉಸಿರಾಡಲಿಕ್ಕೂ ಸಮಯಾವಕಾಶ ನೀಡುವುದಿಲ್ಲ. ಅವನು ಪ್ರಶ್ನೆಗಳ ಅಕ್ಷಯ ಪಾತ್ರೆ! ಅವನೊಂದಿಗೆ ತಾಸುಗಟ್ಟಲೆ ಮಾತನಾಡಿ, ಈತ ಇನ್ನೇನೂ ಪ್ರಶ್ನೆಗಳನ್ನು ಕೇಳಲು ಸಾಧ್ಯವೇ ಇಲ್ಲವೆಂದು ನೀವೆಂದುಕೊಳ್ಳುತ್ತಿರುವಾಗಲೇ “ಇವೇನು? ಹೊಸಚಪ್ಪಲಿಯೇ? ಎಷ್ಟು ಕೊಟ್ಟಿರಿ? ಎಲ್ಲಿ ತೆಗೆದುಕೊಂಡಿರಿ?” ಎಂದು ಇನ್ನೇನನ್ನೋ ಶುರುವಿಟ್ಟುಕೊಳ್ಳುತ್ತಾನೆ. ಆಗ ನೀವು ಈತನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ!
ಆದರೆ ಎಲ್ಲರ ಪ್ರಶ್ನೆಗಳೂ ಹೀಗೆ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುವುದಿಲ್ಲ. ದಿನಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ತಪ್ಪದೇ ಪ್ರಕಟವಾಗುವ ಪ್ರಶ್ನೋತ್ತರ ವಿಭಾಗ ನವ ದಂಪತಿಗಳ ಸರಸ-ಸಲ್ಲಾಪದಂತೆ ಮನಸ್ಸಿಗೆ ಮುದ ನೀಡುತ್ತದೆಯಾದರೂ,ಕೆಲವು ಸಂಪಾದಕರು ಈ ವಿಭಾಗವನ್ನೇ ಪತ್ರಿಕೋದ್ಯಮದ ಒಳಜಗಳ-ಕಚ್ಚಾಟಗಳಿಗೆ ವೇದಿಕೆಯನ್ನಾಗಿಸಿಕೊಳ್ಳುತ್ತಾರೆ. ಇದರಿಂದಾಗಿ ಪ್ರಶ್ನೋತ್ತರ ವಿಭಾಗದ ಆಶಯವೇ ಪ್ರಶ್ನಾರ್ಹವಾಗುತ್ತದೆಯಾದರೂ ಓದುಗನಿಗೆ ಧಾರಾಳವಾಗಿ ಪುಕ್ಕಟೆ ಮನೋರಂಜನೆ ಒದಗಿಸುತ್ತದೆ.
ಇನ್ನು ಶಾಲಾ ಕಾಲೇಜುಗಳ ತರಗತಿಗಳಲ್ಲಿ ನಡೆಯುವ ಪ್ರಶ್ನೋತ್ತರಗಳು ಬಹಳ ಸ್ವಾರಸ್ಯವಾಗಿರುತ್ತವೆ. ಇಲ್ಲಿನ ವಿಶೇಷತೆಯೆಂದರೆ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವಿನ ವರ್ಗಸಂಘರ್ಷದಲ್ಲಿ ಪ್ರಶ್ನೆಗಳನ್ನು ಸಂದರ್ಭಕ್ಕೆ ತಕ್ಕಂತೆ ಭರ್ಜಿ ಹಾಗೂ ಗುರಾಣಿಗಳಂತೆ ಉಪಯೋಗಿಸಲಾಗುತ್ತದೆ. ಗಲಾಟೆ ಮಾಡುತ್ತಿರುವ ಹುಡುಗನನ್ನು ಎದ್ದು ನಿಲ್ಲಿಸಿ. ಅಧ್ಯಾಪಕರು ವಿಷಯಕ್ಕೆ ಸಂಬಂಧಿಸಿದ ಕ್ಲಿಷ್ಟವಾದ ಪ್ರಶ್ನೆಯೊಂದನ್ನು ಕೇಳಿ ಉತ್ತರಿಸಲಾಗದೇ ತಡವರಿಸುತ್ತಿರುವುದನ್ನು ಕಂಡು, “ಇಂತಹ ಸರಳ ಪ್ರಶ್ನೆಗೂ ಉತ್ತರ ತಿಳಿದಿಲ್ಲವೇ?” ಎಂದು ಮೂದಲಿಸುವುದು, ಗಲಾಟೆ ನಿಯಂತ್ರಣಕ್ಕೆ ಉಪಯೋಗಿಸುವ ಸಾಮಾನ್ಯ ತಂತ್ರ. ಹೊಸದಾಗಿ ಬಂದಿರುವ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಪ್ರಶ್ನೆಗಳ ಸುರಿಮಳೆಯಿಂದ, ಬೆವರು ಸುರಿಸುವಂತೆ ಮಾಡುತ್ತಾರೆ. ತರಗತಿಯಲ್ಲಿ ಬುದ್ಧಿವಂತನೆಂದು ಗುರುತಿಸಿಕೊಂಡ ವಿದ್ಯಾರ್ಥಿಯು ತನ್ನ ಪಾಂಡಿತ್ಯ ಪ್ರದರ್ಶನಕ್ಕಾಗಿಯೋ, ಅಧ್ಯಾಪಕರ ಜ್ಞಾನಮಟ್ಟದ ಸತ್ವ ಪರೀಕ್ಷೆಗಾಗಿಯೋ, ಪಠ್ಯೇತರ ಪ್ರಶ್ನೆ ಕೇಳುತ್ತಾನೆ. ಇಂತಹ ಸಂದರ್ಭದಲ್ಲಿ ಅನುಭವೀ ಅಧ್ಯಾಪಕರು, ಸೂಕ್ತ ಉತ್ತರ ತಿಳಿಯದಿದ್ದರೂ, ಪ್ರಶ್ನೆಗೆ ಉತ್ತರಿಸುವಂತೆ ನಟಿಸುತ್ತಾ, ಆ ವಿದ್ಯಾರ್ಥಿಗೇ ಇನ್ನೊಂದು ಪ್ರಶ್ನೆ ಹಾಕಿ ತಬ್ಬಿಬ್ಬಾಗುವಂತೆ ಮಾಡಿ ಬಚಾವಾಗುತ್ತಾರೆ!
ನನ್ನ ಕಾಲೇಜು ದಿನಗಳಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರೊಬ್ಬರಿದ್ದರು. ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಅವರು ಸಂಶೋಧನಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ಉಪನ್ಯಾಸದ ಮಧ್ಯೆ ಕನ್ನಡ ಕವಿತೆಗಳ ಸಾಲು, ವಚನ, ದಾಸರಪದ, ಗಾದೆ, ಒಗಟು...ಇತ್ಯಾದಿಗಳನ್ನು ಧಾರಾಳವಾಗಿ ಬಳಸುತ್ತಿದ್ದರಾದರೂ ಅವರೆಂದು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸುತ್ತಿರಲಿಲ್ಲ. ನಮಗಾದರೋ ಇಂಗ್ಲೀಷ್ ಒಮ್ಮುಖ ದಾರಿಯಂತೆ ಅರ್ಥವಾಗುತ್ತಿತ್ತಾದರೂ ಇಂಗ್ಲೀಷಿನಲ್ಲೇ ಉತ್ತರಿಸಲು ಬರುತ್ತಿರಲಿಲ್ಲ. ಒಮ್ಮೆ ಅವರು ತರಗತಿಯಲ್ಲಿ ವಿಷಯವೊಂದನ್ನು ಗಂಭೀರವಾಗಿ ಮಂಡಿಸುತ್ತಿದ್ದರು. ಕೊನೆಯ ಸಾಲಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಮಾತನಾಡುತ್ತಾ ಕೀಟಲೆ ಮಾಡುತ್ತಿದ್ದ. ಕೋಪಗೊಂಡ ಪ್ರಾದ್ಯಾಪಕರು “ವಾಟ್ ದಿ ಹೆಲ್ ಆರ್ ಯೂ ಡೂಯಿಂಗ್?” ಎಂದು ಗುಡುಗಿದರು. ಆ ಮಹಾಶಯನು ನಿಧಾನವಾಗಿ ಎದ್ದು ನಿಂತು, ತರಲೆ ಧ್ವನಿಯಲ್ಲಿ “ಹೊಟ್ಟೆನೋವು ಸಾ.....'' ಎಂದು ರಾಗವಾಗಿ ಉತ್ತರಿಸಿದ. ನಾವೆಲ್ಲರೂ ಗೊಳ್ಳೆಂದು ನಕ್ಕಕೂಡಲೆ ಅವರತ್ತ ವಿಜಯದ ನಗೆ ಬೀರಿದ!!. ತಕ್ಷಣವೇ ಪ್ರಾಧ್ಯಾಪಕರು ಅವನನ್ನು ಹತ್ತಿರ ಕರೆದು, ಅವನ ಕೈಯನ್ನು ಹಿಡಿದುಕೊಂಡು ನಾಡಿಬಡಿತವನ್ನು ಪರೀಕ್ಷಿಸುವಂತೆ ನಟಿಸಿ, ಮಂದಸ್ಮಿತರಾಗಿ “ಲುಕ್ ಹಿಯರ್ ಮೈ ಡಿಯರ್ ಬಾಯ್. ಐ ಯಾಮ್ ಆಲ್ಸೋ ಎ ಡಾಕ್ಟರ್. ಐ ಸಪೋಸ್ ಯೂ ಆರ್ ಸಫ಼ರಿಂಗ್ ಫ಼್ರಮ್ ಡಯಾರಿಯಾ ಆಫ಼್ ಸ್ಪೀಕಿಂಗ್ ಅಂಡ್ ಕಾನ್ಸ್ಟಿಪೇಶನ್ ಆಫ಼್ ಥಿಂಕಿಂಗ್” ಎಂದರು. ಇಡೀ ತರಗತಿಯಲ್ಲಿ ನಗುವಿನ ಪ್ರತಿಧ್ವನಿ! ಅಂದಿನಿಂದ ಆತ ಅವರ ತರಗತಿಯಲ್ಲಿ ಎಂದೂ ಬಾಲ ಬಿಚ್ಚಲಿಲ್ಲ.
ವಿಚಾರ ಸಂಕಿರಣ, ಕಾಯರ್ಾಗಾರಗಳಂತಹ ವಿದ್ವತ್ ಸಭೆಗಳಲ್ಲಿ ಪ್ರತೀ ಉಪನ್ಯಾಸದ ಕೊನೆಯ ಹತ್ತು ನಿಮಿಷದ ಅವಧಿ ಪ್ರಶ್ನೋತ್ತರಕ್ಕೆ ಮೀಸಲಾಗಿರುತ್ತದೆ. ಕೆಲವೊಮ್ಮೆ ಉಪನ್ಯಾಸ ಎಷ್ಟು ನೀರಸವಾಗಿರುತ್ತದೆಯೆಂದರೆ ಸಭಿಕರಾರೂ ಪ್ರಶ್ನೆ ಕೇಳಿ ಮತ್ತೆ ಕೊರೆಸಿಕೊಳ್ಳುವ ತೊಂದರೆಗೆ ತಯಾರಿರುವುದಿಲ್ಲ. ಆಗ ವ್ಯವಸ್ಥಾಪಕರು ವೇದಿಕೆಯನ್ನೇರಿ ಸಭಿಕರು ದಯವಿಟ್ಟು ಪ್ರಶ್ನೆ ಕೇಳಬೇಕಾಗಿ ವಿನಂತಿ ಎಂದು ಪದೇ ಪದೇ ಗೋಗರೆಯ ತೊಡಗುತ್ತಾರೆ. ಆದಾಗ್ಯೂ ಸಭೆಯಿಂದ ಯಾವುದೇ ಪ್ರಶ್ನೆಗಳು ಬಾರದಿದ್ದಲ್ಲಿ, ತಾವೇ ಸಿದ್ಧಪಡಿಸಿಕೊಂಡ ಪ್ರಶ್ನೆಗಳನ್ನು ಕೇಳಿ ಸಭಾಮರ್ಯಾದೆ ಉಳಿಸುತ್ತಾರೆ.
ಆದರೆ ಸಭೆಯಲ್ಲಿ ಪ್ರಶ್ನಿಸುವುದಕ್ಕೆ ಜಾಣತನ ಮತ್ತು ಎದೆಗಾರಿಕೆ ಬೇಕು. ಅಸಂಬದ್ಧ ಪ್ರಶ್ನೆ ಕೇಳುವುದಕ್ಕೆ ಭಂಡತನವೂ ಬೇಕೆನ್ನಿ. ಒಂದೊಮ್ಮೆ ಸಂಗೀತ ಸಭೆಯಲ್ಲಿ ಪ್ರಸಿದ್ಧ ವಿದ್ವಾಂಸರು ಕಲ್ಯಾಣಿ ರಾಗದ ಕೃತಿಯೊಂದನ್ನು ಭರ್ಜರಿಯಾಗಿ ಹಾಡಿದರಂತೆ. ಕಲ್ಯಾಣಿ ಅವರ ಅಚ್ಚು ಮೆಚ್ಚಿನ ರಾಗಗಳಲ್ಲಿ ಒಂದಾಗಿತ್ತು. ವಿದ್ವಾಂಸರ ಕೀರ್ತಿಯನ್ನು ಕೇಳಿ ಹೇಗಾದರೂ ಅವರನ್ನು ಕಂಡು ಮಾತನಾಡಿಸಬೇಕೆಂಬ ಆಸೆಯಿಂದ ಬಂದಿದ್ದ ಯುವಕನೊಬ್ಬ, ಸಭೆ ಮುಗಿದ ನಂತರ ವಿದ್ವಾಂಸರ ಬಳಿ ಸಾರಿ “ನಿಮ್ಮ ಸಂಗೀತ ಬಹಳ ಸೊಗಸಾಗಿತ್ತು. ಆದರೆ ಇಂದೇಕೆ ನೀವು ಕಲ್ಯಾಣಿಯನ್ನು ಹಾಡಲಿಲ್ಲ?” ಎಂದನಂತೆ. ಹಾಸ್ಯ ಮನೋಭಾವದ ವಿದ್ವಾಂಸರು ಅದನ್ನು ನಾನಿನ್ನೂ ಕಲಿತಿಲ್ಲವಲ್ಲ. ಇನ್ನು ಮುಂದೆ ಕಲ್ಯಾಣಿಯನ್ನು ಕಲಿತುಕೊಂಡೇ ಕಛೇರಿಯನ್ನು ನೀಡುತ್ತೇನೆ ಎಂದರಂತೆ.
ಇತ್ತೀಚೆಗೆ ಸಾರ್ವಜನಿಕ ರಂಗದಲ್ಲಿರುವ ಪ್ರಸಿದ್ಧ ವ್ಯಕ್ತಿಗಳನ್ನು ಕರೆಸಿ, ಚರ್ಚೆ, ಸಂವಾದ, ಸಂದರ್ಶನಗಳನ್ನು ದೂರದರ್ಶನದಲ್ಲಿ ನಡೆಸಿಕೊಡುವ ಪರಿಪಾಠ ಹೆಚ್ಚಾಗುತ್ತಿದೆ. ಕೆಲವು ನಿರೂಪಕರ ಪ್ರಶ್ನೆಗಳು ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ಅತೀ ಉದ್ದವಾಗಿಯೂ, ಕಥಾ ರೂಪದಲ್ಲೂ, ಪ್ರಬಂಧ ಶೈಲಿಯಲ್ಲೂ ಇರುತ್ತವೆ. ಏನಕೇನ ಪ್ರಕಾರೇಣ ಪ್ರಸಿದ್ಧ ವ್ಯಕ್ತಿಗಳನ್ನು ಮಾತಿನ ಖೆಡ್ಡಾದಲ್ಲಿ ಕೆಡವಲು ನಿರೂಪಕ ಪ್ರಯತ್ನಿಸುತ್ತಾನೆ. ಅವರಾದರೂ ಮೈಗೆಲ್ಲಾ ಎಣ್ಣೆ ಬಳಿದುಕೊಂಡು ಅಖಾಡಕ್ಕೆ ಇಳಿದಿರುವ ನುರಿತ ಪೈಲ್ವಾನನಂತೆ ನಿರೂಪಕನ ಮಾತಿನ ಪೆಟ್ಟುಗಳಿಂದ ನುಣುಚಿಕೊಳ್ಳುತ್ತಾರೆ. ಇಂತಹ ಕಾರ್ಯಕ್ರಮವನ್ನು ವೀಕ್ಷಿಸುವಾಗ ನನಗೆ ಟಾಮ್ ಮತ್ತು ಜೆರ್ರಿ ಕಾರ್ಟೂನ್ ಚಿತ್ರ ನೆನಪಾಗುತ್ತದೆ.
ಇನ್ನು ಚಿಕ್ಕ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ಬಹು ದೊಡ್ಡ ಸವಾಲು. ಇವು ದೊಡ್ಡವರೆನಿಸಿಕೊಂಡವರ ತಾಳ್ಮೆ ಮತ್ತು ಜ್ಞಾನದ ಅಗ್ನಿ ಪರೀಕ್ಷೆಗಳು. ಬಹಳಷ್ಟು ಜನ ಈ ಪರೀಕ್ಷೆಗಳಲ್ಲಿ ಪಾಸಾಗುವುದಿಲ್ಲ! ನಾಲ್ಕು ವರ್ಷದ ನನ್ನ ಮಗನ ಪ್ರಶ್ನೆಗಳಿಗೆ ನನ್ನ ಹೆಂಡತಿ ಉತ್ತರಿಸುವ ಗೋಜಿಗೆ ಹೋಗದೇ, ಸಿಹಿ ತಿಂಡಿಯ ಲಂಚವನ್ನು ಕೊಟ್ಟು ಹೋಗಿ, ಅಪ್ಪನನ್ನು ಕೇಳು ಎಂದು ಅವನನ್ನು ಛೂ ಬಿಟ್ಟು ನನ್ನ ಮೇಲಿನ ಹಳೆಯ ಸೇಡನ್ನು ತೀರಿಸಿಕೊಳ್ಳುತ್ತಾಳೆ. ನನ್ನ ಮಗನಾದರೋ ಪಾರ್ವತಿಯ ಆದೇಶವನ್ನು ಚಾಚೂ ತಪ್ಪದೇ ಪಾಲಿಸಿದ ಬಾಲ ಗಣೇಶನಂತೆ, ತಕ್ಷಣವೇ ನನ್ನ ಮುಂದೆ ಪ್ರತ್ಯಕ್ಷನಾಗಿ ಪ್ರಶ್ನೆಗಳ ಬಾಣಗಳನ್ನು ಎಸೆಯತೊಡಗುತ್ತಾನೆ. ಒಂದು ಸಲ ಪ್ರಾಣಿಗಳ ಚಿತ್ರಗಳನ್ನು ನೋಡುತ್ತಿದ್ದವನು, ಇದ್ದಕ್ಕಿದ್ದಂತೆ “ಅಪ್ಪಾ, ನನಗೇಕೆ ಬಾಲವಿಲ್ಲ?” ಎಂದು ಗಂಭೀರವಾಗಿ ಪ್ರಶ್ನಿಸಿದ! ಸರಿಯಾದ ಉತ್ತರ ಗೊತ್ತಿಲ್ಲದ ನಾನು ಬಡಗಿಯ ಮನೆಯಲ್ಲಿದ್ದ ಮರದ ತುಂಡಿನಲ್ಲಿ ಮಂಗವೊಂದು ತನ್ನ ಬಾಲವನ್ನು ಸಿಕ್ಕಿಸಿಕೊಂಡ ಕತೆಯನ್ನು ಹೇಳಿ ಅವನ ಗಮನವನ್ನು ಬೇರೆಡೆಗೆ ಸೆಳೆದೆ!
ಮಲೆನಾಡು-ಕರಾವಳಿ ಸೀಮೆಯ ಕಡೆಗಳಲ್ಲಿ ದೈವಕ್ಕೆ ಪ್ರಶ್ನೆ ಕೇಳುವ ಕಾರ್ಯಕ್ರಮ ಬಹಳ ಜನಪ್ರಿಯ. ದೈವಸ್ಥಾನದಲ್ಲಿ ಪೂಜೆ-ಪುನಸ್ಕಾರಗಳು ಜರುಗಿ ಮಂಗಳಾರತಿಯಾಗುತ್ತಿದ್ದಂತೆಯೇ ಗಣಮಗ ಅಥವಾ ಪಾತ್ರ್ರಿಯ ಮೈಮೇಲೆ ದೈವ ಬರುತ್ತದೆ. ಆಗ ಭಕ್ತಾದಿಗಳು ಸರತಿಯಲ್ಲಿ ನಿಂತು ಭಯ-ಭಕ್ತಿಗಳಿಂದ ತಮ್ಮ ಸಾಂಸಾರಿಕ ತಾಪತ್ರಯಗಳ ಬಗ್ಗೆಯೋ, ಉದ್ಯೋಗದ ಕಷ್ಟ-ನಷ್ಟಗಳ ಕುರಿತಾಗಿಯೋ ದೈವಕ್ಕೆ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಾರೆ.
ಇತ್ತೀಚೆಗೆ ಜ್ಯೋತಿಷಿಗಳಲ್ಲಿ ಪ್ರಶ್ನೆ ಕೇಳುವುದಂತೂ ಹೈಟೆಕ್ ಆಗಿ ಬಿಟ್ಟಿದೆ. ಬೆಳಗಾದ ಕೂಡಲೇ ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ಜ್ಯೋತಿಷ್ಕರು ಹಾಜರಾಗುತ್ತಾರೆ. ವೀಕ್ಷಕರು ಸಂಚಾರಿ ದೂರವಾಣಿಯ ಮುಖಾಂತರ ತಮ್ಮ ವಿವರಗಳನ್ನು ತಿಳಿಸುತ್ತಿದ್ದಂತೆಯೇ ಸ್ಟುಡಿಯೋದಲ್ಲಿ ಕುಳಿತಿರುವ ಜ್ಯೋತಿಷಿ ಗಣಕ ಯಂತ್ರದ ಸಹಾಯದಿಂದ ಕೂಡಲೇ ಪರಿಹಾರ ಸೂಚಿಸುತ್ತಾರೆ! ಆಹಾ, ಎಂಥಾ ಚೋದ್ಯ ನೋಡಿ!! ಆಧುನಿಕ ವಿಜ್ಞಾನ ಯುಗದ ಆವಿಷ್ಕಾರಗಳಿಗೂ, ಜನರ ಮೌಢ್ಯ ಹೆಚ್ಚಿಸುವ ಸುಳ್ಳು ಜ್ಯೋತಿಷ್ಯಕ್ಕೂ ಎತ್ತಣಿದೆಂತ್ತ ಸಂಬಂಧವಯ್ಯಾ?!!!
ಉಪನಿಷತ್ತಿನ ನಚಿಕೇತ-ಯಮಧರ್ಮರಾಯನ ಸಂವಾದ, ಮಹಾಭಾರತದ ಯಕ್ಷ ಪ್ರಶ್ನೆ, ಭಗವದ್ಗೀತೆ ಮುಂತಾದವುಗಳು ಪ್ರಶ್ನೋತ್ತರ ರೂಪದಲ್ಲಿರುವ ಭಾರತೀಯ ಜೀವನ ದರ್ಶನದ ಅಪೂರ್ವ ಕಾಣ್ಕೆಗಳು. ಶ್ರೀಸಾಮಾನ್ಯ ಮಾನವೀಯತೆ-ನೈತಿಕತೆಗಳನ್ನು ರೂಢಿಸಿಕೊಂಡಾಗ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸುವ ಛಾತಿ ತನ್ನಿಂದ ತಾನೇ ಬಂದೊದಗುತ್ತದೆ. ಏನಂತೀರಿ?!