ಗುಪ್ತ ಗಾಮಿನಿ

ಗುಪ್ತ ಗಾಮಿನಿ

ಕವನ

ಇಲ್ಲ ಕಣೋ ಹುಡುಗಾ..

ಇನ್ನಷ್ಟು ದಿನ ಹೇಳುವುದಿಲ್ಲ..


ನಿನ್ನೊಲವಿನ ಬಿಸಿ ತಟ್ಟಿದರೂ, 
ನಾ ಮಾತ್ರ ಹೀಗೇ...
ಏನೂ ಗೊತ್ತಿಲ್ಲದ ಹಾಗೆ..
ಒಳಗೊಳಗೇ, 
ಮನಸಿನಂಗಳದಲ್ಲಿ,
ಎದೆಬಿಚ್ಚಿ ಮಾತಾಡುತ್ತಿರುತ್ತೇನೆ..
ಹೇಳಲೋ... ಬೇಡವೋ...

ವಕಾಲತ್ತುಗಳ ನಡುವೆ 
ಕಾದಾಡುತ್ತಿರುತ್ತೇನೆ..
ಅದೆಷ್ಟು ಆಮಿಷಗಳ ಮೆಟ್ಟಿ
ನನ್ನೊಟ್ಟಿಗಿರುತ್ತದೋ
ನಿನ್ನ ಮನ
ಕಾದು ನೋಡುತ್ತೇನೆ..

ಕಾಯಬೇಕು ಕಣೋ ಹುಡುಗಾ, 
ಕಾದಷ್ಟು...
ನಮ್ಮೊಳಗಿನ ಹುಸಿ ಬಯಲಾಗಬೇಕು,
ಭ್ರಮೆ ಬೆತ್ತಲಾಗಬೇಕು, 
ಪೊರೆ ಹರಿಯಬೇಕು..
 
ಇಲ್ಲ ಕಣೋ ಹುಡುಗಾ,
ಇನ್ನಷ್ಟು ದಿನ ಹೇಳುವುದಿಲ್ಲ..
 
ನನ್ನ ಮೌನವ ಆಲಿಸು,
ಅದು ಒಲವ ಹಾಡುತ್ತದೆ..
ಮುಗಿಲಿನಾಚೆಯ ಮಾತುಗಳ
ಪಿಸುಗುಡುತ್ತದೆ..
ನಿನ್ನ ದನಿ ಇಲ್ಲದ ಹಾಡಿಗೆ
ದನಿಗೂಡುತ್ತದೆ..
ಹನಿಗೂಡುತ್ತದೆ..
ಹಾಡತೊಡಗಿದರೊಮ್ಮೆ 
ವರ್ಷಧಾರೆಯಾಗಿ ತಂಪನೆರೆಯುತ್ತದೆ..
 
ಇಲ್ಲ ಕಣೋ ಹುಡುಗಾ, 
ಇನ್ನಷ್ಟು ದಿನ ಹೇಳುವುದಿಲ್ಲ..
 
ನಿನ್ನೊಳಗಿನ ಒಲವಿನ ಬಳ್ಳಿ ಚಿಗುರಲಿ,
ನನ್ನೊಳಗೂ ಟಿಸಿಲೊಡೆಯುತ್ತದೆ..
ಹಾದಿಗುಂಟ ಮುಳ್ಳು ಕಂಟಿಗಳ ದಾಟಿ,
ಮುಂದೊಂದು ದಿನ ಬೆಸೆಯುತ್ತದೆ..

ಅಲ್ಲಿಯವರೆಗೂ....
ನಾ ಮಾತ್ರ ಹೀಗೇ...
ಏನೂ ಗೊತ್ತಿಲ್ಲದ ಹಾಗೆ...
ಮನಸಿನಂಗಳದಲ್ಲಿ ಎದೆಬಿಚ್ಚಿ ಮಾತಾಡುತ್ತಿರುತ್ತೇನೆ...
ಹೇಳಲೋ... ಬೇಡವೋ...

Comments