ಮಹಾಭಾರತದಲ್ಲಿ ಭಾಗೀರಥಿ !
ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು ಅನೇಕಾನೇಕ.
ಆದರೆ ಈ ಲೇಖನದ ಮೂಲ ಉದ್ದೇಶ ನೀರಿನ ಬಗ್ಗೆ ತಿಳಿಸುವುದಲ್ಲ. ಮಹಾಭಾರತ’ದಲ್ಲಿ ಈ ನೀರಿನ ಪಾತ್ರದ ಬಗ್ಗೆ ಒಂದು ಸಿಂಹಾವಲೋಕನ.
----
ಎಲ್ಲಿಗೋ ಹೊರಟ ಪರಾಶರ ಮುನಿಗಳಿಗೆ ನದಿ ದಾಟಬೇಕಿರುತ್ತದೆ. ಅವರಿಗೆ ಇನ್ನೊಂದು ದಡಕ್ಕೆ ತಲುಪಿಸಲು ನೆರವಿಗೆ ಬರುವವಳು ದೋಣಿಯಲ್ಲಿ ದಡ ದಾಟಿಸುವ ಮತ್ಯ್ಸ್ಯಗಂಧಿನಿ. ದೋಣಿಯಲ್ಲಿ ಕುಳಿತ ಪರಾಶರರ ಮನಸ್ಸು ಮತ್ಯ್ಸಗಂಧಿನಿಯ ಸೌಂದರ್ಯಕ್ಕೆ ಮರುಳಾಗಿ ಚಂಚಲಗೊಳ್ಳುತ್ತದೆ. ಅವರು ಅವಳ ಸಂಗ ಬಯಸುತ್ತಾರೆ. ನೇರವಾಗಿ ಬೇಡವೆಂದರೆ ಮುನಿ ಮುನಿಯಬಹುದು ಎಂದು ಯೋಚಿಸಿ, ತನ್ನ ದೇಹದಿಂದ ಹೊರಹೊಮ್ಮುವ ಮೀನಿನ ವಾಸನೆಯ ಕಾರಣವನ್ನು ಒಡ್ಡಿ ಅವರನ್ನು ದೂರವಿಡಲು ಯತ್ನಿಸುತ್ತಾಳೆ. ಪರಾಶರರು ತಮ್ಮ ದಿವ್ಯಶಕ್ತಿಯಿಂದ ಮಂತ್ರಿಸಿದ ನೀರನ್ನು ಅವಳ ಮೇಲೆ ಪ್ರೋಕ್ಷಣೆ ಮಾಡಿದೊಡನೆ ಮೀನಿನ ವಾಸನೆ ದೂರಾಗಿ ಸುಗಂಧಿನಿಯಾಗುತ್ತಾಳೆ. ನಂತರ ಆಕೆ ಸುತ್ತಲಿರುವ ಜನರ ನೆಪ ಒಡ್ಡುತ್ತಾಳೆ. ಮೋಹಕ್ಕೆ ಬಿದ್ದ ಪರಾಶರರು ಸಮೀಪದ ದ್ವೀಪ ಒಂದರ ಮೇಲೆ ಹಿಮದ ಪೊರೆಯಂತಹ ವಾತಾವರಣ ಸೃಷ್ಟಿ ಮಾಡುತ್ತಾರೆ. ಇವರ ಸಂಬಂಧದಿಂದ, ಕಪ್ಪು ಬಣ್ಣದವನಾಗಿ ದ್ವೀಪದ ಮೇಲೆ ಹುಟ್ಟಿದ ಆ ಮಗುವೇ ’ಕೃಷ್ಣ ದ್ವೈಪಾಯನ’. ಮುಂದೆ ’ವೇದವ್ಯಾಸ’ ಮಹರ್ಷಿ ಎಂದು ಹೆಸರುವಾಸಿಯಾದ.
ಮಹಾಭಾರತದ ಹುಟ್ಟಿಗೆ ನೀರು ಪರೋಕ್ಷವಾಗಿಯೇ ಕಾರಣವಾಯಿತೇ?
----------
ಶಂತನು ಮಹಾರಾಜ ಗಂಗಾನದೀ ತೀರದಲ್ಲೊಮ್ಮೆ ವಿಹರಿಸುವಾಗ, ಸುಂದರ ಯುವತಿಯನ್ನು ನೋಡಿ, ಮೋಹಗೊಂಡು ಮದುವೆಯಾಗ ಬಯಸುತ್ತಾನೆ. ಆ ಯುವತಿ, ಶಾಪಗ್ರಸ್ತಳಾಗಿ ಭೂಮಿಗೆ ಬಂದಿದ್ದ ಸಾಕ್ಷಾತ್ ಗಂಗೆ.... ಅವನ ಕೋರಿಕೆಗೆ ಗಂಗೆ ಒಪ್ಪುತ್ತಾಳೆ ಮತ್ತು ತಾನೇನು ಮಾಡಿದರೂ ಅದನ್ನು ಪ್ರಶ್ನಿಸಬಾರದು ಎಂಬ ಶರತ್ತಿಗೆ ಒಪ್ಪಿದಲ್ಲಿ ಮಾತ್ರ ಈ ಮದುವೆ ಎಂದು ನಿಬಂಧನೆ ವಿಧಿಸುತ್ತಾಳೆ. ಮೋಹಕ್ಕೆ ಬಿದ್ದ ಮನವು ಬೇರೇನನ್ನೂ ಯೋಚಿಸಲು ಸಿದ್ದವಿರಲಿಲ್ಲ. ಶಂತನು ಸರಿ ಎಂದು ತಕ್ಷಣವೇ ಒಪ್ಪಿಕೊಂಡ.
ಗಂಗೆಯು ನೀರೂ ಹೌದು ... ನೀರೆಯೂ ಹೌದು .... ಶಂತನು ಮಹಾರಾಜ ನೀರಿಗೆ ಬಿದ್ದ .... ನೀರೆಗೆ ಸೋತ.... ಶಾಪಗ್ರಸ್ತ ಅಷ್ಟ ವಸುಗಳಲ್ಲಿ, ಏಳು ಜನರಿಗೆ ಹುಟ್ಟಿದಾಕ್ಷಣ ಮುಕ್ತಿ ದೊರೆಯಿತು. ಅಷ್ಟಮ ವಸು ತನ್ನ ಶಾಪವಿಮೋಚನೆಗಾಗಿ ದೀರ್ಘಕಾಲ ಉಳಿಯಬೇಕಾಯಿತು. ಅವನೇ ಮಹಾಭಾರತದ ಆಧಾರಸ್ಥಂಬ, ದೇವವ್ರತ.
-----
ದೂರ್ವಾಸರ ಸೇವೆಯನ್ನು ಮಾಡಿ ಅವರಿಂದ ಐದು ವರಗಳನ್ನು ಪಡೆದು ಪುನೀತಳಾದಳು ಕುಂತಿ. ವಯಸ್ಸಿಗನುಗುಣವಾಗಿ ಬಂದ ತುಂಟತನ ಪ್ರಮಾದವನ್ನೇ ಮಾಡಿತು. ವರವನ್ನು ಪರೀಕ್ಷಿಸಿ ನೋಡುವ ಮನಸ್ಸುಳ್ಳವಳಾಗಿ, ಯಾರೂ ಇಲ್ಲದ ಸ್ಥಳ ಹುಡುಕುತ್ತ, ನದೀ ತೀರಕ್ಕೆ ಹೋದಳು. ಮುಂಜಾನೆಯ ಕೆಂಪು ಸೂರ್ಯನ ಕಂಡು, ಮೊದಲ ವರವನ್ನು ಅವನ ಮೇಲೆ ಪ್ರಯೋಗ ಮಾಡಿಯೇಬಿಟ್ಟಳು. ಜಗತ್ತಿಗೆ ಬೆಳಕನ್ನು ನೀಡುವ ದೈವನ ಮಗನ ಭವಿಷ್ಯ ಕತ್ತಲಲ್ಲಿ ಮುಳುಗಲು ನಾಂದಿಯಾಗಿತ್ತು... ಇರಲಿ, ಆಗಿದ್ದೇನು ? ಸೂರ್ಯನು ’ವರ’ ನಾಗಿ ಕುಂತಿಯನ್ನು ’ವರಿಸಿ’ ’ವರ’ಪ್ರದಾನ ರೂಪದಿ ಮಗುವನ್ನು ಕೈಯಲ್ಲಿಟ್ಟು ಹೊರಟೇಬಿಟ್ಟ !!
ಇದರಲ್ಲಿ ಮಗುವಿನ ತಪ್ಪೇನು? ಏನೂ ಇಲ್ಲ. ಆದರೂ ಮಗು ನೀರಿನ ಪಾಲಾಯ್ತು... ನೀರನ್ನೇ ನಂಬಿ ಬದುಕಿದವರ ಪಾಲಾಯ್ತು... ಕ್ಷತ್ರಿಯನಾಗಿ ಕೌಂತೇಯನಾಗಿ ಮೆರೆಯಬೇಕಾಗಿದ್ದವನು ಕೀಳು ಜಾತಿಯವನೆಂಬ ಪಟ್ಟ ಹೊತ್ತು ರಾಧೇಯನಾದ.
ನದಿಯ ನೀರು ಮಗುವನ್ನು ಉಳಿಸಿ ಪುಣ್ಯಕಟ್ಟಿಕೊಂಡಿತೋ? ಇಲ್ಲಾ ಮಗುವನ್ನು ಬೆಸ್ತರ ಕೈ ಸೇರುವಂತೆ ಮಾಡಿ ದುರಂತ ನಾಯಕನ ಜೀವನಕ್ಕೆ ನಾಂದಿಯಾಯಿತೋ?
---------------
ಶಾಪಗ್ರಸ್ತನಾದ ಪಾಂಡು ಮಹಾರಾಜ ತನ್ನಿಬ್ಬರು ಪತ್ನಿಯರು ಮತ್ತು ಮಕ್ಕಳೊಡನೆ ವನವಾಸಕ್ಕೆ ತೆರಳಿದ. ಒಮ್ಮೆ ಕುಂತಿ ಮತ್ತು ಮಕ್ಕಳು ಇಲ್ಲದ ಸಮಯದಲ್ಲಿ, ಜಲಪಾತದ ಅಡಿಯಲ್ಲಿ ಸ್ನಾನ ಮಾಡುತ್ತಿದ್ದ ಕಿರಿಯ ಪತ್ನಿ ಮಾದ್ರಿಯನ್ನು ಕಂಡು ಅವನ ಮನಸ್ಸು ಚಂಚಲಗೊಳ್ಳುತ್ತದೆ. ಭೋಗಿಸುವ ಮನಸ್ಸುಳ್ಳವನಾಗಿ ಮುಂದುವರೆಯಲು, ಶಾಪದ ಪ್ರಭಾವದಿಂದ ಸಾವನ್ನಪ್ಪುತ್ತಾನೆ.
ಮಾದ್ರಿಯ ಸೌಂದರ್ಯವನ್ನು ಉಜ್ವಲವಾಗಿ ತೋರುತ್ತ ಆ ಜಲಪಾತ ಸಾವಿಗೂ ಕಾರಣವಾಯಿತೇ?
---------------
ಚಿಕ್ಕ ವಯಸ್ಸಿನಿಂದಲೇ ಪಾಂಡವರನ್ನು ದ್ವೇಷಿಸುತ್ತಲೇ ಬಂದ ದುರ್ಯೋಧನ. ಅದರಲ್ಲೂ ಭೀಮ’ನೆಂದರೆ ನರನರಗಳಲ್ಲೂ ದ್ವೇಷ. ಭೀಮನನ್ನು ಕೊಂದೇ ಬಿಡಬೇಕೆಂದು ನಿರ್ಧರಿಸಿ, ಒಮ್ಮೆ ಎಲ್ಲರೂ ಕಲೆತು ಆಡುವ ಸಮಯದಲ್ಲಿ ಭೀಮನ ಮೇಲೆ ಅತೀ ವಿಶ್ವಾಸ ತೋರಿ, ಅವನಿಗೆ ವಿಷದ ಲಡ್ಡುಗೆಗಳನ್ನು ತಿನ್ನಿಸಿ, ನಂತರ ಕೈ-ಕಾಲುಗಳನ್ನು ಕಟ್ಟಿ ಹಾಕಿ ಗಂಗಾ ನದಿಯಲ್ಲಿ ನೂಕುತ್ತಾನೆ. ಅವನ ದುರಾದೃಶ್ಟಕ್ಕೆ, ಅದರಿಂದ ಏನೂ ಕೆಡುಕಾಗದೆ ಇನ್ನೂ ಒಳಿತೇ ಆಯಿತು. ಪಾತಾಳ ಲೋಕ ತಲುಪಿದ ಭೀಮಸೇನ, ಸಹಸ್ರ ಆನೆ ಬಲ ಹೊಂದಿ ವಾಪಸ್ಸಾದ.
ಮುಂದಿನ ದಿನಗಳಿಗೆ ಭೀಮನನ್ನು ಸಿದ್ದಪಡಿಸಿತ್ತೇ ಗಂಗಾ ನದಿ?
--------------
ಜಿಂಕೆಯೊಂದು ಬ್ರಾಹ್ಮಣನ ಅರಣಿಯನ್ನು ಹೊತ್ತುಕೊಂಡು ಹೋಗಿರುತ್ತದೆ. ಅವನ ನೆರವಿಗೆ ಸಿದ್ದರಾಗಿ, ಪಾಂಡವರು ಜಿಂಕೆಯನ್ನು ಹುಡುಕಿಕೊಂಡು ಹೋಗುತ್ತಾರೆ. ಎಷ್ಟೇ ಅಲೆದರೂ ಜಿಂಕೆ ಕಾಣುವುದೇ ಇಲ್ಲ. ಎಲ್ಲರಿಗೂ ಆಯಾಸವಾಗಿರುತ್ತದೆ. ಮರವನ್ನೇರಿದ ಸಹದೇವನಿಗೆ ಸಮೀಪದಲ್ಲೇ ಕೊಳವೊಂದು ಕಂಡು ಬರುತ್ತದೆ. ಮರದಿಂದಿಳಿದು ಕೊಳದ ಬಳಿ ಸಾಗುತ್ತಾನೆ.
ಆ ಕೊಳ ಒಂದು ಬಕನಿಗೆ ಸೇರಿದ್ದು. ಬಕನ ಆಣತಿ ಇಲ್ಲದೆ ನೀರನ್ನು ಕುಡಿಯುವಂತಿಲ್ಲ. ಹಾಗೆ ಕುಡಿದಲ್ಲಿ ಮರಣ ಖಚಿತ. ಒಂದೆಡೆ ದಾಹ ಮತ್ತೊಂದೆಡೆ ಅಹಂ. ಕೇವಲ ’ಬಕ’ನ ಮಾತಿಗೆ ವೀರ ಪಾಂಡವ ಹೆದರುವುದೇ ಎಂಬ ಅಹಂಕಾರದಿಂದ ಸಹದೇವನಿಂದ ಹಿಡಿದು ಭೀಮಸೇನನವರೆಗೂ ಎಲ್ಲರೂ ನೀರನ್ನು ಕುಡಿದು ಕುಸಿಯುತ್ತಾರೆ.
ಕಡೆಗೆ ಧರ್ಮರಾಯ ಸ್ವತಹ ತಾನೇ ಹೊರಟು ಬಂದು, ತನ್ನ ನಾಲ್ವರು ಸಹೋದರರೂ ಸಾವನ್ನಪ್ಪಿರುವುದ ಕಂಡು ಮೂಕನಾಗುತ್ತಾನೆ. ನೀರು ಕುಡಿಯಲು ಹೋದವನಿಗೆ ಬಕ ಎಚ್ಚರಿಸುತ್ತದೆ. ವಿವೇಕವೇ ಮೂರ್ತಿವೆತ್ತ ಧರ್ಮರಾಯ, ಸಮಾಧಾನದಿಂದ ಬಕನ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತಾನೆ.
ಬಕನ ರೂಪದಲ್ಲಿದ್ದ ಯಕ್ಷನು ಪ್ರೀತನಾಗಿ ಯಾರಾದರೂ ಒಬ್ಬನನ್ನು ಬದುಕಿಸುತ್ತೇನೆ, ಆಯ್ಕೆ ನಿನ್ನದೇ ಎನ್ನುತ್ತಾನೆ. ಧರ್ಮರಾಯನು "ಕುಂತಿಯ ಹಿರಿಯ ಪುತ್ರನಾಗಿ ನಾನಿದ್ದೇನೆ, ಮಾದ್ರಿಯ ಹಿರಿಯ ಪುತ್ರನಾಗಿ ನಕುಲ ಬದುಕುಳಿಯಲಿ" ಎನ್ನುತ್ತಾನೆ. ಪ್ರಸನ್ನನಾದ ಯಕ್ಷ ಎಲ್ಲರನ್ನೂ ಅದುಕಿಸುತ್ತಾನೆ. ಧರ್ಮ ಇಲ್ಲದೆ ಇದ್ದರೆ ಶಕ್ತಿ ಇದ್ದಾದರೂ ಏನು ಪ್ರಯೋಜನ ಅಲ್ಲವೇ.
ಧರ್ಮರಾಯನ ವಿವೇಕವನ್ನು ಎತ್ತಿ ಹಿಡಿದ ಯಕ್ಷ ಪ್ರಶ್ನೆಯು ನೀರಿನ ಬಳಿಯೇ ಆಯಿತಲ್ಲವೇ?
----------
ಇಂದ್ರಪ್ರಸ್ತದ ವೈಭವ, ಯುಧಿಷ್ಟಿರನ ರಾಜ್ಯವಾಳುವ ಪರಿ, ಪಾಂಡವರ ಪ್ರಗತಿ ಇತ್ಯಾದಿ ದುರ್ಯೋಧನನ ಹೊಟ್ಟೆ ಕಿಚ್ಚಿನ ಕಾವನ್ನು ಏರಿಸಿತ್ತು. ಸ್ವಯಂ ತಾನೇ ಒಂದು ಬಾರಿ ಅರಮನೆಯನ್ನು ನೋಡಿ ಬರುವ ಇರಾದೆಯಿಂದ ಅಲ್ಲಿಗೆ ಹೋಗುತ್ತಾನೆ. ಅಲ್ಲಿನ ಮಾಯಾನಗರಿಯನ್ನು ಕಂಡು ಅವನ ಮನ ಮೂಕಾಗುತ್ತದೆ. ನೀರಿರುವುದೆಂಬ ಭ್ರಮೆಯಿಂದ ನಿಧಾನವಾಗಿ ನೆಡೆದವನಿಗೆ ಅದು ಕೇವಲ ನೆಲ ಎಂದರಿವಾಗುತ್ತದೆ. ಆದರೆ ನೆಲ ಎಂದು ಬಿಮ್ಮನೆ ನೆಡೆದವನು ನೀರಲ್ಲಿ ಬೀಳುತ್ತಾನೆ. ಇದನ್ನು ಕಂಡ ದ್ರೌಪದಿ ಮತ್ತು ಸಖಿಯರು ನಕ್ಕರು. ಆಗ ದ್ರೌಪದಿ ನುಡಿದ ಅವಹೇಳನಕಾರಿ ನುಡಿಗಳು ದುರ್ಯೋಧನನ ಜೀವಮಾನದಲ್ಲೇ ನೆಡೆದ ಅತಿ ಲಜ್ಜಿತ ಕ್ಷಣವಾಗಿತ್ತು. ನೀರಿನಲ್ಲಿ ಬಿದ್ದ ಪ್ರಸಂಗವೇ ಕುರುಕ್ಷೇತ್ರ ಯುದ್ದಕ್ಕೆ ನಾಂದಿಯಾಯಿತು.
ನೀರು ಪರೋಕ್ಷವಾಗಿ ಕಾರಣವಾಯಿತು !!!
==========
ಶಿಖಂಡಿಯ ಪ್ರವೇಶದಿಂದಾಗಿ ಭೀಷ್ಮ ಶಸ್ತ್ರಾಸ್ತ್ರಗಳನ್ನು ಚೆಲ್ಲುತ್ತಾನೆ. ಎಲ್ಲೆಡೆಯಿಂದ ಬಂದ ಬಾಣಗಳಿಂದಾಗಿ ಜರ್ಜರಿತನಾಗಿ ಕೆಳಕ್ಕೆ ಉರುಳುತ್ತಾನೆ. ಬಾಣಗಳಿಂದ ಪೆಟ್ಟು ತಿಂದವನಿಗೆ ಅತ್ಯಂತ ಮೃದುವಾದ ಹಾಸಿಗೆ ತರಿಸುತ್ತಾನೆ ದುರ್ಯೋಧನ, ಆದರೆ ಅರ್ಜುನ ನಿರ್ಮಿತ ಬಾನಗಳ ಹಾಸಿಗೆಯೇ ಭೀಷ್ಮನಿಗೆ ಪ್ರಿಯವಾಗುತ್ತದೆ. ಬಾಯಾರಿದವನಿಗೆ ಪನ್ನೀರು ತರಿಸುತ್ತಾನೆ ದುರ್ಯೋಧನ. ಭೀಷ್ಮನಿಗೆ ಅದೂ ಸರಿ ಬರುವುದಿಲ್ಲ. ಅರ್ಜುನನು ಭೂಮಿಗೆ ಬಿಟ್ಟ ಬಾಣಕ್ಕೆ ತಾಯಿ ಗಂಗೆ ಬಂದು ತನ್ನ ಕಂದನಿಗೆ ನೀರು ಕುಡಿಸುತ್ತಾಳೆ. ಬಾಲ್ಯದಲ್ಲಿ ಹಾಲೂಡಿಸಿದ್ದಳೋ ಇಲ್ಲವೋ ಆದರೆ ಸಾವಿನ ಸಮಯದಿ ನೀರುಣಿಸಿದಳು.
ಮತ್ತೊಂದು ಪ್ರಸಂಗದಲ್ಲಿ ನೀರಿನ ಮಹತ್ವ ಎದ್ದು ಕಾಣುತ್ತದೆ.
------
ಕರ್ಣ ಗಂಗಾ ನದೀ ತೀರದಲ್ಲಿ ಸೂರ್ಯ ವಂದನೆ ಮಾಡುವ ಹೊತ್ತಿನಲ್ಲಿ, ಕುಂತಿ ತಾನು ಅವನ ತಾಯಿ ಎಂದು ಪ್ರಕಟಿಸುತ್ತಾಳೆ. ಆ ವೇಲೆಗೆ ಕರ್ಣನಿಗೆ, ಕೃಷ್ಣನಿಂದ ಈ ವಿಷಯ ಆಗಲೇ ತಿಳಿದಿರುತ್ತದೆ. ಯಾವ ರೀತಿ ಹೇಳಿದರೂ ಪಾಂಡವ ಪಕ್ಷ ಸೇರಲು ಒಪ್ಪದ ಕರ್ಣನಿಂದ ಮಕ್ಕಳ ಪ್ರಾಣ ಭಿಕ್ಷೆ ಕೋರುತ್ತಾಳೆ. ಅರ್ಜುನನ ಹೊರತು ಬೇರಾರನ್ನೂ ಕೊಲ್ಲುವುದಿಲ್ಲವೆಂಬ ವಾಗ್ದಾನ ಮಾಡುತ್ತಾನೆ ಮಹಾರಥಿ ಕರ್ಣ.
ವಿಧಿವಿಪರೀತದ ಮೂಕ ಸಾಕ್ಷಿ ಗಂಗಾ ನದಿಯ ನೀರು.
------
ತನ್ನವರನ್ನೆಲ್ಲ ಕಳೆದುಕೊಂಡು ಯುದ್ದರಂಗದಿಂದ ಓಡಿಹೋಗುತ್ತಾನೆ ದುರ್ಯೋಧನ. ಎಲ್ಲೆಲ್ಲೋ ಅಲೆಯುತ್ತಿದ್ದವನಿಗೆ ಕಂಡಿದ್ದು ಪ್ರಶಾಂತವಾದ ದ್ವೈಪಾಯನ’ವೆಂಬ ಕೊಳ. ಜಲಸ್ಥಂಬನ ವಿದ್ಯೆ ಅರಿತಿದ್ದ ದುರ್ಯೋಧನ ನೀರಿನೊಳಗೆ ಹೊಕ್ಕು ಅಡಗಿ ಕುಳಿತುಕೊಳ್ಳುತ್ತಾನೆ. ಬೇಟೆಗಾರರು ತಂದ ಸುದ್ದಿಯಿಂದ ದುರ್ಯೋಧನನ ಅಡಗು ತಾಣ ಕಂಡು ಹಿಡಿದು, ಅವನನ್ನು ಈಚೆ ಬರುವಂತೆ ಮಾಡಿ, ಯುದ್ದಕ್ಕೆ ಆಹ್ವಾನವಿತ್ತು, ಕೊನೆಗೆ ಅವನ ಅಂತ್ಯವನ್ನೂ ಕಾಣಿಸುತ್ತಾರೆ.
ಹೇಡಿಯಂತೆ ಅಡಗಿದ್ದವನನ್ನು ಹೊರ ನೂಕಿ ವೀರ ಮರಣ ಪಡೆಯುವಂತೆ ಮಾಡಿತೇ ದ್ವೈಪಾಯನದ ನೀರು?
-------
ಹೆಚ್ಚುವರಿ ಘಟನೆಗಳಲ್ಲಿ ಭಾಗೀರಥಿಯೇ ಕಂಡು ಬಂದರು, ಶೀರ್ಷಿಕೆಯಲ್ಲಿ ನೀರನ್ನು ಸಾಂಕೇತಿಕವಾಗಿ ಭಾಗೀರಥಿ ಎಂದು ಕರೆದಿದ್ದೇನೆ.
Comments
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by Jayanth Ramachar
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by partha1059
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by PK
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by manju787
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by bhalle
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by manju787
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by ಮಧು ಅಪ್ಪೆಕೆರೆ
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by ಗಣೇಶ
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by ಭಾಗ್ವತ
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by Chikku123
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by gopinatha
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by chiruvijay
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by kavinagaraj
ಉ: ಮಹಾಭಾರತದಲ್ಲಿ ಭಾಗೀರಥಿ !
ಉ: ಮಹಾಭಾರತದಲ್ಲಿ ಭಾಗೀರಥಿ !
In reply to ಉ: ಮಹಾಭಾರತದಲ್ಲಿ ಭಾಗೀರಥಿ ! by nagarathnavina…
ಉ: ಮಹಾಭಾರತದಲ್ಲಿ ಭಾಗೀರಥಿ !