ಶೀನ, ಕನ್ನಂತರು ಹಾಗೂ ಹಂಸಾ ನಂದಿಯವರ ಹಂಸನಾದದ ಬಿಡುಗಡೆ

ಶೀನ, ಕನ್ನಂತರು ಹಾಗೂ ಹಂಸಾ ನಂದಿಯವರ ಹಂಸನಾದದ ಬಿಡುಗಡೆ

ಬೆಳಗಿನ ಬೆಂಗಳೂರಿನ ಚಳಿಯ ಹಿನ್ನೆಲೆಯಲ್ಲಿ ಮನದನ್ನೆ ಕೊಟ್ಟ ಮನೆಯಲ್ಲಲ್ಲದೇ ಬೇರೆಲ್ಲೂ ಸಿಗದ ಸೊಗಸಾದ ಕಾಫಿಯನ್ನು ಗುಟುಕರಿಸುತ್ತಿದ್ದೆ. ನಿನ್ನೆಯ ಕುವೆಂಪುರವರ ಉದಯರವಿ ದರ್ಶನಮ್ ನ ಅಭ್ಯಾಸದ ಗುಂಗಿನಲ್ಲಿ ಪ್ರಭು ಶಂಕರರವರು ತಮ್ಮ ಮರೆವಿನ ಪ್ರಸಂಗವನ್ನು ತನ್ನ ಮೇಲೆಯೇ ಹಾಸ್ಯ ಮಾಡಿಕೊಂಡು ನಗುವುದನ್ನು ನೆನಪಿಸಿಕೊಂಡು.


ಬೆಳಿಗ್ಗೆಯೇ ಅವರನ್ನು ಮನೆಯವರು ಜ್ಞಾಪಿಸಿದರಂತೆ. ಇವತ್ತು ನಿಮಗೆ ಒಂದು ಕಾರ್ಯಕ್ರಮವಿದೆ,ಎಚ್ಚೆಸ್ವೀಯವರೂ ನರಹಳ್ಳಿಯವರೂ ಬರ್ತಾರೆ, ಅಂತ ಇಲ್ಲ ನನಗೆಲ್ಲ್ಯೂ ಹೋಗಲಿಕ್ಕಿಲ್ಲ ಎಂದರಂತೆ ಇವರು.ಇಲ್ಲ ನಿಮಗೊಂದು ಕಾರ್ಯಕ್ರಮವಿದೆ ಅವರೇ ಬಂದು ನಿಮಗೆ ಕಾಯುತ್ತಿದ್ದಾರೆ ಹೊರಗೆ ಎಂದು ಇನ್ನೊಮ್ಮೆ ಜ್ಞಾಪಿಸಿದರಂತೆ. ನನ್ನ ಪ್ರಕಾರ ಏನೂ ಇಲ್ಲ ಆದರೂ ಬಂದವರು ಯಾರು ಎಂದು ನೋಡಲು ಹೊರಗೆ ಬಂದರೆ ಶ್ರೀಯುತ ಮಹೇಶರು ಕಂಡರು.( ಇವರ ಮನೆಯಲ್ಲೇ ಮೊನ್ನೆಯ ಅಭ್ಯಾಸ ಆಗಿದ್ದುದು,) ಆಗ ನೆನಪಾಯಿತಂತೆ ಹೌದು ಅಂತ. ಹೀಗೆ ತನ್ನ ಮರೆಗುಳಿತನ ತನಗೇನೂ ತೊಂದರೆ ಕೊಡೋದಿಲ್ಲ ತೊಂದರೆಯೆಲ್ಲ ಉಳಿದವರಿಗೆ ಎಂದು ಹೇಳಿ ನಕ್ಕಿದ್ದರು.
ಏನೂ ಇದೂ ಶುರುವಾಯ್ತಾ ಏನು ಒಬ್ಬರೇ ನಗಾಡ್ತಾ ಇದ್ದೀರಲ್ಲಾ, ಕಾಫಿಯಲ್ಲಿ ನನಗೂ ಪಾಲು ಉಳಿದಿದೆಯಾ ಅಥವಾ ಅದೂ ನೈವೇಧ್ಯವಾ? ಎನ್ನುತ್ತಾ ಬಂದಳು ಮಡದಿ.


ಆಗಲೇ "ಗೋಪು ಇದ್ದಾನಾ ಅತ್ತಿಗೇ" ಸ್ವರ ಕೇಳಿತು ಹೊರಗಿನಿಂದ.
ನನ್ನನ್ನು ಗೋಪೂ ಅಂತ ಕರೆಯುವ ಒಂದೇ ಒಂದು ಈ ಪ್ರಪಂಚದಲ್ಲಿ ಉಳಿದ ಪ್ರಾಣಿ ಎಂದರೆ ಶೀನ, ನನ್ನ ಬಾಲ್ಯದ ಗೆಳೆಯ.
"ಏನಪ್ಪಾ ಬಾ, ಬಹಳ ಸಮಯದ ಬಳಿಕ ಬಂದೆಯಲ್ಲಾ, ನಮ್ಮನ್ನೆಲ್ಲಾ ಮರೆತ ಹಾಗಿದೆ" ಎಂದೆ  
ಪ್ಯಾಟೀ ಭಾಷಿ ಬ್ಯಾಡ, ಎಂತ ಮರಾಯಾ ನೆನ್ಪ್ ಹೋದ್ದ್ ನಂಗಾ ನಿಂಗಾ.?( ಪೇಟೆ ಭಾಷೆ ಬೇಡ ಯಾಕೆ ಮರೆತದ್ದು ನಾನೋ ನೀನೋ)
ಯಾಕಾ?
ಅಲ್ಲ ಸಂಪದಕ್ಕೂ ಬತ್ತಿಲ್ಲ್ಯಂಬ್ರಲ್ಲೆ, ಎಲ್ಲಿದ್ದೆ ? (ಸಂಪದಕ್ಕೂ ಬರುವುದಿಲ್ಲವಂತೆ )
ಇಲ್ಯಾ ಕೆಲ್ಸ ಜಾಸ್ತಿಯಾಯ್ತಾ ಈಗ, ಪ್ರಮೋಶನ್ ಅಂದೇಳಿ ಜಾಸ್ತಿ ಕೆಲ್ಸ ಮಾಡ್ಕಾತ್ತ್ ಕಣ್.ಮತ್ತೇನ್ ನಮ್ಕಡಿ ಬಂದ  ವಿಷ್ಯ ಏನಾರೂ ಗಮ್ಮತ್ ಇತ್ತಾ?
(ಅಲ್ಲಲ್ಲ, ಕೆಲ್ಸ ಈಗ ಜಾಸ್ತಿಯಾಗಿದೆ; ಪ್ರಮೋಷನ್ ನಿಂದಾಗಿ ಜಾಸ್ತಿ ಕೆಲಸ ಮಾಡಬೇಕಾಗಿದೆ ಕಣೋ, ಮತ್ತೆ ಈ ಕಡೆ ಬಂದ ವಿಷಯ ಏನು?)
ಅಲ್ದಾನಾ  ಗಣೇಶರ್ ರಾತ್ರಿಗ್ ಮಾತ್ರ  ಆದ್ರೂ ಸಂಪದಕ್ಕ್ ಬತ್ರಲ್ಲೆ ನೀನ್ ಅಷ್ಟು ಇಲ್ಯಲ ಮರಾಯಾ? ಅಂಧಾಂಗೇ ಇನ್ನೊಂದ್ ವಿಶ್ಯ , ಹೌದಾ,ನಮ್ಮ ಕನ್ನಂತರ್ ಇಲ್ಲಿದ್ರಂಬ್ರಲೆ?
(ಅಲ್ಲವೋ ಗಣೇಶರು ರಾತ್ರೆಗೆ ಮಾತ್ರವಾದರೂ ಬರುತ್ತಿದ್ದಾರೆ, ಸಂಪದಕ್ಕೆನೀನೂ ಅಷ್ಟೂ ಸಹಾ ಬರುತ್ತಿಲ್ಲವಲ್ಲ, ಅಂದ ಹಾಗೇ ಕನ್ನಂತರು ಇಲ್ಲೇ ಇದ್ದರಂತಲ್ಲಾ?)
ಯಾವ ಕನ್ನಂತರ್ ಮರಾಯಾ, ( ಯಾವ ಕನ್ನಂತರೂ?)
ಅದೇ ಬರೆಗುಂಡಿ ಬದಿಯರ್, ಕಮ್ರಶಿಲಿ ಕನ್ನಂತರ್ ಮರ್ರಾಯಾ, ಅದೇ ಮೆಣ್ಸ್ ನುರ್ಧಾಂಗಾರೆ ಅಂಥೇಳಿ ಪದ್ಯ ಬರ್ದ್ರಲೆ ಮೊನ್ನೆ ಸಂಪದಲ್, ಅದ್ ನುರ್ಧಾಂಗಾರೆ ಎಂತ ಮಾಡುದ್ ಅಂಬದಕ್ಕಿಂತ ನಿಂಗೆ ಮೆಣ್ಸ್ ನುರ್ಧಾಂಗಾರೆ ನಂಗೆಂತ ಅಂದ ಹಾಡ್ರೆ ಕರೆಕ್ಟಾತ್ ಕಾಣ್ ( ಅದೇ "ಬರೆಗುಂಡಿ" ಯ ಕಡೆಯವರು- ಕಮಲಶಿಲೆ ಕನ್ನಂತರು, ಅದೇ "ಮೆಣ್ಸ್ ನುರ್ಧಾಂಗಾರೆ   ಹಾಡು ಬರೆದಿದ್ದರಲ್ಲ ಸಂಪದದಲ್ಲಿ ಅವರೇ ಅದನ್ನು ಸ್ವಲ್ಪ ಬದಲಿಸಿದರೆ ಇನ್ನೂ ಸರಿಯಾಗಬಹುದಿತ್ತಲ್ಲಾ)
    
ಇದ್ ಹೇಳೂಕೆ ಅಲ್ಲಿಂದ್ ಬಂದ್ಯಾ ಹಂಗಾರೆ? ಒಹ್ ವಿಜಯರಾಜ್ ಕನ್ನಂತ್ರಾ, ನಿಂಗ್ ಅವ್ರಗುರ್ತ್ ಇತ್ತಾ?( ಇದನ್ನು ಹೇಳೋಕೆ ಊರಿಂದ ಬಂದ್ಯಾ? ಅವರು ವಿಜಯರಾಜ ಕನ್ನಂತರು, ನಿನಗೆ ಅವರ ಪರಿಚಯವಿದೆಯೇ?)
ಎಂತಕೆ ಅವ್ರ ಬಸ್ಸಲ್ಲೇ ನಾ ಬಂದದ್ದ್ ಅಲ್ದಾನಾ, ಅದೇ ದುರ್ಗಾಂಬಾ, ಇಲ್ಯಾ ಸಣ್ಣಿಪ್ಪತ್ತಿಗೆ ನಾವೆಲ್ಲ ಒಟ್ಟಿಗೇ ಕಮ್ರ ಶಲಿ ಹಬ್ಬಕ್ಕ್ ಹೋತಿತ್ತ್, ಹೋಳಿ ಗುಂಡಿಗ್ ಹಾರೂದೇನ್, ಕರ್ಜೂರ ತಕಂದೇನ್ ಒಳ್ಳೆ ಗಮ್ಮತ್ತಿತ್ತ, ದೀಪಾವಳಿಯಗೆ ಶೆಟ್ಟಿ ಹೊಡೂಕೂ ಹೋತಿದ್ದೋ, ನಿಮ್ಮ ಮನಿ ತೊಂಡಿ ಚಪ್ರದಗಿದ್ದ ಮಣ್ಣಿ ತಿಂದ್ಕಂಡ್ ನಾವೇ ಶೆಟ್ಟಿ ಇಟ್ಟದ್ದ ಗೊತ್ತಾಯ್ಲೆ ಕಾಣ್ ನಿಂಗ್ ಇವತ್ತಿನ್ ವರಿಗೂ.ನೀನೂ ಪೇಟಿ ಸಾಯ್ಬನ ಸೈಕಲ್ ತಕಂಡೋಯಿ ಪಂಕ್ಚರ್ ಮಾಡ್ಕಂಡ್ ಬಂದ್ ಮರ್ಕ್ತಾ ಇದ್ಯಲ್ಲೆ ನೆನ್ಪ್ ಹೋಯ್ತಾ ಇತ್ತಾ?
(ಯಾಕೆ, ಅವರ ಬಸ್ಸಿನಲ್ಲೇ ನಾನೂ ಬಂದೆನಲ್ಲಾ, ಅಲ್ಲ, ಅದೇ ದುರ್ಗಾಂಬಾ ಬಸ್, ಚಿಕ್ಕವರಿರುವಾಗ ನಾವೆಲ್ಲಾ ಕಮಲಶಿಲೆಯ ಜಾತ್ರೆಗೆ ಹೋದದ್ದು, ಅಲ್ಲಿನ ಹೋಳೀ ಹಳ್ಳಕ್ಕೆ ಹಾರುತ್ತಿದ್ದೆವಲ್ಲ, ಖರ್ಜೂರ ಕೊಂಡುಕೊಳ್ಳುತ್ತಿದ್ದೆವಲ್ಲ, ದೀಪಾವಳಿಗೆ ಮಣ್ಣಿನ ಉಂಡೆ ಹೊಡೆಯಲು ಹೋಗುತ್ತಿದ್ದೆವಲ್ಲ, ನಿಮ್ಮ ಮನೆಯ ತೊಂಡೆಯ ಚಪ್ಪರದಲ್ಲಿ ರಾತ್ರೆ ಇಟ್ಟ ತಿಂಡಿಯನ್ನು ತಿಂದು ಬದಲಿಗೆ  ಮಣ್ಣಿನ ಇಟ್ಟು ಬಂದಿದ್ದು ನಾವೇ ಅಂತ ನಿನಗೆ ಇನ್ನೂ ಗೊತ್ತಾಗಲಿಲ್ಲವಲ್ಲ, ಅದೆಲ್ಲ ಯಾಕೆ, ನೀನು ಪೇಟೆಯ ಮುಸಲ್ಮಾನನ ಅಂಗಡಿಯ ಬಾಡಿಗೆ ಸೈಕಲ್ ಕಲಿಯಲು ತಕೊಂಡೋಗಿ ಪಂಕ್ಚರ್ ಮಾಡಿಕೊಂಡು ಕೊಡಲಾಗದೇ ಅಳುತ್ತಾ ಇದ್ದುದು ಮರೆತೆಯಾ ಅಥವಾ ಇನ್ನೂ ನೆನಪಿದೆಯಾ ಹೇಗೆ)
( ಮರಾಯ ನನ್ಮರ್ಯಾದಿ ತೆಗಿಬ್ಯಾಡ...)  ಅಲ್ದಾ, ಅವ್ರ ಬರೆಗುಂಡಿ ಚಾತ್ರರಾ, ಆ ಕನ್ನಂತರ್ ಬಸ್ಸ ಮಾರಿ ಸುಮಾರ ಕಾಲ ಆಯ್ತಾ. ಇವ್ರ ಬೇರೆ ಮರಾಯಾ.( ಮತ್ತೆ ನನ್ನ ಮರ್ಯಾದೆ ಕಳಿಬೇಡವೋ ಮರಾಯಾ, ನೀನು ಹೇಳಿದ ದುರ್ಗಾಂಬಾ ಬಸ್ಸು ಬರೆಗುಂಡಿ ಚಾತ್ರರದ್ದು , ಆ ಕನ್ನಂತರು ಬಸ್ಸು  ಯಾವುದೋ ಕಾಲದಲ್ಲೇ ಮಾರಿ ಬಿಟ್ಟಾಗಿದೆ, ಇವರು ಬೇರೆ ಕನ್ನಂತರು)
ಕನ್ನಂತ್ರ .ಅವ್ರಾರೇನ್ ಇವ್ರಾರೇನ್ ಎಲ್ಲರೂ ಒಂದೇಯ ( ಅವರಾಗಲಿ ಇವರಾಗಲಿ ಎಲ್ಲಾ ಕನ್ನಂತರೂ ಒಂದೇ ಬಿಡು)
ಸರಿ ಅವ್ರಿಗ್ ಹೇಳ್ತೆ ಬಿಡ್, ಮತ್ತೆಲ್ಲ ಅವ್ರೀಗ್ ಬಿಟ್ಟದ್ದ್.
(ಸರಿ ನಾನು ಅವರಿಗೆ ತಿಳಿಸುತ್ತೇನೆ ಬಿಡು, ಆ ಹಾಡನ್ನು ತಕೊಳ್ಳೋದು ಬಿಡೋದೂ ಅವ್ರಿಗೆ ಬಿಟ್ಟದ್ದು)
ನೀ ಎಂತಕ್ ಹೇಳ್ಕಾ? ನಾನೇ ಹೋತ್ನಲ್ಲೆ, ಅಂದ್ ಹಾಂಗೇ ಆ ಇವ್ರ್ ಇದ್ರಲ್ಲೆ ಸಶಿ ಹೆಬ್ಬಾರ್ರ ಬಂದ್ರ ನಿಮ್ ಮನಿಗೆ
( ನೀನೇನು ಹೇಳೋದು ನಾನೇ ಹೋಗ್ತೇನಲ್ಲ, ಅಂದ ಹಾಗೇ ಶಶಿ ಹೆಬ್ಬಾರ್ ನಿಮ್ಮ ಮನೆಗೆ ಬಂದರಾ)
ಅವ್ರೂ ನಿಂಗ್ ಗೊತ್ತಿತ್ತನಾ..? ( ಅವರೂ ನಿನಗೆ ಗೊತ್ತಾ)
ಒಳ್ಳೇ ಕಥಿ ಆಯ್ತಲ್ಲೆ ಮರಾಯ, ಆ ಶಂಕರನಾರಾಯ್ಣ್ ಶಾಲಿಯಗೆ ಜೋಯ್ಶರಿಗೆ ಪತ್ರಡಿ ತಕಂದ್ ಹೋಯಿ ಕೊಡುವತ್ತಿಗ್ ಅಲ್ಲೇ ಇದ್ರಲೆ ಅವ್ರ್ ಗೊತ್ತಿಲ್ಯ ನಿಂಗೆ? ಅವ್ರ ಮಾಯಿನ್ ಮಿಡಿ ಉಪ್ಪಿನ್ ಕಾಯ್ ಬರ್ದ್ ಫೇಮ್ಸ್ ಆದ್ರಲ್ಲೆ ಅದ ನಂದೇ!! (ನಿನ್ನದು ಒಳ್ಳೇ ಕಥೆ ಅಯ್ತಲ್ಲ, ಮರಾಯ, ಶಂಕರನಾರಾಯಣ ಕಾಲೇಜಿನಲ್ಲಿ ಜೋಯ್ಶರಿಗೆ ಪತ್ರೊಡೆ ಕೊಡುವ ಸಮಯದಲ್ಲಿ ಇವರೂ ಇದ್ದರಲ್ಲ, ನಿನಗೆ ತಿಳಿದಿಲ್ಲವಾ? ಅವರು ಮಾವಿನ ಮಿಡಿಯ ಉಪ್ಪಿನಕಾಯಿ ಎಂಬ ಲೇಖನ ಬರೆದು ಫೇಮಸ್ ಆದರಲ್ಲಾ, ಅದು ನನ್ನದೇ)
ಯಂತ ಅದ್ ಬರದ್ದ್  ನೀನನಾ?
(ಏನೂ ಅದು ಬರೆದದ್ದು ನೀನಾ?)
ಅಲ್ಲ ಮರಾಯಾ, ಆ ಮಾಯಿನ್ಮರದ್ ಚಿತ್ರ ಇತ್ತಲ್ಲೆ ಅದ್ ನಂದಾ, ಮಿಡಿ ಅಲ್ಲ ಮರಾಯ್ರೆ ಅಂದ್ರೂ ಕೇಳ್ಲಿಲ್ಲೆ ದೊಡ್ ಕಾಯೇ ಹಾಕೀರ್ ಚಿತ್ರಕ್ಕೆ. (ಅಲ್ಲಪ್ಪಾ, ಆ ಲೇಖನದಲ್ಲಿನ ಮಾವಿನ ಮರದ ಚಿತ್ರ ಇದೆಯಲ್ಲಾ, ಆ ಮರ ನಂದೇ, ಅದರಲ್ಲಿರೋದು ಕಾಯಿ ಅಂದರೂ ಕೇಳದೇ ಚಿತ್ರದಲ್ಲಿ ಮಾವಿನ ಕಾಯಿಯನ್ನೇ ಹಾಕಿದ್ದಾರೆ)
ಮತ್ತೆ..
ಅದೇ ನಮ್ ನಾಡಿಗ್ರೂ ಕೋಳೀಎತ್ತಿದೋರೂ ಇದ್ರಲ್ಲೆ? ( ಮತ್ತೆ ನಮ್ಮ ನಾಡಿಗರೂ ಮತ್ತು ಕೋಳೀ ಎತ್ತಿದೋರೂ ಇದ್ದಾರಲ್ಲಾ?)
ನಾಡಿಗರ್ ಅಂದ್ರ ನಮ್ಮ ಸಂಪದದ ಹರಿ ಪ್ರಸಾದ ನಾಡಿಗರಲ್ದಾ, ಮತ್ತ್ ಆ ಕೋಳಿ ಎತ್ತೋರ್ ಅಂದ್ರ ಯಾರ ಮರಾಯಾ
(ನಾಡಿಗರೆಂದರೆ ಹರಿ ಪ್ರಸಾದ ನಾಡೀಗರು, ಮತ್ತೆ ಕೋಳಿ ಎತ್ತಿನೋರೂ ಅಂದ್ರೆ ಯಾರು?)
ಅಲ್ಲ ನಾಡಿಗ್ರ ಅವರೂ ಎಲ್ಲ ಒಟ್ಟಾಯ್ ಒಂದ್ ಪುಸ್ತಕ ಮಾಡ್ತ್ರಂಬ್ರಲೆ ಅದೆಂತದೋ ".....ನಾದ" ಈಶನಿವಾರ ಅದ್ರ ಬಿಡ್ಗಡೆ ಅಂಬ್ರಲ್ಲೆ.
ಅವರೂ ನಾಡಿಗರೂ ಸೇರಿ ಯಾವುದೋ ಪುಸ್ತಕ ಮಾಡುತ್ತಿದ್ದಾರಲ್ಲಾ ಅದೂ ಈ ಶನಿವಾರವೇ ಬಿಡುಗಡೆಯಂತೆ)
ಹಂಸ ನಾದ ಅಲ್ದಾ ಅವ್ರ ಕೋಳಿಎತ್ತಿನೋರ್ ಅಲ್ದಾ, ಅವ್ರ ಹಂಸಾನಂದಿ ಅಂತ  ಅವ್ರ ಫೊರೈನಲ್ಲಿಪ್ಪದ್. ಅವ್ರ ನಿಂಗೆ ಹೆಂಗೆ ಪರಿಚಯ  ಮರಾಯ.
("ಹಂಸನಾದ" ಅವರು ಹಂಸಾನಂದಿ ಅಂತ, ಅವರಿರುವುದು ಹೊರದೇಶದಲ್ಲಿ ನಿನಗೆ ಹೇಗೆ ಪರಿಚಯವಪ್ಪಾ?)
ನಾ ನ್ ಹೇಳದ್ದೂ ಅದೇ ಕಾಣ್,  ಹಂಸ ಅಂದ್ರೆ ಕೋಳಿ ಜಾತಿದೇ ಅಲ್ದಾ, ನಂದಿ ಅಂದ್ರೆ ಎತ್ತ್ ಅಲ್ದಾ, ಹಾಂಗಿಪ್ಪತ್ತಿಗೆ ನಮ್ ಹಳ್ಳಿ ಕಡೀಗ್ ಮಾತ್ರ ಅಲ್ದಾ ಇವೆಲ್ಡೂ ಇಪ್ಪದ್, ಅದಕ್ಕೇ ಅವ್ರ್ ನಮ್ ಕಡಿಯರೇ.ಕನ್ನಡದ್ ಬಗ್ಗೆ ಯಾರ್ ಕೆಲ್ಸ ಮಾಡ್ತ್ರೋ ಅವ್ರೆಲ್ಲ ನಂಬದಿಯೋರೇ. ಅದಕ್ಕೇ ನಾನ್ ಬಂದದ್ದ್ ಮರಾಯಾ, ನೀವ್ ಪ್ಯಾಟೀ ಬದಿಯರೆಲ್ಲ, ಇಂಗ್ಲೀಷೂ ಪಂಗ್ಲೀಷೂ ಅಂದ್ಕಂಡ್   ನಮ್ಮುಂದೆ  ಈಗಿನ್ ಹೆಣ್ಮಕ್ಳು ಗಂಡ್ಮಕ್ಎಲ್ಲರೂ ನಮ್ ಕನ್ನಡ ಭಾಷೀನ್ ಎಂತ್ ಮಾಡ್ತ್ರೋ ಗೊತ್ತಿಲ್ಲೆ, ಅವ್ರೆಲ್ಲ ಫೊರೈನ್ ನಲ್ಲಿದ್ರೂ ಕನ್ನಡ ಬೆಳ್ಸೂಕೆ ಕಾಂತ್ರಲ್ಲೆ ಅದೇ ದೊಡ್ಡ ವಿಷ್ಯ ಕಾಣ್. ನೀ ಬತ್ಯಲ್ಲೆ ಅದಕ್ಕೆ..?
(ನಾನೂ ಅದೇ ಹೇಳಿದ್ದು, ಹಂಸವು ಕೋಳಿಯ ಜಾತಿಯದ್ದೇ, ನಂದಿ ಎಂದರೆ ಎತ್ತುಅಲ್ಲವೇ, ಇವೆರಡೂ ಹಳ್ಳಿಕಡೆ ಮಾತ್ರ ಇರೋದು ಅಲ್ಲವೇ, ಅದಕ್ಕೇ ಇವರೂ ನಮ್ಮವರೇ, ಕನ್ನಡದ ಬಗ್ಗೆ ಯಾರೆಲ್ಲಾ ಕೆಲಸ ಮಾಡ್ತಾರೋ ಅವರೆಲ್ಲ ನಮ್ಮವರೇ, ಅದಕ್ಕೇ ನಾನು ಬಂದೆ, ನೀವು ಸಿಟಿಯೋರೆಲ್ಲಾ ಇಂಗ್ಲೀಷೂ, ಎಂದು ಕೊಂಡು ಮುಂದಿನ ಜನಾಂಗ ನಮ್ಮ ಕನ್ನಡವನ್ನು ಏನು ಮಾಡುತ್ತಾರೋ ಗೊತ್ತಿಲ್ಲ, ಆದರೆ ಇವರೆಲ್ಲಾ ಹೊರದೇಶದಲ್ಲಿದ್ದುಕೊಂಡೂ ಕನ್ನಡಬೆಳೆಸಲು ಯೋಚಿಸುತ್ತಾರಲ್ಲ, ಅದೇ ದೊಡ್ಡ ವಿಷಯ ನೋಡೂ, ನೀನೂ ಬರುವಿಯಲ್ಲಾ ಆ ಕಾರ್ಯಕ್ರಮಕ್ಕೆ?)
ಬತ್ನಾ, ಆರೂ ಆ ದಿನ ಆಫೀಸ್ ಇತ್ತಲ್ಲೆ ಮರಾಯ. (ಬರುವ ಯೋಚನೆಯಿದೆ ಆದರೆ ಆ ದಿನ ಆಫೀಸೂ ಇದೆಯಲ್ಲಾ)
ತಕ್ಕ ಹೋತ್ತನಾ ಆಫೀಸ್!! ಒಂದ್ ದಿನ ರಜಿ ಹಾಕ್ , ಪಾಪ ಅಷ್ಟಲ್ದೇ ಕರ್ದೀರಲ್ಲೆ ನಾಡಿಗರ್, ನಾನ್ ಅದ್ಕೇ ಬಂದೆ.  ಮತ್ತೊಂದ್ ಅಂದ್ರೆ ಅದ್ಕೇ  ಹೀಂಗಿನವ್ರನ್ನೆಲ್ಲ ಕನ್ನಡದ ಪ್ರೀತಿ ಇರೋರೆಲ್ಲ ಒಟ್ಟಾದ್ರೆ ಕನ್ನಡ ಹೀಂಗೇ ಉಳ್ಸೂಕ್ಕೆ ಬೆಳ್ಸೂಕ್ಕೆ ಏನಾರ ಉಪಾಯ ಸಿಕ್ಕತ್ತ ಕಾಂಬ ಅಂಥೇಳಿ ಬಂದೆ ಕಾಣ್. ಕಲ್ತೋರೆಲ್ಲ ಹೀಂಗ್ ಬಿಟ್ಟ್ರೆ ಕನ್ನಡಕ್ಕೆ ಹಳ್ಳಿಯೇ ಗತಿ ಅಂತ್ಕಾಣತ್ತ್. ( ಆಫೀಸು ಎಲ್ಲಿಗೆ ಹೋಗುತ್ತೆ, ಒಂದು ದಿನ ರಜೆ ಹಾಕು ಅದಕ್ಕೆ, ನಾಡಿಗರೂ ಪ್ರೀತಿಯಿಂದ ಕರೆದಿರುವಾಗ ನಾನು ಅದಕ್ಕೇ ಬಂದೆ, ಹೀಗೆ ಕನ್ನಡತ್ತ ವೊಲವಿರುವವರೆಲ್ಲಾ ಒಟ್ಟಾಗಿ ಸಿಗುವಾಗ ಕನ್ನಡವನ್ನು ಉಳಿಸಲು ಬೆಳೆಸಲು ಏನಾದ್ರೂ ಉಪಾಯ ಸಿಗುತ್ತದಾ ನೋಡುವಾ ಅಂತ ಬಂದೆ ನಾನು, ಕಲಿತೋರೆಲ್ಲ ಇಂಗ್ಲೀಷಿನ ಹಿಂದೆಬಿದ್ದರೆ ಕನ್ನಡಕ್ಕೆ ಹಳ್ಳಿಯೇ ಗತಿ ಇನ್ನು ಅಂತನ್ನಿಸುತ್ತಿದೆ ನಂಗೆ)
ನಿಟ್ಟುಸಿರೆಳೆದ ಶೀನ, ನಾನೂ ಅವನ್ಜತೆಗೇ.
ನೀವು?

 

 

Rating
No votes yet

Comments