ಸಂ...ವೇದನೆ ಪದ್ಯಗಳು

ಸಂ...ವೇದನೆ ಪದ್ಯಗಳು

ಕವನ

ಅದೇಕೋ, ನಾನು ನನ್ನ೦ತಿಲ್ಲ
ಬರೀ ಭ್ರಮೆ, ತರ್ಜುಮೆ
ಕ್ಷಣ ಕ್ಷಣಕ್ಕೆ ಗೋಸು೦ಬೆ
ಚರ೦ಡಿ, ಕೊಳಕು, ದುರ್ವಾಸನೆ

ಈಗಷ್ಟೆ ತೊಟ್ಟ ಅ೦ಗಿ
ಕೊಳೆಯಾಗಿದೆ, ಕಳೆದರೂ
ತೊಳೆದರೂ ಬೆ೦ಬಿಡದೆ ಅ೦ಟುವ
ಭೂತ, ಯಾರೀತ?

ತೊಟ್ಟಿಲಿನಿ೦ದ....ಸ್ಮಶಾನದವರೆಗೆ
ಮೆರವಣಿಗೆ, ಕೆಲವೊಮ್ಮೆ ಅದ್ದೂರಿ
ಹೊತ್ತೊಯ್ಯಲೂ ಯಾರೂ ಇಲ್ಲದ ಅಗ್ಗದ ಹೆಣ
ಮುಗಿಯದ ಸ೦ಕ್ರಮಣ

ಭ್ರಮೆ ಕಳೆದರೆ
ಬೆತ್ತಲೆ
ಪೊರೆ ಕಳೆದರೆ
ಹೊರಲಾಗದ ಹೊರೆ, ನೆರೆಹೊರೆ

ನಿಶ್ಯಬ್ದ ನಾಚುವಷ್ಟು
ನಿಶ್ಯಬ್ದ, ಒಳಗೊಳಗೆ ಸ್ತಬ್ಧ, ನಿರ್ಲಿಪ್ತ
ಅಗಾಧ ವಿಶ್ವದೊಳಗಿದ್ದೂ
ಒಬ್ಬ೦ಟಿ

ಮಾತು ಮೌನಕ್ಕಿಳಿದಿದೆ
ಮೌನ ಮಾತಿಗಿಳಿದಿದೆ
ಇದ್ದೇನೆಂಬ ಭಾವನೆ
ಇಲ್ಲವೆ೦ಬ ತಳಮಳ

ನಿದ್ದೆಯಲ್ಲದ ನಿದ್ದೆಗೆ
ಜೋಗುಳವ ಹಾಡುವ ಹಾದರ
ಇನ್ನೆಲ್ಲಿಯ ನಿದ್ದೆ....
...ಇನ್ನೆಲ್ಲಿಯ ನಿದ್ದೆ!

 

 

 

 

 

 

Comments