ಬುಲೆಟ್ ನಲ್ಲಿ ರಂಗಣ್ಣನ ದರ್ಶನ...

ಬುಲೆಟ್ ನಲ್ಲಿ ರಂಗಣ್ಣನ ದರ್ಶನ...

ಕಳೆದ ಶನಿವಾರ ರಾತ್ರಿ ಊಟ ಮುಗಿಸಿ ಭಾನುವಾರ ಏನು ಮಾಡುವುದು ಎಂದು ಆಲೋಚಿಸುತ್ತಾ ಟಿ.vi ನೋಡುತ್ತಾ ಕುಳಿತಿದ್ದೆ. ಅಷ್ಟರಲ್ಲಿ ನನ್ನ ಗೆಳೆಯ "ಜಂಗ್ಲಿ " ಕರೆ ಮಾಡಿ ಗೆಳೆಯ ನಾಳೆ ರಂಗಣ್ಣನ ಹತ್ತಿರ  ಹೋಗೋಣ ಎಂದ. (ಗೆಳೆಯನ ಹೆಸರು ಸಿದ್ಧಾರ್ಥ್ ಎಂದು ನಾವು ಇಟ್ಟಿರುವ ಅಡ್ಡ ಹೆಸರು ಜಂಗ್ಲಿ ಎಂದು.) ಸರಿ ನನಗೂ ಏನೂ ಕೆಲಸ ಇಲ್ಲದ್ದರಿಂದ (ಹೆಂಡತಿ ಬೇರೆ ಊರಲ್ಲಿ ಇಲ್ಲದ್ದರಿಂದ) ಅದೂ ಅಲ್ಲದೆ ರಂಗಣ್ಣನ ನೋಡಿ ಬಹಳ ದಿನ ಆಗಿದ್ದರಿಂದ ಏನೂ ಆಲೋಚಿಸದೆ ಸರಿ ಎಂದೆ. ಬೆಳಿಗ್ಗೆ ಒಂಭತ್ತಕ್ಕೆ ಹೊರಡೋದು ಎಂದು ತೀರ್ಮಾನಿಸಿದೆವು.

ಭಾನುವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ, ಸಂಧ್ಯಾವಂದನೆ ತಿಂಡಿ ಎಲ್ಲ ಮುಗಿಸಿ ೮.50 ಕ್ಕೆ  ಅವನಿಗೆ ಕರೆ ಮಾಡಿದರೆ ಆತ ಉತ್ತರಿಸಲೇ ಇಲ್ಲ. ಸರಿ ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ಮಾಡಿದೆ ಆಗಲೂ ಉತ್ತರವಿಲ್ಲ. ಕೊನೆಗೆ ೯.೨೦ ಕ್ಕೆ ನನ್ನ ಕರೆಗೆ ಉತ್ತರಿಸಿ ತನ್ನ ಮನೆಯ ಬಳಿ ಬಾ ಎಂದ. ಸರಿ ಎಂದು ನನ್ನ ಬೈಕ್ ಏರಿ ಅವನ ಮನೆ ಬಳಿ ಹೋಗುವಷ್ಟರಲ್ಲಿ ಅವನು ಕೆಳಗಿಳಿದು ಬಂದು ತನ್ನ ೭೯ ಮಾಡೆಲ್ ಬುಲ್ಲೆಟ್ ಬೈಕನ್ನು ನಮ್ಮ ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ. ಅವನು ಆ ಬೈಕನ್ನು ಕೆಲವು ದಿನಗಳ ಕೆಳಗಷ್ಟೇ ಖರೀದಿಸಿದ್ದ. ನನಗೆ ಬುಲ್ಲೆಟ್ ಬೈಕ್ ಎಂದರೆ ಬಹಳ ಇಷ್ಟ. ಆದರೆ ಅದುವರೆಗೂ ಒಂದು ಸಲ ಓಡಿಸಿರಲಿಲ್ಲ. ಅಂದು ನನ್ನ ಆಸೆ ಈಡೇರುತ್ತಿತ್ತು. ಬೈಕ್ ಏರಿ ಇಬ್ಬರೂ ಮೈಸೂರು ರಸ್ತೆಗೆ ಇಳಿದೆವು. ಹಳೆ ಮಾಡೆಲ್ ಬುಲ್ಲೆಟ್ ಬೈಕ್ ತಂಪಾದ ಹವೆ ಲಾಂಗ್ ರೈಡ್ ಗೆ ಹೇಳಿ ಮಾಡಿಸಿದಂತಿತ್ತು.   ಇಬ್ಬರೂ ಮನೆಯಲ್ಲಿ ತಿಂಡಿ ಕಾರ್ಯಕ್ರಮ ಮುಗಿಸಿದ್ದರಿಂದ ಬೇರೆ ಕಡೆ ನಿಲ್ಲಿಸಿ ತಿನ್ನುವ ಪ್ರಮೇಯವಿರದೆ ನಿರಂತರವಾಗಿ ಸಾಗಿತ್ತು ನಮ್ಮ ಪ್ರಯಾಣ. ನಮ್ಮಿಬ್ಬರಿಗೂ ರಂಗಣ್ಣನೆಂದರೆ ಏನೋ ಒಂದು ರೀತಿ ಭಕ್ತಿ, ಅವಿನಾಭಾವ ಸಂಬಂಧ. ವರ್ಷದಲ್ಲಿ ಎರಡು ಮೂರು ಬಾರಿಯಾದರೂ ಹೋಗಿ ದರ್ಶನ ಮಾಡಿಕೊಂಡು ಬರುವುದು ವಾಡಿಕೆ. ಪ್ರತೀಬಾರಿ ನಾವಿಬ್ಬರೂ ಹೋದಾಗಲೂ ಬೈಕಿನಲ್ಲೇ ಹೋಗುವುದು. ಆದರೆ ಪ್ರತೀಬಾರಿ ಬೆಳಿಗ್ಗೆ ಬೇಗನೆ ಹೊರಡುತ್ತಿದ್ದರಿಂದ ದರ್ಶನದ ಸಮಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಹೊರಟಿದ್ದು ತಡವಾದ್ದರಿಂದ ಎಲ್ಲಿ ದೇವಸ್ಥಾನ ಬಾಗಿಲು ಹಾಕಿಬಿಡುತ್ತಾರೋ ಎಂದು ಅಂಜಿಕೆಯಲ್ಲೇ ರಂಗಣ್ಣ ನನ್ನು ಮನದಲ್ಲೇ ದರ್ಶನ ಕೊಡಪ್ಪಾ ಎಂದು ಬೇಡಿಕೊಳ್ಳುತ್ತಾ ಸಾಗಿ ಬಿಡಡಿಯ ಬಳಿ ಬಂದೆವು. ಭಾನುವಾರವಾದ್ದರಿಂದ ಬಹಳಷ್ಟು ಜನ ಹುಡುಗ ಹುಡುಗಿಯರು "ವಂಡರ್ ಲಾ" ಕಡೆ ತಮ್ಮ ಗಾಡಿಗಳನ್ನು ತಿರುಗಿಸುತ್ತಿದ್ದರು. ಅಲ್ಲಿಂದ ಮುಂದೆ ಸಾಗಿ ರಾಮನಗರದ ಬಳಿ ಬರುತ್ತಿದ್ದಂತೆ ಎದುರಿಗಿನ ಬೆಟ್ಟ ಕಂಡು ಬಹಳ ಬೇಸರವಾಯಿತು. ಏಕೆಂದರೆ ಅಲ್ಲಿ ಬೆಟ್ಟವನ್ನು ಯಾರೋ ಗುತ್ತಿಗೆಗೆ ತೆಗೆದುಕೊಂಡು ಜಲ್ಲಿ ಮಾಡಲು ಬೆಟ್ಟವನ್ನು ಒಡೆಯುತ್ತಿದ್ದಾರೆ. ಪ್ರತೀಬಾರಿ ಆ ಬೆಟ್ಟ ನೋಡಿದಾಗಲೂ ಉಂಟಾಗುತ್ತಿದ್ದ ಆನಂದ ಈ ಬಾರಿ ಆ ಬೆಟ್ಟ ನೋಡಿದಾಕ್ಷಣ ದಾಳಿಕೋರರ ದಾಳಿಗೆ ತುತ್ತಾದ ದೇಗುಲಗಳ ನೆನಪಾಯಿತು. ಹೀಗೆ ಆದರೆ ಮುಂದಿನ ಜನಾಂಗದ ಮಕ್ಕಳಿಗೆ ಬೆಟ್ಟ ಎಂದರೆ ಏನೆಂದು ಫೋಟೋದಲ್ಲಿ ತೋರಿಸಬೇಕಾದ ಪರಿಸ್ಥಿತಿ ಬರಬಹುದು.
ನಾವೇನೂ ಮಾಡಲೂ ಸಾಧ್ಯವಿಲ್ಲದ್ದರಿಂದ ಹಾಗೆ ಸಾಗಿ ರೇಷ್ಮೆ ನಾಡಾದ ರಾಮನಗರ ಬಂದರೆ ಹೈವೇಯಲ್ಲಿ ದೊಡ್ಡ ಟ್ರಾಫಿಕ್ ಜಾಮ್. ಎಲ್ಲರೂ ಗಾಡಿಗಳನ್ನು ಆಫ್ ಮಾಡಿ ನಿಂತಿದ್ದಾರೆ. ನಾವು ಒಂದು ಬದಿಯಲ್ಲಿ ನಮ್ಮ ಗಾಡಿ ನಿಲ್ಲಿಸಿ ಏನಾಗಿದೆಯಂದು ನೋಡೋಣ ಎಂದುಕೊಂಡು ಮುಂದೆ ಬಂದರೆ ರಾಮನಗರ ಸರ್ಕಲ್ ನಲ್ಲಿ ಜೋರಾಗಿ ಹೊಗೆ ಬರುತ್ತಿರುವುದು ಕಾಣಿಸಿತು. ನಾವು ಬಹುಶ ಏನೋಗೋ ಅಗ್ನಿ ದುರಂತ ಸಂಭವಿಸಿರಬಹುದು ಅದಕ್ಕೆ ಈ ಮಟ್ಟದ ಜಾಮ್ ಉಂಟಾಗಿದೆ ಎಂದು ಭಾವಿಸಿ ಮುಂದೆ ಬಂದಾಗ ಅಸಲಿ ಸಂಗತಿ ಗೊತ್ತಾಯಿತು. ಮಣ್ಣಿನ ಮಕ್ಕಳ ಪಕ್ಷದವರು ತಮ್ಮ ಮುಖಂಡ ಧರಣಿ ಕುಳಿತಿರುವುದನ್ನು ಬೆಂಬಲಿಸಿ ರಸ್ತೆ ಮಧ್ಯದಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡಿದ್ದರು.  ನಾವು ಇದೇನಪ್ಪ ಮೊದಲೇ  ತಡವಾಗಿದೆ ಎಂದುಕೊಂಡಿರಬೇಕಾದರೆ ಇದೊಂದು ತಲೆನೋವು ಎಂದುಕೊಂಡೆವು. ಅಷ್ಟರಲ್ಲಿ ಅಕ್ಕಪಕ್ಕ್ದ ಗಾಡಿಗಳವರಿಂದ ಅಲ್ಲಿ ಕುಳಿತಿದ್ದವರಿಗೆ, ಅವರ ಮುಖಂಡರಿಗೆ ಸಹಸ್ರ ನಾಮಾರ್ಚನೆ ಆಗುತ್ತಿತ್ತು. ಇನ್ನೊಬ್ಬ ಯಾರೋ ಹೇಳುತ್ತಿದ್ದ ಮದ್ದೂರಲ್ಲೂ ಧರಣಿ ಕುಳಿತಿದ್ದಾರೆ ಎಂದು.  ನಾವು ಅಲ್ಲಿ ಬಂದು ಅರ್ಧ ಗಂಟೆಯ ನಂತರ ಪೊಲೀಸರು ಆ ಗುಂಪನ್ನು ಚದುರಿಸಿ ರಸ್ತೆ ತೆರವು ಮಾಡಿದರು.
ಮನದಲ್ಲೇ ಆ ಧರಣಿ ಕೂತವರಿಗೆ ಶಪಿಸುತ್ತಾ ರಂಗಣ್ಣನ ದರ್ಶನ ಆಗುವುದೋ ಇಲ್ಲವೋ ಎಂಬ ಭಯದಿಂದ ಮುಂದೆ ಸಾಗಿ ಬೊಂಬೆಯ ನಾಡಾದಚನ್ನಪಟ್ಟಣ ದಾಟಿ ದೊಡ್ಡ ಮಳೂರಿನ ಅಪ್ರಮೇಯ ಸ್ವಾಮಿಗೆ ರಸ್ತೆಯಿಂದಲೇ ಕೈ ಮುಗಿದು ಮದ್ದೂರಿನ ಬಳಿ ಬಂದಾಗ ಅಲ್ಲಿಯೂ ಧರಣಿ ಕುಳಿತಿದ್ದ ಕುರುಹುಗಳು ಸುಟ್ಟ ಟೈಯರ್ ನ ರೂಪದಲ್ಲಿ ಕಂಡಿತು. (ಪ್ರತೀಬಾರಿ ಇವರ ಕೋಪಕ್ಕೆ ಟೈಯರ್ ಗಳು ಬಲಿಯಾಗುತ್ತವೆ). ಅಷ್ಟ್ರಲಾಗಲೇ ೧೨ ಗಂಟೆಯಾಗಿತ್ತು. ರಂಗಣ್ಣ ದರ್ಶನ ಅನುಮಾನವೇ ಒಂದು ವೇಳೆ ದೇವಸ್ಥಾನ ಮುಚ್ಚಿದ್ದರೆ ಮೆಲುಕೋಟಿಗೆ ಹೋಗಿಬಿಡೋಣ ಎಂದುಕೊಂಡು ಬುಲೆಟ್ ನ ವೇಗವನ್ನು ಹೆಚ್ಚಿಸಿ ಸಕ್ಕರೆ ನಾಡಾದ ಮಂಡ್ಯ ಬಂದಾಗ ಶುಗರ್ ಫ್ಯಾಕ್ಟರೀ ಇಂದ ಘಮ್ ಎನ್ನುವ ಸುವಾಸನೆ ಬರುತ್ತಿತ್ತು. ಆ ವಾಸನೆಯನ್ನು ತುಂಬಿಕೊಂಡು ಬುಲೆಟ್ ನ ವೇಗವನ್ನು ಮತ್ತಷ್ಟು ಹೆಚ್ಚಿಸಿ ನಮ್ಮ ಗುರಿಯಾದ ಶ್ರೀರಂಗಪಟ್ಟಣ ಬಂದು ತಲುಪುವ ಹೊತ್ತಿಗೆ ಸರಿಯಾಗಿ ಒಂದು ಗಂಟೆಯಾಗಿತ್ತು. ಪ್ರತೀಬಾರಿ ಶ್ರೀರಂಗಪಟ್ಟಣಕ್ಕೆ ಬಂದಾಗಲೂ ಕಾವೇರಿ ನದಿಯಲ್ಲಿ ಮಿಂದು ನಂತರ ದರ್ಶನಕ್ಕೆ ಹೋಗುತ್ತಿದ್ದೆವು. ಆದರೆ ಈ ಬಾರಿ ಸಮಯದ ಅಭಾವದಿಂದ ಸೀದಾ ದೇವಸ್ಥಾನದ ಬಳಿ ಹೋದೆವು. ದೇವಸ್ಥಾನದ ಬಾಗಿಲು ಇನ್ನೂ ತೆರೆದೇ ಇತ್ತು. ನಮಗಾದ ಸಂತೋಷ ಅಷ್ಟಿಷ್ಟಲ್ಲ. ಸೀದಾ ಚಪ್ಪಲಿ ಬಿಚ್ಚಿ ಕಾಲು ತೊಳೆದುಕೊಂಡು ದೇವಸ್ಥಾನ ಹೊಕ್ಕೆವು. ಶ್ರೀರಂಗ ಪಟ್ಟಣ ದೇವಸ್ಥಾನ ನೋಡಲು ಕಣ್ಣಿಗೆ ಹಬ್ಬ. ಬೃಹದಾಕಾರದ ಕಂಬಗಳು, ಸುಂದರ ವಾಸ್ತುಶಿಲ್ಪ, ನಯನಮನೊಹರವಾಗಿದೆ. ಭಾನುವಾರವಾದ್ದರಿಂದ ಜನಸಂದಣಿ ಸ್ವಲ್ಪ ಹೆಚ್ಚೇ ಇತ್ತು.  ಗರ್ಭಗುಡಿಯ ಮುಂದಿನ ಪ್ರಾಕಾರದಲ್ಲಿ ನಿಲ್ಲಿಸಿರುವ ಕಂಬಗಳು ನಮ್ಮ ಎರಡೂ ಕೈಯಿಂದ ಅಪ್ಪಿಕೊಂಡರೂ ಸಾಲದಷ್ಟು ದೊಡ್ಡ ಕಂಬಗಳು. ಅಲ್ಲಿಂದ ಮುಂದೆ ಹೋಗಿ ಗರ್ಭಗುಡಿಯ ಹೊಕ್ಕರೆ ರಂಗನಾಥಸ್ವಾಮಿ ನಿದ್ರಾಭಂಗಿಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ನಿಮ್ಮ ಕಷ್ಟಗಳನ್ನು ನನ್ನ ಮೇಲೆ ಹಾಕಿ ನನ್ನಂತೆ ನಿಶ್ಚಿಂತೆಯಿಂದ ನಿದ್ದೆ ಮಾಡಿ ಎನ್ನುವಂತೆ ಸ್ವಾಮಿ ದರ್ಶನ ನೀಡುತ್ತಾನೆ. ಒಂದುಕಡೆಯಿಂದ ದೇವರ ಅರ್ಧಭಾಗವಷ್ಟೇ ಕಾಣುವುದು. ಇನ್ನೊಂದು ಕಂಡೆ ಬಂದಾಗ ಸ್ವಾಮಿಯ ಪಾದಸೇವೆಯಲ್ಲಿ ನಿರತರಾಗಿರುವ ಲಕ್ಷ್ಮೀದೇವಿಯನ್ನು ಕಾಣಬಹುದು. ಅಲ್ಲಿಂದ ಆಚೆ ಬಂದರೆ ಸುಂದರ ಪ್ರಾಕಾರದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಸುಂದರ ಮೂರ್ತಿಯಿದೆ. ನಂತರ ಅಮ್ಮನವರು, ಶ್ರೀನಿವಾಸದೇವರು, ಹಾಗೆ ಭಕ್ತ ಆಂಜನೇಯ ಸ್ವಾಮಿಯ ಮೂರ್ತಿಗಳು ಕಾಣಸಿಗುತ್ತವೆ. ಎಲ್ಲ ದೇವರ ದರ್ಶನ ಮುಗಿಸಿಕೊಂಡು ಆಚೆ ಬಂದಾಗ ಮನಸೆಲ್ಲ ಸಂತೋಷದಿಂದ ತುಂಬಿರುತ್ತದೆ.  ಇನ್ನೂ ದೇವಸ್ಥಾನದ ಆವರಣದಲ್ಲಿ ಒಂದು ತುಳಸೀ ಬೃಂದಾವನ ಇದೆ. ಅದರ ಮೇಲೆ ಕೆತ್ತಿರುವ ದೇವರ ವಿಗ್ರಹಗಳು ಎಷ್ಟು ಅದ್ಭುತವಾಗಿದೆ ಎಂದರೆ ಅದನ್ನು ನೋಡಿಯೇ ಅನುಭವಿಸಬೇಕು.
ಅಲ್ಲಿಂದ ಆಚೆ ಬಂದು ಸೀದಾ ಕಾವೇರಿ ನದಿಯ ಬಳಿ ಹೋದೆವು. ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡಿಕೊಂಡು ಅಷ್ಟಕ್ಕೇ ತೃಪ್ತಿ ಪಟ್ಟುಕೊಂಡು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದೆವು. ಮೊದಲ ಬಾರಿ ಬುಲೆಟ್ ಬೈಕನ್ನು ಓಡಿಸಿದೆ. ಅದೂ ನನಗೆ ಬಹಳ ಪ್ರಿಯವಾದ ಹಳೆಯ ಮಾಡೆಲ್ ಬೈಕ್. ಅದೊಂದು ವರ್ಣನಾತೀತ ಅನುಭವ. ಮಂಡ್ಯದ ಬಳಿ ಹೋಟೆಲೊಂದರಲ್ಲಿ ಊಟ ಮುಗಿಸಿ ಬೆಂಗಳೂರು ತಲುಪುವ ಹೊತ್ತಿಗೆ ಸಂಜೆ ಅರಾಗಿತ್ತು. ಅಂತೂ ಇಂತೂ ಭಾನುವಾರ ಸಾರ್ಥಕವಾಗಿ ಮುಗಿಯಿತು.  ಶ್ರೀರಂಗಪಟ್ಟಣ ನೋಡಿಲ್ಲದಿದ್ದರೆ ಒಮ್ಮೆ ಹೋಗಿ ಬನ್ನಿ.
Rating
No votes yet

Comments