ಬಂಗಲೆ

ಬಂಗಲೆ

ಕವನ

(ಚಿತ್ರ ಕೃಪೆ : ಅಂತರ್ಜಾಲ )

 

 

 

 ಇದು ನಾನೇ ಮೂಲೆಯ ಭವ್ಯ ಬಂಗಲೆ , ಆದರೆ ಈಗಲ್ಲ ಬಿಡಿ 

 


ಒಡೆಯ ಅತ್ಯಂತ ಆಸೆಯಿಂದ  ಕಟ್ಟಿದ ಭವ್ಯ ಬಂಗಲೆ ನಾನು. 
ಅವನಿಗೆ ಹೀಗಾಗುವುದೆಂದು ತಿಳಿದಿರಲಿಲ್ಲ ಅನ್ನಿಸುತ್ತದೆ  ಅಥವಾ,
ತಿಳಿದೂ ಸುಮ್ಮನಿದ್ದನೇನೋ ಎಲ್ಲ ವಿಧಿ  ಲಿಖಿತ ಎಂದು 
ಆದರೆ, ಒಡೆಯ ಯಾವಾಗಲೂ  ಹೇಳುತ್ತಿದ್ದ " ಯತೃ.............."   
 
ಸಾಗರದಾಚೆಗಿರುವ ಒಡೆಯನ ಮಕ್ಕಳು ' ಸುಗ್ರೀವಾಜ್ಞೆ ' 
ಹೊರಡಿಸಿಯಾಗಿದೆ ನನಗೇನೂ ತಿಳಿಯುವುದಿಲ್ಲ  ಎಂದು..
ನನ್ನ ಪ್ರತೀ ಗೋಡೆಗಳ ಮೇಲೂ, ಅವರ ನಗು- ಅಳುವಿನ ಲೆಕ್ಕವಿದೆ
ಅಸಹಾಯಕಿ ನಾನು ಸ್ಪಂದಿಸಲಿಲ್ಲವಲ್ಲ , ಅದಕ್ಕೆ ಹಾಗನ್ನಿಸಿರಬೇಕು.
 
ಹಿತ್ತಲಿನ ಜಾಜಿ , ಮಲ್ಲಿಗೆ , ಕನಕಾಂಬರಗಳ ಯಾರೋ,
ಬೇಕಂತಲೇ ಕಿತ್ತಿದ್ದಾರೆ.
ಬದಲಿಗೆ ಕಣಗಲೆ ತಂದು ನೆಟ್ಟಿದ್ದಾರೆ ನನ್ನ ಮುಂದೆ 
ನಾ ಬೇಸರಿಸದಿರಲೆಂದು... ಜನ ತುಂಬ ಒಳ್ಳೆಯವರು ಪಾಪ...!!                                  
              
ಹಸಿರು, ಹಳದಿ ಬಣ್ಣಗಳ ಗುರುತೂ ಸಿಗದ ಹಾಗೆ ಕೆರೆದು 
ನೀರೆರಚಿ ತೊಳೆಯುತ್ತಿದ್ದಾರೆ...
ನನ್ನೆಲ್ಲ ಗೋಡೆಗಳಿಗೆ ಕೆಂಪು ಬಣ್ಣ ತೊಡಿಸಲಾಗುತ್ತಿದೆ
ಮೇಲಂತಸ್ತಿನಲ್ಲಿ  ಏನೋ ಗುಸು-ಗುಸು 
ಓ.. ನನಗೀಗ ತಿಳಿಯುತ್ತಿದೆ ಒಡೆಯ ಇಲ್ಲವಾಗಿದ್ದಾನೆ...
 
ನನ್ನಿಷ್ಟ  ಕೇಳದೆ, 
ನನಗೆ ಕೆಂಪು ಬಣ್ಣ ತೊಡಿಸಿದ್ಯಾಕೆ...? ಮಲ್ಲಿಗೆ ಗಿಡಗಳ ಕಿತ್ತಿದ್ಯಾಕೆ..?
ಕೇಳಬೇಕೆಂದುಕೊಳ್ಳುತ್ತೇನೆ, ಧೈರ್ಯ  ಸಾಲದು  ಸುಮ್ಮನಾಗುತ್ತೇನೆ
ಅಕ್ಕ- ಪಕ್ಕದ ಮನೆಗಳಿಗೆ ಕೇಳಿಸಿಬಿಟ್ಟರೆ ಏನೆಂದುಕೊಂಡಾರು   ನನ್ನ...
 
ಈಗಲೂ ಇದ್ದೇನೆ ಅಲ್ಲೇ ಮೂಲೆಯಲ್ಲಿ ಭವ್ಯವಾಗೆ
ಜನ ಎಂದಿನಂತೆ ನಿಂತು ನೋಡಿ ಹೋಗುತ್ತಾರೆ..
ಪಾಳು ಮನೆಯೊಳಗೆ ಬಂದು ಜೂಜಾಡಬಹುದೇ, ತಮಗೇನಾರೂ ದಕ್ಕೀತೆ ಎಂದು
ನನ್ನ ಎದುರಿನ ಗೆಳತಿಯ ' ಗೃಹಪ್ರೇವೇಶ ' , ಹೋಗಿ ಬರುತ್ತೇನೆ ನಾನೂ 
ನೋಡಿಬರುತ್ತೇನೆ ಅಲ್ಲೇ ದೂರದಲ್ಲಿ ನಿಂತು....
 
 
 
  
   
 
   

 - 

 
    
 

Comments